• Fri. Apr 19th, 2024

ಪತ್ರಿಕೋದ್ಯಮದಲ್ಲಿ ನೇರ ನಿಷ್ಠೂರವಾದಿಯಾಗಿದ್ದವರು ಎಂ.ಎಸ್.ಪ್ರಭಾಕರ (ಕಾಮರೂಪಿ) – ಆದಿಮ ಅಂಬರೀಷ್

PLACE YOUR AD HERE AT LOWEST PRICE

ಕೋಲಾರದ ಆದಿಮ ತಿಂಗಳ ವಾಡಿಕೆಯಂತೆ ಆದಿಮದಲ್ಲಿ ೧೮೮ ನೇ ಹುಣ್ಣಿಮೆ ಹಾಡು  ನಡೆಯಿತು. ಬೆಂಗಳೂರು ಏಶಿಯನ್ ಥಿಯೇಟರ್ ತಂಡ ಮಹಾ ಪ್ರಸ್ಥಾನ ಎಂಬ ನಾಟಕ ಪ್ರಸ್ತುತಪಡಿಸಿತು.

ಆದಿಮ ಅಂಬರೀಷ್ ಕಾಮರೂಪಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿ, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರನ್ನು ಸಂದರ್ಶನ ಮಾಡಿದ ಭಾರತೀಯ ಏಕೈಕ ಪತ್ರಕರ್ತರನ್ನು ನಾವು ಇತ್ತೀಚೆಗೆ ಕಳೆದುಕೊಂಡಿವಿ. ನಮ್ಮ ಕಾಮರೂಪಿ ಎಂ.ಎಸ್.ಪ್ರಭಾಕರ ಕೋಲಾರದಲ್ಲೇ ವಿದ್ಯಾಭ್ಯಾಸ ಮುಗಿಸಿದವರು. ದ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದರು. ಹಿಂದಿರುಗಿದ ನಂತರ ಕೋಲಾರ ನಗರದ ಕಠಾರಿಪಾಳ್ಯದಲ್ಲಿರುವ ಸುಮಾರು ನೂರೈವತ್ತು ವರ್ಷಗಳ ಹಳೆಯದಾದ ಸ್ವಂತ ಮನೆಯಲ್ಲಿ ವಾಸವಿದ್ದರು. ಅವರೊಂದಿಗೆ ಅವರ ಮನೆಯಲ್ಲಿಯೇ ವರ್ಷಗಳ ವಾಸವಿದ್ದು, ಕಳೆದ ಅಮೂಲ್ಯ ಕಾಲದ ಪ್ರತಿ ಸಣ್ಣ ಪ್ರಸಂಗವನ್ನೂ ಆದಿಮ ಅಂಬರೀಷ್ ಹಂಚಿಕೊಂಡರು.

ಅವರಿಗೆ ೮೨ ವರ್ಷ ವಯಸ್ಸಾಗಿತ್ತು. ಅವರ ಸರಳ ವ್ಯಕ್ತಿತ್ವ, ಅಧ್ಯಯನ, ಅವರಲ್ಲಿ ವಿಶ್ವಪ್ರಸಿದ್ಧ ಲೇಖಕರ ಗ್ರಂಥ ಸಂಗ್ರಹವಿತ್ತು. ಪತ್ರಿಕೋಧ್ಯಮ ವೃತ್ತಿಯ ಬಗ್ಗೆ ಅಪೂರ್ವ ಕಾಳಜಿ ಇದ್ದವರು. ಪತ್ರಕರ್ತನಾದವನಿಗೆ ಇರಬೇಕಾದ ಸಾಮಾಜಿಕ ಬದ್ಧತೆ ಹೊಣೆಗಾರಿಕೆ, ಜವಾಬ್ಧಾರಿಗಳ ಕುರಿತು ಹೇಳುತ್ತಿದ್ದರೆ ಕೇಳಬೇಕು ಅನ್ನಿಸೋದು.

