• Fri. Mar 29th, 2024

ಕೋಲಾರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ ಹೈಕಮಾಂಡ್ – ಎಂಎಲ್ಸಿ. ಅನಿಲ್‌ ಕುಮಾರ್

PLACE YOUR AD HERE AT LOWEST PRICE

ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಪರ್ಧೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿರುವುದಾಗಿ ತಿಳಿದುಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್‌ಕುಮಾರ್ ತಿಳಿಸಿದರು.

ಮಂಗಳವಾರ ಇಲ್ಲಿನ ಖಾಸಗೀ ಹೋಟೆಲ್‌ವೊಂದರಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ತಮ್ಮ ಹುಟ್ಟುಹಬ್ಬ ದಿನಾಚರಣೆ ಕಾರ್ಯಕ್ರಮದ ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು.

ಕೋಲಾರದಲ್ಲಿ ಸಿದ್ಧರಾಮಯ್ಯ ಅವರ ಸ್ಪರ್ಧೆ ಖಚಿತವಾಗಿದೆ, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ. ಸಿದ್ದರಾಮಯ್ಯ ನವರು ಈಗಾಗಲೇ ತಮ್ಮ ಸ್ಪರ್ಧೆ ಕೋಲಾರದಿಂದಲೇ ಎಂದು ಹೇಳಿದ್ದಾರೆ ಅದಕ್ಕೆ ಹೈಕಮಾಂಡ್ ಸಹ ಗ್ರೀನ್ ಸಿಗ್ನಲ್ ನೀಡಿದೆ. ಕ್ಷೇತ್ರದಲ್ಲಿ ಅವರ ಪ್ರವಾಸ ಮಿತವಾಗಿದ್ದರೂ ಸಹ ಅವರು ಕೋಲಾರಕ್ಕೆ ಬರುತ್ತಿರುವುದನ್ನು ಜನ ಬಹಳ ಸಂತೋಷದಿಂದ ಸ್ವಾಗತ ಮಾಡುತ್ತಿದ್ದಾರೆ, ಅಭಿಮಾನಿಗಳು ಅವರ ಗೆಲುವಿಗಾಗಿ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ, ಅವರ ಆಗಮನ ಬಹಳ ದೊಡ್ಡ ಮಟ್ಟದ ಪರಿವರ್ತನೆಯನ್ನು ತರುತ್ತಿದೆ ಎಂದರು.

ಸಿದ್ಧರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದು, ರಾಜ್ಯಾಧ್ಯಂತ ಪ್ರವಾಸ ಮಾಡಲಿದ್ದಾರೆ. ಕ್ಷೇತ್ರದಲ್ಲಿ ಪ್ರಚಾರಕ್ಕೆ ವಾರಕ್ಕೊಂದು ದಿನವಾದ್ರೂ ಸಿಕ್ಕೇ ಸಿಗುತ್ತಾರೆ. ಇಲ್ಲಿಯವರೆಗೆ ಸಿದ್ಧರಾಮಯ್ಯನವರು ೪ ಬಾರಿ ಕ್ಷೇತ್ರದಲ್ಲಿ ಸಂಚರಿಸಿದ್ದಾರೆ. ಜನವರಿ ೨೩ರಂದು ಕೋಲಾರದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಇದೀಗ ಫೆ.೧೩ರಂದು ವೇಮಗಲ್‌ನಲ್ಲಿ ಸ್ತ್ರಿಶಕ್ತಿ ಸ್ವಸಹಾಯ ಸಂಘಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ವೇಮಗಲ್‌ನಲ್ಲಿ ನಡೆಯುವ ಸಮಾವೇಶದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಈಗಾಗಲೇ ಪ್ರತಿಭೂತ್‌ಗೆ ಹೋಗಿ ಎಲ್ಲಾ ಸಮುದಾಯಗಳನ್ನು ಒಳಗೊಂಡ0ತೆ ಸುಮಾರು ೧೦೦-೧೫೦ ಜನರ ಬೂತ್ ಸಮಿತಿಗಳನ್ನು ರಚಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಬೂತ್‌ಗಳಲ್ಲಿ ಅಭೂತಪೂರ್ವವಾದ ಬೆಂಬಲ ವ್ಯಕ್ತವಾಗುತ್ತಿದ್ದು ಫೆ.೧೩ರ ಕಾರ್ಯಕ್ರಮ ಕ್ಷೇತ್ರದ ಮತದಾರರಿಗೆ ಸಿದ್ಧರಾಮಯ್ಯನವರ ಮೇಲಿರುವ ಅಭಿಮಾನವನ್ನು ಪ್ರಕಟಪಡಿಸಲಿದೆ ಎಂದರು.

