PLACE YOUR AD HERE AT LOWEST PRICE
ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ರವರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವುದು ಹಾಗೂ ಮಹಿಳಾ ಅಧಿಕಾರಿಗಳ ಕಚೇರಿಯಲ್ಲಿ ಮೇಲಧಿಕಾರಿಗಳ ಅನುಮತಿ ಇಲ್ಲದೇ ಅಥವಾ ಅವರ ಅನುಮತಿಯೂ ಇಲ್ಲದೆ ಮೊಬೈಲ್ ಚಿತ್ರೀಕರಣ ಮಾಡಿರುವುದು ಕಾನೂನು ಬಾಹಿರವಾಗಿದ್ದು ವಿಡಿಯೋ ಚಿತ್ರೀಕರಣ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋಲಾರ ಜಿಲ್ಲಾ ಭೋವಿ ನೌಕರರ ಸಂಘದ ಅಧ್ಯಕ್ಷ ರತ್ನಪ್ಪ ಆಗ್ರಹಿಸಿದ್ದಾರೆ.
ಇತ್ತೀಚಿಗೆ ಮಾದ್ಯಮಗಳಲ್ಲಿ ಬಂದ ಸುದ್ದಿಯನ್ನು ಆಧರಿಸಿ ಭೋವಿ ನೌಕರರ ಸಂಘದ ಜಿಲ್ಲಾ ಶಾಖೆಯಲ್ಲಿ ಚರ್ಚಿಸಿದ ನಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರತಿಷ್ಠಿತ ಎಪಿಎಂಸಿ ಮಾರುಕಟ್ಟೆಯಲ್ಲಿ ಸುಧಾರಣಾ ನಿಯಮಗಳನ್ನು ಜಾರಿಗೆ ತಂದು ಬಹುತೇಕ ವ್ಯಾಪಾರಿಗಳ, ರೈತರ ಹಿತಾಸಕ್ತಿಗಾಗಿ ಇಲಾಖಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಹೆಚ್ಚಿನ ತೆರಿಗೆಯನ್ನು ವಸೂಲಿ ಮಾಡಿ ಮಾರುಕಟ್ಟೆಯ ಆದಾಯ ಮತ್ತು ಕೀರ್ತಿಯನ್ನು ಹೆಚ್ಚಿಸುತ್ತಿರುವ ವಿಜಯಲಕ್ಷ್ಮಿ ರವರ ಸೇವೆ ಮಾರುಕಟ್ಟೆಗೆ ಅಗತ್ಯವಾಗಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ವಿಷಯವನ್ನು ಅವಲೋಕಿಸಿ ಖುದ್ದು ವಿಚಾರಿಸಲಾಗಿ ಅವರು ಈ ಹುದ್ದೆಯನ್ನು ವಹಿಸಿಕೊಂಡಾಗಿನಿoದ ಕೆಲವರು ಅವರ ಕಾರ್ಯವೈಖರಿಯನ್ನು ಸಹಿಸುತ್ತಿಲ್ಲ ಎಂದು ತಿಳಿಸಿದರು.
ದಲ್ಲಾಳರ ಸಂಘದ ಕೆಲವರು ಅಂಗಡಿ ಸಂಖ್ಯೆ ೧೨೩ರ ವಿಚಾರವಾಗಿ ಮೂಲ ದಾಖಲೆಗಳಿಗೆ ವಿರುದ್ಧವಾಗಿ ಅನಧಿಕೃತವಾಗಿ ಪರಭಾರೆ ಮಾಡಲು ಹಲವು ಬಾರಿ ಒತ್ತಡ ಹಾಕಿದ್ದರೂ ಅದಕ್ಕೆ ಮಣಿಯದಿದ್ದಾಗ ಸಮಯ ಸಾಧಿಸಿ ಅವರ ಕಚೇರಿಯಲ್ಲಿಯೇ ನೈಜ ಸಂಭಾಷಣೆ ಹೆಸರಿನಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ. ಈ ಕೃತ್ಯ ಅಮಾನವೀಯ ಹಾಗೂ ನಿಯಮ ಬಾಹಿರವಾಗಿದೆ ಎಂದು ಗುಡುಗಿದರು.
