• Fri. Apr 19th, 2024

ಕೋಲಾರ I ಕೆಲಸದ ಏಕತಾನತೆ ಮರೆಯಲು ಬೆಂಗಳೂರು ವಿವಿ ಸಿಬ್ಬಂದಿಯಿಂದ ಚಾರಣ

PLACE YOUR AD HERE AT LOWEST PRICE

  • ಸಿಬ್ಬಂದಿಗಳ ಸಂಬಂಧ ಸುಧಾರಣೆಗೆ ಚಾರಣ- ಬೆಂಗಳೂರು ಉತ್ತರ ವಿವಿಯ ಪ್ರಯೋಗ
    ಕಚೇರಿ ಕೆಲಸದ ಒತ್ತಡದ ನಡುವೆ ಏಕಾಗ್ರತೆ ಮರುಸ್ಥಾಪಿಸುವ ಯತ್ನ-ಡಾ.ನಿರಂಜನ ವಾನಳ್ಳಿ

ವಿಶ್ವವಿದ್ಯಾಲಯದಂತಹ ಸಂಸ್ಥೆಯಲ್ಲಿ ಕೆಲಸಗಾರರು ಕ್ಷೇಮವಾಗಿ, ಮನಸ್ಸು ಉಲ್ಲಸಿತವಾಗಿ ಇರಲಿಕ್ಕೆ ಕೆಲಸದ ಆಚೆಗಿನ ಚಟುವಟಿಕೆಗಳೂ ಮುಖ್ಯವಾಗಿದ್ದು, ಪ್ರತಿನಿತ್ಯದ ಕೆಲಸದ ಒತ್ತಡ ಹೋಗಲಾಡಿಸಿ ಕರ್ತವ್ಯ ನಿರ್ವಹಣೆಯಲ್ಲಿ ಏಕಾಗ್ರತೆ ಮರುಸ್ಥಾಪಿಸಲು ಚಾರಣ ಸಹಕಾರಿಯಾಗಿದೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ನಿರಂಜನ ವಾನಳ್ಳಿ ತಿಳಿಸಿದರು.

ಈ ಏಕತಾನತೆಯನ್ನು ಹೋಗಲಾಡಿಸುವ ಸಲುವಾಗಿ ಹಾಗೂ ಕೋಲಾರದಲ್ಲಿನ ವಿವಿಯ ನೌಕರರಲ್ಲಿ ಒಂದು ಸಂಸ್ಥೆಗೆ ಸೇರಿದ ಭಾವನೆಯನ್ನು ಉದ್ದೀಪನಗೊಳಿಸುವ ಸಲುವಾಗಿ ಇತ್ತೀಚೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದ ಸನಿಹವಿರುವ ಮಂಗಸಂದ್ರ ಬೆಟ್ಟಕ್ಕೆ ಚಾರಣ ಏರ್ಪಡಿಸಿದ್ದ ಸಂದರ್ಭದಲ್ಲಿ ಸಿಬ್ಬಂದಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕೋಲಾರದ ಸುತ್ತ ಮುತ್ತ ಶತಶೃಂಗ ಪರ್ವತಗಳಿದ್ದಾವೆ. ಅಂದರೆ ಬೃಹದಾಕಾರದ ಬಂಡೆಗಳಿಂದ ಕೂಡಿರುವ ನೂರಾರು ಬೆಟ್ಟಗಳು. ಇವು ಯಾವ ಯುಗದಲ್ಲಿ ನಿರ್ಮಾಣಗೊಂಡವೋ! ಪ್ರಕೃತಿಯ ಮಹತ್ತನ್ನು ಸಾರುತ್ತ ಎಲ್ಲ ಕಾಲಗಳಲ್ಲೂ ಕೋಲಾರವನ್ನು ಸುತ್ತುವರಿದು ನಿಂತಿರುವುದು ಅವುಗಳ ವಿಶೇಷ ಎಂದು ತಿಳಿಸಿದರು.

