• Thu. Mar 28th, 2024

ಸಿಎಂಆರ್ ಶ್ರೀನಾಥ್ ಸ್ವಾಭಿಮಾನಿ ನೆಲನಿಷ್ಠ ರಾಜಕಾರಣಕ್ಕೆ ಸೇತುವೆಯಾಗಬಲ್ಲರು, ಏಕೆಂದರೆ ಅವರು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು – ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ

PLACE YOUR AD HERE AT LOWEST PRICE

ಕೋಲಾರ: ದಲಿತ ಪ್ರಜ್ಞೆ ಇಂದು ಲೇಲೇಕರ್ ಶೂಗಳಡಿ ಸಿಕ್ಕಿಬಿದ್ದಿದೆ. ದಲಿತ ನಾಯಕರು ದಲ್ಲಾಳಿಗಳಾಗಿದ್ದಾರೆ, ದಲಿತ ಮತದಾರರೇ ಜಾಗೃತಗೊಳ್ಳಿ. ತಮ್ಮ ಅವಸಾನ ಹತ್ತಿರವಾಗುತ್ತಿದೆ. ತಮ್ಮ ಗೋರಿಗಳನ್ನು ತಾವೇ ತೋಡಿಕೊಳ್ಳುವುದನ್ನು ನಿಲ್ಲಿಸಿ. ಸ್ವತಂತ್ರ ಮತ ಶಕ್ತಿಯಾಗುವತ್ತ ಹೆಜ್ಜೆ ಇಡಿ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಕರೆ ನೀಡಿದ್ದಾರೆ

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಡಬಲ್ ಎಂಜಿನ್ ರೈಲನ್ನು ಹಳಿ ತಪ್ಪಿಸಿ. ಅವರು ಮೀಸಲಾತಿ ವಿಚಾರದಲ್ಲಿ ಇನ್ನೊಬ್ಬರ ತಟ್ಟೆಯ ಅನ್ನ ಕಸಿಯಲು ಹೊರಟಿದ್ದಾರೆ. ರೈತ ವಿರೋಧ ಕಾಯ್ದೆ ಜಾರಿ ಮಾಡಿದ್ದಾರೆ. ನೂತನ ಶಿಕ್ಷಣ ನೀತಿ ಎಂಬ ಅನೈತಿಕ ಶಿಕ್ಷಣ ಪದ್ಧತಿ ಜಾರಿಗೆ ತಂದು ಶೇ ೯೦ರಷ್ಟಿರುವ ಬಹುಜನರ ಮುಂದಿನ ಪೀಳಿಗೆಯನ್ನು ನಿರಕ್ಷರನ್ನಾಗಿಸಲು ಹೊರಟಿದ್ದಾರೆ. ಹೀಗಾಗಿ, ಬಿಜೆಪಿಯನ್ನು ತಿರಸ್ಕರಿಸಿ ಎಂದು ಕರೆ ನೀಡಿದರು.

ಬಿಜೆಪಿ ಸೋಲಿಸುವುದು ನಮ್ಮ ಮೊದಲ ಆದ್ಯತೆ. ಎರಡನೆಯದು ಪಕ್ಷ ಮತ್ತು ವ್ಯಕ್ತಿ ಬಲದಿಂದ ಕೊಬ್ಬಿರುವ ಕೊತ್ತೂರು ಮಂಜು ಎಂಬ ತಾಯಿಬೇರಿಗೆ ಬಿದ್ದಿರುವ ಗೆದ್ದಲನ್ನು ನಿವಾರಿಸಿ. ನಾನು ಇರುವೆ ಬಲದವನೇ ಇರಬಹುದು. ಆದರೆ, ಅವರ ಲೇಲೇಕರ್ ಶೂಗಳಡಿ ಸಿಕ್ಕಿಬಿದ್ದಿರುವ ಕ್ರಿಮಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣ ಹಾಗೂ ಅದರ ನೇತಾರರ ಧೃತರಾಷ್ಟ್ರ ಪುತ್ರ ಪ್ರೇಮವನ್ನು ನಾನು ಕಟುವಾಗಿ ಟೀಕಿಸುತ್ತೇನೆ. ನನಗೆ ಆ ಪಕ್ಷಕ್ಕಿಂತ ವ್ಯಕ್ತಿಯಾಗಿ ಸಿಎಂಆರ್ ಶ್ರೀನಾಥ್ ಒಪ್ಪಿಗೆಯಾಗಿದ್ದಾರೆ’ ಎಂದು ಹೇಳಿದ ಅವರು. ಈ ಬಾರಿಯ ಚುನಾವಣೆಯಲ್ಲಿ ನಾನು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರನ್ನು ಬೆಂಬಲಿಸುತ್ತೇನೆ.

