• Fri. Mar 29th, 2024

ರಾಜ್ಯ ಮಟ್ಟದ ವಿವೇಕ ರತ್ನ ಪ್ರಶಸ್ತಿಗೆ ಖ್ಯಾತ ಉಪನ್ಯಾಸಕ ಮೋಹನ್ ಶಿಂಧೆ ಭಾಜನ

PLACE YOUR AD HERE AT LOWEST PRICE

ಕೋಲಾರ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳತರಬೇತಿ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪ್ರತಿವರ್ಷ ರಾಜ್ಯ ಮಟ್ಟದ ವಿವೇಕ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ೨೦೨೩ ರ ಜನವರಿಯಲ್ಲಿ ಘೋಷಿಸಿ, ಮೊದಲ ಪ್ರಶಸ್ತಿಯನ್ನು ಧಾರವಾಡದ ಖ್ಯಾತ ಇತಿಹಾಸ ಉಪನ್ಯಾಸಕ ಮೋಹನ್ ಶಿಂಧೆ ಅವರಿಗೆ ನೀಡಲಾಯಿತು.

ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಮಾಹಿತಿ ಮೇಳ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತ ಮೋಹನ್ ಶಿಂಧೆ ಮಾತನಾಡಿ, ವಿವೇಕ್ ಇನೋಟೆಕ್ ಸಂಸ್ಥೆಯು ನೀಡುವ ವಿವೇಕ ರತ್ನ ಪ್ರಸ್ತಿಯನ್ನು ಮೊದಲು ಪಡೆದಿರುವುದು ನನಗೆ ಸಂತೋಷವನ್ನುಂಟು ಮಾಡಿದೆ. ಈ ಪ್ರಶಸ್ತಿಯ ಮೂಲಕ ನನ್ನ ಜವಾಬ್ದಾರಿಯು ಮತ್ತಷ್ಟು ಹೆಚ್ಚಾಗಿದೆ ಎಂದ ಅವರು, ವಿದ್ಯಾರ್ಥಿಗಳು ಇತಿಹಾಸವನ್ನು ಹೃದಯದಿಂದ ಆಸ್ವಾದಿಸುವ ಮೂಲಕ ಅಧ್ಯಯನ ಮಾಡಬೇಕು. ಆಗ ಇತಿಹಾಸದ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾಗಿ ನೀಡಲಾಗುವ ಇತಿಹಾಸದ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಕೆ.ಎ.ಎಸ್. ಅಧಿಕಾರಿ ಎಂ. ಬಾಬು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗುತ್ತಿದ್ದು ಸರ್ಕಾರಿ ಹುದ್ದೆಯನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಶಿಸ್ತು, ಶ್ರದ್ಧೆ, ಸಮಯ ಪ್ರಜ್ಞೆ ಎಲ್ಲವೂ ಇರಬೇಕು. ಇವುಗಳನ್ನೆಲ್ಲಾ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಸರ್ಕಾರಿ ಹುದ್ದೆಯನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕಷ್ಟಗಳ ನಡುವೆಯೂ ಬದುಕನ್ನು ಕಟ್ಟಿಕೊಳ್ಳುವುದು ಕೋಲಾರ ಜಿಲ್ಲೆಯ ಮಣ್ಣಿನ ಗುಣವಾಗಿದೆ. ಇದು ಇಂದು ನಿನ್ನೆಯದಲ್ಲ ಪುರಾತನ ಕಾಲದಿಂದಲೂ ಬಂದಿದೆ. ಮೊದಲು ಅನುಮಾನ, ಅಪಮಾನಗಳು ಇರುತ್ತದೆ. ಅವುಗಳನ್ನೆಲ್ಲಾ ಮೀರಿ ಜೀವನದಲ್ಲಿ ಯಶಸ್ವಿಯನ್ನು ಕಂಡಾಗ ಸನ್ಮಾನಗಳು ನಡೆಯುತ್ತವೆ ಎಂದು ತಿಳಿಸಿದರು.

ವಿವೇಕ್ ಇನೋಟೆಕ್ ಸಂಸ್ಥೆಯ ಎ.ಪ್ರಮೋದ್ ಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯನ್ನು ಪಡೆದು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ನಂತರ ಉತ್ತಮವಾಗಿ ನಿಮ್ಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬೇಕು. ಮನುಷ್ಯ ಎಷ್ಟೇ ಬೆಳೆದರೂ ತಾನು ನಡೆದು ಬಂದ ಹಾದಿಯನ್ನು ಮರೆಯಬಾರದು ಎಂದರು.

ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು. ಮುರಳಿ ಮೋಹನ್, ಕೆ.ಎಂ.ಮನೋಹರ್, ನಾಗೇಶ್, ಕುಮಾರ್, ನಾಗಮಣಿ, ಸಂಗೀತ ಸೇರಿದಂತೆ ಕೆಲವು ವಿದ್ಯಾರ್ಥಿಗಳ ಪರವಾಗಿ ಅವರ ಪೋಷಕರು ಸನ್ಮಾನವನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಆರ್.ರಾಖೇಶ್, ಎಸ್.ಕಿರಣ್ ಕುಮಾರ್, ಧಾರವಾಡದ ಮಹಮದ್ ಇಲಿಯಾಸ್, ಎನ್.ಕೆ.ನಾಗೇಶ್, ಸಿಬ್ಬಂದಿಯಾದ ಆರ್.ಶಾಲಿನಿ,ಸಂಸ್ಥೆಯ ಸಾರ್ವಜನಿಕ ಸಂಪರ್ಕಾಽಕಾರಿ ಸಿ.ಜಿ.ಮುರಳಿ, ಯುವ ವಿದ್ಯಾರ್ಥಿ ಮುಖಂಡರುಗಳಾದ ಎನ್.ಮಂಜುನಾಥ್, ಕೆ.ವಿ.ಶಶಿಕುಮಾರ್, ಕೆ.ಎಸ್.ಶಿವರಾಜ್, ಸಂಪನ್ಮೂಲ ವ್ಯಕ್ತಿ ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

You missed

error: Content is protected !!