ಜನವರಿ 8 ರಂದು ಚಿತ್ರದುರ್ಗದಲ್ಲಿ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದ ಐತಿಹಾಸಿಕ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಕೇಂದ್ರ ಸಚಿವ
ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕೋಲಾರ ಪತ್ರಕರ್ತರ ಭವನದಲ್ಲಿ ಬುಧವಾರ ಚಿತ್ರದುರ್ಗದಲ್ಲಿ ನಡೆಯುವ ಐಕ್ಯತಾ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ, ದೇಶಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ರಾಜ್ಯದ ಜನತೆಗೆ ತಿಳಿಸುವುದಲ್ಲದೆ, ದಲಿತರ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ದಲಿತ ಸಮುದಾಯದ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಪಕ್ಷ ಹೆಮ್ಮೆಯ ಹೆಜ್ಜೆಗುರುತುಗಳನ್ನು ಹೊಂದಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ರವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಗಾಂಧೀಜಿಯವರ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ಪಕ್ಷವಾಗಿರುವುದರಿಂದ, ಈ ಸಮಾವೇಶ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ ಎಂದರು.
ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಪ್ರಿಯಾಂಕಗಾಂಧಿ, ರಾಹುಲ್ ಗಾಂಧಿ, ಕೆ. ಸಿ.. ವೇಣುಗೋಪಾಲ್, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಾ. ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಪ್ರಸಾದ್ ಬಾಬು, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯಶಂಕರ್ ಜಿಲ್ಲಾ ಎಸ್.ಸಿ ವಿಭಾಗದ ಕೆ.ಜಯದೇವ್, ಎಸ್‍ಟಿ ವಿಭಾಗದ ನಾಗರಾಜ್, ಅಲ್ಪಸಂಖ್ಯಾತ ವಿಭಾಗದ ಮಹಮದ್ ಇಕ್ಬಾಲ್, ಕಿಸಾನ್ ಕೇತ್ ವಿಭಾಗದ ಊರುಬಾಗಿಲು ಶ್ರೀನಿವಾಸ್, ಕಾರ್ಮಿಕ ಮುಖಂಡ ಹೊನ್ನೇನಹಳ್ಳಿ ಯಲ್ಲಪ್ಪ, ಕೊಡಿಯಪ್ಪ, ಜೆ. ಕೆ. ಜಯರಾಮ್.ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ನಮ್ಮ, ಸೀತಿಹೊಸೂರು ಮುರಳೀಗೌಡ, ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ರೇಣುಕಾ ಎಲ್ಲಮ್ಮ ಬಳಗ ಯಾವುದೇ ಪಕ್ಷಕ್ಕೆ ಸೀಮಿತ ಅಲ್ಲ: ಗೋವಿಂದರಾಜು.