• Fri. Apr 19th, 2024

ಸಿದ್ದರಾಮಯ್ಯ ಅವರನ್ನು ‘ಶವ’ಕ್ಕೆ ಹೋಲಿಸಿದ ಸಿ.ಟಿ.ರವಿ – ಸಿದ್ದುಗೆ ಯಾರ ಮೇಲೂ ಪ್ರೀತಿ ಇಲ್ಲ, ಅವರಿಗೆ ಇರೋದು ಸೋಲಿನ ಬೀತಿ

PLACE YOUR AD HERE AT LOWEST PRICE

ಹಿಂದು ಎಂಬುದು ದೇಹ, ಹಿಂದುತ್ವ ಅದರ ಜೀವ. `ನಾನು ಹಿಂದೂ ಆದರೆ ಹಿಂದುತ್ವಕ್ಕೆ ವಿರೋದಿ’  ಎನ್ನುವ ಸಿದ್ದರಾಮಯ್ಯ ಜೀವವಿಲ್ಲದ ‘ಶವ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೋಲಿಸಿದ್ದಾರೆ.

ಕೋಲಾರದ ಬೈರೇಗೌಡನಗರ ಮೈದಾನದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಬೃಹತ್ ಎಸ್ಸಿ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಬಿಜೆಪಿ ದೇಶ ಮೊದಲು ಎನ್ನುವ ತತ್ವದಡಿ ರಾಜಕೀಯ ಮಾಡುತ್ತದೆ ಆದರೆ, ಕಾಂಗ್ರೆಸ್ ಜಾತಿ ಆಧಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ ಬೇರೆ. ಹಿಂದೂತ್ವವೇ ಬೇರೆ ಎಂದಿದ್ದಾರೆ ಅವರಿಗೆ ಗೊತ್ತಿರಬೇಕು ದೇಹ ಹಿಂದೂವಾದರೆ ಜೀವ ಹಿಂದೂತ್ವವಾಗಿರುತ್ತದೆ ದೇಹ ಇದ್ದು ಜೀವ ಇಲ್ಲದ ಶವವಾಗಿದ್ದಾರೆ ಎಂದು ಕುಟುಕಿದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಯಾವತ್ತೂ ಕೂಡ ಜಾತಿ ಧರ್ಮ ನೋಡಿ ಯೋಜನೆಗಳನ್ನು ರೂಪಿಸಲಿಲ್ಲ, ಜಾತಿ ಕೇಳಿಕೊಂಡು ಕೋವಿಡ್ ಲಸಿಕೆ ನೀಡಿಲ್ಲ, ಆದರೆ ಶಾದಿ ಭಾಗ್ಯವನ್ನು ಜಾರಿ ಮಾಡಿದ್ದು ಒಂದು ಧರ್ಮಕ್ಕೆ ಅನ್ನೋದು ಕಾಂಗ್ರೆಸ್‌ಗೆ ಗೊತ್ತಿಲ್ಲವೇ ಎಂದ ಅವರು, ಬಡವರು ಎಲ್ಲಾ ಧರ್ಮಗಳಲ್ಲಿ, ಜಾತಿಗಳಲ್ಲಿ ಇದ್ದಾರೆ, ಆದರೆ ಒಂದು ಕೋಮಿಗೆ ಸೀಮಿತವಾಗಿ ಶಾದಿಭಾಗ್ಯ ಮಾಡಿದ್ದಾರೆ, ಮಕ್ಕಳ ಪ್ರವಾಸ ಭಾಗ್ಯ ಎಂದು ಕೆಲವು ಜಾತಿ ಮಕ್ಕಳಿಗೆ ಸೀಮಿತಗೊಳಿಸಿ ಮಕ್ಕಳಲ್ಲಿ ಜಾತಿ ಬೇದವೆಂದು ವಿಷ ಬೀಜವನ್ನು ಬಿತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಈ ಮೊದಲು ಯಾರೇ ಕೆಪಿಸಿಸಿ ಅಧ್ಯಕ್ಷರಾದರೂ ಅವರೇ ಮುಖ್ಯಮಂತ್ರಿ ಆಗುವುದು ಕಾಂಗ್ರೆಸ್ ಪಕ್ಷದ ವಾಡಿಕೆ ಆಗಿತ್ತು. ಆದರೆ ಡಾ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಬಹುಮತ ಬಂತು ಆದರೆ, ಅವರನ್ನು ಗೆಲ್ಲದಂತೆ ಸಿದ್ದರಾಮಯ್ಯ ಪಿತೂರಿ ಮಾಡಿ ಸೋಲಿಸಿದರು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೂ ವಲಸೆ, ಈಗ ಕೋಲಾರ ಕ್ಷೇತ್ರಕ್ಕೂ ವಲಸೆ ಬಂದಿದ್ದಾರೆ, ತನ್ನ ತವರೂರಿನಲ್ಲಿ ಗೆಲ್ಲಲು ಆಗದ ಇವರು, ಕೋಲಾರದಲ್ಲಿ ಗೆಲ್ಲಲು ಸಾಧ್ಯವೇ? ಅವರು ಸೋಲುವ ಭಯದಿಂದ ಇಲ್ಲಿಗೆ ಬಂದಿದ್ದಾರೆ ಇಲ್ಲಿ ಪರಿವರ್ತನೆ ಆಗುತ್ತಿದೆ ಸಂಸದ ಮುನಿಸ್ವಾಮಿ ಅವರನ್ನು ಎಷ್ಟು ಬಹುಮತದಿಂದ ಗೆಲ್ಲಿಸಿದ್ದೀರೋ ಅಷ್ಟೇ ಬಹುಮತದಲ್ಲಿ ಕೋಲಾರದ ಆರೂ ಬಿಜೆಪಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದರು.

