• Thu. Mar 28th, 2024

ಕನ್ನಡ ಬೆಳ್ಳಿ ತೆರೆಯ ಅಸ್ಪೃಶ್ಯತೆ ಧಿಕ್ಕರಿಸಿದ ಪಾಲಾರ್!

PLACE YOUR AD HERE AT LOWEST PRICE

ಕೋಲಾರ ನಗರದ ಶಾರದಾ ಚಿತ್ರಮಂದಿರದಲ್ಲಿ ಪಾಲಾರ್ ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಿ ಸರಿಯಾಗಿ ೩೬ ಗಂಟೆಗಳ ನಂತರ ಈ ಲೇಖನ ಸಿದ್ಧಪಡಿಸುತ್ತಿದ್ದೇನೆ. ಚಿತ್ರ ವೀಕ್ಷಿಸಿ ಎರಡು ದಿನ ಕಳೆದರೂ ಅದರ ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಚಿತ್ರದ ಕತೆ, ಸನ್ನಿವೇಶ, ಪಾತ್ರಧಾರಿಗಳು ಕಾಡುತ್ತಲೇ ಇದ್ದಾರೆ.

ಹೀಗೆ ಕಾಡುವ ಚಿತ್ರವಾಗಿ ಇತ್ತೀಚಿಗೆ ಜನಪ್ರಿಯತೆಯ ತುತ್ತತುದಿಗೇರಿದ್ದು ಕಾಂತಾರಾ. ಪಾಲಾರ್ ಕೂಡ ಒಂದು ರೀತಿಯಲ್ಲಿ ದಲಿತರ ಕಾಂತಾರಾ. ಏಕೆಂದರೆ, ಅಲ್ಲಿ ದೈವಕ್ಕೆ ಕೊಡುಗೆ ನೀಡುವ ಭೂಮಿಯ ಕತೆ ಇದೆ. ಪಾಲಾರ್‌ನಲ್ಲಿ ದಲಿತರಿಂದ ಕಸಿದುಕೊಂಡ ಭೂಮಿಯ ಕತೆ ಇದೆ.

ಭಾರತದ ಜನಸಂಖ್ಯೆ ಸುಮಾರು ೧೪೦ ಕೋಟಿ ಎಂದರೆ, ಜಾತಿ ಆಧಾರಿತ ಶೋಷಣೆಯೂ ೧೪೦ ಕೋಟಿ ವಿಧ. ಅದರಲ್ಲೂ ತಳ ವರ್ಗಗಳ ಶೋಷಣೆ ಇಂದಿಗೂ ನಿತ್ಯ ನಿರಂತರ. ಪ್ರತಿ ದಿನದ ಪತ್ರಿಕೆ, ಸುದ್ದಿ ಮಾದ್ಯಮ, ಸಾಮಾಜಿಕ ಜಾಲ ತಾಣಗಳಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಗಳ ಕನಿಷ್ಠ ಹತ್ತು ಸುದ್ದಿ ಸಿಗಬಹುದು. ಆದರೆ, ಕನ್ನಡದ ಹಿರಿ ಮತ್ತು ಕಿರಿ ತೆರೆಯ ನಿರ್ದೇಶಕರಿಗೆ ಜಾತಿ ಶೋಷಣೆಯ ವಿಚಾರ ಹಿಂದೆಯೂ ಕಾಡಿಲ್ಲ, ಇಂದಿಗೂ ಕಾಡುತ್ತಿಲ್ಲ. (ಅಲ್ಲೊಮ್ಮೆ ಇಲ್ಲೊಮ್ಮೆ ತಳವರ್ಗದ ಪಾತ್ರಗಳು ಅಪರೂಪಕ್ಕೊಮ್ಮೆ ತೆರೆ ಮೇಲೆ ಕಂಡಿದ್ದು ಬಿಟ್ಟರೆ ) ತಮಿಳು, ತೆಲುಗು ಕೆಲವು ನಿರ್ದೇಶಕರು ಈ ಅರೋಪಕ್ಕೆ ಅತೀತರಾಗಿದ್ದಾರೆ.  ಕನ್ನಡ ನಿರ್ದೇಶಕರ, ಬರಹಗಾರರ ಜಾಣ ಕಿವುಡು, ಕುರುಡುತನವೂ ಇದಕ್ಕೆ ಕಾರಣವಾಗಿರಬಹುದು. ಇಲ್ಲವೇ ಅಸ್ಪೃಶ್ಯತೆಯಂತ ದೊಡ್ಡ ಸಮಸ್ಯೆಗೆ ಪ್ರತಿಕ್ರಿಯಿಸದೇ ಇದ್ದು ಬಿಟ್ಟರೆ ಈ ಸಮಸ್ಯೆಯೇ ಇಲ್ಲ, ಸಮಾಜದಲ್ಲಿ ಎಲ್ಲವೂ ಸುಭಿಕ್ಷವಾಗಿದೆಯೆಂಬ ಕಲ್ಪನೆ ಮೂಡಿಸಬಹುದೆಂಬ ಹುನ್ನಾರವೂ ಇರಬಹುದು. ಇಂತದ್ದೇ ಮನಸುಗಳು ಈಗಲೂ ಕೇಳುವ ಪ್ರಶ್ನೆಯೇ ಈಗೆಲ್ಲಾ ಅಸ್ಪೃಶ್ಯತೆ ಎಲ್ಲಿದೆ???

