• Thu. Apr 18th, 2024

ಕೋಲಾರದಲ್ಲಿ ಕೊನೆಯುಸಿರೆಳೆದ ಕಾಮರೂಪಿ ಪ್ರಭಾಕರ – ಅವರ ಅಂತಿಮ ಆಸೆಯಂತೆ ರಾಮಯ್ಯ ಆಸ್ಪತ್ರೆಗೆ ದೇಹದಾನ

PLACE YOUR AD HERE AT LOWEST PRICE

ರಾಷ್ಟ್ರದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಅಂಕಣಕಾರ ಲೇಖಕ ಕಾಮರೂಪಿ ಅರ್ಥಾತ್ ಎಂ.ಎಸ್.ಪ್ರಭಾಕರ ಕೋಲಾರದ ಕಠಾರಿಪಾಳ್ಯದ ತಮ್ಮ ಪೂರ್ವಿಕರ ನಿವಾಸದಲ್ಲಿ ಡಿ.೨೯ ಗುರುವಾರ ಕೊನೆಯುಸಿರೆಳೆದರು.

ಪ್ರಗತಿಪರ ವಿಚಾರವಾದಿಯಾಗಿದ್ದ ಕಾಮರೂಪಿಯವರ ಅಂತಿಮ ಆಸೆಯಂತೆ ಅವರ ದೇಹವನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದೇಹದಾನ ಮಾಡಲು ಅವರ ಆತ್ಮೀಯರು ಅಗತ್ಯ ಕ್ರಮಕೈಗೊಂಡರು.

ಕಾಮರೂಪಿ ಕಾವ್ಯನಾಮದಿಂದ ಪ್ರಸಿದ್ಧರಾಗಿ ತಮ್ಮ ಇಳಿವಯಸ್ಸಿನಲ್ಲಿ ಕೋಲಾರ ನಗರದ ಕಠಾರಿಪಾಳ್ಯದಲ್ಲಿ ವಾಸವಾಗಿದ್ದ ಎಂ.ಎಸ್.ಪ್ರಭಾಕರ ಸಾಹಿತ್ಯ ವಿಭಾಗದಲ್ಲಿ ೨೦೧೮ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದರು.

ಕೋಲಾರ ನಗರದ ಕಠಾರಿಪಾಳ್ಯದಲ್ಲಿ ವಾಸವಾಗಿದ್ದ ಎಂ.ಎಸ್.ಪ್ರಭಾಕರ ತಮ್ಮ ಇಳಿ ವಯಸ್ಸಿನಲ್ಲಿಯೂ ಬರವಣಿಗೆಯಲ್ಲಿ ತೊಡಗಿ ದೇಶ ವಿದೇಶಗಳ ವೆಬ್‌ಸೈಟ್‌ಗಳಿಗೆ ಆಂಗ್ಲಭಾಷೆಯಲ್ಲಿ ಅಂಕಣಗಳನ್ನು ಬರೆಯುತ್ತಿದ್ದುದು ಅವರಲ್ಲಿನ ಸಾಹಿತ್ಯ ಪ್ರೀತಿ ಮತ್ತು ಸದಾ ಜಾಗೃತಿಯಾಗಿದ್ದ ಪತ್ರಕರ್ತ ವೃತ್ತಿಗೆ ಸಾಕ್ಷಿಯಾಗಿತ್ತು.

ಮೊಟ್ಲಹಳ್ಳಿ ಸೂರಪ್ಪ ಪ್ರಭಾಕರ ೧೯೩೬ ರಲ್ಲಿ ಜನಿಸಿ, ಕೋಲಾರದಲ್ಲಿ ಬಾಲ್ಯವನ್ನು ಕಳೆದು ಆರಂಭಿಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರು. ಆನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವೀಧರರಾಗಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದು, ಅಲ್ಲಿಯೇ ಕೆಲ ದಿನಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಆನಂತರ ಅಸ್ಸಾಂನ ಗೌಹಾತಿ ವಿವಿಯಲ್ಲಿ ಇಂಗ್ಲೀಷ್ ವಿಭಾಗದ ಅಧ್ಯಾಪಕರಾಗಿ, ರೀಡರ್ ಆಗಿ ೧೯೬೨ ರಿಂದ ೬೫ ರವರೆವಿಗೂ ಕಾರ್ಯನಿರ್ವಹಿಸಿದ್ದರು.

