‘ಹಣ ಪಡೆದು ವೋಟು ಪಡೆದ ಮೇಲೆ ನಮ್ಮಗಳ ಪರವಾಗಿ ಮಾತಾಡುವುದಿಲ್ಲ. ಜನ ಯಾವತ್ತೂ ದುಡ್ಡು ತೆಗೆದುಕೊಂಡು ಮತದಾನ ಮಾಡುವುದಿಲ್ಲವೆಂದು ಶಪಥ ಮಾಡುತ್ತಾರೋ ಅವತ್ತು ಮಾತ್ರವೇ ಸಮಸ್ಯೆಗಳಿಗೆ ಪರಿಹಾರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.
ನಗರದ ಪತ್ರಕರ್ತರ ಭವನ ಶುಕ್ರವಾರ ಜನಪರ ವೇದಿಕೆ ವತಿಯಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಾಮರಸ್ಯಕ್ಕಾಗಿ ಜನಾಗ್ರಹ ಅಂದೋಲನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹಣ ನೀಡಿ ವೋಟು ಹಾಕಿಸಿಕೊಂಡು ಗೆದ್ದವರು ಯಾವತ್ತೂ ನಮ್ಮ ಪರವಾಗಿ ಮಾತಾಡುವುದಿಲ್ಲ. ಈ ಪರಿಸ್ಥಿತಿಯಲ್ಲಿ ಜನಪರವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಸಾಧ್ಯವಾಗುವುದಿಲ್ಲ. ಸಮಸ್ಯೆಗಳಿಗೆ ಮೂಲ ಕಾರಣವನ್ನು ಜನರು ಅರ್ಥ ಮಾಡಿಕೊಂಡು ಮತ ಚಲಾಯಿಸಬೇಕು’ ಎಂದರು.
‘ಮೂರೂ ಪಕ್ಷದವರು ಚುನಾವಣಾ ಹಿಂದಿನ ದಿನ ಹಣ ಹಂಚುತ್ತಾರೆ. ಇದು ಕೇವಲ ರಾಜಕೀಯ ವ್ಯವಸ್ಥೆಯಲ್ಲಿ ಮಾತ್ರವಲ್ಲ; ಸಂಘ ಸಂಸ್ಥೆಗಳ ಚುನಾವಣೆಯಲ್ಲೂ ಹಣ ಹಂಚಿ ಮತ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ’ ಎಂದು ಹೇಳಿದರು.
‘ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಕೈಗಾರಿಕೆಗಳ ಪರ ನಿಂತಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ರೈತ ವಿರೋಧಿ ನೀತಿ ರೂಪಿಸಿದ್ದಾರೆ. ಅಧಿಕಾರಿಗಳು ಕಚೇರಿಗಳಲ್ಲಿ ಪಡೆದ ಲಂಚದ ಹಣವನ್ನು ಸಂಗ್ರಹಿಸಿ ಮೇಲಧಿಕಾರಿ ಹಾಗೂ ರಾಜಕಾರಣಿಗಳಿಗೆ ಹಂಚುತ್ತಿದ್ದಾರೆ. ಲಂಚ ಅಧಿಕಾರಿಗಳ ಪಾಲಿನ ಅಜನ್ಮ ಹಕ್ಕಾಗಿದೆ’ ಎಂದು ಆರೋಪಿಸಿದರು.
‘ಜನರ ಬಡತನ ಅತಿರೇಕಕ್ಕೆ ಹೋಗಿದೆ. ಸಂವಿಧಾನ ಬದ್ಧವಾಗಿ ಜನರಪರ ಅಭಿವೃದ್ಧಿ ಕೆಲಸ ಮಾಡುವಲ್ಲಿ ಆಡಳಿತಗಾರರು ವಿಫಲರಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸರ್ಕಾರದ ವೈಫಲ್ಯದಿಂದಾಗಿ ಕೋಲಾರ ಅಭಿವೃದ್ಧಿಯಾಗಿಲ್ಲ’ ಎಂದು ಹೇಳಿದರು.
‘ಮೂರನೇ ಹಂತದ ಶುದ್ಧೀಕರಣ ಮಾಡದೆ ಸುಳ್ಳು ಹೇಳುತ್ತಿದ್ದಾರೆ. ಕೆ.ಸಿ.ವ್ಯಾಲಿ ನೀರು ತಂದಿದ್ದನ್ನು ಮಹಾನ್ ಸಾಧನೆ ಎಂಬುದಾಗಿ ಗಿ ಜನಪ್ರತಿನಿಧಿಗಳು ಸಂಭ್ರಮಿಸುತ್ತಿದ್ದಾರೆ’ ಎಂದು ಹರಿಹಾಯ್ದರು.
