• Thu. Apr 25th, 2024

ಕೋಲಾರ ನಗರಸಭೆ ಅಮೃತ್‌ಸಿಟಿ ಯೋಜನೆಯಲ್ಲಿ ಅಕ್ರಮ, ವಿಶ್ವ ಯೋಗ ದಿನಾಚರಣೆಗೆ ೨೦ ಲೀಟರ್ ಸಾಮರ್ಥ್ಯದ ೧೦೦೦ ನೀರು ಕ್ಯಾನ್ ೮೫ ಸಾವಿರ ಬಿಲ್, ಶೇ.೨೪.೧೦ ಅನುದಾನದಲ್ಲಿ ಭ್ರಷ್ಟಾಚಾರ, ಸದಸ್ಯರ ಅಕ್ರೋಶ

PLACE YOUR AD HERE AT LOWEST PRICE

* ಕೋಲಾರ ನಗರಸಭೆ ಅಮೃತ್‌ಸಿಟಿ ಯೋಜನೆಯಲ್ಲಿ ಅಕ್ರಮ, ೭೦ ಕೋಟಿ ರೂ. ಗಾತ್ರದ ೫೪ ಕಾಮಗಾರಿಗಳಲ್ಲಿ ಶೇ.೨೦ ನಡೆದಿಲ್ಲ-ಮುಬಾರಕ್,
* ಒಳಚರಂಡಿ ಪೈಪುಗಳಲ್ಲಿ ಬ್ಲಾಕೇಜ್ ಆಗಿರುವ ಕಾರಣ ಕೋಲಾರದ ಕೆಲವು ವಾರ್ಡ್ ಗಳ ಮನೆಗಳ ಶೌಚಾಲಯಗಳಲಿ ವಿಚಿತ್ರ ಹುಳಗಳ ಕಾಟ-ಅಂಬರೀಶ್
* ೩ ವರ್ಷಗಳಿಂದ ಶೇ.೨೪.೧೦ ಅನುದಾನ ಬಳಕೆ ವಿಳಂಬ, ಭ್ರಷ್ಟಾಚಾರ ನಡೆದಿರುವ ಶಂಕೆ : ಪ್ರವೀಣ್‌ಗೌಡ
* ಮಹಿಳಾ ಸಮಾಜ ಶಾಲೆ ಲೀಸ್ ಅವಧಿ ಮುಕ್ತಾಯ ಕುರಿತ ಪ್ರಕರಣ ನ್ಯಾಯಾಲಯದ ಆದೇಶ ನಂತರವೇ ಚರ್ಚೆ ಮಾಡಲಾಗುವುದು-ಶ್ವೇತಾ ಶಬರೀಷ್

 

ಅಮೃತ್‌ಸಿಟಿ ಯೋಜನೆಯಡಿ ಬಂದಿರುವ ೭೦ ಕೋಟಿ ಅನುದಾನದಡಿ ಶೇ.೨೦ರಷ್ಟೂ ಕಾಮಗಾರಿ ಮಾಡಿಲ್ಲ. ಎಲ್ಲಾ ಕೆಲಸಗಳೂ ಪೆಂಡಿಂಗ್ ಇರುವಾಗಲೇ ಸಂಬಂಧಪಟ್ಟ ಗುತ್ತಿಗೆದಾರ ಅಂತಿಮ ಬಿಲ್ಲು ಪಡೆಯಲು ಹಸ್ತಾಂತರಕ್ಕೆ ಮುಂದಾಗಿರುವುದಕ್ಕೆ ಯಾವುದೇ ಕಾರಣಕ್ಕೂ ಹಸ್ತಾಂತರಕ್ಕೆ ಅನುಮೋದನೆ ನೀಡಬಾರದೆಂದು ನಗರಸಭೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ನಗರಸಭೆ ಕಚೇರಿಯಲ್ಲಿ ಅಧ್ಯಕ್ಷೆ ಶ್ವೇತಾ ಶಬರೀಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಸಂಖ್ಯೆ ೧೯ರ ಅಡಿಯಲ್ಲಿ ಕೇಂದ್ರ ಪುರಸ್ಕೃತ ಅಮೃತ್‌ಸಿಟಿ ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಪೂರ್ಣಗೊಳಿಸಿರುವ ಕಾಮಗಾರಿಗಳಾದ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆ, ವೆಟ್‌ವೆಲ್, ಎಸ್.ಟಿ.ಪಿ. ಹಾಗೂ ಗೃಹ ಸಂಪರ್ಕಗಳನ್ನು ಕೋಲಾರ ನಗರಸಭೆಗೆ ಹಸ್ತಾಂತರಿಸಿಕೊಳ್ಳುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ, ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬಿ.ಎಂ.ಮುಬಾರಕ್, ಕುಡಿಯುವ ನೀರು ಸರಬರಾಜು ಕೆಲಸಗಳಿಗೆ ಕಳಪೆ ವಸ್ತುಗಳನ್ನು ಬಳಸಿ ಕಾಮಗಾರಿಗಳನ್ನು ನಡೆಸಲಾಗಿದ್ದು, ಮೂರೇ ದಿನಕ್ಕೆ ಹಾಳಾಗುತ್ತಿದೆ. ಆದೇ ರೀತಿ ಒಳಚರಂಡಿ ಕೆಲಸಗಳ ಗುಣಮಟ್ಟದಿಂದ ಬೇಸತ್ತ ಜನ ಆಯಾ ವಾರ್ಡಿನ ಸದಸ್ಯರ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.