ಈ ಶತಶೃಂಗ ಪರ್ವತಗಳ ಸಾಲಿನಲ್ಲಿರುವ ಈ ಮಂಗಸಂದ್ರ ಬೆಟ್ಟವು ಕೋಲಾರ ನಗರದಿಂದ ಆರೇಳು ಕಿಲೋಮೀಟರ್ ದೂರದಲ್ಲಿದೆ. ನೋಡಲು ಅತಿಕಡಿದಾಗಿಯೇನೂ ಕಾಣದು. ಆದರೆ ಬೃಹತ್ತಾದ ಬಂಡೆಗಳಿಂದ ಚಾರಣಿಗರನ್ನು ಕೈಬೀಸಿ ಕರೆಯುವಂತಿದ್ದು, ಇದನ್ನು ನೋಡಿ ಈ ಚಾರಣಕ್ಕೆ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.

೬೦ ಮಂದಿ ಸಿಬ್ಬಂದಿ
ಮುಂಜಾನೆಯೇ ಚಾರಣ
ಬೆಂಗಳೂರು ಉತ್ತರ ವಿವಿಗೆ ಸೇರಿದ ೬೦ಕ್ಕೂ ಹೆಚ್ಚು ಜನ ಸಿಬ್ಬಂದಿ ಬೆಳಿಗ್ಗೆ ಸೂರ್ಯ ಉದಯಿಸುವ ವೇಳೆಗಾಗಲೇ ಬೆಟ್ಟದ ಕೆಳಗೆ ಬಂದು ಸೇರಿದ್ದರು. ಇಷ್ಟು ವರ್ಷಗಳಿಂದ ಇಲ್ಲೇ ಓಡಾಡಿಕೊಂಡಿದ್ದರೂ ಈ ಬೆಟ್ಟವನ್ನು ಹತ್ತಿರಲಿಲ್ಲವಲ್ಲ ಎಂಬ ಆಶ್ಚರ್ಯದ ನಡುವೆ ಇವತ್ತು ಅದಕ್ಕೆ ಕಾಲ ಕೂಡಿಬಂದಿತ್ತು. ಕೆಲವರು ಕೋಲು, ಕುಡುಗೋಲು, ಮಚ್ಚುಗಳನ್ನು ಹಿಡಿದು ಆಕಸ್ಮಿಕವಾಗಿ ಎದುರಾಗಬಹುದಾದ ಪ್ರಾಣಿಗಳನ್ನು ಎದುರಿಸಲು ಸಿದ್ಧರಾಗಿ ಬಂದಿದ್ದೀರಿ ನಿಜಕ್ಕೂ ಸಿಬ್ಬಂದಿಯಲ್ಲಿನ ಉತ್ಸಾಹ ಖುಷಿ ತರುವಂತದ್ದು ಎಂದರು.

