• Mon. May 29th, 2023

ಕೋಲಾರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ಏಕೈಕ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರಿಗೆ ೨೦೨೩ರ ಸರ್ಕಾರದಲ್ಲಿ ಸಂಪುಟ ಸಚಿವ ಸ್ಥಾನ ನೀಡಬೇಕೆಂದು ಎಸ್.ಎನ್. ಆಭಿಮಾನಿ ಬಳಗ ನೂತನ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೋಲಾರ ನಗರ ದೇವತೆ ಕೋಲಾರಮ್ಮಾ ದೇವಾಲಯದಲ್ಲಿ ಗುರುವಾರ ಮದ್ಯಾಹ್ನ ಎಸ್.ಎನ್.ಅಭಿಮಾನಿಗಳ ಬಳಗ ನೂರೊಂದು ತೆಂಗಿನಕಾಯಿಗಳನ್ನು ಹೊಡೆಯುವ ಮೂಲಕ ದೇವರಿಗೆ ಹರಕೆ ಅರ್ಪಿಸಿದರು. ನಂತರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರಲ್ಲದೆ, ಕೋಲಾರಮ್ಮಾ ದೇವಾಲಯದ ಸುತ್ತ ಅರೆ ಬೆತ್ತಲೆ ಉರುಳುಸೇವೆ ಮಾಡಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿರವಗೆ ಸಚಿವ ಸ್ಥಾನ ಕರುಣಿಸಬೇಕೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ದೇವರಿಗೆ ಈಡುಗಾಯಿ ಅರ್ಪಣೆ ಹಾಗೂ ಉರುಳುಸೇವೆ ಸಲ್ಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಎಸ್.ಎನ್.ಆಭಿಮಾನಿ ಬಳಗದ ಮುಖಂಡ ಹಾಗೂ ತಾಲ್ಲೂಕು ಎಸ್ಸಿ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅ.ನಾ.ಹರೀಶ್, ಕೋಲಾರ ಜಿಲ್ಲೆಯ ಇತಿಹಾಸದಲ್ಲಿ ಒಮ್ಮೆ ಬಂಗಾರಪೇಟೆಯ ಶಾಸಕರಾಗಿ ರಾಜ್ಯದ ಮೊದಲ ಮುಖ್ಯಮಂತ್ರಿಯಾದ ಕೆ.ಸಿ.ರೆಡ್ಡಿಯವರ ನಂತರ ಬಂಗಾರಪೇಟೆ ಶಾಸಕರಿಗೆ ಮಂತ್ರಿಗಿರಿ ಕೊಟ್ಟಿರಲಿಲ್ಲ, ಜಿಲ್ಲೆಯಲ್ಲೇ ಅತಿ ಹೆಚ್ಚು ದಲಿತ ಮತದಾರರು ಇರುವ ಬಂಗಾರಪೇಟೆ ಕ್ಷೇತ್ರದಿಂದ ಸತತ ಮೂರು ಬಾರಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ ಎಸ್. ಎನ್. ನಾರಾಯಣಸ್ವಾಮಿರವರು ಹ್ಯಾಟ್ರಿಕ್ ಗೆಲುವು ಪಡೆದಿರುವ ಪ್ರಸ್ತುತ ಶಾಸಕರಲ್ಲಿ ಹಿರಿಯ ಹಾಗೂ ಅನುಭವಿ ಶಾಸಕರಾಗಿದ್ದು, ಮುಂಬರುವ ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯ ಶಾಸಕರ ಪೈಕಿ ಹ್ಯಾಟ್ರಿಕ್ ಗೆಲುವು ಪಡೆದಿರುವ ಏಕೈಕ ಶಾಸಕರು ಮಾತ್ರವಲ್ಲದೆ, ಜಿಲ್ಲೆಯಲ್ಲಿ ಮೂರು ಕ್ಷೇತಗಳು ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳಾಗಿದ್ದರೂ ಇಲ್ಲಿನ ದಲಿತ ಶಾಸಕರಿಗೆ ಮಂತ್ರಿ ಸ್ಥಾನಮಾನ ನೀಡಲಿಲ್ಲವಾದ್ದರಿಂದ ಈ ಬಾರಿ ಅನುಭವ ಹಾಗೂ ಹಿರಿತನದ ಆಧಾರದಲ್ಲಿ ಎಸ್.ಎನ್.ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿದರು.

ಚಿಕ್ಕಅಂಕಡಹಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಆದ್ಯಕ್ಷ ಸಿ.ಎಂ.ಹರೀಶ್ ಮಾತನಾಡಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿರವರು ಕಳೆದ ೩೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಿಸ್ತಿನ ಕಾರ್ಯಕರ್ತರಾಗಿ, ನಗರಸಭೆ ಸದಸ್ಯರಾಗಿ, ಎರಡು ಬಾರಿ ಯಶಸ್ವೀ ಶಾಸಕರಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದಾರೆ ಅಲ್ಲದೆ ಕಳೆದ ಸಮಿಶ್ರ ಸರ್ಕಾರದಲ್ಲಿ ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ದಲಿತ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಮಾದರಿ ಸಚಿವರಾಗಿ ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು, ತಪ್ಪಿದರೆ ಎಸ್.ಎನ್. ಅಭಿಮಾನಿ ಬಳಗ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬೆಂಗನೂರು ಮಂಜುನಾಥ್, ಮುತ್ತುಕುಮಾರ್, ಕೀಲುಕೊಪ್ಪ ಶ್ರೀನಿವಾಸ್, ವೆಂಕಟರಾಜು, ಅಬ್ಬಣಿ ಅರುಣ್, ಜಬೀವುಲ್ಲಾ, ಶಬ್ಬಿಕ್, ಮುನಿರಾಜು, ಚಿನ್ನಾ ಮತ್ತಿತ್ತರರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!