 

ಈ ಯೋಜನೆಯ ಅಂದಾಜು ವೆಚ್ಚ ೭೦ ಕೋಟಿ ರೂಪಾಯಿಗಳಲ್ಲಿ ಕೇವಲ ೨೦ ಕೋಟಿ ಕೆಲಸಗಳು ಆಗಿಲ್ಲ, ಇನ್ನೂ ಎಸ್.ಟಿ.ಪಿ ಕಾಮಗಾರಿಗೆ ೧೦ ಕೋಟಿ ಇದೆ, ಇಲ್ಲಿಯವರೆಗೂ ಎಸ್.ಟಿ.ಪಿ.ಗೆ ಅಡಿಗಲ್ಲು ಸಹ ಹಾಕಿಲ್ಲ, ಕೆಲಸವೇ ಆರಂಭ ಮಾಡದೆ ಹಸ್ತಾಂತರ ಮಾಡಿಸಿಕೊಂಡು ಕೊನೆಯ ಬಿಲ್ಲು ಪಡೆಯಲು ಮುಂದಾಗಿದ್ದಾರೆ. ಮೂರನೇ ವ್ಯಕ್ತಿಯಿಂದ ಕಾಮಗಾರಿಗಳನ್ನು ಪರಿಶೀಲನೆ ನಡೆಸದೆ ಹಸ್ತಾಂತರಕ್ಕೆ ಮುಂದಾಗಿರುವುದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಅಮೃತ್‌ಸಿಟಿ ಯೋಜನೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ನಗರಸಭೆಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಸಹಮತ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯ ಸೂರಿ ಮಾತನಾಡಿ, ವಿಶ್ವ ಯೋಗ ದಿನಾಚರಣೆಗೆ ೨೦ ಲೀಟರ್ ಸಾಮರ್ಥ್ಯದ ೧೦೦೦ ನೀರು ಕ್ಯಾನ್ ಸರಬರಾಜು ಮಾಡಿರುವುದಕ್ಕೆ ಸಂಬಂಧಿಸಿದಂತೆ ೮೫ ಸಾವಿರ ಬಿಲ್ ಪಾವತಿಗಾಗಿ ಅನುಮೋದನೆಗೆ ಬಂದಿದ್ದು, ೪೦ ಸಾವಿರ ರೂ ಆಗುವುದಕ್ಕೆ ೮೫ ಸಾವಿರ ಬಿಲ್ ಕೊಟ್ಟಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಸರಬರಾಜುದಾರರಿಂದಲೇ ಹಣ ವಸೂಲಿ ಮಾಡಬೇಕೆಂದು ಪಟ್ಟುಹಿಡಿದರು. ಸದಸ್ಯ ರಾಕೇಶ್ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಬರುವ ಕೋಲಾರಮ್ಮ ಪಂಪ್‌ಹೌಸ್‌ನಲ್ಲಿ ಯಂತ್ರೋಪಕರಣಗಳ ಬಿಡಿ ಭಾಗಗಳ ವಿತರಣೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಪಂಪು ಮೋಟರ್‌ಗಳು, ಪೈಪುಗಳು, ಕೇಬಲ್‌ಗಳು ಎಷ್ಟಿವೆ ಎನ್ನುವ ಮಾಹಿತಿಯೇ ಇಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿ.ಎಂ.ಮುಬಾರಕ್, ಜಿಲ್ಲೆಯಾದ್ಯಂತ ಕೆರೆಗಳು ತುಂಬಿದ್ದರೂ ನಗರಕ್ಕೆ ನೀರು ಕೊಡುವಂತಹ ವಿಫುಲ ಅವಕಾಶಗಳಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಂಪ್‌ಹೌಸ್‌ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕರಿಗೆ ನೀರು ಕೊಡುವುದರಲ್ಲಿಯೂ ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.