ಚಾರಣದ ಅನುಭವ
ಹಂಚಿಕೊಂಡ ಕುಲಪತಿ
ಬೆಳಿಗ್ಗೆ ಏಳಕ್ಕೆ ನಾವು ಘಟ್ಟ ಹತ್ತ ತೊಡಗಿದೆವು. ಯಾರೋ ಕಿಡಿಗೇಡಿಗಳು ಬೀಡಿಸೇದಿ ಎಸೆದು ಇತ್ತೀಚೆಗೆ ಬೆಟ್ಟದ ಮೇಲಿನ ಹುಲ್ಲು ಬೆಂಕಿಗೆ ಆಹುತಿಯಾಗಿದ್ದರಿಂದ ಬೆಟ್ಟ ಹತ್ತುವುದು ಕಷ್ಟವಿರಲಿಲ್ಲ. ಆದರೆ ನಿಗದಿತ ರಸ್ತೆಯೇನೂ ಇಲ್ಲ, ಗಿಡಗಂಟಿಗಳನ್ನು ಸರಿಸಿಕೊಂಡು ರಸ್ತೆಮಾಡಿಕೊಳ್ಳುತ್ತ, ಬಂಡೆಗಳನ್ನು ಏರಿ ಇಳಿಯುತ್ತಾ ಸಾಗಿದೆವು.
ಇದು ಕೋಲಾರದ ಕುರುಚಲು ಕಾಡು. ಮಧ್ಯಮಧ್ಯೆ ಕ್ಯಾಕ್ಟಸ್ ಗಿಡಗಳು ಮರಗಳೇ ಆಗಿವೆ. ಬಂಡೆಯೊಂದರ ಅಡಿಯಿಂದ ತಣ್ಣನೆ ನೀರೊಂದು ಒಸರುತ್ತಿದೆ. ಇದು ವರ್ಷಾವಧಿ ಹೀಗೇ ಇರುವುದಾಗಿ ಸ್ಥಳೀಯರೊಬ್ಬರು ಹೇಳಿದರು. ಗುಂಪಿನಲ್ಲಿ ಒಬ್ಬರಿಗೊಬ್ಬರು ಕೈಹಿಡಿದು ಮೇಲಕ್ಕೇರುತ್ತಾ ಒಂದು ಘಂಟೆಯಲ್ಲಿ ಬೆಟ್ಟದ ತುದಿ ತಲುಪಿದೆವು. ಅಲ್ಲಿ ಹಿಂದೆ ಬಂದವರು ಕನ್ನಡ ಬಾವುಟ ಹಾರಿಸಿದ್ದಾರೆ. ಅದರ ಜೊತೆ ನಾವೂ ಬೆಂಗಳೂರು ಉತ್ತರ ವಿವಿಯ ಧ್ವಜ ಹಾರಿಸಿ ಸಂಭ್ರಮಿಸಿದೆವು. ಸ್ವಲ್ಪ ಹೊತ್ತು ಬೀಸುವ ತಂಗಾಳಿಗೆ ಮೈಯೊಡ್ಡಿ ಕುಳಿತೆವು. ದೂರದೂರದವರೆಗೆ ಸುತ್ತಲೂ ಕಾಣುವ ದೃಶ್ಯ ಅಮೋಘವಾಗಿತ್ತು. ಅವುಗಳನ್ನು ಕಣ್ಣಲ್ಲೂ ಮೊಬೈಲಿನಲ್ಲೂ ತುಂಬಿಕೊಂಡು ನಿಧಾನ ಕೆಳಗಿಳಿಯತೊಡಗಿದೆವು ಎಂದು ತಿಳಿಸಿದರು.
ಬೆಟ್ಟದ ಬುಡಕ್ಕೆ ಬಂದಾಗ ಅಲ್ಲೊಂದು ವಿಶಾಲವಾಗಿ ಹಬ್ಬಿರುವ ಆಲದ ಮರ. ಅದರಡಿಗೆ ನಮಗಾಗಿ ಬಿಸಿ ಬಿಸಿ ತಿಂಡಿಗಳು ಸಿದ್ಧವಾಗಿದ್ದವು. ಅಧಿಕಾರಿಗಳು, ಸಿಬ್ಬಂದಿಗಳು ಎಲ್ಲರೂ ಒಟ್ಟಾಗಿ ಕುಳಿತು ತಿಂಡಿ ತಿಂದು ಆಗಾಗ ಇಂತಹ ಚಾರಣಗಳನ್ನು ಮಾಡೋಣ ಎಂಬ ನಿರ್ಣಯ ಕೈಗೊಂಡಿದ್ದಾಗಿ ತಿಳಿಸಿದರು.

ನಿಜಕ್ಕೂ ಚಾರಣದಂಥ ಹೊರಾಂಗಣ ಕಾರ್ಯಕ್ರಮಗಳು ಸಿಬ್ಬಂದಿಗಳ ಮಧ್ಯೆ ಸಕಾರಾತ್ಮಕ ಸಂಬಂಧ ಬೆಸೆಯಲು ಸಹಕಾರಿ. ದೈನಂದಿನ ಕೆಲಸದ ಏಕತಾನತೆಯನ್ನು ಮುರಿಯಲು ಮಾದರಿ. ಸಂಘಸಂಸ್ಥೆಗಳೊಳಗಿನ ವಾತಾವರಣ ಸೌಹಾರ್ದವಾಗಿರಲು ಉಪಕಾರಿ ಎಂದು ನಿರಂಜನ ವಾನಳ್ಳಿ ತಿಳಿಸಿದರು.

ಸುದ್ದಿ ಓದಿ ಹಂಚಿ: 

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!