ಅವರ ನಡೆಯಲ್ಲಿ ಬ್ಯಾಹ್ಮಣ್ಯದ ಮಡಿವಂತಿಕೆ ಲವಲೇಶವೂ ಇರಲಿಲ್ಲ. ತಂದೆಯನ್ನು ಕಳೆದುಕೊಂಡ ದಿನಗಳಲ್ಲಿ ಕಾಮರೂಪಿಯವರ ಬಾಲ್ಯದ ಗೆಳೆಯನೊಬ್ಬ ನಿಮ್ಮ ತಾಯಿ ವಿಧವೆ ಬೆಳಿಗ್ಗೆ ಎದ್ದ ತಕ್ಷಣ ಆಕೆ ಮುಖ ನೋಡಬಾರದು ಎಂದವನಿಗೆ ಬೈದು ನಮ್ಮ ತಾಯಿ ನನಗೆ ದೇವರಿದ್ದಂತೆ ನೀನು ಇನ್ನು ಮೇಲೆ ನಮ್ಮ ಮನೆಗೆ ಬರಬೇಡವೆಂದು ಅವನ ಗೆಳೆತನ ತೊರೆದಿದ್ದರಂತೆ. ಬಾಲ್ಯದ ದಿನಗಳಲ್ಲಿನ ಮಡಿವಂತಿಕೆಯ ಬಗ್ಗೆ ಅವರದೇ ಮಾತುಗಳಲ್ಲಿ ಹೇಳುತ್ತಿದ್ದರು. ಮಡಿ ಬ್ರಾಹ್ಮಣ ಮಕ್ಕಳಾದ ನಮ್ಮನ್ನು ಬಂಧಿಸಿ ನಮ್ಮ ಸ್ವತಂತ್ರವನ್ನು ಕಸಿದುಕೊಂಡಿತ್ತು. ವಿಶ್ವ ಮಾನವರೆಂದರೆ ಹೀಗೆ ಇರುತ್ತಾರೆ ಎಂದು ತೋರಿಸಿಕೊಟ್ಟವರು ನಮ್ಮ ಕಾಮಿರೂಪಿ ಸರ್. ಎರಡು ತಾಸಿನಷ್ಟು ಸಮಯ ಎಲ್ಲಾ ಪತ್ರಿಕೆಗಳನ್ನು ತರೆಸಿಕೊಂಡು ಅಕ್ಷರ ಬಿಡದೇ ಓದುತ್ತಿದ್ದರು.

ಬೇಕಾದವುಗಳನ್ನು ಕಟ್ ಮಾಡಿ ಶೇಖರಿಸಿಡುತ್ತಿದ್ದರು. ಅತಿ ವೇಗವಾಗಿ ಟೈಪ್ ಮಾಡುತ್ತಿದ್ದರು ಜೊತೆಗೆ ಅಪಾರ ಗ್ರಹಿಕಾಶಕ್ತಿ ಇತ್ತು. ಪತ್ರಿಕೋದ್ಯಮದಲ್ಲಿಯೂ ಕೂಡ ಅಷ್ಟೇ ನೇರ ನಿಷ್ಠೂರವಾಗಿ ಯಾವುದೇ ಮುಲಾಜಿಗೆ ಒಳಗಾಗದೇ ಬರೆದವರು.
ಮಾಜಿ ಪ್ರಧಾನಿಗಳಾದ ವಾಜಪೇಯಿಯವರು ಅಮೇರಿಕಾ ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಅಧಿಕಾರದಲ್ಲಿದ್ದಾಗ ಅವರೊಂದಿಗೆ ಅಮೇರಿಕಾದಲ್ಲಿದ್ದಷ್ಟು ಕಾಲ ಈರ್ವರೂ ಒಂದೇ ರೀತಿಯ ಆಹಾರ, ಮಾಂಸಾಹಾರ ಸೇವಿಸಿದ್ದರ ಕುರಿತು ಚರ್ಚೆಗಳಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಅದೇ ಸಮಯದಲ್ಲಿ ಬಾರತದಲ್ಲಿ ಗೋ ಹತ್ಯೆ, ಗೋಮಾಂಸ ಸೇವನೆಯ ಬಗ್ಗೆ ಚರ್ಚೆಯಲ್ಲಿದ್ದು ಹೋರಾಟ ನಡೆಯುತ್ತಿತ್ತು. ಅದರಲ್ಲಿನ ವೈಚಾರಿಕ ಪ್ರಜ್ಞೆ ಬಗ್ಗೆ ಓದಿ ಬಿಡಿಸಿ ಹೇಳಿಕೊಂಡಿದ್ದರು. ಊಟದ ವಿಚಾರಕ್ಕೆ ಬಂದಾಗ ಎಲ್ಲಾ ರೀತಿಯ ಆಹಾರವನ್ನು ಸೇವಿಸುತ್ತಿದ್ದರು. ಮಾಂಸಾಹಾರದಲ್ಲಿಯೂ ಅವರಿಗೆ ಯಾವುದೇ ಭೇದವಿರಲಿಲ್ಲ. ಹಾಗೆಯೇ ಎಲ್ಲಾ ಹುರಿದ ಕಾಳು ಖಾದ್ಯಗಳನ್ನು ಸದಾ ಇಟ್ಟುಕೊಂಡಿರುತ್ತಿದ್ದರು. ಬಿಸಿ ಬಿಸಿ ಮುದ್ದೆ ಮೇಲೆ ಬೆಣ್ಣೆ, ತುಪ್ಪ ಹಾಕಿಕೊಂಡು ತಿನ್ನುತ್ತಿದ್ದರು. ಮಜ್ಜಿಗೆ ಮೊಸರು ಪ್ರಿಯರೂ ಆಗಿದ್ದರು. ಆದರೆ, ಮನೆಯಲ್ಲಿ ಹಿರಿಯರ ಮಡಿ ಆಚರಣೆಗೆ ಎಂದೂ ಅಡ್ಡಿ ಪಡಿಸಿದವರಲ್ಲವಂತೆ. ವಾಸ್ತವವಾದಿಗಳಾಗಿ ವಾಸ್ತವಗಳ ತಿರುಚುವುದನ್ನು ಯಾವುದೇ ಕಾರಣಕ್ಕೆ ಒಪ್ಪುತ್ತಿರಲಿಲ್ಲ. ಅಂತಹ ಅಪ್ರತಿಮ ವಿಚಾರವಾದಿಯನ್ನು ನಾವು ಕಳೆದುಕೊಂಡಿದ್ದೀವಿ. ಅವರ ನೆನಪಿನಲ್ಲಿ ಈ ೧೮೮ನೇ ಹುಣ್ಣಿಮೆ ಹಾಡು ಈ ಕಾರ್ಯಕ್ರಮ ಆದಿಮ ಅವರಿಗಾಗಿ ಅರ್ಪಿಸುತ್ತಿದೆ ಎಂದರು.

ಕೋಲಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಮುನಿಯಪ್ಪ ಆದಿಮ ಕೇಂದ್ರ ಹಾಗೂ ಗ್ರಂಥಾಲಯವನ್ನು ವೀಕ್ಷಿಸಿದ ಅವರು ಈ ಪರಿಸರ ನೋಡಿ ಬಹಳ ಖುಷಿಯಾಗಿದೆ. ನಮ್ಮ ಸಹಕಾರ ಕೇಂದ್ರಕ್ಕೆ ಸದಾ ಇರುತ್ತದೆ. ಇನ್ನು ಮುಂದೆ ನಿರಂತರವಾಗಿ ಬರುವ ಪ್ರಯತ್ನ ಮಾಡುತ್ತೇನೆ ಎಂದರು.

ಕೊಂಡರಾಜನಹಳ್ಳಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂ.ರಾಮಕೃಷ್ಣ ಆದಿಮದಲ್ಲಿ ನಡೆಯುತ್ತಿರುವ ಹುಣ್ಣಿಮೆ ಹಾಡು ಕಾರ್ಯಕ್ರಮ ಹೀಗೇ ಮುಂದುವರಿಯಲಿ. ಬೆಟ್ಟದ ಈ ಭಾಗವೆಲ್ಲಾ ನಮ್ಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ನಾವು ಸದಾ ಆದಿಮ ನೆರವಿಗೆ ಇರುತ್ತೇವೆ ಎಂದರು. ನಮ್ಮ ತಂದೆ ನಾಟಕ ಕಲಾವಿದರಾಗಿದ್ದರು. ವಾದ್ಯಗಳಾದ ತಬಲ, ಡೋಲಕ್, ಮೃದಂಗ, ಹಾರ್ಮೋನಿಯಂ ತಮಟೆ ಇಟ್ಟಿದ್ದರು. ನನಗೂ ಕೂಡ ಕಲೆಯ ಬಗ್ಗೆ ಆಸಕ್ತಿ ಮೂಡಿ ದ್ವಿತೀಯ ಪಿಯುಸಿ ಫೈಲಾಗಿ ಸಿನಿಮಾ ಹೀರೊ ಆಗುವ ಅಭಿಲಾಷೆಯಲ್ಲಿ ಸಿನಿಮಾ ಕ್ಷೇತ್ರವನ್ನು ಹರೆಸಿ ಹೊರಟವ. ವಜ್ರೇಶ್ವರಿ ಕಂಬೈನ್ಸ್ ನಲ್ಲಿ ತರಬೇತಿ ಪಡೆದು ಅದು ಸಾಧ್ಯವಾಗದೇ ಮತ್ತೆ ಓದನ್ನು ಮುಂದುವರೆಸಿ ಸರ್ಕಾರಿ ಕೆಲಸ ಪಡೆದು ಶಿಕ್ಷಕನಾಗಿದ್ದವನು ಈಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆಯಲ್ಲಿದ್ದೇನೆ. ಸರ್ಕಾರಿ ಕೆಲಸ ಸಿಗುವುದಿಲ್ಲ ಎನ್ನುವುದು ಸುಳ್ಳು. ಶ್ರದ್ಧೆಯ ಅಧ್ಯಯನದ ಮೂಲಕ ಯಾವ ಹುದ್ದೆಯನ್ನಾದರು ಗಳಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.

