• Thu. Apr 18th, 2024

PLACE YOUR AD HERE AT LOWEST PRICE

ಕೆಜಿಎಫ್:ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವಿಲ್ಲ, ಈ ಸರ್ಕಾರ ಅತಿ ಹೆಚ್ಚಿನ  ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹಣ ಎಲ್ಲಿ ಸಿಗುತ್ತದೆ ಎಂದು ಎದುರು ನೋಡುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅಭಿವೃದ್ಧಿ ಮಾಡಲು ಪುರಸೊತ್ತೆಲ್ಲಿದೆ? ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಪ್ರಶ್ನಿಸಿದರು.

ತಾಲ್ಲೂಕಿನ ಪ್ರಸಿದ್ಧ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರ ಬಜೆಟ್‍ನ್ನು ಕೇವಲ ಘೋಷಣೆ ಮಾಡಿದ್ದಾರೆ, ಆದರೆ ವಾಸ್ತವವಾಗಿ ಕೆಲಸವನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಾಡಬೇಕಾಗುತ್ತದೆ. ಇನ್ನು ಮೂರು ತಿಂಗಳು ಕಾಯಿರಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಎಲ್ಲವನ್ನೂ ನಾವೇ ಮಾಡುತ್ತೇವೆ ಎಂದರು.

22 ವರ್ಷಗಳ ಕಾಲ ಸಂಸದರಾಗಿದ್ದರೂ ಕೆಜಿಎಫ್ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ, ತಮ್ಮ ಪ್ರಯತ್ನದಿಂದ ಮಾರಿಕುಪ್ಪಂ-ಕುಪ್ಪಂ ನಡುವಿನ ರೈಲ್ವೆ ಮಾರ್ಗ ನಿರ್ಮಾಣಕ್ಕೆ 200 ಕೋಟಿ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿದ್ದು, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮೊದಲೇ ಈ ಯೋಜನೆಗೆ 270 ಕೋಟಿ ರೂಗಳನ್ನು ಮೀಸಲಿರಿಸಿದ್ದು, ಈಗ ಅದನ್ನು ಕೈಗೆತ್ತಿಕೊಳ್ಳಲಾಗಿದೆಯೇ ಹೊರತೂ ಇದು ಹೊಸ ಯೋಜನೆಯೇನಲ್ಲ ಎಂದರು.

ಮಾರಿಕುಪ್ಪಂ-ಕುಪ್ಪಂ ನಡುವಿನ ರೈಲ್ವೆ ಮಾರ್ಗ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಾಲ್ಕು ವರ್ಷಗಳ ಕಾಲ ಬೇಕಾಯಿತೇ ಎಂದು ಪ್ರಶ್ನಿಸಿದ ಅವರು, ರೈಲ್ವೆ ಸಚಿವನಾಗಿದ್ದಾಗ ನಾನೇ ದುಡ್ಡನ್ನು ಕೊಟ್ಟಿದ್ದೇನೆ, ಅಕೌಂಟ್‍ನ್ನು ನೋಡಿಕೊಳ್ಳಲಿ, ಪೆನ್ ಬುಕ್‍ನಲ್ಲಿ ನೋಡಿಕೊಳ್ಳಲಿ ಎಲ್ಲ ಕಡೆಯೂ ಗೊತ್ತಾಗುತ್ತದೆ ಇದು ಇವತ್ತಿನ ಹೊಸ ಯೋಜನೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಯೋಜನೆಯನ್ನು ಈ ಮೊದಲೇ ಬಜೆಟ್‍ನಲ್ಲೂ ಸೇರಿಸಿ ದುಡ್ಡನ್ನೂ ಸಹ ಹೊಂದಾಣಿಕೆ ಮಾಡಲಾಗಿತ್ತು ಎಂದರು.

