• Fri. Mar 29th, 2024

ಎಲ್ಲವನ್ನೂ ಸಮೀಕರಿಸಿದ ಮಾರ್ಗವೇ ಸಂವಿಧಾನ:ಬಂಗಾರಪೇಟೆಯಲ್ಲಿ ದಯಾನಂದ.

PLACE YOUR AD HERE AT LOWEST PRICE

ವೇದ ಉಪನಿಷತ್ತು ಭಗವದ್ಗೀತೆ – ಖುರಾನ್ – ಬೈಬಲ್ – ಗ್ರಂಥ ಸಾಹಿಬ್ – ಬುದ್ದ ಜ್ಞಾನ – ಜೈನ ಪಂಥ – ಬಸವ ತತ್ವ – ಶೈವ ಪಂಥ – ದ್ವೈತ –  ಅದ್ವೈತ – ವಿಶಿಷ್ಟಾದ್ವೈತ ಎಲ್ಲವನ್ನೂ ಒಳಗೊಂಡ ಆದರೆ ಎಲ್ಲವನ್ನೂ ಸಂಕಲಿಸಿದ  – ಎಲ್ಲವನ್ನೂ ಸಮೀಕರಿಸಿದ ಪರ್ಯಾಯ ಮಾರ್ಗವೇ ಸಂವಿಧಾನ ಎಂದು ತಹಶೀಲ್ದಾರ್ ದಯಾನಂದ ಹೇಳಿದರು.

ಅವರು ಬಂಗಾರಪೇಟೆ ಪಟ್ಟಣದ ಬಾಲಕರ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತದವತಿಯಿಂದ ನಡೆದ  74ನೇ ಗಣರಾಜ್ಯೋತ್ಸ ಕಾರ್ಯಕ್ರಮದದ್ವಜಾರೋಣ ಬಾಷಣ ಮಾಡಿದ ಅವರು ಧರ್ಮಗಳ ಕೊಳೆಯನ್ನು ತೊಳೆದು ಹೊಳಪು ನೀಡಿ ಸಮಾನತೆ ಸ್ವಾತಂತ್ರ್ಯ ಎಂಬ ಹೊಸ ನಾಗರಿಕ ಲಕ್ಷಣಗಳ ಆಧುನಿಕ ರೂಪವೇ ಸಂವಿಧಾನ ಎಂದರು.

ನಾನು ಹಿಂದೂ ನಾನು ಮುಸ್ಲಿಂ, ನಾನು ಸಿಖ್, ನಾನು ಕ್ರಿಶ್ಚಿಯನ್, ನಾನು ಬೌದ್ಧ, ನಾನು ಜೈನ, ನಾನು ಪಾರಸಿ, ನಾನು ಲಿಂಗಾಯತ, ನಾನು ಒಕ್ಕಲಿಗ, ನಾನು ದಲಿತ, ನಾನು ಆ ಜಾತಿಯವ ಈ ಜಾತಿಯವ ನಾನು ಅದು ಇದು ಎಂಬದೆಲ್ಲಕ್ಕಿಂತಲೂ ನಾವು ನೀವು ಈ ಎಲ್ಲವನ್ನೂ ಮೀರಿ ಮೊದಲು ಭಾರತೀಯರು….We the people of India ಎಂದರು.

ಧರ್ಮಗಳ ಕೊಳೆಯನ್ನು ತೊಳೆದು ಹೊಳಪು ನೀಡಿ ಸಮಾನತೆ ಸ್ವಾತಂತ್ರ್ಯ ಎಂಬ ಹೊಸ ನಾಗರಿಕ ಲಕ್ಷಣಗಳ ಆಧುನಿಕ ರೂಪವೇ ಸಂವಿಧಾನ. ಜನರನ್ನು ಶ್ರೇಷ್ಠತೆಯ ವ್ಯಸನದ ಭ್ರಮೆಗಳಿಗೆ ಒಳಪಡಿಸುವ ಧರ್ಮಗಳು, ಆಚರಣೆಗಳ ಮೂಲಕ ವಿಭಜಿಸುವ ಧರ್ಮಗಳು, ಹುಟ್ಟಿನ ಮೇಲೆ ಬೇರ್ಪಡಿಸುವ ಜಾತಿಗಳು, ಇವುಗಳಿಗೆ ಬದಲಾವಣೆ ತಂದು ಮನುಷ್ಯತ್ವದ ಆಧಾರದ ಮೇಲೆ ಒಂದು ಗೂಡಿಸುವ ವಿಧಿ ವಿಧಾನಗಳೇ  ಸಂವಿಧಾನ.