ಕಾರಣ, ಶ್ರೀನಾಥ್ ಸ್ವಾಭಿಮಾನಿ ನೆಲನಿಷ್ಠ ರಾಜಕಾರಣಕ್ಕೆ ಸೇತುವೆಯಾಗಬಲ್ಲರು ಎಂಬ ವಿಶ್ವಾಸ ನನ್ನದು. ಏಕೆಂದರೆ ಅವರು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಇದು ನನ್ನ ವೈಯಕ್ತಿಕ ತೀರ್ಮಾನ. ನಾನು ಅವರಿಂದ ಯಾವುದೇ ವೈಯಕ್ತಿಕ ಲಾಭ ನಿರೀಕ್ಷಿಸುವುದಿಲ್ಲ. ಇದನ್ನು ದಲಿತ ಸಮುದಾಯ ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಅದು ಅವರ ಆಯ್ಕೆಯ ಸ್ವಾತಂತ್ರ‍್ಯ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಸುಳ್ಳು ಜಾತಿ ಪ್ರಮಾಣ ಸಲ್ಲಿಸಿ ೫ ವರ್ಷ ಪ್ರತಿನಿಧಿಸಿ ಎಲ್ಲಾ ಸವಲತ್ತು ನುಂಗಿ ನೀರು ಕುಡಿದಿರುವ ಕೊತ್ತೂರು ತಮ್ಮ ಮನೆಯ ಹಾಲಿನ ಪಾಲನ್ನೂ ಕದ್ದು, ಆ ಮಡಕೆಯನ್ನೂ ಒಡೆದು ಹಾಕಿದ್ದಾರೆ. ಅಂಥವರನ್ನು ಮಡಿಲಲ್ಲಿ ಇಟ್ಟುಕೊಂಡು ಲಾಲಿ ಹಾಡುತ್ತಿರುವ ಜಿಲ್ಲೆ ಹಾಗೂ ರಾಜ್ಯಮಟ್ಟದ ಕಾಂಗ್ರೆಸ್ ಪಕ್ಷದ ಧೋರಣೆಗೆ ಧಿಕ್ಕಾರ ಹೇಳಿ ಎಂದು ಮನವಿ ಮಾಡಿದರು.

ಇಂಥ ಚಾರಿತ್ರಿಕ ವಂಚನೆಯ ಬೆನ್ನಿಗೆ ನಿಂತಿರುವ ದಲಿತ ನಾಯಕರೆಂಬ ಸಮುದಾಯದ ಮತ ಹಿಡುಕ ದಲ್ಲಾಲಿಗಳನ್ನು ಧಿಕ್ಕರಿಸಿ ದೂರ ಇಡಿ. ೭೦-೮೦ರ ದಶಕದ ಈ ಹೋರಾಟಗಾರರ ರಕ್ತ ಇಂದು ಚುನಾವಣಾ ಕಾಲದ ದಲ್ಲಾಳಗಿರಿಗೆ ಒಗ್ಗಿ ಹೋಗಿದೆ. ನರ ಸತ್ತು ನಡುಬಗ್ಗಿದವರಾಗಿದ್ದಾರೆ. ದಲಿತ ಸಮುದಾಯದ ಮತಗಳೆಲ್ಲವೂ ತಮ್ಮ ಜೇಬಿನಲ್ಲಿದೆ ಎಂದು ನಂಬಿಸುತ್ತಿರುವ ಇವರ ನೌಟಂಕಿ ಆಟಕ್ಕೆ ಮಂಗಳ ಹೇಳಿ ತೆರೆ ಎಳೆಯಿರಿ ಎಂದರು.

Leave a Reply

Your email address will not be published. Required fields are marked *

You missed

error: Content is protected !!