ನಾಟಕ ನಿರ್ದೇಶಕ ಸಿದ್ದರಾಮ ಕೊಪ್ಪರ್ ನನಗೆ ಮಾತು ಬರಲ್ಲ. ನನ್ನ ಮಾತುಗಳೆಲ್ಲಾ ಈ ನಾಟಕವೇ ಮಾತನಾಡುತ್ತದೆ ಎಂದವರು ನಾಟಕ ಪ್ರದರ್ಶನ ಮುಗಿದ ನಂತರ; ಭಾರತ ದೇಶದ ಪ್ರಜೆಗಳಾದ ನಾವು ನೋಡುವ ನೋಟ, ಕೇಳುವ ದನಿ, ದೃಶ್ಯಮಾಧ್ಯಮದಲ್ಲೂ ಕೂಡ ಪ್ರತಿರೋಧ ಒಡ್ಡಬೇಕಿದೆ. ದಿನಬೆಳಗಾದರೆ ಏನೆಲ್ಲಾ ದೃಶ್ಯಗಳು ಕಾಣುತ್ತಿದ್ದೇವೆ ಎನ್ನೊ ಎಚ್ಚರ ನಮಗಿರಬೇಕಿದೆ. ಇವತ್ತು ನಾವೆಲ್ಲಾ ಪ್ರಶ್ನೆ ಮಾಡುವಂತವರಾಗಬೇಕು. ನಾವು ಕಂಡು, ಕೇಳಿಸಿಕೊಂಡರೂ ಏನೂ ನಡೆದಿಲ್ಲ ಎನ್ನುವ ಕುರುಡುತನ, ಕಿವುಡುತನ ಬೇಕಿಲ್ಲ. ನಮ್ಮ ಕಾಲಡಿಯಲ್ಲಿ ರಕ್ತದ ಕೋಡಿ ಹರಿದರೂ ಸುಗಂಧ ಹರಿಯುತ್ತಿದೆ ಎನ್ನುವ ಕಲ್ಪನೆಗೆ ಜಾರಿ ನುಣಚಿಕೊಳ್ಳುವ ಕಾಲವಿದಲ್ಲ. ನಮ್ಮ ಮುಂದೆ ನಡೆಯುವ ಹೃದಯವಿದ್ರಾವಕ ಘಟನೆಗಳ ವಿರುದ್ಧ ನಿಂತು ಹೋರಾಡಬೇಕಾಗಿದೆ. ಈ ನಾಟಕ ಇಲ್ಲಿ ಪ್ರದರ್ಶನವಾಗಲು ಅವಕಾಶ ಮಾಡಿಕೊಟ್ಟ ನನ್ನ ಸೋದರ ಸಂಸ್ಥೆಯಾದ ಆದಿಮವನ್ನು ಅಭಿನಂದಿಸುತ್ತೇನೆ, ಮುಂದೆ ನನ್ನ ಪ್ರತಿ ನಾಟಕವನ್ನು ಇಲ್ಲಿ ಪ್ರದರ್ಶಿಸಲು ಅನುಮತಿ ನೀಡುತ್ತಾರೆನ್ನುವ ಭರವಸೆ ನನಗಿದೆ ಎಂದು ಆದಿಮ ಕೇಂದ್ರವನ್ನು ಅಭಿನಂದಿಸಿದರು.