ಬಹುತ್ವ ಭಾರತ ಬಲಿಷ್ಠ ಭಾರತ ಆಶಯವನ್ನು ವಾಸ್ತವದಲ್ಲಿ ನಿಜವಾಗಿಸಲು ಇರುವ ಅತ್ಯುತ್ತಮ ಮಾರ್ಗ ಸಂವಿಧಾನ. ಯಾವ ದೃಷ್ಟಿಕೋನದಿಂದ ನೋಡಿದರು ಭಾರತದಲ್ಲಿ ಮನುಷ್ಯ ಪ್ರೀತಿಯ ಸಂಕೇತ ಸಂವಿಧಾನ ಮಾತ್ರ. ಇಂತಹ ಸಂವಿಧಾನವನ್ನು ಅಳವಡಿಸಿಕೊಂಡು ಅದನ್ನು ಸಂಭ್ರಮದಿಂದ ಜಾರಿ ಮಾಡಿ ಗಣರಾಜ್ಯಗಳ ಒಕ್ಕೂಟವಾದ ನೆನಪಿನ ದಿನವೇ ಜನವರಿ 26ರ ಗಣ ರಾಜ್ಯೋತ್ಸವ.

ಸಂವಿಧಾನವೇ ಧರ್ಮವಾದ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ಮತ್ತು ವೈವಿಧ್ಯಮಯ ದೇಶ ಭಾರತ. ಅದನ್ನು ವರ್ಣಿಸುವುದೇ ಒಂದು ಹೆಮ್ಮೆ. ಜೀವ ನೀಡಿದ ಜನ್ಮಭೂಮಿಯೆ, ನಿನಗಿದೋ ಬಹುದೊಡ್ಡ ಸಲಾಂ. ಎಷ್ಟೊಂದು  ಅದ್ಭುತ, ಆಶ್ಚರ್ಯ, ವೈವಿಧ್ಯತೆಗಳ ಮಡಿಲು ನಿನ್ನದು. ನಿನ್ನಲ್ಲಿರುವ ಜಾತಿಗಳೆಷ್ಟೋ, ಧರ್ಮಗಳೆಷ್ಟೋ, ದೇವರುಗಳೆಷ್ಟೋ,.

ನಿನ್ನಲ್ಲಡಗಿರುವ ಭಾಷೆಗಳೆಷ್ಟೋ, ಪಕ್ಷಗಳೆಷ್ಟೋ, ಪ್ರದೇಶಗಳೆಷ್ಟೋ, ನಿನೊಂದಿರುವ ನದಿಗಳೆಷ್ಟೋ, ಬೆಟ್ಟಗಳೆಷ್ಟೋ, ಸರೋವರಗಳೆಷ್ಟೋ, ನೀನಾಚರಿಸುವ ಉತ್ಸವಗಳೆಷ್ಟೋ, ಜಾತ್ರೆಗಳೆಷ್ಟೋ, ಸಂಪ್ರದಾಯಗಳೆಷ್ಟೋ, ನಿನ್ನಭಿಮಾನದ ಕಲೆ, ಸಾಹಿತ್ಯ, ಸಂಗೀತ, ತಂತ್ರಜ್ಞಾನಗಳೆಷ್ಟೋ ಎಂದು ಅವರು ಬಣ್ಣಿಸಿದರು.

ನೀನನುಭವಿಸಿದ ದಾಳಿ, ಹಿಂಸೆ, ದೌರ್ಜನ್ಯ, ಅತ್ಯಾಚಾರಗಳೆಷ್ಟೋ, ನಿನ್ನೊಳಗಿನ ಅಮಾಯಕರು, ಅಸಹಾಯಕರು, ಶೋಷಿತರೆಷ್ಟೋ, ನಿಜವಾದ ದೇಶದ್ರೋಹಿಗಳೆಷ್ಟೋ, ಕಪಟ ದೇಶಭಕ್ತರೆಷ್ಟೋ, ಕ್ರೂರಿಗಳೆಷ್ಟೋ, ವಂಚಕರೆಷ್ಟೋ, ಆಗರ್ಭ ಶ್ರೀಮಂತರೆಷ್ಟೋ, ಹಸಿವಿನಿಂದ ಸತ್ತವರೆಷ್ಟೋ, ದೇವ ಮಂದಿರಗಳ ವ್ಯೆವಿದ್ಯತೆಯೆಷ್ಟೋ, ಸ್ಮಶಾನಗಳ ಭಿನ್ನತೆಯೆಷ್ಟೋ.

