• Thu. Mar 28th, 2024

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೆ ಜೆಡಿಎಸ್ ವರಿಷ್ಠರ ಮುಕ್ತ ಆಹ್ವಾನ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಕೊಡಲು ದೇವೇಗೌಡರ ಸಮ್ಮತಿ: ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿಕೆ

PLACE YOUR AD HERE AT LOWEST PRICE

ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರನ್ನ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮುಕ್ತ ಆಹ್ವಾನ ಕೊಟ್ಟಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.


ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿಗೆ ಒಂದು ದಿನದ ಮುಂಚಿತವಾಗಿ ಈ  ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,
ರಮೇಶ್‌ಕುಮಾರ್‌ರಂತಹ ಸ್ವಾರ್ಥಿಗಳ ರಾಜಕೀಯ ದಾಳಕ್ಕೆ ಬಲಿಯಾಗದೆ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಬ್ಯಾಲಹಳ್ಳಿ ಗೋವಿಂದಗೌಡರು ಮರಳಿ ಮಾತೃ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಬರುವುದಕ್ಕೆ ಮುಕ್ತ ಆಹ್ವಾನವಿದೆ. ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಲುವಾಗಿ ಈಗಾಗಲೇ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರೊಂದಿಗೆ ಚರ್ಚಿಸಿದ್ದು ಅವರು ಕೂಡ ಸಮ್ಮತಿ ಕೊಟ್ಟಿದ್ದಾರೆ. ಬ್ಯಾಲಹಳ್ಳಿ ಗೋವಿಂದಗೌಡರನ್ನ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರಿಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ವಹಿಸಿಕೊಡುವಂತೆ ಹೇಳಿದ್ದಾರೆ. ಮುಂದಿನದ್ದನ್ನ ಬ್ಯಾಲಹಳ್ಳಿ ಗೋವಿಂದಗೌಡರು ತೀರ್ಮಾನ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.

ಬ್ಯಾಲಹಳ್ಳಿ ಗೋವಿಂದಗೌಡರು ಈ ಮೊದಲು ಜೆಡಿಎಸ್ ಪಕ್ಷದಲ್ಲಿಯೇ ಇದ್ದವರು, ಅವರು ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಇವತ್ತು ರಾಜ್ಯದಲ್ಲಿ ಕೋಲಾರ ಡಿಸಿಸಿ ಬ್ಯಾಂಕ್ ಹೆಸರು ಮಾಡಿದೆ ಅಂದರೆ ಅದಕ್ಕೆ ಜೆಡಿಎಸ್ ಪಕ್ಷ ಮತ್ತು ನಾನು ಕಾರಣ. ಆವತ್ತು ಬ್ಯಾಲಹಳ್ಳಿ ಗೋವಿಂದಗೌಡರು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಇದೇ ಕಾಂಗ್ರೆಸ್ ಪಕ್ಷದವರು ತೀವ್ರ ವಿರೋಧ ಮಾಡಿದರು. ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲು ಜೆಡಿಎಸ್ ಪಕ್ಷ ಕಾರಣವಾಗಿತ್ತು. ಅಲ್ಲದೆ ಅವರ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠರು ಕೂಡ ಬೆಂಬಲವಾಗಿ ನಿಂತಿದ್ದರು.

ಆದರೆ ಕೆಲವು ರಾಜಕೀಯ ಬದಲಾವಣೆಯೊಂದಿಗೆ ಇಂದು ಬ್ಯಾಲಹಳ್ಳಿ ಗೋವಿಂದಗೌಡರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇವತ್ತಿನ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರನ್ನು ರಾಜಕೀಯವಾಗಿ ಮೂಲೆ ಗುಂಪು ಮಾಡಲು ರಮೇಶ್‌ಕುಮಾರ್ ಷಡ್ಯಂತ್ರ ರೂಪಿಸುತ್ತಿದ್ದಾರೆ.

೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚು ಕಾಂಗ್ರೆಸ್ ಸ್ಥಾನಗಳು ಬರುವುದಕ್ಕೆ ಇದೇ ಬ್ಯಾಲಹಳ್ಳಿ ಗೋವಿಂದಗೌಡರ ರಾಜಕೀಯ ತಂತ್ರಗಾರಿಕೆ ಕಾರಣವಾಗಿತ್ತು. ಸ್ತ್ರೀ ಶಕ್ತಿ ಸಂಘಗಳನ್ನ ಒಟ್ಟುಗೊಡಿಸಿ ಸೋತು ಸುಣ್ಣಾಗಬೇಕಾಗಿದ್ದ ರಮೇಶ್‌ಕುಮಾರ್ ಸೇರಿದಂತೆ ಇತರೆ ಶಾಸಕರಿಗೆ ರಾಜಕೀಯ ಪುನರ್‌ಜನ್ಮ ಕೊಟ್ಟ ಬ್ಯಾಲಹಳ್ಳಿ ಗೋವಿಂದಗೌಡರನ್ನ ಇದೇ ತಂಡ ರಾಜಕೀಯವಾಗಿ ಮುಗಿಸುವುದಕ್ಕೆ ಬಿಜೆಪಿಯವರೊಂದಿಗೆ ಕೈ ಜೋಡಿಸಿದ್ದಾರೆ ಎಂದು ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಜೆಡಿಎಸ್ ಪಕ್ಷದಿಂದ ಟಿಕೇಟ್ ಕೊಡುವುದಕ್ಕೆ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಮ್ಮತಿ ಸೂಚಿಸಿದ್ದರು. ಆದರೆ ಇದೇ ಗೋವಿಂದಗೌಡರು ಕಾಂಗ್ರೆಸ್ ಪಕ್ಷದಲ್ಲಿ ಸೀಟು ಕೊಡಿಸುತ್ತಾರೆ ಎಂದು ರಮೇಶ್‌ಕುಮಾರ್ ಅವರನ್ನ ನಂಬಿಕೊಂಡು ಹೋಗಿದ್ದಕ್ಕೆ ಖೆಡ್ಡಾ ತೋಡಿದರು. ಅಲ್ಲದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಿದರು. ಆದರೆ ಅವರ‍್ಯಾರು ಇವತ್ತು ಗೋವಿಂದಗೌಡರ ಬೆಂಬಲಕ್ಕೆ ನಿಲ್ಲಲಿಲ್ಲ ಎಂದಿದ್ದಾರೆ.

೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ಪಡೆಯುವುದಕ್ಕಾಗಿ ಬ್ಯಾಲಹಳ್ಳಿ ಗೋವಿಂದಗೌಡರು ಪ್ರಬಲವಾಗಿ ಹೋರಾಟ ಮಾಡುತ್ತಿದ್ಧಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಕೋಟ್ಯಾಂತರ ರೂಪಾಯಿ ಸಾಲ ವಿತರಣೆ ಮಾಡುವ ಮೂಲಕ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಆದರೆ ಇಲ್ಲಿಯೂ ಕೂಡ ಇದೇ ರಮೇಶ್‌ಕುಮಾರ್ ತಂಡ ಸಿದ್ದರಾಮಯ್ಯ ಅವರನ್ನ ಕೋಲಾರಕ್ಕೆ ಕರೆಸುವ ಮೂಲಕ ಗೋವಿಂದಗೌಡ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ.

ಬ್ಯಾಲಹಳ್ಳಿ ಗೋವಿಂದಗೌಡರನ್ನ ರಾಜಕೀಯವಾಗಿ ಬೆಳೆಸಿದರೆ ತನ್ನ ರಾಜಕೀಯ ದಾರಿಗೆ ಅಡ್ಡ ಬಂದು ಎಲ್ಲಿ ನನ್ನ ಬುಡಕ್ಕೆ ನೀರು ಬಿಡ್ತಾನೆ ಎಂದು ಭಯಬಿದ್ದಿರುವ ರಮೇಶ್‌ಕುಮಾರ್ ಏನಾದರೂ ಮಾಡಿ ಗೋವಿಂದಗೌಡನನ್ನ ಡಿಸಿಸಿ ಬ್ಯಾಂಕ್‌ಗೆ ಸೀಮಿತಗೊಳಿಸಬೇಕು, ಕೋಲಾರ ಜಿಲ್ಲೆಯಲ್ಲಿ ತನ್ನ ಸಾಮಾಜ್ಯವನ್ನು ಗಟ್ಟಿಮಾಡಿಕೊಂಡು ಮೆರೆಯಬೇಕೆಂದು ತೀರ್ಮಾನಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಿ ಘಟಬಂಧನ್ ರಚನೆ ಮಾಡಿಕೊಂಡು ಕೆ.ಎಚ್.ಮುನಿಯಪ್ಪ ಅವರನ್ನ ಸೋಲಿಸಿ ದುರಂಹಕಾರದಿಂದ ರಮೇಶ್‌ಕುಮರ್ ಮೆರೆಯುತ್ತಿದ್ದಾನೆ.

ಕೋಲಾರ ಮತ್ತು ಚಿಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಈಗಾಗಲೇ ಜೆಡಿಎಸ್ ಅಭ್ಯರ್ಥಿಗಳನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೊಷಣೆ ಮಾಡಿದ್ದಾರೆ. ಅಭ್ಯರ್ಥಿಗಳು ಕೂಡ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಗೆ ಒಳ್ಳೆಯ ಅಭಿಪ್ರಾಯ ಸಿಕ್ಕಿದೆ. ಮುಂದಿನ ಚುನಾವಣೆಯಲ್ಲಿ ಎರಡೂ ಜಿಲ್ಲೆಯಲ್ಲಿ ಕನಿಷ್ಠ ಪಕ್ಷ ೮ ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲ್ಲುವ ವಾತಾವರಣವಿದೆ. ಸಿದ್ದರಾಮಯ್ಯ ಅಲ್ಲ ಬೇರೆ ಯಾರೇ ಬಂದರೂ ನಮ್ಮ ಜೆಡಿಎಸ್ ಅಭ್ಯರ್ಥಿಗಳ ಗೆಲ್ಲೋದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.

 

ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧೆಗೆ ಅಡ್ಡಿಯಾಗುತ್ತಿದೆಯೇ ಕಾಂಗ್ರೆಸ್ ಮುಖಂಡರ ಸ್ವಾರ್ಥ, ಸ್ವಪ್ರತಿಷ್ಠೆ!
 

 

Leave a Reply

Your email address will not be published. Required fields are marked *

You missed

error: Content is protected !!