ಸದಸ್ಯ ಅಂಬರೀಶ್ ಮಾತನಾಡಿ, ನಗರದ ಬಹುತೇಕ ಕಡೆಗಳಲ್ಲಿ ಒಳಚರಂಡಿ ಕೊಳವೆಗಳಲ್ಲಿ ಹುಳಗಳು ಕಂಡುಬರುತ್ತಿವೆ. ಬಹಳ ಮುಖ್ಯವಾಗಿ ಕೋಲಾರ ನಗರದ ಉತ್ತರ ಭಾಗದಲ್ಲಿರುವ ವಾರ್ಡುಗಳ ಬಹುತೇಕ ಒಳಚೆರಂಡಿ ಚೇಂಬರ್‌ಗಳು ಸಮೀಪದ ಕೋಡಿಕಣ್ಣುರು ಕೆರೆಯಲ್ಲೇ ಇದೆ. ಒಳಚರಂಡಿ ಪೈಪುಗಳ ಮೂಲಕ ಸರಾಗವಾಗಿ ಸಾಗಬೇಕಾದ ಪೈಪುಗಳಲ್ಲಿ ಬ್ಲಾಕೇಜ್ ಆಗಿರುವ ಕಾರಣ ಒಳಚರಂಡಿಯಿಂದ ತ್ಯಾಜ್ಯ ಸರಿಯಾಗಿ ಹರಿಯುತ್ತಿಲ್ಲ. ಇದನ್ನು ಸರಿ ಮಾಡುವ ಈ ಚೇಂಬರ್‌ಗಳು ಕೆರೆಯಲ್ಲಿ ಇರುವ ಕಾರಣ ನೀರಿನಲ್ಲಿ ಮುಳುಗಿವೆ. ಈ ಕಾರಣದಿಂದ ಒಳಚರಂಡಿ ಪೈಪುಗಳಲ್ಲಿ ವಿಚಿತ್ರ ಮಾದರಿಯ ಹುಳುಗಳು ಹುಟ್ಟಿಕೊಳ್ಳುತ್ತಿದ್ದು ಶೌಚಾಲಯಗಳ ಮೂಲಕ ಮನೆಗಳಿಗೆ ನುಗ್ಗುತ್ತಿವೆ. ಇದು ಮುಂದಿನ ದಿನಗಳಲ್ಲಿ ಆಯಾ ಪ್ರದೇಶಗಳ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ. ಈ ಬಗ್ಗೆ ನಗರಸಭೆ ಆರೋಗ್ಯ ನಿರೀಕ್ಷಕರ ಗಮನಕ್ಕೆ ಹಲವಾರು ಬಾರಿ ತಂದಿದ್ದರೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದುವರೆದು ಅಂಬರೀಷ್ ನಗರದ ಟೇಕಲ್ ರಸ್ತೆಯಲ್ಲಿರುವ ಮಕ್ಕಳ ಉದ್ಯಾನವನಕ್ಕೆ ಅಂಬೇಡ್ಕರ್ ಹೆಸರಿಡುವಂತೆ ಕೌನ್ಸಿಲ್‌ನಲ್ಲಿ ತೀರ್ಮಾನಿಸಲಾಗಿದೆ. ನಾಮಫಲಕ ಹಾಕಿ ಕಾರ್ಯಕ್ರಮ ಉದ್ಘಾಟನೆಗೆ ಯಾವುದೇ ಅಡೆತಡೆ ಇಲ್ಲದಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವೇಳೆ ಧ್ವನಿಗೂಡಿಸಿದ ಸದಸ್ಯ ರಾಕೇಶ್, ಕಿತ್ತಾಟಗಳಿಲ್ಲದೆ ವ್ಯವಸ್ಥಿತವಾಗಿ ಕಾಯಕ್ರಮವನ್ನು ಉದ್ಯಾನವನದಲ್ಲೇ ನಡೆಸಬೇಕು, ಮಹಾನ್ ವ್ಯಕ್ತಿಗೆ ಅವಮಾನವಾಗದಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸದಸ್ಯ ಪ್ರಸಾದ್‌ಬಾಬು ಮಾತನಾಡಿ, ಈ ಹಿಂದಿನ ರಾಜ್ಯ ಸರಕಾರವು ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ೫ ಕೋಟಿರೂ ಅನುದಾನ ಬಿಡುಗಡೆಗೊಳಿಸಿತ್ತು. ಆದರೆ, ಈಗಿನ ಬಿಜೆಪಿ ಸರಕಾರ ವಾಪಸ್ಸು ಪಡೆದುಕೊಂಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಜತೆಗೆ ನಗರಸಭೆ ಸಿಬ್ಬಂದಿ ಮಾಡಬೇಕಿರುವ ಶೇ.೭೫ರಷ್ಟು ಕೆಲಸವನ್ನು ಸದಸ್ಯರು ಮಾಡುತ್ತಿದ್ದಾರೆ. ಸಮಸ್ಯೆ ಬಂದ ಕೂಡಲೇ ಪರಿಹಾರ ಮಾಡುವ ಜತೆಗೆ ಸಾರ್ವಜನಿಕರಿಗೆ ಗೌರವ ನೀಡುವ ಕೆಲಸಕ್ಕೆ ಸಿಬ್ಬಂದಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ನಗರದ ಮಹಿಳಾ ಕಾಲೇಜು ಲೀಸ್ ಅವಧಿ ಮುಕ್ತಾಯವಾಗಿದ್ದರೂ ಅಕ್ರಮವಾಗಿ ಅವರಿಗೆ ಲೀಸ್ ರಿನೀವಲ್ ಮಾಡಿರುವುದನ್ನು ರದ್ದುಗೊಳಿಸಲು ಉಚ್ಚನ್ಯಾಯಾಲಯ ಮದ್ಯಂತರ ಆದೇಶ ನೀಡಿದ್ದರೂ, ನಗರಸಭೆ ಮೌನವಾಗಿರುವುದನ್ನು ಪ್ರಶ್ನಿಸಿದ ಎಸ್.ಆರ್. ಮುರಳಿಗೌಡ ಹಾಗೂ ಪ್ರವೀಣ್‌ಗೌಡ, ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಪಟ್ಟು ಹಿಡಿದರು. ಆದರೆ, ಇದು ನ್ಯಾಯಾಲಯದಲ್ಲಿ ಇರುವ ಪ್ರಕರಣವಾಗಿದ್ದು, ನ್ಯಾಯಾಲಯದ ತೀರ್ಪಿನ ನಂತರವೇ ಚರ್ಚೆ ಮಾಡುವುದು ಸೂಕ್ತ ಎಂದು ಸದಸ್ಯ ಪ್ರಸಾದ್‌ಬಾಬು ಹೇಳಿದಾಗ, ಉಭಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವಿಚಾರವಾಗಿ ಮಾತನಾಡಿದ ಪೌರಾಯುಕ್ತರು ಪೌರಾಡಳಿತ ನಿಯಮ ೬೨ರ ಪ್ರಕಾರ ನ್ಯಾಯಾಲಯದಲ್ಲಿರುವ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ಆಗಲಿ ಮಾಹಿತಿ ಆಗಲಿ ನೀಡುವಂತಿಲ್ಲ ಎಂದಾಗ, ಅಧ್ಯಕ್ಷರು ಈ ವಿಷಯವನ್ನು ನ್ಯಾಯಾಲಯದ ತೀರ್ಪಿನ ನಂತರ ಚರ್ಚೆ ಮಾಡೋಣವೆಂದು ಚರ್ಚೆಗೆ ತೆರೆ ಎಳೆದರು.

