• Fri. Mar 29th, 2024

ಸಿದ್ದರಾಮಯ್ಯ ಸ್ಪರ್ಧೆಗೆ ಅಡ್ಡಿಯಾಗುತ್ತಿದೆಯೇ ಕಾಂಗ್ರೆಸ್ ಮುಖಂಡರ ಸ್ವಾರ್ಥ, ಸ್ವಪ್ರತಿಷ್ಠೆ!

PLACE YOUR AD HERE AT LOWEST PRICE

  • ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷವು ಕೋಲಾರ ನಗರದ ೩೫ ವಾರ್ಡುಗಳು, ವಿಧಾನಸಭಾ ಕ್ಷೇತ್ರದ ನಾಲ್ಕು ಜಿಪಂ ಕ್ಷೇತ್ರ, ೧೯ ತಾಪಂ ಕ್ಷೇತ್ರ, ೨೦ ಗ್ರಾಪಂ, ೧ ಪಟ್ಟಣ ಪಂಚಾಯ್ತಿ, ಕೋಲಾರ ಕಸಬಾ ಸೇರಿ ಐದು ಹೋಬಳಿಗಳ ಸುಮಾರು ೨.೩೦ ಲಕ್ಷ ಮತದಾರರ ಮೇಲೆ ಇಡಿಯಾಗಿ ಪ್ರಭಾವ ಬೀರುವ ಒಬ್ಬೇ ಒಬ್ಬ ನಾಯಕನನ್ನು ಈವರೆವಿಗೂ ರೂಪಿಸಿಲ್ಲ ಎನ್ನುವುದು ಕಾಂಗ್ರೆಸ್ ನಾಯಕತ್ವದ ಬಹುದೊಡ್ಡ ಲೋಪವಾಗಿ ಕಾಣಿಸುತ್ತಿದೆ.
    ಈ ಲೋಪವನ್ನು ಮುಚ್ಚಿಕೊಳ್ಳಲು, ವ್ಯಕ್ತಿಗತ ತಪ್ಪುಗಳನ್ನು ತೇಪೆ ಹಾಕಿ ಮುಚ್ಚಿಕೊಳ್ಳುವ ಸಲುವಾಗಿಯೇ ಕೋಲಾರ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯರ ಹೆಸರನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿದ್ದಾರೆಂಬುದು ಆರೋಪವಾಗಿ ಮಾತ್ರ ಉಳಿದಿಲ್ಲ. ಸತ್ಯ ವಾಸ್ತವ ಸಂಗತಿಯೂ ಹೌದು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪರೋಕ್ಷವಾಗಿ ಖಚಿತಪಡಿಸಿದ್ದರೂ, ಕೋಲಾರ ಜಿಲ್ಲಾ ಕಾಂಗ್ರೆಸ್ ಮುಖಂಡರ ಸ್ವಾರ್ಥ ಮತ್ತು ಸ್ವಪ್ರತಿಷ್ಠೆ ಕಿಂಚಿತ್ತೂ ಕಡಿಮೆಯಾಗಿಲ್ಲ.

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂಬ ವಿಚಾರದಲ್ಲಿ ಎರಡೂ ಗುಂಪುಗಳು ಪುಂಖಾನುಪುಂಖವಾದ ಹೇಳಿಕೆಗಳನ್ನು ನೀಡುತ್ತಿದ್ದರೂ, ತಮ್ಮ ಸ್ವಾರ್ಥ ಮತ್ತು ಸ್ವಪ್ರತಿಷ್ಠೆಯನ್ನು ಬೆಳೆಸಿಕೊಂಡೇ ಮುಂದಡಿ ಇಡುತ್ತಿದ್ದಾರೆ.

ಹಲವಾರು ವರ್ಷಗಳಿಂದಲೂ ಕೋಲಾರ ಜಿಲ್ಲಾ ಕಾಂಗ್ರೆಸ್ ಅನ್ನು ಕಾಡುತ್ತಿದ್ದ ಗುಂಪುಗಾರಿಕೆ ಕಳೆದ ಲೋಕಸಭಾ ಚುನಾವಣೆಯ ನಂತರ ಸ್ಪಷ್ಟ ರೂಪ ಪಡೆದುಕೊಂಡು ಇಬ್ಭಾಗವಾಗಿದೆ. ಈಗ ಒಂದು ಗುಂಪು ಸಿದ್ದರಾಮಯ್ಯರನ್ನು ಕರೆದುಕೊಂಡು ಬರಲು ಸಜ್ಜಾಗುತ್ತಿದೆ. ಮತ್ತೊಂದು ಗುಂಪು ಸಿದ್ದರಾಮಯ್ಯರ ಸ್ಪರ್ಧೆಗೆ ಪ್ರತ್ಯಕ್ಷವಾಗಿ ವಿರೋಧ ವ್ಯಕ್ತಪಡಿಸಿಲ್ಲವಾದರೂ ಪರೋಕ್ಷವಾಗಿ
ಸಿದ್ದರಾಮಯ್ಯರನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡುತ್ತಿರುವ ಗುಂಪು ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರಯತ್ನಿಸುತ್ತಿದೆಯೆಂಬ ಆರೋಪವೂ ಇದೆ.