ಜಾತಿ ಕಾರಣಕ್ಕಾಗಿ ನಡೆಯುವ ಅಸ್ಪೃಶ್ಯತೆಯ ಘಟನೆಗಳನ್ನೇ ಚಿತ್ರದ ಕತೆಯಾಗಿಸಿ ಪಾಲಾರ್ ಚಿತ್ರವಾಗಿಸಿರುವುದು ನಿರ್ದೇಶಕರ ಹಿರಿಮೆ, ಜಾಣ್ಮೆ, ಧೈರ್ಯ. ಕನ್ನಡ ಬೆಳ್ಳಿ ತೆರೆಯ ದಲಿತರ ಕತೆಗಳನ್ನು ತೋರಿಸದ ಅಸ್ಪೃಶ್ಯತೆಯನ್ನು ಧಿಕ್ಕರಿಸಿ ಪಾಲಾರ್ ಚಿತ್ರ ನಿರ್ದೇಶಿರುವ ಹೆಗ್ಗಳಿಕೆ ನಿರ್ದೇಶಕ ಜೀವಾನವೀನ್‌ರದು. ಆದ್ದರಿಂದಲೇ ಇದು ಪಾಲಾರ್ ಚಿತ್ರದ ಸರಿ ತಪ್ಪುಗಳ ಬಗ್ಗೆ ಚರ್ಚಿಸುವ ವಿಮರ್ಶೆ ಇದಲ್ಲ. ಚಿತ್ರಕ್ಕೆ ರೇಟಿಂಗ್ ನೀಡುವ ಉದ್ದೇಶವೂ ಇಲ್ಲ. ನಿರ್ದೇಶಕರ ಮೊದಲ ಪ್ರಯತ್ನ ಕುರಿತ ಮುಕ್ತ ಮನಸ್ಸಿನ ಅಭಿಪ್ರಾಯವಷ್ಟೆ.

ಪಾಲಾರ್ ಎನ್ನುವುದು ಕೋಲಾರ ಜಿಲ್ಲೆಯಲ್ಲಿ ಹರಿಯುವ ನದಿಯ ಹೆಸರು. ಈ ನದಿ ಇದೆ ಎಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ನಾಗರೀಕರು ನಂಬುತ್ತಾರೆ. ಆದರೆ, ಈ ನದಿಯನ್ನು ತೋರಿಸಿ ಎಂದರೆ ಕಕ್ಕಾಬಿಕ್ಕಿಯಾಗುತ್ತಾರೆ. ಏಕೆಂದರೆ, ಈ ನದಿ ಮೇಘ ಸ್ಪೋಟದಂತ ಮಳೆ ಸುರಿದಾಗ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಆನಂತರ ನಾಮಾಕಾವಸ್ತೆಗೆ ಮಾತ್ರ ನದಿ. ಪಾಲಾರ್ ಎನ್ನುವುದು ನದಿಯಲ್ಲದ ನದಿಯಾಗಿ ಹೇಗೆ ಪ್ರವಹಿಸುತ್ತಿದೆಯೋ ಹಾಗೆಯೇ ಅಸ್ಪೃಶ್ಯತೆ ಭಾರತೀಯ ಸಮಾಜದಲ್ಲಿ ಕಂಡು ಕಾಣಿಸದಂತೆ ಆಚರಣೆಯಲ್ಲಿದೆ. ನಿತ್ಯವೂ ವಿವಿಧ ಘಟನೆಗಳ ಮೂಲಕ ಜೀವಂತವಾಗಿದೆ. ಆದರೆ, ಮೇಘಸ್ಪೋಟದ ಮಳೆಯಂತೆ ತೀರಾ ವಿಕೋಪಕ್ಕೆ ಹೋದ ಪ್ರಕರಣಗಳು ಮಾತ್ರವೇ ಬೆಳಕಿಗೆ ಬರುತ್ತದೆ.