ಭಾರತರತ್ನ ಪ್ರಶಸ್ತಿ ನೀಡುವಲ್ಲಿ ೧೯೯೦ರವರೆಗೂ ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಅವರಿಗೆ ನೆನಪಾಗಲೇ ಇಲ್ಲ, ತಮ್ಮದೇ ಪಕ್ಷದ ಜವಾಹರಲಾಲ್ ನೆಹರುಗೆ ಕೊಟ್ಟಾಗಲು ಅಂಬೇಡ್ಕರ್ ನೆನಪಾಗಿಲ್ಲ, ಆದರೆ, ವಿ.ಪಿ.ಸಿಂಗ್ ಸರ್ಕಾರ ಇದ್ದಾಗ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ಸೂಚಿಸಿದ ನಂತರ ವಿ.ಪಿ.ಸಿಂಗ್ ಸರ್ಕಾರ ಅಂಬೇಡ್ಕರ್‌ಗೆ ಪ್ರಶಸ್ತಿ ಘೋಷಣೆ ಮಾಡಿತು. ದಲಿತ ಮತದಾರರು ಅಂಬೇಡ್ಕರ್ ವಿಚಾರವನ್ನು ನೆನಪಿಟ್ಟುಕೊಳ್ಳಬೇಕು, ಅಂಬೇಡ್ಕರ್ ಕಾಂಗ್ರೆಸ್ ‘ಉರಿಯುವ ಮನೆ’ ಇದ್ದಂತೆ ಅ ಮನೆಗೆ ಹೋದರೆ ಸುಟ್ಟು ಹೋಗತ್ತೀರ ಎಂಬ ಮಾತು ಹೇಳಿದ್ದರು ಅದು ನಿಜ ಎಂದರು.

ಸಿದ್ದರಾಮಯ್ಯ ಇವತ್ತು ಕೋಲಾರ ಕ್ಷೇತ್ರಕ್ಕೆ ಬಂದಿದ್ದಾರೆ ಉಚಿತ ವಿದ್ಯುತ್ ಆಶ್ವಾಸನೆ ಕೊಡುತ್ತಿದ್ದಾರೆ ಅಧಿಕಾರದಲ್ಲಿ ಇದ್ದಾಗ ಏಕೆ ಕೊಡಲಿಲ್ಲ ಎಂದು ಪ್ರಶ್ನೆ ಮಾಡಬೇಕೆಂದರು, ಜೊತೆಗೆ ಸಂಸದರನ್ನು ಗೆಲ್ಲಿಸಲು ಕೆಲವರು ಕಾಂಗ್ರೆಸ್ ನಾಯಕರೂ ಇದ್ದರು, ಕಾಂಗ್ರೆಸ್ ಮಾಡಿರುವ ಅನ್ಯಾಯಕ್ಕೆ ಇವತ್ತು ಬಡ್ಡಿ ಸಮೇತ ತೀರಿಸಬೇಕು ಎಂದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲ ಕಾಂಗ್ರೆಸ್ ನಾಯಕರೂ ಬಿಜೆಪಿ ಗೆಲುವಿಗೆ ಸಹಾಯ ಮಾಡಿದರು, ಅದು ಮುನಿಸ್ವಾಮಿ ಅವರಿಗೂ ಗೊತ್ತು ಎಂದರು.

ಸ0ಸದ ಎಸ್. ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಬಡವರ ಪರವಾಗಿ ಯಾವತ್ತೂ ಕೆಲಸ ಮಾಡಿಲ್ಲ ಅವರು ಬರೀ ಸುಳ್ಳುರಾಮಯ್ಯ ಆಗಿದ್ದಾರೆ, ರಮೇಶ್ ಕುಮಾರ್ ಆಗಾಗ ಸತ್ಯವನ್ನು ಮಾತಾಡುತ್ತಾರೆ. ಅವರು ವಿಧಾನಸಭೆ ಸದನದ ಚರ್ಚೆಯೊಂದರಲ್ಲಿ ಮಾತನಾಡುವಾಗ `ಅಂಬೇಡ್ಕರ್ ಅವರನ್ನು ಸೋಲಿಸಿದ್ದೂ ನಾವೇ, ಅವರನ್ನು ಮತ್ತೆ ಸಂಸತ್ತಿಗೆ ಆಯ್ಕೆ ಆಗದಂತೆ ನೊಡಿಕೊಂಡವರೂ ನಾವೇ’ ಅದೇ ರೀತಿ ಮೂರು ತಲೆಮಾರಿಗಾಗುವಷ್ಟು ಹಣ ಮಾಡಿಕೊಂಡು ಕೊಳ್ಳೆ ಹೊಡೆದಿರುವುದನ್ನೂ ಅವರೇ ಒಪ್ಪಿಕೊಂಡಿದ್ದಾರೆ.