ತಮ್ಮಲ್ಲಿರುವ ಅಗಾಧ ಇಂಗ್ಲೀಷ್ eನದಿಂದಾಗಿ ಪ್ರತಿಷ್ಠಿತ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಸಹಾಯಕ ಸಂಪಾದಕರಾಗಿ, ದ ಹಿಂದೂ ಪತ್ರಿಕೆಯ ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತದ ವಿಶೇಷ ಬಾತ್ಮೀದಾರರಾಗಿಯೂ ಸೇವೆ ಸಲ್ಲಿಸಿದ್ದರು.
ಈಶಾನ್ಯ ಭಾರತದ ಅಸ್ಸಾಂನಲ್ಲಿ ಬಹಳ ವರ್ಷಗಳ ಕಾಲ ವಾಸವಾಗಿದ್ದ ಎಂ.ಎಸ್.ಪ್ರಭಾಕರ ಅವರು, ಏಲಿಯನೇಷನ್ ಎಂಬ ಮಾರ್ಕ್ಸ್‌ವಾದಿ ಪರಿಕಲ್ಪನೆಯಿಂದ ಪ್ರಭಾವಿತರಾಗಿ ವ್ಯಕ್ತಿ ವಿಶಿಷ್ಟತೆಗೆ ಒತ್ತು ಕೊಡದೆ, ಮನೋ ವಿಶ್ಲೇಷಣೆಯನ್ನು ತ್ಯಜಿಸುವ ಹೊಸ ಬಗೆಯ ಕತೆ ಕಾದಂಬರಿಗಳನ್ನು ಬರೆದರು.

ಬಹಳ ದಿನಗಳ ಕಾಲ ಅಸ್ಸಾಂನಲ್ಲಿಯೇ ವಾಸವಾಗಿದ್ದರ ಪ್ರಭಾವದಿಂದ ಪ್ರಾಚೀನ ಅಸ್ಸಾಂನ ಪ್ರದೇಶವೊಂದರ ಕಾಮರೂಪಿ ಹೆಸರನ್ನೇ ತಮ್ಮ ಕಾವ್ಯನಾಮವಾಗಿ ಬಳಸಿಕೊಂಡರು. ದಕ್ಷಿಣ ಭಾರತದಲ್ಲಿ ನೆಲ್ಸನ್ ಮಂಡೇಲಾರಿಗೆ ಆಪ್ತರಾಗಿದ್ದ ಕಾಮರೂಪಿ ಮಂಡೇಲಾರೊಂದಿಗೆ ನಡೆಸಿದ ವಿಶೇಷ ಸಂದರ್ಶನ ವಿಶ್ವದ ಪತ್ರಿಕೋದ್ಯಮದಲ್ಲಿ ಗಮನ ಸೆಳೆದಿತ್ತು. ೨೦೦೨ ರಲ್ಲಿ ಸೇವೆಯಿಂದ ನಿವೃತ್ತರಾದರು.

