• Tue. Apr 16th, 2024

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ಭಾರತ ಸೇವಾದಳ ಸಂಪನ್ಮೂಲ ವ್ಯಕ್ತಿಯಾಗಿ ಸೇವಾದಳ ಶಿಬಿರಗಳಲ್ಲಿ ಸಕ್ರಿಯ ತರಬೇತುದಾರರಾಗಿ ಭಾಗವಹಿಸುತ್ತಿದ್ದ ಸೇವಾದಳ ಮಂಜುನಾಥ್ ಎರಡು ದಿನಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು ಅವರಿಗೆ ಭಾರತ ಸೇವಾದಳ ಜಿಲ್ಲಾ ಸಮಿತಿ ಸಂತಾಪ ವ್ಯಕ್ತಪಡಿಸಿತು.

ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿ ಒಂದು ನಿಮಿಷ ಮೌನವಾಚರಿಸಿ ನುಡಿ ನಮನ ಸಲ್ಲಿಸಿ ಸಂತಾಪ ಅರ್ಪಿಸಲಾಯಿತು.

ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಶಿಕ್ಷಕ ಮಂಜುನಾಥ್ ಸೇವಾದಳವನ್ನು ತನ್ನ ಹೆಸರಿನ ಉಪನಾಮನಾಗಿ ಬಳಸುವಷ್ಟು ಕ್ರಿಯಾಶೀಲರಾಗಿ ಜಿಲ್ಲೆಯ ಶಾಶ್ವತ ಜಿಲ್ಲಾ ಸಂಘಟಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾ ಮಟ್ಟದ ಅತ್ಯುತ್ತಮ ಸೇವಾದಳ ಪುರಸ್ಕಾರಕ್ಕೆ ಪಾತ್ರರಾಗಿದ್ದರು, ಸೇವಾದಳ ಚಟುವಟಿಕೆಗಳಿಗೆ ಸದಾ ಸಿದ್ದರಾಗಿರುತ್ತಿದ್ದರೆಂದರು.

ಸೇವಾದಳ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಕಳೆದ ೨೫ ವರ್ಷಗಳಿಂದಲೂ ಸೇವಾದಳ ಚಟುವಟಿಕೆಗಳಲ್ಲಿ ತಮನ್ನು ತೊಡಗಿಸಿಕೊಂಡು ಮಂಜುನಾಥ್ ಸೇವೆ ಸಲ್ಲಿಸಿದ್ದಾರೆ, ಅವರ ನೆನಪಿನಲ್ಲಿ ಸೇವಾದಳ ಸಮಿತಿ ದೊಡ್ಡ ಕಾರ್ಯಕ್ರಮ ನಡೆಸಬೇಕೆಂದರು.

ಸೇವಾದಳ ಹಿರಿಯ ಮುಖಂಡ ವಿ.ಪಿ.ಸೋಮಶೇಖರ್ ಮಾತನಾಡಿ, ಚನ್ನೈ ಸಮುದ್ರದಲ್ಲಿ ಸುನಾಮಿ ಬಂದಪ್ಪಳಿಸಿದಾಗ ಕೋಲಾರ ಸೇವಾದಳ ತಂಡದಿಂದ ಮಂಜುನಾಥ್ ಚನ್ನೈಗೆ ಧಾವಿಸಿ ಸಾಕಷ್ಟು ಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದರೆಂದು ಸ್ಮರಿಸಿಕೊಂಡರು.

ಮಾಲೂರು ತಾಲೂಕು ಸೇವಾದಳ ಅಧ್ಯಕ್ಷ ಬಹಾದ್ದೂರ್ ಸಾಬ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಸೇವಾದಳ ಸಂಘಟನೆಯಲ್ಲಿ ಮಂಜುನಾಥ್‌ರ ಸೇವೆ ಸ್ಮರಣೀಯವಾದುದು, ತಮಗೆ ಆಪ್ತ ಗೆಳೆಯರಾಗಿದ್ದರು, ಅವರು ಅಕಾಲಿಕವಾಗಿ ಅಗಲಿದ ದುಖಃವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ಸಿಗುವಂತಾಗಲಿ ಎಂದು ಆಶಿಸಿದರು.

ಸಂಘಟನಾ ಕಾರ್ಯದರ್ಶಿ ಶ್ರೀನಿವಾಸಪುರದ ರವಿಕುಮಾರ್ ಮಾತನಾಡಿ, ಕಳೆದ ವರ್ಷ ಶ್ರೀನಿವಾಸಪುರ ರೋಣೂರು ಗ್ರಾಮದಲ್ಲಿ ಸೇವಾದಳ ಶಿಬಿರ ಏರ್ಪಡಿಸಿದ್ದಾಗ ಎರಡು ದಿನಗಳ ಕಾಲ ಶಿಕ್ಷಕರಿಗೆ ಅತ್ಯುತ್ತಮ ತರಬೇತಿ ನೀಡಿದ್ದರೆಂದು ನೆನಪಿಸಿಕೊಂಡರು.

ಭಾರತ ಸೇವಾದಳ ಸಂಘಟಕ ಎಂ.ಬಿ.ದಾನೇಶ್, ತಾಲೂಕು ಸಮಿತಿ ಉಪಾಧ್ಯಕ್ಷ ಮುನಿವೆಂಕಟ್ ಮತ್ತಿತರರು ಹಾಜರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!