ಗಿರಿನೆತ್ತಿಯಿಂದ ಗಿರಿಪಾದಕ್ಕೆ ಇಳಿದು ಬಂದ ನದಿಯೊಂದು ಮುಖಜಭೂಮಿಯ ಕಡೆಗೆ ಹರಿಯುತ್ತಿತ್ತು. ಈ ನದಿಯ ಮೈದಾನದಲ್ಲಿ ಸುವಿಶಾಲವಾದ ಬಯಲುಸೀಮೆಯಿದ್ದು ನದಿಯ ಪಾತ್ರ ಇಕ್ಕೆಲಗಳಲ್ಲಿ ಹಿಗ್ಗುತ್ತಾ ಕುಗ್ಗುತ್ತಾ ಇತ್ತು. ದಡದಲ್ಲಿ ಸಮೃದ್ಧವಾಗಿದ್ದ ಮಣ್ಣುಹುಳುಗಳು ನೆಲವನ್ನು ಉಳುಮೆ ಮಾಡಿ ದಡವನ್ನು ಫಲವತ್ತಾಗಿಸಿದ್ದವು.
ಆಗಿನ್ನೂ ನದಿಯ ಮೈದಾನ ಪ್ರದೇಶಕ್ಕೆ ಮನುಷ್ಯರು ಕಾಲೂರಿರಲಿಲ್ಲ. ಗುಹಾವಾಸಿಗಳಾಗಿದ್ದ ಆದಿಮಾನವರು ಕೃಷಿ ಮಾಡಿ ಬೆಳೆ ತೆಗೆಯುವುದನ್ನು ಕಂಡುಹಿಡಿದಿರಲಿಲ್ಲ. ಆದಿಮಾನವರು ಆಹಾರಕ್ಕಾಗಿ ಬೇಟೆಯನ್ನೆ ಅವಲಂಬಿಸಿ ಬದುಕುತ್ತಿದ್ದರು. ಗಿಡಮರಗಳಿಂದ ಸಂಗ್ರಹ ಮಾಡಿದ ಋತುಬದ್ಧವಾದ ಹಣ್ಣು ಹಂಪಲುಗಳನ್ನು ತಿನ್ನುತ್ತಿದ್ದರು.
ಬೇಟೆಗೆ ಹೋಗದ ಆದಿಮಾನವ ಮಹಿಳೆಯರು ಗುಹೆಗಳ ಸುತ್ತಮುತ್ತ ತಿಂದೆಸೆದ ಹಣ್ಣುಹಂಪಲುಗಳ ವಾಟೆ, ಬೀಜ ಮುಂತಾದವು ಮೊಳಕೆಯೊಡೆದು ಸಸಿಗಳಾಗಿ ಬೆಳೆದು ಮರಳಿ ಗಿಡಮರಗಳಾಗುವ ಪುನರುತ್ಪಾದನಾ ಪ್ರಕ್ರಿಯೆ ಮನಗಂಡರು. ಇದೇ ಸ್ಫೂರ್ತಿಯಾಗಿ ತಮಗೆ ಬೇಕಾದ ಹಣ್ಣು ಹಂಪಲು ದವಸಧಾನ್ಯಗಳ ಬೆಳೆ ತೆಗೆಯುವುದನ್ನು ಆದಿಮಾನವ ಮಹಿಳೆಯರು ಕಂಡುಹಿಡಿದರು.
ಈ ಬೆಳೆಗಳ ಆರೈಕೆಗಾಗಿ ಮತ್ತು ಕಾವಲಿಗಾಗಿ ಅಲ್ಲಲ್ಲೇ ನೆಲೆಸಲು ಆರಂಭಿಸಿದರು. ಅಲೆಮಾರಿ ಜೀವನವನ್ನು ತೊರೆದು ಒಂದು ಕಡೆ ನೆಲಸಲು ಕೃಷಿ ಆಧಾರಿತ ಜೀವನ ಶೈಲಿ ಬಹು ದೊಡ್ಡ ಪ್ರೇರಣೆ ನೀಡಿತು. ದುಡಿಮೆ ಮತ್ತು ಬಿಡುವುಗಳ ಸಾಂಗತ್ಯದಲ್ಲಿ ನಾಟ್ಯಾದಿ ಕಲೆಗಳು ಸಂಸ್ಕೃತಿ ಜನ್ಮ ತಾಳಿದವು.
ಪ್ರಪಂಚದ ಪ್ರಪ್ರಥಮ ಪ್ರಾಚೀನ ನಾಗರಿಕತೆಯ ತೊಟ್ಟಿಲುಗಳನ್ನು ಪರೋಕ್ಷವಾಗಿ ಮಣ್ಣು ಹುಳುಗಳೇ ತೂಗಿದವು. ಬಹುಕಾಲ ಮಾನವರ ಸಂಸ್ಕೃತಿ ಇತಿಹಾಸ ಹೀಗೇ ಸಾಗುತ್ತಿತ್ತು. ಕ್ರಮೇಣ ಈ ನದಿಗಳೇ ಸಂಚಾರಿ ಮಾರ್ಗಗಳಾಗಿ ಮಾರ್ಪಟ್ಟವು.
ಹೊಸ ಹೊಸ ಭೂಖಂಡಗಳ ಶೋಧನೆ ಆಯಿತು. ನೀರಾವಿ, ಕಲ್ಲಿದ್ದಲು, ಕಲ್ಲೆಣ್ಣೆಗಳ ಮೂಲಕ ಮನುಷ್ಯರು ಜಾಗತೀಕರಣಗೊಳ್ಳುತ್ತಾ ಬಂದರು. ನಗರೀಕರಣದಿಂದ ಕಾಡುಗಳೆಲ್ಲಾ ನಾಡುಗಳಾದವು. ಹೊಸ ಹೊಸ ಕೈಗಾರಿಕೆಗಳು ಹುಟ್ಟಿಕೊಂಡು ಇವುಗಳ ತ್ಯಾಜ್ಯವಸ್ತುಗಳನ್ನು ಸಾಗಿಸುವ ನಾಲೆಗಳಾಗಿ ಬದಲಾಗಿ ನದಿಗಳೆಲ್ಲಾ ಮಲಹೊರುವ ಚರಂಡಿಗಳಾದವು.
