ಕೋಲಾರ ನಗರದ ಶಂಕರಮಠದಲ್ಲಿ ಗಾಯತ್ರಿ ಸಂಗೀತ ಕಲಾ ನಿಕೇತನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕರ್ನಾಟಕ ಶಾಸ್ತ್ರೀಯಸಂಗೀತ ಕಾರ್ಯಕ್ರಮವನ್ನು ಜ.೧ ೨೦೨೩ ರಂದು ಆಯೋಜಿಸಲಾಗಿತ್ತು.
ಸಂಗೀತಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಠಾಣೆ ಆರಕ್ಷಕ ನಿರೀಕ್ಷಕ ಹರೀಶ್ ಮಾತನಾಡಿ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಗುರು ಶಿಷ್ಯ ಪರಂಪರೆಯ ಮೂಲಕ ಬೆಳೆಸಬೇಕೆಂದು ಹೇಳಿದರು.
ಸಂಗೀತ ಪರಂಪರೆ ಕ್ರಮೇಣ ಕ್ಷೀಣಿಸುತ್ತಿದ್ದು, ಸಂಗೀತ ಕಲಿಯುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ, ಸಂಗೀತ ವಿದ್ವಾಂಸರು ಕೆಲವೆಡೆ ಸಂಗೀತ ಕಲಿಸುವ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ, ಅಂತವರಿಗೆ ಸರಕಾರ ಪ್ರೋತ್ಸಾಹ ನೀಡುವಂತಾಗಬೇಕೆಂದರು.
ಭಾರತ ಸೇವಾದಳ ಕೋಲಾರ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕರ್ನಾಟಕ ಸಂಗೀತ ಪರಂಪರೆಗೆ ಭವ್ಯವಾದ ಇತಿಹಾಸವಿದ್ದು, ವಾಗ್ಗೇಯಕಾರರು ದಾಸ ಶ್ರೇಷ್ಠರ ಪ್ರತಿಯೊಂದು ಕೀರ್ತನೆಯೂ ಬೆಲೆಕಟ್ಟಲಾಗದ ಒಂದೊಂದು ಮುತ್ತುಗಳೆಂದು ಭಾವಿಸಿ ಸಂಗೀತದ ವಜ್ರವೈಢೂರ್ಯಗಳಂತಿರುವ ಕೀರ್ತನಾ ಆಸ್ತಿಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಸರಕಾರ ಕೇವಲ ಸಂಗೀತ ಪರೀಕ್ಷೆಗಳನ್ನು ನಡೆಸುವುದು ಮಾತ್ರ ತನ್ನ ಕರ್ತವ್ಯ ಎಂದು ಭಾವಿಸದೆ ಗುರು ಶಿಷ್ಯ ಪರಂಪರೆಯನ್ನು ಪಠ್ಯಭಾಗವಾಗಿ ಮುಂದುವರೆಸಬೇಕು, ಅಲ್ಲಲ್ಲಿ ಉಳಿದಿರುವ ವಿದ್ವಾಂಸರ ನೆರವು ಪಡೆದು ಸಂಗೀತ ಕಲಿಕಾ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಬೆಳೆಸಬೇಕೆಂದರು.
ಮರುಭೂಮಿಯಲ್ಲಿ ಓಯಸಿಸ್ ಎನ್ನುವಂತೆ ಇಂದಿಗೂ ಸಂಗೀತ ಕಲಿಕಾ ಪರಂಪರೆಯನ್ನು ಮುಂದುವರೆಸುತ್ತಿರುವ ಗಾಯತ್ರಿ ಸಂಗೀತ ಕಲಾ ನಿಕೇತನದಂತ ಸಂಸ್ಥೆಗಳಿಗೆ, ಸಂಗೀತ ವಿದ್ವಾಂಸರಾದ ಶ್ರೀನಿವಾಸಲು ಅಂತವರಿಗೆ ಸರಕಾರ ಪ್ರೋತ್ಸಾಹ ನೀಡುವ ಯೋಜನೆಯನ್ನು ರೂಪಿಸಬೇಕೆಂದು ಆಗ್ರಹಿಸಿದರು.
ಶಂಕರಮಠದ ಖಜಾಂಚಿ ಮುರಳಿ ಸುಂದರ್ ಮಾತನಾಡಿ, ಸಂಗೀತ ಕಲಿಕೆ ಕೇವಲ ಹಾಡುಗಾರಿಕೆ ಮಾತ್ರವಲ್ಲದೆ ಉತ್ತಮ ಆರೋಗ್ಯಕ್ಕೂ ಕಾರಣವಾಗುತ್ತದೆ, ಶಾಸೀಯ ಸಂಗೀತಗಾರರಿಗೆ ಯಾವುದೇ ಕಾರಣಕ್ಕೂ ಉಸಿರಾಟದ ಸಮಸ್ಯೆಗಳು ಬರುವುದಿಲ್ಲ, ಸಂಗೀತವನ್ನು ಮನನ ಮಾಡಿಕೊಳ್ಳುವ ಮೂಲಕ eಪಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು, ಇವೆಲ್ಲಾ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸರಕಾರ ಪಠ್ಯ ಭಾಗದಲ್ಲಿ ಸಂಗೀತವನ್ನು ಸೇರ್ಪಡೆ ಮಾಡಬೇಕೆಂದು ಕಲಿಕೆಯನ್ನು ಕಡ್ಡಾಯಗೊಳಿಸಬೇಕೆಂದರು.
ಇದೇ ಸಂದರ್ಭದಲ್ಲಿ ವಿದ್ವಾಂಸರಾದ ಶ್ರೀನಿವಾಸಲು ಮತ್ತು ಶಿಷ್ಯವೃಂದದಿಂದ ಕರ್ನಾಟಕ ಶಾಸೀಯ ಸಂಗೀತ ಗಾಯನ, ವಾದ್ಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಕ್ಕವಾದ್ಯದ ನೆರವನ್ನು ಎನ್.ಮಾರುತಿ ಪ್ರಸಾದ್, ಕೆ.ಕೆ.ಭಾನುಪ್ರಕಾಶ್, ಹರೀಶ್ ನೀಡಿದರು.
ಸಂಗೀತಾಸಕ್ತರು,ಪೋಷಕರು, ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಗೀತ ಕಾರ್ಯಕ್ರಮವನ್ನು ಶಂಕರಮಠದ ಧರ್ಮಾಧಿಕಾರಿ ರಾಮಕೃಷ್ಣ ನಿರೂಪಿಸಿದರು.
ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ
ಇದನ್ನೂ ಓದಿ: ನೇತ್ರತಜ್ಞ ಡಾ.ಎಚ್.ಆರ್.ಮಂಜುನಾಥ್ ರಿಗೆ ಸನ್ಮಾನ ಮಕ್ಕಳಲ್ಲಿ ನೇತ್ರದಾನದ ಅರಿವು ಮೂಡಿಸಲು ಸಲಹೆ