ಮಹಾ ಪ್ರಸ್ಥಾನ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ರಂಗರೂಪ ಮಾಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತಿ ಉಪನಿರ್ದೇಶಕರು, ನಟ, ನಿರ್ದೇಶಕ, ಲೇಖಕರಾದ ಸೂರ್ಯಕಾಂತ ಗುಣಕಿಮಠ ಮಾತನಾಡುತ್ತಾ ಹುಣ್ಣಿಮೆ ಹಾಡು ಎಂಬ ಈ ಶೀರ್ಷಿಕೆಯೇ ಬಹಳಷ್ಟು ಸುಂದರವಾಗಿ, ಅರ್ಥವತ್ತಾಗಿದೆ. ಈ ಹುಣ್ಣಿಮೆಯಲ್ಲಿ ಎರಡು ಹಾಡುಗಳನ್ನು ಕೇಳಿಸಿಕೊಂಡಿವಿ. ನೆಲ ಸಂಸ್ಕೃತಿ ನಡೆ ಎಂದಾಗ ಆದಿಮ ನೋಟ ಏನಾಗಿದೆ ಎನ್ನುವುದು ತಿಳಿಯುತ್ತೆ. ಬೇರೊಂದು ಗಟ್ಟಿಯಾಗಿದ್ದರೆ ಎಲ್ಲವೂ ಸಿಗುವುದು. ಅದೇ ಆಶಯವನ್ನು ಹೊಂದಿರುವ ಆದಿಮ ಅನೇಕ ಕಾರ್ಯಕ್ರಮಗಳ ಮಾಡುತ್ತಾ ಬಂದಿದೆ. ೧೮೮ನೇ ಹುಣ್ಣಿಮೆ ಹಾಡು ಬಯಲು ರಂಗಮಂದಿರದಲ್ಲಿ ನಡೆಯುತ್ತಿದೆ. ಎಂತಹ ಇಕ್ಕಟ್ಟಿನಲ್ಲಿಯೂ ಕೂಡ ನಡೆಸಿಕೊಂಡು ಬರುತ್ತಿರುವುದು ಒಂದು ಮಹತ್ಕಾರ್ಯವೇ ಸರಿ. ಇಲ್ಲಿಗೆ ನಾಡಿನ ಪ್ರತಿಷ್ಠಿತ ರಂಗ ತಂಡಗಳು ಬಂದು ಹೋಗಿವೆ. ಕಲೆಗೆ ನೆಲೆಯಾಗಿರುವ ಆದಿಮ ಹೀಗೆಯೇ ನಡೆಯಲಿ ಇವತ್ತು ನಮ್ಮ ಮಹಾಪ್ರಸ್ಥಾನ ನಾಟಕ ವೀಕ್ಷಿಸಲು ಇಷ್ಟು ಜನ ಕೊರೆಯುವ ಚಳಿಯಲ್ಲಿಯೂ ಸೇರಿದ್ದೀರಿ ಬಹಳ ಸಂತೋಷ ತಮ್ಮ ರಂಗ ಪ್ರೀತಿಗೆ ಎಂದು ಪ್ರೇಕ್ಷಕರನ್ನೂ, ಆದಿಮ ಕೇಂದ್ರವನ್ನೂ ಕೊಂಡಾಡಿದರು.