ದಲಿತರ ಮೇಲಿನ ಇಂತ ಕೆಲವು ದೌರ್ಜನ್ಯಗಳ ಕೊಲಾಜ್ ಪಾಲಾರ್ ಚಿತ್ರದ ಹೂರಣ. ಚಿತ್ರಕಥೆಗೆ ಪೂರಕವಾಗಿ ಅಸ್ಪೃಶ್ಯತೆಯ ಘಟನೆಗಳನ್ನು ತೋರಿಸುವ ಪ್ರಯತ್ನ ಮಾಡಿರುವವರು ಪಾಲಾರ್ ಚಿತ್ರದ ನಿರ್ದೇಶಕ ಜೀವಾ ನವೀನ್. ಹಾಗಂತ ದಲಿತರ ಮೇಲಿನ ಇಡೀ ದೌರ್ಜನ್ಯಗಳಿಗೆ ಚಿತ್ರ ಚೌಕಟ್ಟು ಒದಗಿಸಿದೆ ಎಂದು ಭಾವಿಸಬೇಕಿಲ್ಲ. ಆ ಮಟ್ಟಿಗೆ ಚಿತ್ರವು ಡಾಕ್ಯುಮೆಂಟರಿ ಆಗುವುದನ್ನು ನಿರ್ದೇಶಕರು ತಪ್ಪಿಸಿದ್ದಾರೆ. ಇಲ್ಲಿ ಸಿನಿಮಾಗೆ ಬೇಕಾಗಿರುವ ಎಲ್ಲಾ ಅಂಶಗಳಿವೆ. ದಲಿತರ ಕುಟುಂಬದ ಹೀರೋ, ಹೀರೋಯಿನ್, ಗ್ರಾಮದ ಯಜಮಾನರೆಂಬ ವಿಲನ್‌ಗಳು, ಚಿತ್ರದಲ್ಲಿ ಕುತೂಹಲ ಮೂಡಿಸುವ ತಿರುವುಗಳಿವೆ. ಇಂಟರ್‌ವೆಲ್ ಬ್ಯಾಂಗ್ ಇದೆ. ಕಣ್ಣೀರು ತರಿಸುವ, ಮೈನವಿರೇಳಿಸುವ ಸನ್ನಿವೇಶಗಳಿವೆ, ರೋಮಾಂಚನಗೊಳಿಸುವ ದೃಶ್ಯಗಳಿವೆ. ಹಾಗೆಯೇ ಸಿನಿಮೀಯ ಅಂತ್ಯವೂ ಇದೆ.

ಕೋಲಾರ ನೆಲದ ಜಾನಪದ ಗಾಯಕಿ ವೈ.ಜಿ.ಉಮಾ ಚಿತ್ರದಲ್ಲಿ ನಾಯಕಿಯಾಗಿ ಹಾಡಿ, ಅಭಿನಯಿಸಿ, ಅಬ್ಬರಿಸಿದ್ದಾರೆ. ನಿರ್ದೇಶಕ ಜೀವಾ ತೆರೆಯ ಹಿಂದೆ, ಉಮಾ ತೆರೆಯ ಮೇಲೆ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ನಿಬಾಯಿಸಿದ್ದಾರೆ. ಚಿತ್ರದ ನಾಯಕ ಆಂಗ್ರಿ ಯಂಗ್ ಮ್ಯಾನ್, ಲವರ್ ಬಾಯ್ ಆಗಿ ಗಮನ ಸೆಳೆಯುತ್ತಾರೆ. ವಿಲನ್ ಪಾತ್ರಧಾರಿ ರೋಷಾವೇಷ ಉಕ್ಕಿಸುತ್ತಾರೆ. ಸಂಭಾಷಣೆ ಕೋಲಾರ ನೆಲದ ತೆಲುಗು, ಕನ್ನಡ ಮಿಶ್ರಿತ ಶೈಲಿಯಲ್ಲಿದೆ. ಹಾಡುಸಂಗೀತ ಕತೆಗೆ ಪೂರಕವಾಗಿದೆ. ಪ್ರತಿ ದೃಶ್ಯದಲ್ಲಿಯೂ ಕೋಲಾರ ಜಿಲ್ಲೆಯ ತಳವರ್ಗದ ಸಂಸ್ಕೃತಿ ಸಂಪ್ರದಾಯ ಅನಾವರಣಗೊಂಡಿದೆ.