ಮಾರಿಕುಪ್ಪಂ-ಕುಪ್ಪಂ ನಡುವಿನ ರೈಲ್ವೆ ಮಾರ್ಗ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡು ನಿಲ್ಲಿಸಿರುವಂತಹ ಯೋಜನೆಯಾಗಿದ್ದು, ಇಷ್ಟು ದಿನಗಳ ಕಾಲ ಸ್ಥಗಿತಗೊಂಡಿತ್ತು, ಈಗ ಮಾಡುವುದಕ್ಕೆ ಮುಂದಾಗಿದ್ದಾರೆ, ಮಾಡುವುದಾದರೆ ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ನೆರೆಯ ಆಂಧ್ರಪ್ರದೇಶದ ಕಡೆಯಲ್ಲಿ ಸಮಸ್ಯೆಯಿದೆ ಅದರಿಂದ ಯೋಜನೆ ಕಾರ್ಯಗತ ವಿಳಂಬವಾಗುತ್ತಿದೆ ಎನ್ನಲಾಗುತ್ತಿದ್ದು, ತಾವು ರೈಲ್ವೆ ಮಂತ್ರಿಯಾಗಿದ್ದಾಗ ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿ.ವೈ.ಎಸ್.ರಾಜಶೇಖರರೆಡ್ಡಿಯವರೊಂದಿಗೆ ಮಾತುಕತೆ ನಡೆಸಿ ಎಲ್ಲ ಸಮಸ್ಯೆಯನ್ನು ಬಗೆಹರಿಸಲಾಗಿತ್ತು.

ಅಲ್ಲದೇ ಶ್ರೀನಿವಾಸಪುರದಿಂದ- ಮದನಪಲ್ಲಿ, ವೈಟ್‍ಫೀಲ್ಡ್‍ನಿಂದ-ಕೋಲಾರ ಎಲ್ಲ ಮಾರ್ಗಗಳು ಮಂಜೂರಾಗಿವೆ. ಮಂಜೂರಾಗಿರುವ ಕಾಮಗಾರಿಗೆ ಸರ್ಕಾರಗಳು ಸಹಕಾರ ನಿಡಿ ಸಹಭಾಗಿತ್ವ ನೀಡಿದಲ್ಲಿ ಯೋಜನೆಗಳ ಜಾರಿ ಸುಗಮವಾಗುತ್ತದೆ ಎಂದರು.

ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಕೇವಲ ಚುನಾವಣಾ ಗಿಮಿಕ್ ಆಗಿದ್ದು, ಬಜೆಟ್‍ನಲ್ಲಿ ಘೋಷಿಸಿರುವ ಎಲ್ಲ ಅಂಶಗಳನ್ನು ಜಾರಿಗೊಳಿಸಲು ಸರ್ಕಾರದ ಬಳಿ ದುಡ್ಡೇ ಇಲ್ಲ. ಬಸವರಾಜ ಬೊಮ್ಮಾಯಿಯವರು ಏನೆಲ್ಲಾ ಮಾಡಬೇಕು ಎಂದು ಚಿಂತನೆ ಮಾಡಿದ್ದಾರೋ ಅದನ್ನು ಬಜೆಟ್‍ನಲ್ಲಿ ಸೇರಿಸಿದ್ದಾರೆ, ಆದರೆ ಈಗ ಚುನಾವಣೆ ಬರುತ್ತಿರುವುದರಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ.

ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ರೈತರು, ಕಾರ್ಮಿಕರು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡ ಮತ್ತು ಬುಡಕಟ್ಟು ಜನಾಂಗ ಸೇರಿದಂತೆ ಎಲ್ಲ ವರ್ಗದ ಜನರಿಗಾಗಿ ಏನೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದರೋ ಅವೆಲ್ಲವನ್ನೂ ಮಾಡಲು ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಬೇಕು ಎಂದರು.

ಶಾಸಕಿ ಡಾ.ರೂಪಕಲಾ ಎಂ ಶಶಿಧರ್, ಕಮ್ಮಸಂದ್ರ ದೇವಾಲಯದ ಆಡಳಿತಾಧಿಕಾರಿ ಕುಮಾರಿ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ, ಬೇತಮಂಗಲ ವಿಎಸ್‍ಎಸ್‍ಎನ್ ಅಧ್ಯಕ್ಷ ದೊಡ್ಡಕಾರಿ ಪ್ರಸನ್ನ, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಕೆಜಿಎಫ್ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ನಗರಸಭೆ ಸದಸ್ಯರಾದ ಜರ್ಮನ್, ಜಯಪಾಲ್, ವೇಣುಗೋಪಾಲ್, ಮುಖಂಡ ನಂದ, ಮಾಜಿ ಸದಸ್ಯ ಶ್ರೀನಿವಾಸ್, ಓಬಿಸಿ ಮುನಿಸ್ವಾಮಿ, ವಕೀಲ ಪದ್ಮನಾಭರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಮೊದಲಾದವರು ಇದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!