ಮುಖಂಡರ ಕಿತ್ತಾಟದಿಂದ ಮುಸುಕಾಗಿರುವ ಕೋಲಾರ ಜಿಲ್ಲಾ ಕಾಂಗ್ರೆಸ್‌ನ ವರ್ಚಸ್ಸನ್ನು ಸಿದ್ದರಾಮಯ್ಯರ ಸ್ಪರ್ಧೆ ಹೊಳಪುಗೊಳಿಸುತ್ತದೆ, ಹಾಗೆಯೇ ಹಾಲಿ ಶಾಸಕರ ಮರು ಆಯ್ಕೆಯ ಗೆಲುವಿಗೂ ಸಹಕಾರಿಯಾಗುತ್ತದೆ ಎನ್ನುವುದು ಒಳ ಲೆಕ್ಕಾಚಾರದ ಭಾಗವಾಗಿದೆ.

ಮೇಲ್ನೋಟಕ್ಕೆ, ಬಾಯಿ ಮಾತಿಗೆ ಸಿದ್ದರಾಮಯ್ಯರ ಮೇಲೆ ಅಪಾರ ಅಗಾಧ ಪ್ರೀತಿ ವ್ಯಕ್ತಪಡಿಸುವ ಕೋಲಾರ ಕಾಂಗ್ರೆಸ್ ಎರಡೂ ಬಣದ ಮುಖಂಡರು ತಮ್ಮ ಸ್ವಾರ್ಥ ಮತ್ತು ಸ್ವಪ್ರತಿಷ್ಠೆಯನ್ನು ಅದೇ ಸಿದ್ದರಾಮಯ್ಯರಿಗಾಗಿ ಬಿಟ್ಟು ಕೊಡಲು ಸಿದ್ಧರಿಲ್ಲ. ಸಿದ್ದರಾಮಯ್ಯರಿಂದ ಗೆಲುವಿನ ಮೆಟ್ಟಿಲು ಹತ್ತಬಹುದು, ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂದು ಭಾವಿಸಿರುವ ಎರಡೂ ಬಣದ ಮುಖಂಡರು ಅದೇ ಸಿದ್ದರಾಮಯ್ಯರಿಗಾಗಿ ತಮ್ಮ ಅಹಂ ಬಿಟ್ಟು ಕೊಡಲು ಮುಂದಾಗುತ್ತಿಲ್ಲ.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯರ ಸ್ಪರ್ಧೆ ಮತ್ತು ಗೆಲುವಿಗೆ ಲೆಕ್ಕಾಚಾರಗಳು ನಡೆದಿವೆ. ಸ್ವತಃ ಸಿದ್ದರಾಮಯ್ಯನವರೇ ಎರಡೂ ಮೂರು ಬಾರಿ ಕ್ಷೇತ್ರ ಸಮೀಕ್ಷೆಯನ್ನು ಮಾಡಿಸಿದ್ದಾರೆ. ಆತ್ಮೀಯರಿಂದ ನಿರಂತರವಾಗಿ ಕ್ಷೇತ್ರದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆನ್ನಲಾಗುತ್ತಿದೆ.

ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯರಿಗೆ ಅವರದೇ ಲೆಕ್ಕಾಚಾರಗಳಿರಬಹುದು. ಏಕೆಂದರೆ, ಸಿದ್ದರಾಮಯ್ಯರನ್ನು ಪಕ್ಷ ಪ್ರೀತಿ ಮೀರಿ ವ್ಯಯಕ್ತಿಕವಾಗಿ ಅಭಿಮಾನಿಸುವವರ ದೊಡ್ಡ ಪಡೆ ಕೋಲಾರ ಕ್ಷೇತ್ರದಲ್ಲಿದೆ. ಎರಡು ದಶಕಗಳ ಹಿಂದೆ ಇದೇ ನೆಲದಿಂದ ಸಿದ್ದರಾಮಯ್ಯ ಅಹಿಂದ ಚಳವಳಿಯನ್ನು ಆರಂಭಿಸಿದ್ದೇ ಇದಕ್ಕೆ ಪ್ರಮುಖ ಕಾರಣ. ಅಲ್ಪಸಂಖ್ಯಾತರ ಧ್ವನಿಯಾಗಿರುವುದು, ಮುಖ್ಯಮಂತ್ರಿಯಾಗಿದ್ದಾಗ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗಾಗಿ ವಿವಿಧ ಭಾಗ್ಯಗಳ ಯೋಜನೆಗಳನ್ನು ನೀಡಿದ್ದು, ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಹರಿಸಿದ್ದು, ಡಿಸಿ ಕಚೇರಿ ಸಂಕೀರ್ಣ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದು ಸಿದ್ದರಾಮಯ್ಯರ ಮೇಲಿನ ಕೋಲಾರ ಜನರ ಪ್ರೀತಿ ದುಪ್ಪಟ್ಟಾಗಲು ಕಾರಣವಾಗಿದೆ.

ಇಂತ ನಾಯಕನ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಪೈಪೋಟಿ ನಡೆಸುತ್ತಿರುವ ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಎರಡೂ ಬಣಗಳು ಒಗ್ಗೂಡಿ ಅವರನ್ನು ಸ್ವಾಗತಿಸಿದರೆ ಭರ್ಜರಿ ಗೆಲುವನ್ನು ಈಗಲೇ ಖಚಿತಪಡಿಸುವಂತ ವಾತಾವರಣ ನಿರ್ಮಿಸಬಹುದು. ಆದರೆ, ಸ್ವಾರ್ಥಿ, ಸ್ವಪ್ರತಿಷ್ಠೆ ನಾಯಕರಿಗೆ ಇದು ಬೇಕಾಗಿಲ್ಲ.

ಸಿದ್ದರಾಮಯ್ಯರನ್ನು ಈ ವಿಧಾನಸಭಾ ಚುನಾವಣೆಯಲ್ಲಿ ಹೇಗೆಲ್ಲಾ ಮಣಿಸಬಹುದು ಎಂಬ ಲೆಕ್ಕಾಚಾರದಲ್ಲಿ ಅವರ ಕಡು ವಿರೋಧಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಸಮಾವೇಶ, ಜಲಧಾರೆ, ಪಂಚರತ್ನ ಯಾತ್ರೆಗಳು, ಮೂರು ವರ್ಷಗಳ ಸೇವಾ ಕಾರ್ಯಕ್ರಮಗಳ ಮೂಲಕ ಘೋಷಿತ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದರೆ, ಬಿಜೆಪಿಯ ವರ್ತೂರು ಪ್ರಕಾಶ್ ತಮಗೆ ಕ್ಷೇತ್ರದ ಮೇಲಿರುವ ಹಿಡಿತವನ್ನು ಸಮಯ ಸಿಕ್ಕಾಗಲೆಲ್ಲಾ ಸಾರಿ ಹೇಳುತ್ತಾ ತೊಡೆ ತಟ್ಟುತ್ತಿದ್ದಾರೆ.

ಈ ಎರಡೂ ಪಕ್ಷಗಳ ಪ್ರಚಾರ ಪ್ರಯತ್ನಕ್ಕೆ ಹೋಲಿಸಿದರೆ ಇನ್ನೆಂದೂ ಒಂದಾಗುವುದಿಲ್ಲವೆಂಬ ಮುಖಂಡರ ಒಡಕಿನ ಕೋಲಾರ ಕಾಂಗ್ರೆಸ್ ಮನೆಗೆ ಸಿದ್ದರಾಮಯ್ಯರನ್ನು ಕರೆ ತರುವ ಪ್ರಯತ್ನ ಪೇಲವವಾಗಿ ಕಾಣಿಸುತ್ತಿದೆ.

ಕಾಂಗ್ರೆಸ್ ಒಡಕಿನ ಮನೆಗೆ ಸಿದ್ದರಾಮಯ್ಯ ಬೆಸುಗೆ ಹಾಕದೇ ಕೋಲಾರ ಕ್ಷೇತ್ರದಿಂದ ಸ್ಪಽಸಲು ಮುಂದಾದರೆ ತಮ್ಮ ವಿರೋಽ ಜೆಡಿಎಸ್, ಬಿಜೆಪಿಗಿಂತಲೂ ತಮ್ಮದೇ ಪಕ್ಷದ ಪರಸ್ಪರ ಮುನಿಸಿಕೊಂಡಿರುವ ಮುಖಂಡರು ಅವರ ಗೆಲುವಿಗೆ ಅಡ್ಡಿಯಾದರೂ ಅಚ್ಚರಿಪಡಬೇಕಾಗಿಲ್ಲ.