‘ಜನಪರ, ರೈತಪರ ಇರುವ ಸರ್ಕಾರಗಳೇ ಇಲ್ಲ. ಜನಪರ, ರೈತಪರ ನಿಲ್ಲದವರ ಹಾಗೂ ಕೈಗಾರಿಕೆ ಪರ ನೀತಿ ರೂಪಿಸುವವರಿಗೆ ಕೈಗೆ ಅಧಿಕಾರ ಕೊಡಬಾರದು’ ಎಂದರು.
ಜನಪರ ವೇದಿಕೆ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ಕೋಲಾರ ಪರಿಸ್ಥಿತಿ ಹೀನಾಯವಾಗಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಶಾಶ್ವತ ನೀರಾವರಿಗೆ ಹೋರಾಟ ಪರಿಣಾಮ ಕೆ.ಸಿ.ವ್ಯಾಲಿ ನೀರು ಸಿಕ್ಕಿತು. ಆದರೆ, ಮೂರನೇ ಹಂತದಲ್ಲಿ ಶುದ್ಧೀಕರಿಸಿ ಹರಿಸಬೇಕು. ವೈದ್ಯಕೀಯ ಕಾಲೇಜು, ಹೈಟೆಕ್ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ ಬೇಕು, ಕೈಗಾರಿಕೆಗಳು ಬರಬೇಕು. ನಾವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಜನಪರವಾಗಿ ರಾಜಕಾರಣ ಮಾಡದೆ ಹಣದ ರಾಜಕೀಯದಲ್ಲಿ ತೊಡಗಿದ್ದಾರೆ’ ಎಂದು ಹರಿಹಾಯ್ದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ‘ಪ್ರಶ್ನೆ ಮಾಡುವ ಪ್ರವೃತ್ತಿ ಇಲ್ಲದಿದ್ದರೆ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಜನಪರ ವೇದಿಕೆಯಿಂದ ಜನರ ಮನಸ್ಸು ಮುಟ್ಟುವ ಕಾರ್ಯ ಮಾಡುತ್ತಿದ್ದೀರಿ. ಸಮಾಜ ಪರಿವರ್ತನೆ ಆಗಬೇಕು. ಸಮಾಜಕ್ಕೆ ದನಿಯಾಗಬೇಕು’ ಎಂದು ಹೇಳಿದರು.
ಪತ್ರಕರ್ತ ಬಿ.ವಿ.ಗೋಪಿನಾಥ್ ಮಾತನಾಡಿ, ‘ಆಂದೋಲನದ ಮೂಲಕ ಸಮಸ್ಯೆಗಳನ್ನು ಗುರುತಿಸಿ ಸಾಮಾನ್ಯ ವರ್ಗದ ಬದುಕುಗಳಿಗೆ ಮಾರ್ಗದರ್ಶನ ಮಾಡಬೇಕಾಗಿದೆ. ಆಡಳಿತ ವ್ಯವಸ್ಥೆಗೆ ಜನಪರ ವೇದಿಕೆ ಜಾಗೃತಿ ಮೂಡಿಸಬೇಕು’ ಎಂದರು
ಪತ್ರಕರ್ತ ಕೆ.ಎಸ್.ಗಣೇಶ್, ‘ಜಾಥಾ ಮೂಲಕ ಜನರನ್ನು ಎಚ್ಚರಿಸಲಾಗುತ್ತಿದೆ.ಎಲ್ಲಾ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಬೇಡಿಕೆ ಈಡೇರಿಸಿಕೊಳ್ಳಲು ಜನರ ಮಧ್ಯೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ತಿಳಿಸಿದರು.
ಜನಪರ ವೇದಿಕೆ ಗೌರವಾಧ್ಯಕ್ಷ ಸಲಾವುದ್ದೀನ್ ಬಾಬು, ಖಜಾಂಚಿ ವಿ.ಗೀತಾ, ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ್, ತಾಲ್ಲೂಕು ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ರೈತ ಮುಖಂಡ ಪಿ.ಆರ್.ಸೂರ್ಯನಾರಾಯಣ, ಶ್ರೀನಿವಾಸ್ ಇದ್ದರು.
ಇದನ್ನೂ ಓದಿ – ಎಂ.ಎಸ್. ಪ್ರಭಾಕರ: ಅಕ್ಷರ ಮೋಹಿ-ಜ್ಞಾನ ದಾಹಿ