ಪ್ರದರ್ಶನಗೊಂಡ “ಮಹಾಪ್ರಸ್ಥಾನ” ನಾಟಕ ಮೂಲರಚನೆ; ಆಪ್ಜರ್ ಹುಸೇನ್ ಕನ್ನಡ ಅನುವಾದ; ಸೂರ್ಯಕಾಂತ ಗುಣಕಿಮಠ ಮಾಡಿದ್ದಾರೆ. ನಾಟಕದ ಸಂಭಾಷಣೆ ಅಚ್ಚುಕಟ್ಟಾಗಿ ಭಾಷಿಕ ಪದ ಪಲ್ಲವಿಗಳಿವೆ, ಕಾವ್ಯ ರಸಾಯನವೂ ಅಲ್ಲಲ್ಲಿ ಹಾಡುಗಳಾಗಿ ರಂಜಿಸುತ್ತಾ ಕೆಲವು ಚಿಂತನೆಗಚ್ಚುವ, ಪ್ರಶ್ನಿಸುವ ರೀತಿಯಲ್ಲಿವೆ. ಸಂಗೀತ, ರಂಗಸಜ್ಜಿಕೆ, ವೇಷ ಭೂಷಣಗಳಲ್ಲಿ ಯಾವುದೇ ಕೊರತೆ ಇರಲಿಲ್ಲ. ಅಚ್ಚುಕಟ್ಟಾದ ಸಂಭಾಷಣೆ ಬರೆದಿರುವ ಶ್ರೀ ಸೂರ್ಯಕಾಂತ ಗುಣಕಿಮಠ ಅವರೂ ಪ್ರಕ್ಷಕರಲ್ಲಿ ಒಬ್ಬರಾಗಿದ್ದರು. ನಾಟಕ ದೃಶ್ಯಗಳು ವಸ್ತುವಿಗೆ ಸಂಬಂಧಿಸಿದಂತೆ ಪ್ರಸ್ತುತ ಭಾರತ ಎದುರಿಸುತ್ತಿರುವ ಬಿಕ್ಕಟ್ಟಿನ ಇಕ್ಕಟ್ಟುಗಳನ್ನು ಒಂದೊಂದಾಂಗಿ ರಂಗದ ಮೇಲೆ ತಂದಂತೆ ಅನ್ನಿಸುತ್ತದೆ. ಆದರೆ ಅದಾಗಿರದಂತೆ; ಕಥಾವಸ್ತುವೇ ಬೇರೆ, ನಿರೂಪಣೆ ಬೇರೊಂದು ರೀತಿ ಅಸ್ತವ್ಯಸ್ತವಾಗಿದ್ದರೂ ಕನ್ನಡಿಯಂತೆ ಒಂದೊಂದಾಗಿ ಪ್ರೇಕ್ಷಕರನ್ನು ಕಾಡುತ್ತವೆ. ರಂಗಭೂಮಿ ಕಲಾವಿದರ ಆರ್ಥಿಕ ಸ್ಥಿತಿಯನ್ನು ಮುಂದಿಟ್ಟುಕೊಂಡು ರಂಗದ ಮೇಲೆ ಘಟಿಸುವ ದೃಶ್ಯ ಸನ್ನಿವೇಶಗಳು ಪ್ರೇಕ್ಷಕರನ್ನು ಬೇರೆಡೆಗೆ ಸೆಳೆದರೂ ಪ್ರಸ್ತುತ ರಾಜಕೀಯದಲ್ಲಿನ ನಾಟಕೀಯ ಪಾತ್ರಗಳ ಬಣ್ಣ ಬಯಲು ಮಾಡುತ್ತವೆ. ನಾಟಕ ಅಲ್ಲಿನ ನಟ, ನಟಿ, ಸಹ ಪಾತ್ರಗಳು ಹೇಗೆ ಸೃಷ್ಟಿಸಿಕೊಳ್ಳಲಾಗಿದೆ ಅದಕ್ಕೆ ಮೂಲ ವಸ್ತು ಯಾವುದು ಎನ್ನುವುದು ಪ್ರೇಕ್ಷಕರನ್ನು ತಳಮಳಗೊಳಿಸುತ್ತದೆ. ನಿರೂಪಕ ಪಾತ್ರವಿದ್ದರೂ ಪಾತ್ರಗಳೇ ತಮ್ಮ ಪಾತ್ರವನ್ನು ಸಮಾಜಕ್ಕೆ ಪರಿಚಯಿಸಿಕೊಳ್ಳುವಷ್ಟು ನುರಿತ ನಿರ್ದೇಶನದ ಚಮತ್ಕಾರದ ರಂಗ ತಂತ್ರಗಳು ಕಾಣಬಹುದಾಗಿದೆ. ನಾಟಕ ಒಟ್ಟಾರೆಯಾಗಿ ನ್ಯಾಯಾಂಗ, ಶಾಸಕಾಂಗ, ಕಾಯಾಂಗ ವನ್ನು ಜೊತೆಗೆ ಸಮಾಜವನ್ನು ಪ್ರಶ್ನಿಸಿ, ಕುಟುಕಿ ಹಾಸ್ಯವನ್ನೂ ಹೊರಮ್ಮಿಸಿದೆ. ಎಲ್ಲಾ ಸಾಧ್ಯತೆ ಅಸಾಧ್ಯತೆಗಳ ನಡುವೆ ನಡೆಯುತ್ತಿದ್ದರೂ ಮೌನವಾಗಿರುವುದು ಎಷ್ಟು ಸರಿ? ಈ ಎಲ್ಲದಕ್ಕೂ ಹೊಣೆ ಯಾರು? ಕನಸುಗಳು ಕಟ್ಟಿಕೊಳ್ಳಬೇಕಾದ ಸಾಮಾನ್ಯ ಮನುಷ್ಯ ಮಾನಸಿಕವಾಗಿ ಅಸ್ವಸ್ತನಾಗಲು ಯಾರು ಕಾರಣ? ಅವನು ಹುಚ್ಚಾಸ್ಪತ್ರೆಗೆ ಹೋದರೆ ಅಲ್ಲಿಯೂ ಹುಚ್ಚು ಮುದುರಿ ಹೋಗಿರುವ ವೈದ್ಯರು, ಶುಶ್ರೂಷಕರಿದ್ದರೆ ಹುಚ್ಚು ವಾಸಿಯಾಗಲು ಹೇಗೆ ಸಾಧ್ಯ. ನಟರಾಜನ ಪಾತ್ರ ಥರಥರದ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತಾ ಅಭಿನಯ ಕುಂಚವಾಗಿ ರಂಗದ ಮೇಲೆ ಚೆಲ್ಲಾಡಿ ಜಲಕ್ ಸೃಷ್ಠಿಸುತ್ತಾನೆ. ಲಾಯರ್ ಪಾತ್ರವು ಸಮಾಜವನ್ನು ಎಚ್ಚರಿಸುತ್ತಾ ಸಮಜಾಯಿಷಿ ನೀಡುತ್ತಾ ಲೋಕ ವೈದ್ಯನಾಗಿ ಕಾಣಿಸಿಕೊಂಡು ಪ್ರತಿ ಪಾತ್ರವನ್ನು ಪೋಷಣೆ ಮಾಡುತ್ತಾನೆ.