ಫೆ.೧೩ರ ಸಂಜೆ ಕೋಲಾರದ ಹೊರವಲಯದಲ್ಲಿರುವ ನಂದಿನಿ ಪ್ಯಾಲೇಸ್‌ನಲ್ಲಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಬೃಹತ್ ಸೇರ್ಪಡೆ ಕಾರ್ಯಕ್ರಮವೂ ಇದ್ದು, ಕ್ಷೇತ್ರದ ಎಲ್ಲಾ ಕಾಂಗ್ರೆಸ್‌ನ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ.

ಇವರೊಂದಿಗೆ ಹಿರಿಯರಾದ ರಮೇಶ್ ಕುಮಾರ್, ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ನಜೀರ್ ಅಹ್ಮದ್, ಸೇರಿದಂತೆ ಹಲವರು ಕ್ಷೇತ್ರದಲ್ಲಿ ಸಿದ್ಧರಾಮಯ್ಯನವರಿಗಾಗಿ ಕೆಲಸ ಮಾಡಲಿದ್ದಾರೆ ಎಂದರು.

ರಮೇಶ್ ಕುಮಾರ್ ಅವರಿಗೆ ಇದು ಹನ್ನೊಂದನೇಯ ಚುನಾವಣೆ, ಅವರಿಗೆ ಅವರ ಕ್ಷೇತ್ರದಲ್ಲಿ ಚುನಾವಣೆ ನಡೆಸಲು ಚೆನ್ನಾಗಿ ಗೊತ್ತಿದೆ. ಅವರ ಕ್ಷೇತ್ರವನ್ನೂ ನೋಡಿಕೊಂಡು ಕೋಲಾರ ಕ್ಷೇತ್ರದಲ್ಲೂ ವಿರೋಧ ಪಕ್ಷದ ನಾಯಕರಿಗಾಗಿ ಮತದಾರರನ್ನು ಸಂಘಟಿಸಲಿದ್ದಾರೆ. ಅದೇ ರೀತಿ ನಜೀರ್ ಅಹ್ಮದ್, ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ ಅವರವರ ಕ್ಷೇತ್ರಗಳ ಜೊತೆಗೆ ಕೋಲಾರ ಕ್ಷೇತ್ರದಲ್ಲೂ ಸಿದ್ಧರಾಮಯ್ಯನವರ ಪರವಾಗಿ ಕೆಲಸ ಮಾಡಲಿದ್ದು, ಯಾವುದೇ ಒತ್ತಡವಿಲ್ಲದೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಒತ್ತಡವಿಲ್ಲದೆ ಕೆಲಸ ಮಾಡಲಿದ್ದಾರೆ ಎಂದರು.

ಸಿದ್ಧರಾಮಯ್ಯನವರ ಆಡಳಿತ ಅವಧಿಯಲ್ಲಿ ಜಿಲ್ಲೆಗೆ ನೀಡಿದ ಜನಪರ ಕೆಲಸಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಹಾಗೂ ಮುಂದೆ ಸರ್ಕಾರ ರಚನೆಯಾದರೆ ೨೦೦ ಯೂನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳೆಗೆ ತಿಂಗಳಿಗೆ ೨೦೦೦ ಧನ ಸಹಾಯ, ಪಡಿತರ ಅಕ್ಕಿ ಪ್ರತಿ ವ್ಯಕ್ತಿಗೆ ೫ ರಿಂದ ೧೦ ಕೆಜಿ ಉಚಿತ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ೧೦ ಲಕ್ಷ ರೂ. ಬಡ್ಡಿರಹಿತ ಸಾಲ, ರೈತರಿಗೆ ೫ ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವ ಭರವಸೆಗಳನ್ನು ಈಡೇರಿಸಲಾಗುವುದು.ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಚಂಜಿಮಲೆ ರಮೇಶ್, ನಂದಿನಿ ಪ್ರವೀಣ್, ಸೀಸಂದ್ರ ಗೋಪಾಲ್, ವಕ್ಕಲೇರಿ ಗ್ರಾಮಪಂಚಾಯ್ತಿ ಅಧ್ಯಕ್ಷ ಮೈಲಂಡಹಳ್ಳಿ ಮುರಳಿ, ನವೀನ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!