ಮಾಲೂರು ಶಾಸಕ ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಜೊತೆಗೆ ಇನ್ನೊಬ್ಬ ಸೂಪರ್ ಎಂಎಲ್‌ಎ ಇಷ್ಟೆಲ್ಲಾ ಇದ್ದರೂ, ಸಿದ್ದರಾಮಯ್ಯ ಬನ್ನಿ ನಿಮ್ಮನ್ನು ಸೋಲಿಸಲು ನಾವು ಸಿದ್ದ, ನಿಮ್ಮ ಸೋಲು ಖಚಿತ ಎಂದರು. ದಲಿತರೇನು ಕಾಂಗ್ರೆಸ್ಸಿನ ಆಸ್ತಿಯಲ್ಲ ಅವರು ಸ್ವಾಭಿಮಾನಿಗಳು ಎಂದ ಸಂಸದರು, ದಲಿತರ ಪರವೆಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ೬೦ ವರ್ಷ ಆಳ್ವಿಕೆ ಮಾಡಿದೆ, ಆ ಪಕ್ಷದ ಮಾಜಿ ಪ್ರಧಾನಿಗಳು ಮೃತಪಟ್ಟಾಗ ದೆಹಲಿಯಲ್ಲಿ ಎಕರೆಗಟ್ಟಲೇ ಜಾಗ ಕೊಟ್ಟ ಕಾಂಗ್ರೆಸ್ಸಿಗರು ಈ ರಾಷ್ಟçಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರು ವಿಧಿವಶರಾದಾಗ ಅವರ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಮೂರಕ್ಕೆ ಆರು ಅಡಿ ಜಾಗ ನೀಡಲಿಲ್ಲ ಈ ಸತ್ಯವನ್ನು ದಲಿತರು ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ಇಡೀ ರಾಜ್ಯದಲ್ಲಿ ಗಮನ ಸೆಳೆಯುವ ಕ್ಷೇತ್ರ ಕೋಲಾರ ವಿಧಾನಸಭಾ ಕ್ಷೇತ್ರ. ಈ ಬಾರಿ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೇಕು. ಜಿಲ್ಲೆಯ  ಜನ ಸೇರಿ, ನಾವು ಅಂಗವಿಕಲರಾಗಿದ್ದೇವೆ, ನೀವು ಬಂದರೆ ನಮಗೂ ಊರುಗೋಲಾಗುತ್ತೀರಿ ಅಂತ ಸಿದ್ದರಾಮಯ್ಯನವರನ್ನು ಕರೆದುಕೊಂಡು ಬಂದಿದ್ದಾರೆ. ಆದರೆ, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ೩೦ ಸಾವಿರ ಮತಗಳಿಂದ ಸೋತಿದ್ದರೂ, ಈ ಬಾರಿ ಕೋಲಾರದಲ್ಲಿ ೪೦ ಸಾವಿರ ಮತಗಳಿಂದ ಸೋಲುತ್ತಾರೆ. ಅವರು, ತಮ್ಮ ಕೊನೆಯ ಚುನಾವಣೆಯನ್ನು ಎಲ್ಲಿ ಸೋತರೋ ಅಲ್ಲೇ ಗೆದ್ದು ತೋರಿಸುವುದು ಉತ್ತಮ, ಅನ್ಯಾಯವಾಗಿ ಅವರನ್ನು ಇಲ್ಲಿನ ಕೆಲವರು ಬಲಿ ಕೊಡ್ತಿದ್ದಾರೆ ಎಂದರು.

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮೂಲಕ ಬಡವರಿಗೆ ಬಡ್ಡಿರಹಿತ ಸಾಲಕ್ಕೆ ಹಣ ನೀಡುತ್ತಿರುವುದು ಬಿಜೆಪಿ ಸರ್ಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣವನ್ನು ತಂದು ತಮ್ಮ ಅಪ್ಪನ ಮನೆಯ ಪಿತ್ರಾರ್ಜಿತ ಆಸ್ತಿಯಂತೆ ಮೇಜಿನ ಮೇಲಿಟ್ಟು ಹಂಚುತ್ತಿದ್ದಾರೆ. ಅಗತ್ಯವಿದ್ದರೆ ಅವರಪ್ಪನ ದುಡ್ಡು ಕೊಡಲಿ. ಆದರೆ, ಸರ್ಕಾರದ ದುಡ್ಡನ್ನು ಏಕೆ ತಮ್ಮ ಹಣದಂತೆ ಹಂಚುತ್ತಿದ್ದಾರೆ? ಇಂತಹ ಪಾಪಿಗಳನ್ನು ಜಿಲ್ಲೆಯಿಂದ ಓಡಿಸದೇ ಹೋದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಮಂಜುನಾಥ್‌ಗೌಡ, ಎಂ.ನಾರಾಯಣಸ್ವಾಮಿ, ಬಿ.ಪಿ ವೆಂಕಟಮುನಿಯಪ್ಪ, ವೈ.ಸಂಪ0ಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಅಂಬರೀಷ್, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಹನುಮಂತಪ್ಪ, ಕೆ.ಚಂದ್ರಾರೆಡ್ಡಿ, ಪ್ರವೀಣ್‌ಗೌಡ, ರಾಮಚಂದ್ರೇಗೌಡ, ಹನುಮಂತು, ಗಾಂಧಿನಗರ ವೆಂಕಟೇಶ್, ಕೆಂಬೋಡಿನಾರಾಯಣಸ್ವಾಮಿ ಮುಂತಾದವರು ಇದ್ದರು.

 

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!