• Fri. Apr 19th, 2024

ಅಕ್ಷರಮಾತೆ  “ಸಾವಿತ್ರಿ ಬಾಯಿ ಪುಲೆ “

PLACE YOUR AD HERE AT LOWEST PRICE

ಅಕ್ಷರದವ್ವ, ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ, ಶೋಷಿತರ, ದಮನಿತರ ಧ್ವನಿ, ಅಕ್ಷರಸ್ಥ ಹೆಣ್ಣು ಮಕ್ಕಳೆಲ್ಲರ ಅಕ್ಷರಮಾತೆ “ಸಾವಿತ್ರಿ ಬಾಯಿ ಪುಲೆ ” ಅವರಿಗೆ ಜನ್ಮ ದಿನದ ಶುಭಾಶಯಗಳು.

“ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ” ಬಹುಶಃ ಈ ಸಂದೇಶವನ್ನೂ ಮೀರಿದ ಹೆಮ್ಮೆಯ ಪುತ್ರಿ 1831 ಜನವರಿ 3ರಂದು ಸಾವಿತ್ರಿ ಬಾಯಿ ಫುಲೆ ಜನಿಸಿದ್ದು. ಆ ದಿನವೇ ಕೇವಲ ಒಂದು ಶಾಲೆಯಲ್ಲ, ಸಮಾಜದ ಕಣ್ಣೇ ತೆರೆಸಿದವರು ಈ ಮಹಿಳಾ ಜಾಗೃತಿ ಮಾತೆ. ಅವರ ಅನನ್ಯ ಸೇವೆ ಪರಿಗಣಿಸಿದ ಅಂದಿನ ಬ್ರಿಟಿಷ್ ಸರ್ಕಾರ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂಬ ಬಿರುದು ಕೊಟ್ಟು ಗೌರವಿಸಿತ್ತು.

ಸಮಾಜದಲ್ಲಿ ಜಾತಿ ಪದ್ಧತಿ ಉತ್ತುಂಗದಲ್ಲಿದ್ದ, ಹೆಣ್ಣು ಮಕ್ಕಳು ವಿದ್ಯೆ ಕಲಿಯುವುದು ಅಪರಾಧವೆಂದು ಭಾವಿಸಿದ್ದ, ಮೂಢನಂಬಿಕೆಗಳೇ ಪ್ರಜ್ವಲಿಸುತ್ತಿದ್ದ, ಅನಿಷ್ಠಗಳು ವಿಜೃಂಭಿಸುತ್ತಿದ್ದ, ಆ ದಿನಗಳಲ್ಲಿಯೇ ಹೆಣ್ಮಕ್ಕಳ ಶಿಕ್ಷಣ ಕ್ಕ ಬೀಜ ಬಿತ್ತಿದವರು. ಶೋಷಿತರ, ದಮನಿತರ ಹೆಣ್ಣು ಮಕ್ಕಳಿಗಾಗಿ ಮೊದಲ ಬಾಲಕಿಯರ ಶಾಲೆ ಆರಂಭಿಸಿದರು. ಬಳಿಕ 18 ಶಾಲೆಗಳನ್ನು ತೆರೆದು ಸಮಾಜಕ್ಕೆ ಎದೆತಟ್ಟಿ ತೋರಿದ ದಿಟ್ಟೆ ಸಾವಿತ್ರಿ ಬಾಫುಲೆ. ಹೆಣ್ಮಕ್ಕಳನ್ನು ಗೊಡ್ಡು ಸಂಕೋಲೆಗಳಿಂದ ಹೊರತರಲು ಶಿಕ್ಷಣವೇ ಬ್ರಹ್ಮಾಸ್ತ್ರವೆಂದು ಬಗೆದು ಹೋರಾಡಿದ ಶೈಕ್ಷಣಿಕ ಕ್ರಾಂತಿಕಾರಿ.  ಕೆಳ ವರ್ಗಗಳ ಉದ್ಧಾರಕ್ಕಾಗಿಯೇ ಜೀವನ ಸವೆಸಿದ ಪುಲೆ ದಂಪತಿ, ಅಂದೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದವರು. ಸ್ತ್ರೀ ವಿಮೋಚನೆಗೆ ನಾಂದಿ ಹಾಡಿದವರು. ಮಹಿಳೆಯರಲ್ಲಿ ಶಕ್ತಿ ತುಂಬಿದವರು.

ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದ 8 ವರ್ಷದ ಬಾಲೆ ಸಾವಿತ್ರಿ ಬಾಯಿ ಪುಲೆಯನ್ನು 13 ವರ್ಷದ ಜ್ಯೋತಿರಾವ್ ಫುಲೆ ಅವರಿಗೆ ಕೊಟ್ಟು ಬಾಲ್ಯ ವಿವಾಹ ಮಾಡಿದರು. ಮದುವೆಯ ನಂತರ ಜ್ಯೋತಿಬಾ ಫುಲೆ ಅವರು ಶಿಕ್ಷಣ ಮುಂದುವರಿಸಿದರು. ಜೊತೆಗೆ ಮನೆಯಲ್ಲಿ ಪತ್ನಿ ಸಾವಿತ್ರಿಗೂ ಶಿಕ್ಷಣ ಕಲಿಸಿದರು. ಸಾವಿತ್ರಿಗೆ ಮನೆಯೇ ಪಾಠಶಾಲೆ. ಪತಿಯೇ ಗುರು. ಜ್ಯೋತಿ ಬಾಫುಲೆ ಅವರು ಸಾವಿತ್ರಿಗೆ ಓದು, ಬರೆಹ ಮಾತ್ರ ಕಲಿಸಿ ಸುಮ್ಮನಾಗಲಿಲ್ಲ. ಜ್ಯೋತಿ ಬಾಪುಲೆ ತನ್ನ ಸಮಾಜ ಸುಧಾರಣೆ ಕೆಲಸಗಳಲ್ಲಿ ಸಾವಿತ್ರಿಗೂ ಪಾಲ್ಗೊಳ್ಳಲು ಪ್ರೇರೇಪಿಸಿದರು. ಪತಿಯ ಸಮಾಜ ಸೇವೆಗೆ ಹೆಗಲು ಕೊಟ್ಟು ಬೆನ್ನೆಲುಬಾಗಿ ನಿಂತರು. ಜ್ಯೋತಿ ಬಾಫುಲೆ ತನ್ನ ಗೆಳೆಯ ಉಸ್ಮಾನ್ ಷೇಕ್ ತಂಗಿ ಪಾತಿಮಾ ಷೇಕ್ ಮತ್ತು ಸಾವಿತ್ರಿಗೆ ಮಿಷನರಿಯಲ್ಲಿ ಶಿಕ್ಷಣ ತರಬೇತಿ ಕೊಡಿಸಿದರು.