ಅಂಬೇಡ್ಕರ್ ಪ್ರತಿಪಾದಿಸಿದ ಶಿಕ್ಷಣ,ಸಂಘಟನೆ, ಹೋರಾಟದ ಅಂಶಗಳು ಚಿತ್ರದಲ್ಲಿದೆ. ನಕ್ಸಲ್ ಚಳವಳಿಯೂ ಅಸ್ಪೃಶ್ಯತೆ ನಿವಾರಣೆಗೆ ತಾರ್ಕಿಕ ಅಂತ್ಯ ನೀಡಲಿಲ್ಲ ಎನ್ನುವುದನ್ನು ನಿರ್ದೇಶಕರು ಬಹಳ ಸೂಚ್ಯವಾಗಿ ತಿಳಿಸಿದ್ದಾರೆ. ದಲಿತರ ವಿಮೋಚನೆ ಅಂಬೇಡ್ಕರ್ ಮಾರ್ಗದಿಂದ ಮಾತ್ರವೇ ಸಾಧ್ಯ ಎಂಬ ಸಂದೇಶವೂ ಇದೆ. ಪಾಲಾರ್ ಬೆಳ್ಳಿ ತೆರೆಗಪ್ಪಳಿಸಬೇಕಾದ ಸಿನಿಮಾ ಎಂಬುದರ ಬಗ್ಗೆ ನಿರ್ದೇಶಕರು ಜಾಗ್ರತೆವಹಿಸಿದ್ದಾರೆ. ಕತೆಗೆ ಪೂರಕವಾಗಿ ಅಂಬೇಡ್ಕರ್ ಆಶಯಗಳನ್ನು, ದಲಿತ ಚಳವಳಿಯನ್ನು ರುಚಿಗೆ ತಕ್ಕಷ್ಟು ಮಾತ್ರವೇ ಬಳಸಿಕೊಂಡಿದ್ದಾರೆ. ಆದರೆ, ಸಿನಿಮೀಯ ಮಾದರಿಯಲ್ಲಿಯೇ ಚಿತ್ರವನ್ನು ಅಂತ್ಯಗೊಳಿಸಿದ್ದಾರೆ!!!

ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಜಾತಿ ದೌರ್ಜನ್ಯದ ಕತೆಗಳು ಕನ್ನಡ ಸಿನಿಮಾಗಳಲ್ಲಿ ವಿರಳ ಎನ್ನುವವರು ಪಾಲಾರ್ ಚಿತ್ರದ ಪ್ರಯತ್ನವನ್ನು ಧಾರಾಳವಾಗಿ ನೋಡಿ, ಮೆಚ್ಚಬಹುದು. ಭವಿಷ್ಯದಲ್ಲಿ ಇಂತ ಮತ್ತಷ್ಟು ಪ್ರಯತ್ನಗಳನ್ನು ಪ್ರೋತ್ಸಾಹಿಸಬಹುದು.

ಪಾಲಾರ್ ಚಿತ್ರವನ್ನು ನೋಡಿದ ನಂತರವೂ ಅದು ಕಾಡುತ್ತಿಲ್ಲ ಎನ್ನುವುದಾದರೆ ಅಸ್ಪೃಶ್ಯತೆಯನ್ನು ಒಪ್ಪಿಕೊಂಡ ಸಮಾಜದ ಭಾಗವಾಗಿದ್ದೀರಿ ಎಂದೇ ಅರ್ಥ.

ಪಾಲಾರ್ ಚಿತ್ರ ತಂಡಕ್ಕೆ ಶುಭವಾಗಲಿ, ಅಂದ ಹಾಗೆ ಚಿತ್ರವು ಫೆಬ್ರವರಿ ಮಾಸಾಂತ್ಯದಲ್ಲಿ ಬಿಡುಗಡೆಯಾಗಲಿದೆ.

-ಕೆ.ಎಸ್.ಗಣೇಶ್, ಕೋಲಾರ.

 

Leave a Reply

Your email address will not be published. Required fields are marked *

You missed

error: Content is protected !!