ಅಮರಿಲ್ಲೀಸ್ ಅಥವಾ ನೆಲಸಂಪಿಗೆ ಗೂಗಳ ಬಗ್ಗೆ ಪ್ರೊ.ನೆಂಗ್ಲಿ ಜಂಗ್ಲಿರವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹೀಗೆ ಬರೆಯುತ್ತಾರೆ. ನಮಗೆ ನೆಲಸಂಪಿಗೆ ಎಂಬ ಹೆಸರು ಶಬ್ದಜ್ಞಾನ ಮತ್ತು ಬಿಂಬಜ್ಞಾನ ಆಗಿದ್ದು ಮೊದಲಬಾರಿಗೆ ಕುಮಾರಪರ್ವತ ಚಾರಣ ಮಾಡಿದಾಗ.
ಚೈತ್ರ ವೈಶಾಖದ ಸುಡುಬಿಸಿಲಿನಲ್ಲಿ ಈ ಹೂಗಳು ನೀರಿನ ಆರೈಕೆಯಿಲ್ಲದೆಯೂ ಅರಳಿದ್ದವು. ಕುಮಾರಪರ್ವತದ ಶಿಖರ, ಪುಷ್ಪಗಿರಿ ಇಳಿದು ಹೆಗ್ಗಡೆಮನೆ ಎಂಬ ಸಣ್ಣ ಗ್ರಾಮಕ್ಕೆ ಬರುತ್ತಿದ್ದಂತೆಯೇ ಗುಡುಗಿನ ಭಯಂಕರ ಧ್ವಾನ ಸಹಿತ, ಮಿಂಚು, ಮಳೆ ಭೂಮಿಯನ್ನು ತಬಲಾ ಮಾಡಿಕೊಂಡು ಒಂದೆ ಸಮನೆ ಚಚ್ಚತೊಡಗಿತು.
ನಾವೆಲ್ಲರೂ ಓಡಿಹೋಗಿ ಹೆಗ್ಗಡೆಮನೆಯ ಅಂಗಳದಲ್ಲಿ ಆಶ್ರಯ ಪಡೆದೆವು. ಮನೆಯೊಡತಿ ನಮ್ಮನ್ನು ಒಳಕ್ಕೆ ಕರೆದು ಎಲ್ಲಿಂದ ಬಂದಿರಿ ? ಎಂದು ಸೌಹಾರ್ದತೆಯಿಂದ ಮಾತನಾಡಿಸಿದರು. ಕೋಲಾರದಿಂದ ಎಂದೊಡನೆ ಚಿನ್ನದ ನಾಡೆಂದು ಹರ್ಷಿತರಾದರು. ನಾವು ಪುಷ್ಪಗಿರಿಯ ಸೊಬಗಿನ ಸಿರಿಯನ್ನು ಕಂಡು ಬರುತ್ತಿದ್ದೇವೆ ಎಂದೆವು.
ಅಲ್ಲೇನಾದರೂ ಪ್ರಾಣಿಗಳು ಕಾಟಿ ಮುಂತಾದುವು ಕಂಡಿರಾ ? ಎಂದಾಕೆ ಕೇಳಿದರು. ಇಲ್ಲ! ನಾವೇ ಪ್ರಾಣಿಗಳು ಎಂದು ನಗುತ್ತಾ ಉತ್ತರಿಸಿದ ನಾವು, ಅಲ್ಲೇ ಅರಳಿದ್ದ ಹೂಗಳನ್ನು ಕಂಡು ಇದೇನು ಹೂವು ? ಎಂದು ಕೇಳಿದೆವು. ಮನೆಯಾಕೆ ನೆಲಸಂಪಿಗೆ ಎಂದುತ್ತರಿಸಿ, ಇದರ ಗೆಡ್ಡೆಗಳನ್ನು ನೆಟ್ಟರೆ ವಸಂತಮಾಸದಲ್ಲಿ ಹೂಗಳು ಬಿಡುತ್ತವೆ ಎಂದು ಹೇಳಿ ನಮಗೆಲ್ಲಾ ಗೆಡ್ಡೆಗಳನ್ನು ಅಗೆದು ತೆಗೆದು ಕೊಟ್ಟರು. ಆ ಅಜ್ಞಾತ ಗೃಹಿಣಿಗೆ ಕೃತಜ್ಞತೆ ಹೇಳಿ ನಾವು ಕೆಳಗಿಳಿದೆವು.