ಇನ್ನೂ ಶೇ. 24.10 ಅನುದಾನ ಬಗ್ಗೆ ಮಾತನಾಡಿದ ಸದಸ್ಯ ಅಂಬರೀಷ್, ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ನೀಡುವ ವಿದ್ಯಾರ್ಥಿ ವೇತನ ವಿಳಂಬಕ್ಕೆ ಅಸಮಧಾನ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಹಣ ಉಳಿದರೆ ನೋಟ್ ಪುಸ್ತಕ ಮತ್ತಿತರೆ ಶೈಕ್ಷಣಿಕ ಸಾಮಗ್ರಿ ನೀಡುವುದಾದರೆ ಸರ್ಕಾರಿ ಶಾಲಾ ಮಕ್ಕಳಿಗೆ ನೀಡಬೇಕೆಂದು ಒತ್ತಾಯಿಸಿದರು.
ಮಾತ್ರವಲ್ಲದೆ ಖಾಸಗೀ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಇನ್ನು ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಗೆ ಅನೇಕ ಅಧಿಕಾರಿ, ಸಿಬ್ಬಂದಿ ಹಾಜರಾಗಿರಲಿಲ್ಲ. ಇದರಿಂದಾಗಿ ಅಸಮಧಾನ ವ್ಯಕ್ತಪಡಿಸಿದ ಸದಸ್ಯರು, ಸಭೆಗೆ ಬಾರದವರಿಗೆ ನೋಟೀಸ್ ನೀಡುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಆದ್ಯಕ್ಷೆ ಶ್ವೇತ ಶಬರೀಶ್ ಹಾಗೂ ಪೌರಾಯುಕ್ತರು ನೋಟಿಸ್ ನೀಡಲು ಸೂಚಿಸಿದರು. ನಗರಸಭೆ ವ್ಯಾಪ್ತಿಯಲ್ಲಿರುವ ಜಾಹಿತಾತು ಫಲಕಗಳ ಸಂಪೂರ್ಣ ಮಾಹಿತಿ ಪಡೆದು ಅವುಗಳಿಗೆ ಶುಲ್ಕ ನಿಗಧಿ ಮಾಡಬೇಕು, ನಗರಸಭೆ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು ಎಂದೂ ಒತ್ತಾಯಿಸಿದರು.