ಮಸೀದಿಗಳೆಷ್ಟೋ,  ಚರ್ಚುಗಳೆಷ್ಟೋ, ಜೈನ ಮಂದಿರಗಳೆಷ್ಟೋ ಗುರುದ್ವಾರಗಳೆಷ್ಟೋ, ಬೌದ್ದ ಸ್ತೂಪಗಳೆಷ್ಟೋ,. ಪ್ರಕೃತಿಯ ವಿಕೋಪಗಳೆಷ್ಟೋ, ಮಾನವನ ಚೇಷ್ಟೆಗಳೆಷ್ಟೋ, ಆದರೂ, ನಿಂತಿರುವೆ ಹೆಬ್ಬಂಡೆಯಾಗಿ, ವಜ್ರದೇಹಿಯಾಗಿ, ಹೂ ಹೃದಯದ ಮಾತೆಯಾಗಿ, ಶುಭ್ರಮನಸ್ಸಿನ ಮಮತೆಯಾಗಿ, ಇಷ್ಟಾದರೂ ಇರಿಯುತ್ತಿದ್ದಾರೆ ನಿನ್ನನ್ನು ನಿನ್ನದೇ ಹಿತಶತ್ರುಗಳು.

ನಿನ್ನೊಂದಿಗೆ ತಾವೂ ನಾಶವಾಗುತ್ತೇವೆಂಬ ಅರಿವಿಲ್ಲದ ಮತಿಹೀನರು, ಎಲ್ಲವೂ ತಿಳಿದಿರುವ ಜ್ಞಾನಿಗಳು ನಾವೆಂಬ ಅಹಂಕಾರದ ಅಜ್ಞಾನಿಗಳು, ಸ್ವಾತಂತ್ರ್ಯದ ಅರ್ಥಗೊತ್ತಿಲ್ಲ, ಸಮಾನತೆಯ ಮಹತ್ವ ತಿಳಿದಿಲ್ಲ, ತಾಳ್ಮೆ ಇಲ್ಲ, ತ್ಯಾಗವಿಲ್ಲ, ಕರುಣೆಯಿಲ್ಲ, ದುರಹಂಕಾರವೇ ಎಲ್ಲಾ, ಆದರೂ, ಇಷ್ಟೆಲ್ಲಾ ಹೊತ್ತಿರುವ, ನಮಗೆಲ್ಲಾ ಆಶ್ರಯ ನೀಡಿರುವ, ನಿನ್ನ ಮಡಿಲ ಮಕ್ಕಳಾದ ನಮ್ಮಿಂದ, ಭಾರತ ದೇಶವೇ ಇಗೋ ನಿನಗೊಂದು ಬಹುದೊಡ್ಡ ಸಲಾಂ.

ಎಲ್ಲರಿಗೂ  ಭಾರತ ಗಣರಾಜ್ಯೋತ್ಸವದ ಶುಭಾಶಯಗಳು. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿಗಳು ದೇಶದ ಜನರಲ್ಲಿ ಆಗಲಿ ಎಂದು ಆಶಿಸುವುದಾಗಿ ಅವರು ಹೇಳೀದರು.

ಕಾರ್ಯಕ್ರದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪರವರನ್ನು ತಾಲ್ಲೂಕಿನಅತ್ಯುತ್ತಮ ಅಧಿಕಾರಿ ಎಂದು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕ್ಷೇತ್ರದ ಶಾಸಕ ಎಸ್.ಎನ್,ನಾರಾಯಣಸ್ವಾಮಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷೆ ಫರ್ಜಾನಾ ಸುಹೈಲ್, ಉಪಾದ್ಯಕ್ಷೆ ಶಾರದ, ಸರ್ಕಾರಿ ನೌಕರರ ಸಂಘದ ಅಪ್ಪಯ್ಯಗೌಡ, ಮುಖ್ಯಾಧಿಕಾರಿ ಚಲಪತಿ, ಬಿಇಓ ಸುಕನ್ಯಾ, ಪೊಲೀಸ್ ಇನ್ಸ್ ಪೆಕ್ಟರ್ ಸಂಜೀವರಾಯಪ್ಪ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!