ನದಿದಂಡೆಯ ಪ್ರದೇಶಗಳೆಲ್ಲಾ ಮಹಾನಗರಗಳಾಗಿ ಬೆಳೆದು, ಮನುಷ್ಯರ ಪಾಲಿಗೆ ನೆಲಮುಟ್ಟುವ ಪ್ರೀತಿಯೇ ಇಲ್ಲವಾಯಿತು. ಬೆಟ್ಟಗಳೆಲ್ಲಾ ಗಣಿಗಾರಿಕೆಗೊಳಗಾಗಿ ಹುಟ್ಟುಹಬ್ಬದ ಕೇಕುಗಳಂತೆ ಕತ್ತರಿಸಲ್ಪಟ್ಟು ಗ್ರಾನೈಟ್ ಲಾಬಿ ಶುರುವಾಯಿತು. ಮಣ್ಣಿನ ನೆಲಕ್ಕೆ ಆಚ್ಛಾದನವಾಗಿ ಬೆಟ್ಟದ ಹಾಳೆಗಳು ಹೊದಿಕೆಯಾಗಿ ಮಣ್ಣುಹುಳುಗಳು ವಂಶನಾಶಕ್ಕೆ ತುತ್ತಾದವು.
ಪಟ್ಟಣ, ನಗರ, ಮಹಾನಗರ ಪ್ರದೇಶಗಳಲ್ಲಿ ಮಣ್ಣಿನ ನೆಲ ಕಾಣದಂತಾಯಿತು. ಕೃಷಿ ಭೂಮಿಯಲ್ಲಿ ರಾಸಾಯನಿಕ ಗೊಬ್ಬರ ಔಷಧಿಗಳ ಸುರಿಮಳೆಯಾಗಿ ಮಣ್ಣುಹುಳುಗಳಿಗೆ ವಾಸಮಾಡಲು ಜಾಗವೇ ಇಲ್ಲವಾಯಿತು.
ಸಾವಿರಾರು ಅಡಿಗಳ ಆಳದ ಕೊಳವೆಬಾವಿಗಳನ್ನು ಕೊರೆದು ಅಂತರ್ಜಲದ ಮಟ್ಟ ಪಾತಾಳಕ್ಕೆ ಕುಸಿದು ಭೂಮೇಲ್ಮೈಯಲ್ಲಿ ಮಣ್ಣುಹುಳು ಇರಲಾಗದ ಪರಿಸ್ಥಿತಿ ಏರ್ಪಟ್ಟಿತು. ಒಟ್ಟಿನಲ್ಲಿ ತನಗೆ ಆಶ್ರಯವಿತ್ತು ಕಾಪಾಡಿದ ಮಣ್ಣುಹುಳುಗಳನ್ನು ಆಧುನಿಕ ಮನುಷ್ಯ ಇಲ್ಲವಾಗಿಸಿದನು.
ಕಾಡಿನಲ್ಲಿ ನದಿದಂಡೆಯಲ್ಲಿ ಮಾತ್ರ ಕಣ್ಣಿಗೆ ಬೀಳುತ್ತಿದ್ದ ಮಣ್ಣುಹುಳುಗಳ ಪೈಕಿ ಒಂದು ಮಣ್ಣುಹುಳು ನನ್ನ ಕಣ್ಣಿಗೆ ಬಿದ್ದು ನನ್ನನ್ನು ಪ್ರಶ್ನಿಸಿತು: “ಓ ಮಾನವ ! ನೀನು ಇಲ್ಲಿಗೂ ಬಂದೆಯಾ ?
ನಿಮಗಾಗಿ ಫಲವತ್ತಾದ ನದಿದಂಡೆಯನ್ನು ಸಿದ್ಧಪಡಿಸಿದ ಬಿಟ್ಟಿ ಚಾಕರಿಯ ಮಣ್ಣುಹುಳುಗಳು ನಾವಲ್ಲವೇ ? ನಿಮ್ಮನ್ನು ಕಂಡರೆ ನಮಗೆ ತುಂಬಾ ಭಯ. ನಿಮ್ಮ ನೆರಳು ಈ ಕಾಡಿನಲ್ಲೂ ಕಂಡು ನಮಗಿನ್ನು ಉಳಿಗಾಲ ಇಲ್ಲವೆಂದು ತೋರುತ್ತದೆ. ನೀವೇಕೆ ನಾಡು ಬಿಟ್ಟು ಈ ಕಾಡಿಗೆ ಬಂದಿರಿ ?” ………
ಈ ಪ್ರಶ್ನೆ ಬಾಣಗಳಿಗೆ ಉತ್ತರಿಸುವ ಶಕ್ತಿಯಿಲ್ಲದೆ ನಾನು ಮೂಕನಾಗಿ ನಡೆಯುತ್ತಾ ನನ್ನ ಬಿಡಾರದ ಬಳಿ ಕುಳಿತು ಏಕಾಂತದ ಸತ್ಯದರ್ಶನಕ್ಕೆ ಬೆಚ್ಚಿ ಬೆರಗಾದೆನು.
ಪ್ರೊ.ನೆಂಗ್ಲಿ ಜಂಗ್ಲಿರವರ ಫೇಸ್ ಬುಕ್ ವಾಲ್ ನಿಂದ.