• Thu. Apr 25th, 2024

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಜ.೧೦ಕ್ಕೆ ಬೃಹತ್ ಪ್ರತಿಭಟನೆ : ಚಿತ್ರದುರ್ಗ ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕರೆ

PLACE YOUR AD HERE AT LOWEST PRICE

 

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಗುಪ್ತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಹೊರಟಿರುವುದನ್ನು ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಜ.೧೦ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಚಿತ್ರದುರ್ಗ ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವಾಸ್ತವಿಕ ಮತ್ತು ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿರುವ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸದೆ ಕೇಂದ್ರ ಸರ್ಕಾರಕ್ಕೆ ಏಕಮುಖವಾಗಿ ಶಿಫಾರಸ್ಸು ಮಾಡಲು ಹೊರಟಿರುವುದನ್ನು ವಿರೋಧಿಸಿ ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಜಾಥಾ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಪ್ರತಿಭಟನೆ ನಡೆಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕರೆ ನೀಡಲಾಗಿದ್ದು, ರಾಜ್ಯಾದ್ಯಂತ ಪ್ರತಿ ಮನೆಯಿಂದ ಇಬ್ಬರಂತೆ ಬರಲಿದ್ದು, ಕೋಲಾರ ಜಿಲ್ಲೆಯಿಂದಲೂ ಸಹ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮುದಾಯಕ್ಕೆ ಸೂಚನೆ ನೀಡಿರುವ ಸ್ವಾಮೀಜಿಯವರು ಜ.೧೦ರ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಕರೆಕೊಟ್ಟಿದ್ದಾರೆ.

ಭೋವಿ, ಲಂಬಾಣಿ (ಬಂಜಾರ) ಛಲವಾದಿ, ಅಲೆಮಾರಿ ಜಾತಿಗಳಾದ ಕೊರಚ, ಕೊರಮ, ಚನ್ನದಾಸ, ಕುಳುವ, ಬುಡ್ಗಜಂಗಮ, ಸಿಳ್ಳೆಕ್ಯಾತಾಸ್, ದೊಂಬರು ಸೇರಿದಂತೆ ಪರಿಶಿಷ್ಟ ಸಮುದಾಯದವರಿಗೆ ಸಮಾನ ಅವಕಾಶದಿಂದ ವಂಚಿತವಾಗಬರದು, ಎಲ್ಲರಿಗೂ ತಮ್ಮ ಹಕ್ಕು ಸಿಗುವುದಕ್ಕಾಗಿ ಒಗ್ಗಟ್ಟಾಗಬೇಕು ಎಂದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಡಾ.ಎಚ್.ರವಿ ಮಾಕಳಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನಮಗೆ ಕೊಟ್ಟ ಭಾರತ ಸಂವಿಧಾನದ ಪ್ರಚಾರ ಕಾರ್ಯ ಮತ್ತು ಸಂರಕ್ಷಣೆಯ ಚಟುವಟಿಕೆಗಳಲ್ಲಿ ನಮ್ಮ ಸಮುದಾಯಗಳು ತೊಡಗಿಸಿಕೊಂಡಿವೆ. ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಎಲ್ಲಾ ದಮನಿತ, ವಂಚಿತ ಜನ ಸಮುದಾಯಗಳಿಗೆ ತಲುಪಲಿ ಎಂಬ ಸದಾಶಯ ನಮ್ಮದು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಸಮುದಾಯಗಳ ಒಗ್ಗಟ್ಟು ಮತ್ತು ಅಭಿವೃದ್ಧಿಗಾಗಿ ಸರ್ಕಾರಗಳು ಮತ್ತಷ್ಟು ಅಗತ್ಯ ಕಾರ್ಯಕ್ರಮ ರೂಪಿಸಲಿ ಎಂದು ಆಗ್ರಹಿಸಿದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಶ್ರೀಕೃಷ್ಣ ಮಾತನಾಡಿ, ರಾಜ್ಯದ ಪರಿಶಿಷ್ಟ ಜಾತಿಗಳ ಸ್ಥಿತಿಗತಿ, ಸರ್ಕಾರಿ ಸೌಲಭ್ಯಗಳ ಹಂಚಿಕೆ ಮತ್ತು ವಿತರಣೆಯ ಅಧ್ಯಯನದ ಉದ್ದೇಶಕ್ಕಾಗಿ ೨೦೦೫ರಲ್ಲಿ ಏಕ ಸದಸ್ಯ ಆಯೋಗ ರಚನೆಯಾಗಿದ್ದು ಸಂತೋಷ ತಂದಿತ್ತು. ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ನ್ಯಾ.ಎ.ಜೆ. ಸದಾಶಿವರವರು ವರದಿ ಸಲ್ಲಿಸುವ ಕೆಲವು ತಿಂಗಳುಗಳವರೆಗೂ ಆಯೋಗಕ್ಕೆ ಮೂಲಭೂತ ಸೌಲಭ್ಯಗಳು, ಅಗತ್ಯ ಅನುದಾನವನ್ನು ಒದಗಿಸಿರಲಿಲ್ಲ. ಸಮಗ್ರವಾಗಿ ಅಧ್ಯಯನ ಮಾಡಬೇಕಿದ್ದ ಆಯೋಗ ಅದ್ಯಾಕೊ ಅವಸರದಲ್ಲಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ಸರ್ಕಾರಿ ಆದೇಶದ ಉದ್ದೇಶ ಮತ್ತು ಸಮುದಾಯಗಳ ನಿರೀಕ್ಷೆಯಂತೆ ಆಯೋಗ ಕಾರ್ಯನಿರ್ವಹಿಸಲಿಲ್ಲ ಎಂದು ದೂರಿದರು.

ಭೋವಿ ಸಮುದಾಯದ ಮುಖಂಡ ಎಲ್.ಜಿ.ಮುನಿರಾಜು ಮಾತನಾಡಿ, ಇದು ಯಾರನ್ನೂ ಅಪಮಾನಿಸುವ ಹೋರಾಟವಲ್ಲ, ನಮ್ಮ ಸಂವಿಧಾನಿಕ ಮೀಸಲಾತಿ ಹಕ್ಕುಗಳ ಸಂರಕ್ಷಣಾ ಹೋರಾಟ, ನಮ್ಮನ್ನು ಬೀದಿಪಾಲು ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ಹೋರಾಟ. ನಮ್ಮ ಹಕ್ಕೊತ್ತಾಯಗಳ ಈಡೇರಿಕಗಾಗಿ ಪ್ರತಿಯೊಬ್ಬರೂ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಎಸ್.ವಿ.ಲೋಕೇಶ್, ವರದೇನಹಳ್ಳಿ ವೆಂಕಟೇಶ್, ಜೆ.ಸಿ.ಬಿ. ನಾರಾಯಣಪ್ಪ, ಶಿವು ಮತ್ತಿತರರು ಹಾಜರಿದ್ದರು.

 

ಇದನ್ನೂ ಓದಿ : ಜ. 8ಕ್ಕೆ ಚಿತ್ರದುರ್ಗದಲ್ಲಿ ಎಸ್. ಸಿ./ ಎಸ್. ಟಿ ಐಕ್ಯತಾ ಸಮಾವೇಶ ಪೋಸ್ಟರ್ ಬಿಡುಗಡೆ

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!