ಅಂದಿನ ಪೇಶ್ವೆಗಳ ದರ್ಬಾರು ಅಂತ್ಯಗೊಂಡು, ಬ್ರಿಟಿಷರ ಆಳ್ವಿಕೆಯ ಆರಂಭಘಟ್ಟದಲ್ಲೇ ಪಾತಿಮಳ ಅಣ್ಣನ ಮನೆಯ ಮಾಳಿಗೆಯಲ್ಲಿ ಪಾತಿಮಾ ಮತ್ತು ಸಾವಿತ್ರಿ ದಮನಿತ ಬಾಲಕಿಯರ ಮೊದಲ ಶಾಲೆಯನ್ನು ತೆರೆದರು.
ಶಾಲೆಗೆ ಹೋಗುವ ಸಾವಿತ್ರಿಯನ್ನು ಕಂಡು ಸಂಬಂಧಿಕರು ಹೀಯಾಳಿಸಿದರು. ನೆರೆಹೊರೆಯವರು ಅವಮಾನಿಸಿದರು. ಕಿಡಿಗೇಡಿಗಳು ಕಲ್ಲೆಸೆದರು. ಸಹಿಸಲಾಗದವರು ಸಗಣಿ ಎಸೆದರು. ಆದರೆ ಫುಲೆ ದಿನವೂ ಒಂದೊಂದು ಅವಮಾನಕ್ಕೆ ಸನ್ಮಾನದಂತೆ ಕೊರಳೊಡ್ಡಿದರು. ಯಾವುದನ್ನೂ ಲೆಕ್ಕಿಸಲಿಲ್ಲ. ಯಾವುದಕ್ಕೂ ಎದೆಗುಂದಲಿಲ್ಲ. ಬದಲಾಗಿ ಅವು ನನ್ನ ಮೇಲೆಸೆವ ಹೂವುಗಳೆಂದು ಹೇಳಿಕೊಂಡರು. ಅವರು ಶಾಲೆಗೆ ಹೋಗುವಾಗ ತನ್ನ ಬ್ಯಾಗಿನಲ್ಲಿ ಊಟ ಹೊತ್ತಂತೆ, ಒಂದು ಸೀರೆಯನ್ನು ತಪ್ಪದೆ ಒಯ್ಯುತ್ತಿದ್ದರು. ಮಕ್ಕಳು ಬರುವ ವೇಳೆಗೆ ಸಗಣಿ ಎಸೆದಿರುವ ಸೀರೆಯನ್ನು ಬದಲಾಯಿಸಿ ಪಾಠ ಹೇಳಲು ಅಣಿಯಾಗುತ್ತಿದ್ದರು. ಹೆಣ್ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದೇ ಅವರಿಗಿದ್ದ ಧ್ಯೇಯ. ಬೆದರಿಕೆಗಳಿಗೆ ಅವರೆಂದೂ ಬಗ್ಗಲಿಲ್ಲ. ಕುಗ್ಗಲಿಲ್ಲ. ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆಗಳನ್ನು ತೆರೆದು ಪಾಠ ಹೇಳುತ್ತಿದ್ದರು. ನೊಂದ, ಪರಿತ್ಯಕ್ತ ಮಹಿಳೆಯರಿಗಾಗಿ ಬಾಲಹತ್ಯಾ ಪ್ರತಿಬಂಧಕ ಗೃಹ ಆರಂಭಿಸಿದರು. ಮಹಿಳಾ ಜಾಗೃತಿಗಾಗಿ ಮಹಿಳಾ ಮಂಡಳಿಗಳಲ್ಲಿ ತಾರತಮ್ಯವಿಲ್ಲದೆ ಬೆರೆಯುವ ವಾತಾವರಣ ನಿರ್ಮಿಸಿದರು. ವಿಧವಾ ಕೇಶಮುಂಡನ ತಡೆಗೆ ಕ್ಷೌರಿಕರ ಮನವೊಲಿಸಿದರು.
“ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು” ಎಂದೇ ಭಾವಿಸಿದ್ದ ಅವರು, ವಿವಾಹಪೂರ್ವ, ಅತ್ಯಾಚಾರಕ್ಕೊಳಪಟ್ಟ ಸಂತ್ರಸ್ತರ ಅನಾಥ ಮಕ್ಕಳಿಗೆ “ವಿಕ್ಟೋರಿಯಾ ಬಾಲಾಶ್ರಮ” ತೆರೆದು ಪೋಷಿಸಿದರು. ದಲಿತರ ಕುಡಿವ ನೀರಿಗಾಗಿ ತಮ್ಮನೆಯಂಗಳದ ಬಾವಿ ಮುಕ್ತವಾಗಿ ಬಿಟ್ಟುಕೊಟ್ಟರು.

ಇಂದಿನ ಬಿಸಿಯೂಟ, ವಿದ್ಯಾರ್ಥಿ ವೇತನ, ಹಾಸ್ಟೆಲ್, ಇತ್ಯಾದಿ ಯೋಜನೆಗಳೆಲ್ಲಾ ಶಿಕ್ಷಣಕ್ಕೆ ಅಂದೆ ಫುಲೆ ದಂಪತಿ ಹಾಕಿಕೊಟ್ಟ ಅಡಿಪಾಯಗಳು. ಹೀಗೆ ಅವರ ಹೋರಾಟದ ಹಾದಿಯಲ್ಲೇ ಬಾಳಸಂಗಾತಿ ಜ್ಯೋತಿ ಬಾಫುಲೆ ಅನಾರೋಗ್ಯದಿಂದ ಕೊನೆಯುಸಿಳೆದರು. ಪತಿಗೆ ಒತ್ತಾಸೆಯಾಗಿ ನಿಂತಿದ್ದ ಸಾವಿತ್ರಿ ಬಾಫುಲೆ ಅವರ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಿದರು. ಸಾಮಾಜಿಕ ಹೋರಾಟಗಳಲ್ಲೇ ಮುಳುಗಿದ್ದ ಸಾವಿತ್ರಿ ಬಾಫುಲೆ ಅವರ ಪ್ರದೇಶದಲ್ಲಿ ಒಮ್ಮೆ ಪ್ಲೇಗ್ ಸಾಂಕ್ರಾಮಿಕ ಉಲ್ಭಣಿಸಿತು. ಇಂತಹ ಸಂದರ್ಭದಲ್ಲಿ ಊರೂರು ಅಲೆದಾಡಿ ಸೋಂಕಿತರ ನೆರವಿಗೆ ನಿಂತ ಸಾವಿತ್ರಿ ಬಾಫುಲೆಯೂ ಪ್ಲೇಗ್ ಸೋಂಕಿಗೆ ಗುರಿಯಾದರು. 1897 ಮಾರ್ಚ್ 10ರಂದು ಸಮಾಜವೆಂಬ ಅವಿಭಕ್ತ ಕುಟುಂಬದಿಂದ ಸಾವಿತ್ರಿ ಬಾಫುಲೆ ಇಹಲೋಕ ತ್ಯಜಿಸಿದರು.