ಈ ಗೆಡ್ಡೆಗಳನ್ನು ಎಲ್ಲಾ ಕಡೆ ಆಲಂಕಾರಿಕ ಸಸ್ಯವಾಗಿ ಬೆಳೆಸುವುದುಂಟು. ವರ್ಷವೆಲ್ಲಾ ಭೂಗರ್ಭದಲ್ಲಿ ತಪಸ್ಸು ಮಾಡಿ ವಸಂತಮಾಸದಲ್ಲಿ ವಯ್ಯಾರದಿಂದ ಎದ್ದುನಿಂತು ಹೂನಗೆ ಬೀರುವ ನೆಲಸಂಪಿಗೆ ಗಿಡವು ಮಾನವರ ಆರೈಕೆ ಬಯಸುವುದಿಲ್ಲ. ಗೆಡ್ಡೆಯೇ ಮಳೆಗಾಲದಲ್ಲಿ ತನಗೆ ಬೇಕಾದಷ್ಟು ನೀರನ್ನು ಸಂಗ್ರಹಿಸಿಕೊಂಡು ಪೌಷ್ಟಿಕವಾಗಿ ಬೆಳೆದು ಬೇಸಿಗೆಯ ಸುಡುಬಿಸಿಲಿನಲ್ಲಿ ಹೂನಗೆ ಬೀರುತ್ತಾ ಬಾಳುವ ಗುಟ್ಟನ್ನು ನಿಃಶಬ್ದವಾಗಿ ಮನಗಾಣಿಸುತ್ತದೆ.
ನಾನು ಮತ್ತು ಚಿನ್ನಿ ವೆಂಕಟೇಶ್ ಇಬ್ಬರೂ ನಡಮಂತರಂ ಗ್ರಾಮದ ಲೋಹಕುಟಿ ಆವರಣದಲ್ಲಿ ಗೆಡ್ಡೆಗಳನ್ನು ನೆಟ್ಟು ಮರೆತುಬಿಟ್ಟಿದ್ದೆವು. ಇದೀಗ ಏಪ್ರಿಲ್ ತಿಂಗಳ ಸುಡು ಬಿಸಿಲು. ಗಿಡಗಳಿಗೆ ನೀರಿನ ಪಸೆಯಿಲ್ಲ. ಆದರೆ ಸ್ವಯಂ ಸಂಪನ್ಮೂಲದಿಂದ ಈ ಗಿಡಗಳು ವಿಸ್ಮಯಕರವೆಂಬಂತೆ ಹೂನಗೆ ಬೀರುತ್ತಾ ನನ್ನನ್ನು ಸ್ವಾಗತಿಸುತ್ತಿವೆ. ಈ ಗಿಡಗಳ ಧಾರಣಾ ಶಕ್ತಿ ಮತ್ತು ಕಷ್ಟ ಸಹಿಷ್ಣುತೆ ಅಸಾಧಾರಣ. ಇದೇ ಸ್ಫೂರ್ತಿಯಾಗಿ ನನ್ನ ಏಕಾಂತದ ವೈಭವವನ್ನು ಹೆಚ್ಚಿಸಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಾ ವಿರಮಿಸುತ್ತೇನೆ.
ಜೈ ಅಮರಿಲ್ಲೀಸ್ ! ಜೈ ನೆಲಸಂಪಿಗೆ !
ಪ್ರೊ.ನೆಂಗ್ಲಿ ಜಂಗ್ಲಿ .