• Mon. May 29th, 2023

ಕೋಲಾರ:ಕೋಲಾರ ಜಿಲ್ಲೆಗೆ ಅಂಟಿಕೊಂಡಿರುವ ತೆಲುಗುನಾಡಿನ ನಾಯಕನಟ, ಜನನಾಯಕ, ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ರವರ ಬಗ್ಗೆ ನಮ್ಮ ಜಿಲ್ಲೆಯ ಪ್ರೊ.ಚಂದ್ರೆಶೇಖರ ನೆಂಗಲಿರವರ ಫೇಸ್ ಬುಕ್ ಲೇಖನ ಹೀಗಿದೆ.

ಒಬ್ಬ ರಾಜಕೀಯ ನಾಯಕ ಸ್ವಯಂ ತಮ್ಮ ಮನೆಯ ಅಂಗಳಕ್ಕೆ ಬಂದು, ತಮ್ಮ ಬಾಳಿನ ಸಮಸ್ಯೆಗಳೇನು ? ಎಂದು ಕೇಳಿ ಶ್ರದ್ಧೆಯಿಂದ ಆಲಿಸುವುದು NTR ಗಿಂತ ಮೊದಲು ಎಂದೂ ಸಂಭವಿಸಿರಲಿಲ್ಲ. ಸಾಮಾನ್ಯವಾಗಿ ಸಿನೆಮಾ ನಟರು ಪ್ರಜೆಗಳ ಎದುರು ಅಷ್ಟು ಸುಲಭವಾಗಿ ಬರಲಾರರು. ಪ್ರಜೆಗಳೂ ಅಭಿಮಾನಿಗಳೂ ನಟರನ್ನು ಪ್ರತ್ಯೇಕವಾಗಿ ಕಾಣುವುದೇ ಇದಕ್ಕೆ ಕಾರಣ. ಅದರಲ್ಲೂ ಒಬ್ಬ ಸೂಪರ್ ಸ್ಟಾರ್ ಆಗಿದ್ದುಕೊಂಡೂ, ನೆಲಮುಟ್ಟುವ ಪ್ರೀತಿಯಿಂದ, ನಿಜವಾಗಿಯೂ ತಾರಕರಾಮನಾಗಿ ಧರೆಗೆ ಇಳಿದವನೆಂದೇ ಅಭಿಮಾನಿಗಳು ನಂಬಿರುವ NTR ಜೀವನವು ಗಾಜಿನ ಗೋಪುರದಲ್ಲಿದ್ದಂತೆಯೇ ಸರಿ !

ಆದರೆ NTR ಅವರೆಂದಿಗೂ ಹಾಗೆ ಜನವಿದೂರವಾಗಿ ಪ್ರತ್ಯೇಕ ದ್ವೀಪವಾಗಿ ಇದ್ದವರಲ್ಲ. ಪ್ರತಿದಿನವೂ ತನ್ನನ್ನು ನೋಡಲು ತಿರುಪತಿ ಯಾತ್ರೆ ಮುಗಿಸಿಕೊಂಡು ಬರುತ್ತಿದ್ದ ಅಭಿಮಾನಿಗಳಿಗಾಗಿ, ವೇಳೆಯನ್ನು ಮೀಸಲಾಗಿಟ್ಟು ಪ್ರತಿಯೊಬ್ಬರನ್ನೂ ಅಕ್ಕರೆಯಿಂದ ಮಾತನಾಡಿಸುತ್ತಿದ್ದರು. ನೈಸರ್ಗಿಕ ಪ್ರಕೋಪಗಳಿಂದಾಗಿ ತತ್ತರಿಸಿದ ಬಡಜನತೆಗೆ ಸ್ಪಂದಿಸುತ್ತಾ ಪ್ರವಾಹ ಪೀಡಿತರ, ತುಫಾನ್ ಪೀಡಿತರ ಪರವಾಗಿ ನಿಧಿ ಸಂಗ್ರಹಣೆ ಮಾಡಿ ಸರ್ಕಾರಕ್ಕೆ ಅರ್ಪಣೆ ಮಾಡುತ್ತಿದ್ದರು. ಹೀಗೆ ತನ್ನ ಜನಪ್ರಿಯತೆಯನ್ನು ಪ್ರಜೆಗಳಿಗಾಗಿ NTR ಉಪಯೋಗಿಸುತ್ತಿದ್ದರು.

ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರಾದ NTR ಅವರು “ಸಮಾಜವೇ ದೇವಾಲಯ. ಪ್ರಜೆಗಳೇ ದೇವರು” ಎಂದು ನಂಬಿದ್ದರು. ಪ್ರಜಾ ಕಲ್ಯಾಣಕ್ಕಾಗಿ ಭಾರತದಲ್ಲಿ ಮೊದಲ ಬಾರಿಗೆ ಅತ್ಯಂತ ವಿಶಿಷ್ಟವಾದ 40 ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದದ್ದು ಈಗ ಇತಿಹಾಸ. ಕುಟಿಲ ನೀತಿಯ ರಾಜಕೀಯ ವಾಮಮಾರ್ಗದಿಂದ CM ಸ್ಥಾನ ಚ್ಯುತರಾಗಿ, ಪ್ರಜೆಗಳ ಮುಂದೆ ಬೀದಿಗಿಳಿದು ಒಟ್ಟು ಮೂರು ಸರ್ತಿ ಆಂಧ್ರದೇಶದ CM ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ NTR ಅವರು ತಮ್ಮ ಮಗ ಹರಿಕೃಷ್ಣ ಸಾರಥ್ಯದಲ್ಲಿ 75.000 ಕಿ.ಮೀ ಚೈತನ್ಯರಥ ಯಾತ್ರೆ ಮಾಡುವುದರ ಮೂಲಕ ಪ್ರಜಾಪರಿಸ್ಥಿತಿಗಳನ್ನು ಕಣ್ಣಾರೆ ಕಂಡಿದ್ದರು. ಈ ಯಾತ್ರೆಯ ಸಂದರ್ಭದಲ್ಲಿ ಸ್ಟಾರ್ ಹೋಟೆಲ್ ಗಳಲ್ಲಿ ಇಳಿದುಕೊಳ್ಳದೆ, ಊರಾಚೆಯ ತಾಂಡಾಗಳಲ್ಲಿ ಬಡಜನರಾದ ದೀನ ದಲಿತರ ಬಿಡಾರಗಳ ಬಳಿ ಇದ್ದುಬಿಡುತ್ತಿದ್ದರು. ಶೇವಿಂಗ್, ಸ್ನಾನ ಇತ್ಯಾದಿಗಳನ್ನು ಮರಗಳ ಕೆಳಗೆ ಮಾಡಿಬಿಡುತ್ತಿದ್ದರು. ಇದಕ್ಕಾಗಿ ಪ್ರಜೆಗಳ ಕಡೆಯಿಂದ ವೆಚ್ಚವಾಗಬಾರದೆಂದು ಬಹಳ ಜಾಗ್ರತೆ ವಹಿಸುತ್ತಿದ್ದರು. ಪ್ರಜೆಗಳಿಂದ ಸಂಗ್ರಹಣೆ ಮಾಡಿದ ನಿಧಿಯನ್ನು ಪ್ರಜಾಕಲ್ಯಾಣಕ್ಕಾಗಿಯೇ ಬಳಸಬೇಕೆಂಬ ಚಲವನ್ನು ಹೊಂದಿದ್ದರು.

ರಾಜ್ಯಸರ್ಕಾರಗಳು ಕೇಂದ್ರಸರ್ಕಾರದ ಬಾಲಂಗೋಚಿ ಆಗಬಾರದೆಂದು ದೃಢಸಂಕಲ್ಪದೊಂದಿಗೆ ತೆಲುಗುದೇಶಂ ( TDP ) ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ಸಭೆ ಮತ್ತು ಸಮಾವೇಶಗಳನ್ನು ಸಂಘಟಿಸಿ ನ್ಯಾಷನಲ್ ಫ್ರಂಟ್ ಸ್ಥಾಪನೆ ಮಾಡಿದ NTR ಅವರೇ ಅಧ್ಯಕ್ಷರಾಗಿದ್ದರು. ಇದರ ಮೊದಲ ಪ್ರಧಾನಿಯನ್ನಾಗಿ VP ಸಿಂಗ್ ಅವರನ್ನು ಗೊತ್ತು ಮಾಡಿ, ತಾವು ಮಾತ್ರ ಆಂಧ್ರದೇಶಕ್ಕೆ ಪರಿಮಿತರಾದರು.

ಆದ್ದರಿಂದಲೇ ಅತ್ಯಲ್ಪ ಕಾಲದಲ್ಲಿಯೇ NTR ಅವರು ದಕ್ಷಿಣಾದಿಯಲ್ಲಿ ಪ್ರಮುಖ ಪ್ರಜಾನಾಯಕನಾಗಿಬಿಟ್ಟರು. ಪ್ರಜೆಗಳ ಹೃದಯ ಸಿಂಹಾಸನದಲ್ಲಿ ಪ್ರತಿಷ್ಠಾಪನೆಗೊಂಡ ಮಹಾನಾಯಕನೂ ಆಗಿಬಿಟ್ಟರು. ಜೈ NTR !

– ನಂಗ್ಲಿ ಜಂಗ್ಲಿ(ಪ್ರೊ.ಚಂದ್ರಶೇಖರ ನೆಂಗಲಿ): ೦೫.೦೪.೨೩(05.04.23)

Leave a Reply

Your email address will not be published. Required fields are marked *

You missed

error: Content is protected !!