ಮಕ್ಕಳಿಲ್ಲದ ಫುಲೆ ದಂಪತಿ ಸ್ವಂತ ಮಕ್ಕಳಿಲ್ಲವೆಂದು ಎಂದೂ ಕೊರಗಲಿಲ್ಲ. ಹಂಬಲಿಸಲಿಲ್ಲ. ಬದಲಾಗಿ ಓರ್ವ ಬಾಲವಿಧವೆಯ ಮಗ ಯಶವಂತನನ್ನು ದತ್ತು ಪಡೆದರು. ತಮ್ಮಂತೆ ಆ ಮಗನೂ ಸಮಾಜ ಸೇವೆಗೆ ಟೊಂಕ ಕಟ್ಟಿ ನಿಂತಾಗ ಖುಷಿ ಪಟ್ಟರು. ಪ್ರೋತ್ಸಾಹಿಸಿದರು. ಫುಲೆ ದಂಪತಿಯ ಸಾಮಾಜಿಕ ಚಟುವಟಿಕೆಗಳ ಉತ್ತರಾಧಿಕಾರಿಯಾಗಿ ಮುಂದುವರಿಸಿದರು.

ನುಡಿದಂತೆ ನಡೆದು ತೋರಿಸಿ ಶೋಷಿತರ ಸುಧಾರಣೆಗಾಗಿ ಜೀವತೆತ್ತ ದಂಪತಿಗೆ ಏನು ಹೇಳಿದರೂ, ಎಷ್ಟು ಬರೆದರೂ ತಣಿಯದು ಅಕ್ಷರದಾಹ. ಇತಿಹಾಸ ದೋಷವೂ, ಇತಿಹಾಸಕಾರರ ಲೋಪವೋ ಅಂತೂ ಇತಿಹಾಸದಲ್ಲಿ ಅವರು ಸಮಾಜಕ್ಕೆ ಮಾಡಿದ ಅಪಾರ ಸೇವೆಯ ಕುರಿತ ಮಾಹಿತಿ ಇತರ ಇತಿಹಾಸಕಾರರ ಮತ್ತು ಇತಿಹಾಸಕ್ಕೆ ಹೋಲಿಸಿದರೆ ಅತ್ಯಲ್ಪ ಪರಿಗಣನೆ ಎಂದೇ ಹೇಳಬಹುದು.

ಎಷ್ಟೋ ಪ್ರಥಮಗಳಿಗೆ ನಾಂದಿ ಹಾಡಿದ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಸಮಾಜ ಸುಧಾರಕಿ, ದಣಿವರಿಯದ ಸತ್ಯಶೋಧಕಿ ಸಾವಿತ್ರಿ ಬಾಫುಲೆ ಅವರಿಗೊಂದು ನುಡಿ ನಮನ.

ಬಿ.ವಿ.ಅನುರಾಧ
ಇದನ್ನೂ ಓದಿ – ಎಂ.ಎಸ್. ಪ್ರಭಾಕರ: ಅಕ್ಷರ ಮೋಹಿ-ಜ್ಞಾನ ದಾಹಿ

Related Post

ಬೆಂಗಳೂರಿನ ಪುಸ್ತಕ ಮನೆ ಕೋಲಾರ ಜಿಲ್ಲೆಗೆ ಸ್ಥಳಾಂತರ : ಓದುಗ ಪ್ರಿಯರಿಗೆ ಸಂತೋಷದ ವಿಷಯ
ಆದಿಮದಲ್ಲಿ ಸಾಂಸ್ಕೃತಿಕ ಯಾನ -200ರ ಅದ್ದೂರಿ ಚಾಲನೆಗೆ ಕ್ಷಣಗಣನೆ .
ಮೂಲಭೂತ ಸೌಲಭ್ಯಗಳಿಲ್ಲದೆ ಹಂದಿಗೂಡಂತಾದ ಕಾಲೇಜು ಹಾಸ್ಟೆಲ್.

Leave a Reply

Your email address will not be published. Required fields are marked *

You missed

error: Content is protected !!