ಇಲ್ಲಿ ನಟರಾಜನ ಪಾತ್ರವು ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಎನ್ನುವುದಾದರೆ ಇಚ್ಛಾ ಮರಣ ಕೋರಿ ನ್ಯಾಯಾಂಗದ ಮೊರೆ ಹೋಗಿ ಕೇಳಿಕೊಳ್ಳುವುದು ನ್ಯಾಯಸ್ಥಾನವನ್ನು ಮುಜುಗರಕ್ಕೀಡುಮಾಡುತ್ತದೆ. ಅನೇಕ ವಿಸ್ಮಯಕಾರಕ ಪಾತ್ರಗಳು ರಂಗ ಪ್ರವೇಶ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಹೆಮ್ಮೆಯಿಂದ ಪಡೆದು ಹೋಗುತ್ತವೆ. ನಾಟಕದಲ್ಲಿ ರೂಪಕ ಪಾತ್ರಗಳು ಕೆಲವು ಸಂದೇಶಗಳ ನೀಡುವ ವೈಜ್ಞಾನಿಕ ಚಿಂತಕ, ವಿಜ್ಞಾನದ ಸವಾಲುಗಳ ಕಾಣಬಹುದು. ಬೆಳಕು; ಶ್ರೀನಿವಾಸ್ ತುರಾಂಡಹಳ್ಳಿ ನೀಡಿದರೆ ಸಂಗೀತ; ಅಭಿಷೇಕ್ ನೀಡಿದರು.
ಕಾರ್ಯಕ್ರಮ ನಿರೂಪಣೆ ಅಂಬರೀಷ್ ಎಂ ಆದಿಮ ಮಾಡಿದರೆ ಕೆ.ಎಂ.ಕೊಮ್ಮಣ್ಣ ಆದಿಮ ಸ್ವಾಗತಿಸಿದರು. ಹ.ಮಾ.ರಾಮಚಂದ್ರ ಆದಿಮ ವಂದಿಸಿದರು. ರಂಗ ವೇದಿಕೆಯಲ್ಲಿ ಕೆ.ವಿ.ಕಾಳಿದಾಸ್, ಮಂಜು ನಡುಪಳ್ಳಿ ಇದ್ದು ನಾವೆಂಕಿ ಕೋಲಾರ ನಾಟಕ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!