• Fri. Mar 29th, 2024

ವರ್ತೂರು ಪ್ರಕಾಶ್‌ಗೆ ಸರಕಾರದಿಂದ ೧೦ ಕೋಟಿ ರೂ ಅನುದಾನ ಬಿಡುಗಡೆ – ಗುತ್ತಿಗೆದಾರರಿಂದ ಶೇ.೧೦ ಕಮೀಷನ್ ಪಡೆದು ಚುನಾವಣಾ ಪ್ರಚಾರ – ಅನಿಲ್‌ಕುಮಾರ್ ಆರೋಪ

PLACE YOUR AD HERE AT LOWEST PRICE

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಿಗೆ ೧೦ ಕೋಟಿ ರೂ ಅನುದಾನವನ್ನು ಸಾರ್ವಜನಿಕರ ತೆರಿಗೆ ಹಣ ಬಿಡುಗಡೆ ಮಾಡಿದ್ದು, ಅವರು ಶೇ.೧೦ ರಷ್ಟು ಕಮೀಷನ್ ಪಡೆದು ಹಾಲಿ ಶಾಸಕ ಕೆ.ಶ್ರೀನಿವಾಸಗೌಡರನ್ನು ಕಡೆಗಣಿಸಿ ಕಾಮಗಾರಿ ನಡೆಸುತ್ತಿರುವುದನ್ನು ನಿಲ್ಲಿಸದೇ ಹೋದರೆ ಪ್ರತಿಭಟನೆ ನಡೆಸಬೇಕಾಗುತ್ತದೆಯೆಂದು ವಿಧಾನಪರಿಷತ್ ಸದಸ್ಯ ಅನಿಲ್‌ಕುಮಾರ್ ಎಚ್ಚರಿಸಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಭೂಸೇನಾ ನಿಗಮದ ಅಧಿಕಾರಿಗಳಿಗೆ ಈ ಕುರಿತು ಈಗಾಗಲೇ ಎಚ್ಚರಿಕೆ ನೀಡಿದ್ದು, ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ಆದರೆ, ಹಾಲಿ ಶಾಸಕರನ್ನು ಕಡೆಗಣಿಸಿ ಕೆಲಸ ಮಾಡಿಸುತ್ತಾ ಚುನಾವಣಾ ಪ್ರಚಾರ ನಡೆಸುತ್ತಿರುವುದಕ್ಕೆ ತಮ್ಮ ವಿರೋಧವಿದೆಯೆಂದು ಸ್ಪಷ್ಟಪಡಿಸಿದರು.

ಕ್ಷೇತ್ರಕ್ಕೆ ಅನುದಾನ ನೀಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಮಾಜಿ ಶಾಸಕರ ಹೆಸರನ್ನು ಪ್ರಸ್ತಾಪಿಸಿ ನೀಡಿರುವುದು ಸರಿಯಲ್ಲ. ಚುನಾವಣೆ ಸಮಯದಲ್ಲಿ ರಾಜಕೀಯ ಪ್ರೇರಿತವಾಗಿ ಈ ಕೆಲಸ ಮಾಡಿರುವುದರಿಂದ ಶಾಸಕರ ಹಕ್ಕು ಚ್ಯುತಿಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.

ಮುಖ್ಯಮಂತ್ರಿ ಅಥವಾ ಸಚಿವರ ಸ್ವಕ್ಷೇತ್ರಗಳಲ್ಲಿ ಹೀಗೆ ಆಗಿದ್ದರೆ ಸುಮ್ಮನೆ ಇರುತ್ತಿದ್ದರಾ ಎಂದು ಪ್ರಶ್ನಿಸಿದ ಅವರು, ಮಾರ್ಚ್ ೨೫ರ ನಂತರ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವ ಮೂಲಕ ಸರಕಾರದ ಆಯಸ್ಸು ಮುಗಿಯುತ್ತದೆ. ಆ ಬಳಿಕ ಆಟಗಳು ನಡೆಯುವುದಿಲ್ಲ ಎಂದು ಎಚ್ಚರಿಸಿದರು.

ಬಜೆಟ್ ಪೂರ್ವ ಜಿಲ್ಲೆಯ ಜನಪ್ರತಿನಿಽಗಳೊಂದಿಗೂ ಸಭೆ ನಡೆಸುವಲ್ಲಿ ವಿಫಲವಾಗಿರುವ ಮುನಿರತ್ನ ನಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದೇ ದುರ್ದೈವ ಎಂದು ಕಿಡಿಕಾರಿ. ಚುನಾವಣೆ ಸಮೀಪಿಸಿದ್ದು, ಇನ್ನು ಮುಂದೆ ಕೋಲಾರ ಜಿಲ್ಲೆಯತ್ತ ತಲೆ ಇಡುವುದಿಲ್ಲವೆಂದು ಲೇವಡಿ ಮಾಡಿದರು.

ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಚುನಾಯಿತ ಶಾಸಕ, ನನ್ನನ್ನು ಬಿಟ್ಟು, ನನ್ನ ಗಮನಕ್ಕೆ ತಾರದೆಯೇ ಮಾಜಿ ಸಚಿವ ವರ್ತೂರು ಪ್ರಕಾಶ್‌ಗೆ ೧೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಧೋರಣೆ ಖಂಡನೀಯ ಎಂದರು.

ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ ೪೩೩ ಕಾಮಗಾರಿಗಳಿಗೆ ಸಂಬಂಽಸಿದಂತೆ ೧೦ ಕೋಟಿರೂ ಅನುದಾನ ಮಂಜೂರು ಮಾಡಲು ಕಳೆದ ಡಿ.೧೫ರಂದು ಆರ್ಥಿಕ ಇಲಾಖೆಯಿಂದ ಆರ್‌ಡಿಪಿಆರ್‌ಗೆ ಪತ್ರ ಬಂದಿದ್ದು, ಬಳಿಕ ಡಿ.೨೯ರಂದು ೮೯ ಕಾಮಗಾರಿಗಳಿಗೆ ೧೦ ಕೋಟಿರೂ ಮಂಜೂರು ಮಾಡಲು ಸರಕಾರದ ಪ್ರಧಾನ ಕಾರ್ಯದರ್ಶಿ ಕೋಲಾರ ಜಿಪಂಗೆ ಪತ್ರಮುಖೇನ ಸೂಚಿಸಿದ್ದಾರೆ.
ಇಷ್ಟಾದರೂ ನನ್ನ ಗಮನಕ್ಕೆ ಬಂದಿಲ್ಲ. ಒಳಗೊಳಗೆ ಇವೆಲ್ಲವನ್ನೂ ಮಾಡಿಕೊಂಡಿದ್ದು, ಇಡೀ ರಾಜ್ಯದಲ್ಲೇ ಇಂತಹ ಕೆಟ್ಟ ಕೆಲಸ ಎಲ್ಲಿಯೂ ಆಗಿಲ್ಲ. ಮಾಜಿ ಶಾಸಕರಿಗೆ ಅನುದಾನ ನೀಡಿ, ಈ ರೀತಿ ಧೋರಣೆ ಅನುಸರಿಸಿರುವ ಮುಖ್ಯಮಂತ್ರಿ ಕ್ರಮ ಸರಿಯಲ್ಲ, ರಾಜ್ಯದಲ್ಲಿ ಸರಕಾರ ಇದೆಯಾ ಇಲ್ಲವಾ ಎನ್ನುವುದೇ ಅರ್ಥವಾಗುತ್ತಿಲ್ಲವೆಂದು ಅಸಮಧಾನ ಹೊರಹಾಕಿದರು.

ವರ್ತೂರು ಪ್ರಕಾಶ್ ೨ ಬಾರಿ ಶಾಸಕರಾಗಿದ್ದ ವೇಳೆ ನಾನು ಏನಾದರೂ ತೊಂದರೆ ನೀಡಿದ್ದೀನಾ ? ನನ್ನ ಪಾಡಿಗೆ ನಾನು ಇದ್ದೆ ಅಲ್ಲವೆ, ಈಗ ಅವರು ಮಾಜಿ ಶಾಸಕರಾಗಿದ್ದರೂ ಸರಕಾರ, ಸಿಎಂ ಮೇಲೆ ಒತ್ತಡ ಹಾಕಿ ಅನುದಾನ ತಂದು ಈ ರೀತಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಾನು ಕೋಲಾರ ಕ್ಷೇತ್ರಕ್ಕೆ ಏನೂ ಮಾಡಿಲ್ಲ, ಮಾಡಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಾರೆ. ಯರಗೋಳ್ ಯೋಜನೆ ತಂದಿದ್ದು, ತೇರಹಳ್ಳಿ ಬೆಟ್ಟಕ್ಕೆ ರಸ್ತೆ ಹಾಕಿಸಿದ್ದು, ಯುಜಿಡಿ ಮಾಡಿಸಿದ್ದು ಯಾರು. ಅವರ ತಾತ ಮಾಡಿದ್ದಾ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ರ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಅಂಬರೀಶ್, ಮುಖಂಡ ವರದೇನಹಳ್ಳಿ ವೆಂಕಟೇಶ್, ಚೆನ್ನವೀರಯ್ಯ ಮತ್ತಿತರರಿದ್ದರು.

ಸುದ್ದಿ ಓದಿ ಹಂಚಿ:

 

Leave a Reply

Your email address will not be published. Required fields are marked *

You missed

error: Content is protected !!