ಸದಸ್ಯ ಪ್ರವೀಣ್‌ಗೌಡ ಮಾತನಾಡಿ, ನಗರಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಶೇ.೨೪.೧೦ ಅನುದಾನ ಹಾಗೂ ವಿಶೇಷ ಸಾಮರ್ಥ್ಯ ವಿಕಲಚೇತನರ ಶೇ.೫ ಅನುದಾನ ಕಳೆದ ಮೂರು ವರ್ಷಗಳಿಂದ ಖರ್ಚು ಮಾಡುತ್ತಿಲ್ಲ, ಶೇ.೨೪.೧೦ರ ಅನುದಾನವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ರೂಪದಲ್ಲಿ ನೀಡಬೇಕು ಹಾಗೂ ವಿಶೇಷವಾಗಿ ವಿಕಲಚೇತನರಿಗೆ ಟ್ರೈಸೈಕಲ್ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದ್ದರೂ, ನಗರಸಭೆ ಅಡಳಿತ ಈ ಬಗ್ಗೆ ಏನೂ ಕ್ರಮ ತೆಗೆದುಕೊಂಡಿಲ್ಲ, ಮಕ್ಕಳ ವಿದ್ಯಾರ್ಥಿ ವೇತನ ವಿಚಾರದಲ್ಲಿ ಈ ರೀತಿಯ ವಿಳಂಬ ಧೋರಣೆ ನೋಡಿದಾಗ, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಆಂತರಿಕ ಒಪ್ಪಂದ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ .

ಪ್ರವೀಣ್ ಗೌಡ
ನಗರಸಭೆ ಸದಸ್ಯರು.

 

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ಹೆಮ್ಮೆ ಎನಿಸುತ್ತದೆ-ಸಿಎಂಆರ್‌ ಶ್ರೀನಾಥ್

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!