ಕೇವಲ ಇಂಗ್ಲೀಷ್ ಮಾತ್ರವಲ್ಲದೆ ಮಾತೃಭಾಷೆ ಕನ್ನಡದಲ್ಲಿಯೂ ಸಾಹಿತ್ಯ ಕೃಷಿ ನಡೆಸಿರುವ ಕಾಮರೂಪಿಯವರು ಒಂದು ತೊಲ ಪುನುಗು ಮತ್ತು ಇತರೇ ಕತೆಗಳು, ಕುದುರೆಮೊಟ್ಟೆ, ಅಂಜಿಕಿನ್ಯಾತಕಯ್ಯ ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯಲೋಕದ ಗಮನ ಸೆಳೆದಿದ್ದರು. ಲಂಕೇಶ್‌ರ ಸ್ನೇಹಿತರಾಗಿದ್ದ ಕಾಮರೂಪಿ ವಿವಿಧ ವಿಷಯಗಳ ಅನೇಕ ಕವನ ಪ್ರಬಂಧಗಳನ್ನು ಇಂದಿಗೂ ಬ್ಲಾಗ್‌ನಲ್ಲಿ ಬರೆದು ಪ್ರಕಟಿಸುತ್ತಿದ್ದಾರೆ.

ನಿವೃತ್ತಿಯ ನಂತರ ತಮ್ಮ ಪೂರ್ವಿಕರು ವಾಸವಾಗಿದ್ದ ಕೋಲಾರ ಕಠಾರಿಪಾಳ್ಯದ ನಿವಾಸದಲ್ಲಿಯೇ ಕಾಲ ಕಳೆಯಬೇಕು ಎಂಬ ಹಂಬಲದಿಂದ ಹುಟ್ಟೂರಿನ ಪ್ರೇಮದಿಂದ ೨೦೦೨ ರಿಂದೂ ಕೋಲಾರದ ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅವರ ಇಚ್ಛೆಯಂತೆಯೇ ಕಾಮರೂಪಿ ತಮ್ಮ ಪೂರ್ವಿಕರ ಮನೆಯಲ್ಲಿಯೇ ಡಿ.೨೯ ಗುರುವಾರ ಕೊನೆಯುಸಿರೆಳೆದು ಇಹಲೋಕ ತ್ಯಜಿಸಿದರು.

ಮಿತಭಾಷಿಯಾಗಿದ್ದ ಎಂ.ಎಸ್.ಕಾಮರೂಪಿ ಸನ್ಮಾನ ಸತ್ಕಾರಗಳಿಗೆ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೂ, ಅವರನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗಿತ್ತು. ೨೦೧೬ ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೂ ಭಾಜರಾಗಿದ್ದರು.

ಕೋಲಾರದ ನಿವಾಸದಲ್ಲಿ ಅವರು ಕೊನೆಯುಸಿರೆಳೆದರೆಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಆದಿಮ ಕೊಮ್ಮಣ್ಣ, ಎಚ್.ಎ.ಪುರುಷೋತ್ತಮ್‌ರಾವ್, ಚಂದ್ರಪ್ರಕಾಶ್, ಪತ್ರಕರ್ತ ಕೆ.ಎಸ್.ಗಣೇಶ್, ಸಿ.ವಿ.ನಾಗರಾಜ್, ಓಂಕಾರಮೂರ್ತಿ, ಸರ್ವಜ್ಞಮೂರ್ತಿ, ಪತ್ರಕರ್ತರ ಭವನದ ಗಂಗಾಧರ ಇತರರು ಅಂತಿಮ ದರ್ಶನ ಪಡೆದುಕೊಂಡರು.
ಬೆಂಗಳೂರಿನಿಂದ ಆಗಮಿಸಿದ್ದ ಇಸ್ಮಾಯಿಲ್ ಇತರರು ಅವರ ದೇಹವನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದೇಹದಾನ ಮಾಡಲು ವ್ಯವಸ್ಥೆ ಮಾಡಿದರು.

ಸುದ್ದಿ ಓದಿ, ಹಂಚಿಕೊಳ್ಳಿ.

ಇದನ್ನೂ ಓದಿ – ಕೆ.ವಿ.ಅಯ್ಯರ್ ವಿಶಿಷ್ಟ ಕಥಾ ನಿರೂಪಣೆ ಹೊಂದಿರುವ ಸಾಹಿತಿ – ರಮೇಶ್

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!