• Fri. Mar 29th, 2024

ಕೋಲಾರ I ವೇಮಗಲ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ವಿಫಲ ಗಣಿ ಅಧಿಕಾರಿಗಳ ವಿರುದ್ದ ರೈತ ಕೂಲಿಕಾರ್ಮಿಕರ ಸಂಘ ಆಕ್ರೋಶ

PLACE YOUR AD HERE AT LOWEST PRICE

ಕೋಲಾರ ತಾಲೂಕಿನ ವೇಮಗಲ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಹಾಗೂ ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಗಣಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ರೈತ ಕೂಲಿಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೇಮಗಲ್ ನಟರಾಜ್ ಗಣಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಗಣಿಗಾರಿಕೆ ಹಾಗೂ ಮಣ್ಣು ಮಾಫಿಯಾ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ವೇಮಗಲ್‌ಗೆ ಕೂಗಳತೆ ದೂರದಲ್ಲಿರುವ ೨ ಕಿಮೀ ವ್ಯಾಪ್ತಿಯ ಪೆರ್ಜೇನಹಳ್ಳಿ ಕಂದಾಯ ಸರ್ವೇ ನಂ.೧೧ರ ಗೋಮಾಳ ಜಮೀನಿನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಜಮೀನು ಸಮತಟ್ಟು ಮಾಡಲು ಗೋಮಾಳದಲ್ಲಿ ಮಣ್ಣು ತೆಗೆಯುತ್ತಿದ್ದರೂ ಕಂದಾಯ ಗಣಿ ಅಧಿಕಾರಿಗಳು ಇದ್ದೂ ಇಲ್ಲದಂತಾಗಿ ರಾಜಕಾರಣಿಯ ಪ್ರಭಾವಕ್ಕೆ ಮಣಿದು ಮಣ್ಣು ಮಾಫಿಯಾಗಿ ಅವಕಾಶ ಮಾಡಿಕೊಟ್ಟಿದ್ದಾರೆಂದು ಅವ್ಯವಸ್ಥೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಜಿಲ್ಲಾ ಗೌರವಾಧ್ಯಕ್ಷ ಗೋವಿಂದರಾಜು ಮಾತನಾಡಿ, ವೇಮಗಲ್ ಕೈಗಾರಿಕಾ ಪ್ರದೇಶ ಅಕ್ರಮ ಗಣಿಗಾರಿಕೆಗೆ ಪ್ರಸಿದ್ಧಿಯಾಗಿದೆ. ಯಾವುದೇ ಪರವಾನಗಿ ಇಲ್ಲದೆ ರಾಜಾರೋಷವಾಗಿ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕಾನೂನು ಬಾಹಿರವಾಗಿ ಕಲ್ಲು ಬಂಡೆಗಳನ್ನು ಸಿಡಿಸಿ ಜನಸಾಮಾನ್ಯರಿಗೆ ಪರಿಸರಕ್ಕೆ ಹಾನಿ ಮಾಡುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಗಣಿ ಅಧಿಕಾರಿಗಳೇ ಅಕ್ರಮ ಗಣಿಗಾರಿಕೆಗೆ ಬೆಂಗಾವಲಾಗಿ ನಿಂತಿದ್ದಾರೆಂದು ಕಿಡಿಕಾರಿದರು.

೨೪ ಗಂಟೆಯಲ್ಲಿ ಅಕ್ರಮ ಮಣ್ಣು ಹಾಗೂ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಿ ದಂಧೆಕೋರರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಬೇಕು. ಇಲ್ಲವಾದರೆ ಕಲ್ಲು-ಮಣ್ಣಿನ ಸಮೇತ ಕೋಲಾರ ಚಿಕ್ಕಬಳ್ಳಾಪುರ ರಸ್ತೆ ಬಂದ್ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಹೋಬಳಿ ಅಧ್ಯಕ್ಷ ಅಮರನಾರಾಯಣ, ನಾಗೇಂದ್ರ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮುಂತಾದವರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!