ಕಾರ್ಯದರ್ಶಿ ವಿಜಯಲಕ್ಷ್ಮಿಯವರು ಲಂಚ ಕೇಳಿದ್ದರೆ ಅಥವಾ ಪಡೆದಿದ್ದರೆ ಅದಕ್ಕೆ ಪುಷ್ಟಿ ನೀಡಬಹುದಾದ ಸೂಕ್ತ ದಾಖಲೆಗಳು ಇದ್ದರೆ ಅದನ್ನು ಮೇಲಾಧಿಕಾರಿಗಳಿಗೆ ಇಲ್ಲವೇ ಲೋಕಾಯುಕ್ತರಿಗೆ ದೂರು ನೀಡಲಿ. ಆಧಾರ ರಹಿತವಾಗಿ ಅಧಿಕಾರಿಯ ಸೇವೆಯನ್ನು ಸಹಿಸದೆ ವಿನಾಕಾರಣ ಮಾಧ್ಯಮಗಳ ಮೂಲಕ ಆರೋಪ ಮಾಡುವುದು. ಕೆಲವರು ಗುಂಪು ಕಟ್ಟಿಕೊಂಡು ಪ್ರತಿಭಟನೆ ಮಾಡುವುದು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಿರುದರಿಂದ ಅವರ ವೃತ್ತಿ ಹಾಗೂ ವೈಯಕ್ತಿಕ ಜೀವನಕ್ಕೆ ದಕ್ಕೆ ಉಂಟಾಗಿದೆ. ಒಬ್ಬ ಮಹಿಳಾ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸಂಭಾಷಣೆಯನ್ನು ಗೌಪ್ಯವಾಗಿ ರೆಕಾರ್ಡ್ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.
ಸ್ವಯಂ ಘೋಷಿತವಾಗಿ ಪ್ರತಿ ಶನಿವಾರ ವ್ಯಾಪಾರ ವಹಿವಾಟು ನಡೆಸಿದೆ ರಜೆಯನ್ನು ಘೋಷಿಸುವುದು. ರೈತರು ತಂದ ತರಕಾರಿಯ ಪ್ರತಿ ಮೂಟೆಗೆ ೫ ಕೆಜಿ ಲೆಸ್ ಮಾಡುವುದು ದಲ್ಲಾಳರ ಸರಿಯಾದ ಕ್ರಮವಲ್ಲ ಎಂದು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ವಿರೋಧಿಸುವುದು ಖಂಡನೀಯ. ಈ ವರ್ತನೆಯಿಂದ ಒಬ್ಬ ಮಹಿಳಾ ನೌಕರರು ಮಾನಸಿಕ ಆಘಾತಕ್ಕೆ ಒಳಗಾಗಿ ಉಂಟಾಗುವ ಅನಾಹುತಗಳಿಗೆ ದಲ್ಲಾಳರ ಸಂಘದವರು ಕಾರಣವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಗೌರವಾಧ್ಯಕ್ಷ ಟಿ ವೆಂಕಟರವಣಪ್ಪ ಮಾತನಾಡಿ, ದಲ್ಲಾಳರ ಬೇಡಿಕೆಗಳನ್ನು ನಿಯಮಾನುಸಾರ ಬಗೆಹರಿಸಿಕೊಂಡು ಉಂಟಾಗಬಹುದಾದ ಅಸಹಜ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಕಾರ್ಯದರ್ಶಿಯವರು ಜಿಲ್ಲಾ ಭೋವಿ ನೌಕರರ ಸಂಘದ ಪದಾಧಿಕಾರಿಯಾಗಿದ್ದು, ಅವರ ವಿರುದ್ಧ ನಡೆಯುತ್ತಿರುವ ಪಿತೂರಿಯನ್ನು ಸಂಘ ತಿವ್ರವಾಗಿ ಖಂಡಿಸುತ್ತದೆ ಎಂದರು.
ಅಧಿಕಾರಿಗಳ ಅನುಮತಿ ಇಲ್ಲದೆ ವಿಡಿಯೋ ಚಿತ್ರೀಕರಣ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒಕ್ಕೊರಲಿನಿಂದ ಒತ್ತಾಯಿಸಿರುವ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಂಕರ ವಣಿಕ್ಕಳ್ ರವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಟಿ ವೆಂಕಟರಮಣಪ್ಪ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುನಿರಾಮಯ್ಯ ಮುಳಬಾಗಿಲು ತಾಲೂಕು ಅಧ್ಯಕ್ಷ ನಾರಾಯಣಪ್ಪ ಬಂಗಾರಪೇಟೆ ತಾಲೂಕು ಅಧ್ಯಕ್ಷ ಸಂಜೀವಪ್ಪ ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಹನುಮಪ್ಪ ಪದಾಧಿಕಾರಿಗಳಾದ ರಾಮಕೃಷ್ಣಪ್ಪ ರೆಡ್ಡಪ್ಪ ರುದ್ರಪ್ಪ ಅಶೋಕ್ ಮತ್ತು ರಾಮಕೃಷ್ಣಪ್ಪ ವಿ ರವರು ಇದ್ದರು.