ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದ ನಂತರವೂ ಮತ್ತೆ ಅನಾರೋಗ್ಯಪೀಡಿತರಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ನಗರದ ಕ್ಲಾಕ್ ಟವರ್ ಬಳಿಯ ಅಬ್ದುಲ್ ಕಲಾಂ ಮೌಲಾನಾ ಅಜಾದ್ ಉರ್ದು ಶಾಲೆಯ ಮಕ್ಕಳನ್ನು ಸಂಸದ ಎಸ್.ಮುನಿಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರಲ್ಲದೇ ಮಕ್ಕಳಿಗೆ ಹಣ್ಣುಹಂಪಲು ವಿತರಿಸಿದರು.
ಫೆ.೧೭ ರಂದು ಚಿತ್ರಾನ್ನ ಸೇವಿಸಿ ಎಂಟು ಮಕ್ಕಳು ಅಸ್ವಸ್ಥರಾಗಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಮತ್ತೊಮ್ಮೆ ಮಕ್ಕಳು ಅಸ್ವಸ್ಥಗೊಂಡಿದ್ದರಿಂದ ಮತ್ತೆ ಪುನಃ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಸದ ಎಸ್.ಮುನಿಸ್ವಾಮಿ ಆಸ್ಪತ್ರೆಗೆ ಭೇಟಿ ನಿಡಿ, ಮಕ್ಕಳ ಯೋಗಕ್ಷೇಮ ವಿಚಾರಿಸಿ ಮಾತನಾಡಿ, ಯಾವುದೇ ಈ ರೀತಿಯ ಕಹಿ ಘಟನೆ ಮರುಕಳಿಸಬಾರದು, ಶಾಲೆಯಲ್ಲಿ ಅಡುಗೆ ಮಾಡುವ ಸಿಬ್ಬಂದಿಯನ್ನು ತಕ್ಷಣ ಬದಲಾಯಿಸಿ ಬೇರೆಯವರನ್ನು ನೇಮಿಸಿ, ಪ್ರತಿ ಅಡಿಗೆ ಸಮಯದಲ್ಲಿ ದಿನಸಿಯನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ನಿಮ್ಮ ಮಕ್ಕಳಂತೆ ಅವರು ಎಂದು ಭಾವಿಸಿ, ಬೆಳೆಯುವ ವಯಸ್ಸಿನಲ್ಲಿ ಮಕ್ಕಳು ಒಳ್ಳೆ ಪೋಷಕಾಂಶ ಊಟವನ್ನು ಸವಿಯುತ್ತಾರೆ ಅವರಿಗೆ ಉತ್ತಮ ಹಾಗೂ ಗುಣಮಟ್ಟದ ಆಹಾರ ನೀಡಬೇಕು. ಸರ್ಕಾರ ಬಿಸಿ ಊಟದ ವ್ಯವಸ್ಥೆಗೆ ಕೋಟಿಗಟ್ಟಲೆ ಅನುದಾನ ನೀಡುತ್ತಿದೆ. ಆದರೆ, ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿಯ ಘಟನೆಗಳು ನಡೆಯುತ್ತಿದ್ದೆ. ಯಾವುದೇ ನಿರ್ದಾಕ್ಷಿಣ್ಯವಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಲೆಯ ಪ್ರಾಂಶುಪಾಲರಾದ ಶ್ರುತಿ ಅವರಿಗೆ ಸಂಸದರು ಎಚ್ಚರಿಕೆ ನೀಡಿದರು.
ಚುನಾವಣೆ ಸಂದರ್ಭ ಇರುವುದರಿಂದ ಈ ರೀತಿ ಘಟನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಮಕ್ಕಳು ಬೇಗನೆ ಚೇತರಿಸಿಕೊಂಡು ಶಾಲೆಗೆ ಮರಳುವಂತೆ ಸೂಕ್ತ ಚಿಕಿತ್ಸೆ ನೀಡಿ, ಪರೀಕ್ಷೆಗಳ ಸಮಯವಿರುವುದರಿಂದ ಅವರಿಗೆ ಓದಲು ಯಾವುದೇ ರೀತಿ ಅಡಚಣೆ ಆಗಬಾರದು. ವೈದ್ಯರು ೨೪ ಗಂಟೆಯೂ ಅವರ ಮೇಲೆ ನಿಗಾ ಇಟ್ಟು ಉತ್ತಮ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಾಕ ಡಾ.ವಿಜಯ್ ಕುಮಾರ್ ಅವರಿಗೆ ಸೂಚಿಸಿದರು.
ಈ ವೇಳೆ ವಿದ್ಯಾರ್ಥಿನಿಯರಿಗೆ ಸಂಸದರು ಹಣ್ಣು ಹಂಪಲನ್ನು ವಿತರಿಸಿದರು. ಈ ಸಂದರ್ಭದಲ್ಲಿ ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಸಾಮಾ ಬಾಬು, ನಗರಸಭೆ ನಾಮಿನಿ ಸದಸ್ಯ ಸುರೇಶ್, ವೈದ್ಯಧಿಕಾರಿ ಡಾ.ಬಾಲಸುಂದರ್, ಮಕ್ಕಳ ವೈದ್ಯೆ ಡಾ.ಲಲಿತ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಅಲ್ಪಸಂಖ್ಯಾತ ಅಧಿಕಾರಿ ಮಹದೇವ್, ಆಹಾರ ಪರಿವೀಕ್ಷಣಾಧಿಕಾರಿ ತಿಮ್ಮರಾಯಪ್ಪ,ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯಂ, ಆಸ್ಪತ್ರೆಯ ಸಿಬ್ಬಂದಿ ಹಾಗೂ ಮತ್ತಿತರರು ಹಾಜರಿದ್ದರು.
ಸುದ್ದಿ ಓದಿ ಹಂಚಿ: