• Sun. Nov 3rd, 2024

PLACE YOUR AD HERE AT LOWEST PRICE

2022-23ನೇ ಸಾಲಿಗೆ ರಾಜ್ಯಾದ್ಯಂತ ಎಲ್ಲ ಉಪನೊಂದಣಾಧಿಕಾರಿಗಳ ಕಚೇರಿಗಳಲ್ಲಿ ರೂ 15 ಸಾವಿರ ಕೋಟಿ ವಹಿವಾಟು ನಡೆಸುವಂತೆ ಟಾರ್ಗೆಟ್ ನೀಡಿದ್ದು, ರೂ 17650 ಕೋಟಿ ವಹಿವಾಟು ನಡೆಸಿ ಟಾರ್ಗೆಟ್‍ಗಿಂತ ಹೆಚ್ಚಿನ ಸಾಧನೆ ಮಾಡಿರುವುದಾಗಿ ನೊಂದಣಿ ಮತ್ತು ಮುದ್ರಾಂಕ ಇಲಾಖೆ ಇನ್ಸ್‍ಪೆಕ್ಟರ್ ಜನರಲ್(ಐಜಿಆರ್) ಮಮತ ಹೇಳಿದರು.

ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಉಪ ನೊಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮಾತನಾಡಿದರು. ಈ ಬಾರಿ 2023-24ನೇ ಸಾಲಿಗೆ 19 ಸಾವಿರ ಕೋಟಿ ರೂ ಟಾರ್ಗೆಟ್ ನೀಡಿದ್ದು ಈಗಾಗಲೇ 900 ಕೋಟಿ ರೂ ವಹಿವಾಟು ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಒಂದು ಸಾವಿರ ಕೋಟಿ ರೂಗಳ ಗುರಿಯನ್ನು ಸಾಧಿಸಲಿದ್ದೇವೆ ಎಂದರು.

ಕಾವೇರಿ 2.0 ತಂತ್ರಾಂಶವು ಜನಸ್ನೇಹಿಯಾಗಿದ್ದು, ಸಾರ್ವಜನಿಕರು ತಮ್ಮ ದಸ್ತಾವೇಜುಗಳನ್ನು ತಾವೇ ಸಿದ್ದಪಡಿಸಿಕೊಂಡು ಸಿಟಿಜನ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡುವ ಮೂಲಕ ಮಧ್ಯವರ್ತಿಗಳ ಹಾವಳಿಯಿಲ್ಲದೇ ಸುಲಭವಾಗಿ ನೊಂದಣಿ ಮಾಡಿಕೊಳ್ಳಬಹುದಾಗಿದ್ದು, ಇಲ್ಲಿಯವರೆಗೆ ದಿನವೊಂದಕ್ಕೆ 40 ನೊಂದಣಿಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಮಾಣ 80ಕ್ಕೇರಲಿದೆ ಎಂದರು.

ಕಳೆದ ಮಾರ್ಚ್ ತಿಂಗಳಿನಿಂದ ರಾಜ್ಯಾದ್ಯಂತ ಎಲ್ಲ ಉಪನೊಂದಣಾಧಿಕಾರಿಗಳ ಕಚೇರಿಗಳಲ್ಲಿ ಹಂತ ಹಂತವಾಗಿ ಕಾವೇರಿ 2.0 ತಂತ್ರಾಂಶವನ್ನು ಅಳವಡಿಸಲಾಗುತ್ತಿದೆ. ಏಕಕಾಲಕ್ಕೆ ಎಲ್ಲಾ ಕಡೆಗಳಲ್ಲಿ ನೂತನ ತಂತ್ರಾಂಶವನ್ನು ಅಳವಡಿಸಿದಲ್ಲಿ ಏನಾದರೂ ತಾಂತ್ರಿಕ ತೊಂದರೆಗಳು ಕಂಡುಬಂದಲ್ಲಿ ಸರಿಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲವಾದ್ದರಿಂದ ಹಂತ ಹಂತವಾಗಿ ಅಳವಡಿಸಲಾಗುತ್ತಿದೆ ಎಂದರು.

ಕಾವೇರಿ 2.0 ತಂತ್ರಾಂಶದಲ್ಲಿ ಸಾರ್ವಜನಿಕರೇ ತಮ್ಮ ದಸ್ತಾವೇಜುಗಳನ್ನು ಸಿದ್ದಪಡಿಸುವುದರಿಂದ ತಮ್ಮ ಆಸ್ತಿಗಳ ಮೌಲ್ಯವನ್ನು ತಿಳಿದುಕೊಳ್ಳಲು ಮತ್ತು ನೊಂದಣಿ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಚೇಂಜ್ ಮ್ಯಾನೇಜ್‍ಮೆಂಟ್ ತತ್ವದಡಿಯಲ್ಲಿ ಹಳೆಯ ಪದ್ಧತಿಯಿಂದ ಹೊಸ ಪದ್ಧತಿಗೆ ಹೊಂದಿಕೊಳ್ಳುವ ಸಮಯದಲ್ಲಿ ಎದುರಾಗುವಂತೆ ತೊಂದರೆಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ.

ಈ ಹೊಸ ತಂತ್ರಾಂಶವನ್ನು ಅಳವಡಿಸಿಕೊಳ್ಳುವುದಕ್ಕೆ ಕಳೆದ ಫೆಬ್ರವರಿ ತಿಂಗಳಿನಿಂದ ಸಾರ್ವಜನಿಕರಿಗೆ ಸಾಕಷ್ಟು ತರಬೇತಿಗಳನ್ನು ಮತ್ತು ಹೊಸ ತಂತ್ರಾಂಶದ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುತ್ತಿದ್ದು, ಯಾವ ರೀತಿ ಇದನ್ನು ಉಪಯೋಗಿಸಬೇಕೆಂಬ ಬಗ್ಗೆ ತರಬೇತಿಗಳನ್ನು ನೀಡುತ್ತಾ ಬಂದಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಉಪ ನೊಂದಣಾಧಿಕಾರಿಗಳಿಗೂ ಇದು ಹೊಸದಾಗಿದ್ದು, ಕಾಲ ಕ್ರಮೇಣ ಎಲ್ಲವೂ ಸರಿಯಾಗಲಿದೆ ಎಂದರು.

ನೂತನ ತಂತ್ರಾಂಶ ಅಳವಡಿಕೆಯಿಂದಾಗಿ ಎಲ್ಲವೂ ಪಾರದರ್ಶಕವಾಗಿದ್ದು, ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಇರುವುದಿಲ್ಲ ಹಾಗೂ ಸಾರ್ವಜನಿಕರು ನೊಂದಣಿ ಪ್ರಕ್ರಿಯೆಯ ಬಗ್ಗೆ ಭಯ ಪಡುವ ಅಗತ್ಯವಿರುವುದಿಲ್ಲ. ಬಹುಮುಖ್ಯವಾಗಿ ಸಾರ್ವಜನಿಕರು ತಮ್ಮ ಆಸ್ತಿಗಳ ನೊಂದಣಿ ಶುಲ್ಕವನ್ನು ನೇರವಾಗಿ ಖಜಾನೆ-2 ಖಾತೆಗೆ ಜಮೆ ಮಾಡುವುದರಿಂದ ಯಾವುದೇ ರೀತಿಯ ನಗದು ವ್ಯವಹಾರ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನಡೆಯುವುದಿಲ್ಲ.

ಜಿಲ್ಲಾ ನೊಂದಣಾಧಿಕಾರಿ ಶ್ರೀದೇವಿ, ಕೆಜಿಎಫ್ ಪ್ರಭಾರಿ ಉಪ ನೊಂದಣಾಧಿಕಾರಿ ಶಿವರಾಜ್, ಬಂಗಾರಪೇಟೆ ಉಪ ನೊಂದಣಾಧಿಕಾರಿ ಸುಮಲತ, ಶ್ರೀನಿವಾಸಪುರ ಉಪ ನೊಂದಣಾಧಿಕಾರಿ ಕವಿತ, ಮುಳಬಾಗಿಲು ಉಪ ನೊಂದಣಾಧಿಕಾರಿ ಬಯ್ಯಾರೆಡ್ಡಿ, ಸಿಬ್ಬಂದಿ ಮಂಜುನಾಥ್, ಮುರಳೀಧರ್, ಇಂಜಿನಿಯರ್‍ಗಳಾದ ದೇವರಾಜ್, ಸಂದೀಪ್, ಕಂಪ್ಯೂಟರ್ ಆಪರೇಟರ್‍ಗಳಾದ ಮಂಜುನಾಥ್, ಸುಶ್ಮಿತ, ರೋಜಾ ಮೊದಲಾದವರು ಇದ್ದರು.

Related Post

ದೇವನಹಳ್ಳಿಯಿಂದ ಹೊಸೂರು ವರಗೆ 3190 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಅನುಮೋದನೆ: ಕೊತ್ತೂರು ಮಂಜುನಾಥ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಸಮತಾ ಸಂಘರ್ಷ ಸಮಿತಿ  ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್

Leave a Reply

Your email address will not be published. Required fields are marked *

You missed

error: Content is protected !!