ಎರಡನೇ ಸಾಲಿನ ನಾಯಕರಿಲ್ಲದ, ಕಾಂಗ್ರೆಸ್ ಕಾರ್ಯಕರ್ತರನ್ನು ವರ್ತೂರು ಬಣಕ್ಕೆ ವಲಸೆ ಕಳುಹಿಸಿರುವ ಕೋಲಾರದಂತ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪ್ರಚಾರ ಕಾರ್ಯದಲ್ಲಿ ಮುಂದಿದೆ. ಆದರೆ, ಸಿದ್ದರಾಮಯ್ಯರ ಪರ ಹೀಗೆ ಮತದಾರರ ಮನೆ ಬಾಗಿಲಿಗೆ ತೆರಳುವ ನಾಯಕತ್ವದ ಕೊರತೆ ಎದ್ದು ಕಾಣಿಸುತ್ತಿದೆ. ಏಕೆಂದರೆ ಸಿದ್ದರಾಮಯ್ಯರನ್ನು ಸ್ವಾಗತಿಸುತ್ತಿರುವ ಗುಂಪಿನ ಬಹುತೇಕ ಹಾಲಿ ಶಾಸಕರು ತಾವು ಪ್ರತಿನಿಽಸುವ ಕ್ಷೇತ್ರಗಳಲ್ಲಿ ಪ್ರಭಾವಿಗಳೇ ಹೊರತು ಕೋಲಾರ ಕ್ಷೇತ್ರದಲ್ಲಲ್ಲ ಎನ್ನುವುದು ವಾಸ್ತವಾಂಶ. ಹಾಗೆಯೇ ತಟಸ್ಥವಾಗಿ ಉಳಿದುಕೊಂಡಿರುವ ಗುಂಪಿನ ಮುಖಂಡರಿಗೂ ಈ ರೀತಿಯ ಶಕ್ತಿ ಸಾಮರ್ಥ್ಯಗಳಿಲ್ಲವೆನ್ನುವುದು ನಿರ್ವಿವಾದ.

ಹದಿನೈದು ಇಪ್ಪತ್ತು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷವನ್ನು ಇತರ ಪಕ್ಷಗಳ ಅಭ್ಯರ್ಥಿಗಳ ಗೆಲ್ಲಿಸಲು ಬಳಸಿ ಯಾವುದೇ ಮುಜುಗರವಿಲ್ಲದೆ ಬಹಿರಂಗವಾಗಿ ಶ್ರಮಿಸಿದ್ದ ಕೋಲಾರ ಜಿಲ್ಲಾ ಕಾಂಗ್ರೆಸ್ ಮುಖಂಡರು ಈಗ ಒಗ್ಗೂಡುವ ಪ್ರಯತ್ನವನ್ನು ಮಾಡದೆ ಸಿದ್ದರಾಮಯ್ಯರನ್ನು ಯಾವ ಧೈರ್ಯದ ಮೇಲೆ ಕೋಲಾರಕ್ಕೆ ಕರೆ ತರುತ್ತಿದ್ದಾರೆಂಬ ಪ್ರಶ್ನೆಯನ್ನು ಸಿದ್ದರಾಮಯ್ಯರ ಅಭಿಮಾನಿಗಳು ಕೇಳುತ್ತಿದ್ದಾರೆ.

ಇಂತಹ ಹಲವಾರು ಪ್ರಶ್ನೆಗಳಿಗೆ ಇನ್ನೂ ೨೪ ಗಂಟೆಯಲ್ಲಿ ಕೋಲಾರಕ್ಕೆ ಆಗಮಿಸಲಿರುವ ಸಿದ್ದರಾಮಯ್ಯರೇ ಸೋಮವಾರದ ಸಭೆಯಲ್ಲಿ ಉತ್ತರ ನೀಡಿ ಕೋಲಾರ ಕ್ಷೇತ್ರದ ಮತದಾರರ ಮನ ಗೆಲ್ಲುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿರುವುದು ಸದ್ಯದ ಕೋಲಾರ ಕಾಂಗ್ರೆಸ್ ಪರಿಸ್ಥಿತಿ.

  • ಕೆ.ಎಸ್.ಗಣೇಶ್

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಭೇಟಿ ಜ.೯ ರ ಟಿ ಪಿ ಪ್ರಕಟ-ಗುಂಪುಗಳ ಮುಖಾಮುಖಿ ಆಗದ ಹೊರತು ಸಭೆ ಮುಂದೂಡಲು ಒತ್ತಡ

Leave a Reply

Your email address will not be published. Required fields are marked *

You missed

error: Content is protected !!