ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೋಲಾರ,ಜು.೦೫: ಕರ್ನಾಟಕ ಸರ್ಕಾರವು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ಅಳವಡಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ನೇಮಕಾತಿಗೆ ಪಾಲಿಸಬೇಕಾದ ನಿಯಮಗಳನ್ನು ಮಾರ್ಪಡಿಸುವಂತೆ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ಸಹಾಯಕ ನಿರ್ದೇಶಕ ಶ್ರೀನಿವಾಸಡ್ಡಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ದಿನಾಂಕ: ೨೦/೦೫/೨೦೨೪ ರ ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ, ಕರ್ನಾಟಕ ಸರ್ಕಾರವು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ನಿಯಮಗಳನ್ನು ಅನ್ವಯಿಸಿ ನೇಮಕ ಪ್ರಕ್ರಿಯೆ ನಡೆಸಲು ಆದೇಶ ನೀಡಿರುವುದನ್ನು ದಲಿತ ಸಂಘರ್ಷ ಸಮಿತಿಯು ಸ್ವಾಗತಿಸುತ್ತವೆ.
ಹಲವಾರು ವರ್ಷಗಳ ಪರ್ಯಾತ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳೇ ನಡೆಯದೆ ಅಹಿಂದ ಸಮುದಾಯದ ಲಕ್ಷಾಂತರ ನಿರುದ್ಯೋಗಿ ಯುವ ಸಮೂಹವು ಅಕ್ಷರಶಃ ಬೀದಿಗೆ ಬಿದ್ದಿತ್ತು. ಇಂತಹ ನಿರಾಶದಾಯಕ ಹೊತ್ತಿನಲ್ಲಿ ತಮ್ಮ ಸರ್ಕಾರದ ಈ ಆದೇಶವು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪ್ರಮುಖ ಹೆಜ್ಜೆ ಆಗಲಿದೆ, ಆದರೆ, ಸುತ್ತೋಲೆಯ ೧ನೇ ಮತ್ತು ೬ನೇ ಷರತ್ತುಗಳು ಈ ಆದೇಶದ ಸದುದ್ದೇಶದ ಆಶಯಗಳಿಗೆ ವಿರುದ್ಧವಾಗಿದೆ.
೧ನೇ ಷರತ್ತಿನಲ್ಲಿ ಹೊರಗುತ್ತಿಗೆ ಮೀಸಲಾತಿ ನೀತಿಯು ೪೫ ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ ಎಂದಿದೆ. ಇದು ಮೀಸಲಾತಿ ವಿರೋಧಿಗಳಿಗೆ ಅನುಕೂಲಕರವಾಗಿದ್ದು ಅದನ್ನು ರದ್ದುಪಡಿಸಿ ಎಷ್ಟೇ ಅವಧಿಯ ನೇಮಕಾತಿ ಮಾಡಿಕೊಂಡರೂ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಆದೇಶಿಸಬೇಕು.
೬ನೇ ಷರತ್ತಿನಲ್ಲಿ ಯಾವುದೇ ಇಲಾಖೆಯಲ್ಲಿ ಕನಿಷ್ಠ ೨೦ ಅಭ್ಯರ್ಥಿಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸತಕ್ಕದ್ದು ಎಂದಿರುವುದು ತುಂಬಾ ಅವೈಜ್ಞಾನಿಕ ಮತ್ತು ಮರುದ್ದೇಶಪೂರಿತವಾಗಿದೆ. ಮೀಸಲಾತಿಯನ್ನು ವಂಚಿಸಿಲು ಸದಾ ಸಿದ್ದ ಇರುವವರಿಗೆ ಈ ನಿಬಂಧನೆ ಸಹಕಾರಿ ಆಗಲಿದೆ. ೨೦ ಕ್ಕೂ ಹೆಚ್ಚಿನ ಸಂಖ್ಯೆಯ ನೇಮಕಾತಿಗಳಿದ್ದಾಗ ಮಾತ್ರ ಮೀಸಲಾತಿ ನೀತಿ ಅನ್ವಯಿಸುತ್ತದೆ ಎಂದು ಸರ್ಕಾರವೇ ನಿಬರ್‌ಂಧ ಒಡ್ಡಿದರೆ, ಎಲ್ಲಾ ನೇಮಕಾತಿ ಉದ್ಯೋಗಗಳನ್ನು ೨೦ರ ಒಳಗೇ ನಿಗದಿ ಮಾಡುತ್ತಾ ಹೋಗುವ ಮೀಸಲಾತಿ ವಂಚಕರ ಚಾಳಿಗೆ ಇದು ರತ್ನಗಂಬಳಿ ಹಾಸಿ ರಹದಾರಿ ಕಲ್ಪಿಸಿ ಕೊಟ್ಟಂತಾಗುತ್ತದೆ.
ಇದುವರೆಗೆ ನಡೆದಿರುವ ನೇಮಕಾತಿ ಪ್ರಕ್ರಿಯೆಗಳನ್ನು ಅವಲೋಕನ ಮಾಡಿದರೆ ಜಾತಿವಾದಿ ಅಧಿಕಾರಿಗಳ ಮೀಸಲಾತಿ ವಿರೋಧಿ ದುರಾಡಳಿತಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಸಮಾಜದಲ್ಲಿ ಮೀಸಲಾತಿ ಬಗ್ಗೆ ಆಸಹನೆ ತುಂಬಿ ತುಳುಕುತ್ತಿರುವ ಹೊತ್ತಿನಲ್ಲಿ ಇಂತಹ ಷರತ್ತು ಬದ್ಧ ಆದೇಶವು, ನೇಮಕಾತಿ ಮಾಡುವ ವೇಳೆ ಪಕ್ಷಪಾತ ಮಾಡುವ ಜಾತಿವಾದಿ ಅಧಿಕಾರಿಗಳಿಗೆ ಕಾನೂನು ಬದ್ಧ ಪ್ರೋತ್ಸಾಹ ನೀಡಿದಂತಾಗುವುದರಲ್ಲಿ ಸಂದೇಹವೇ ಇಲ್ಲ.ಹಾಗಾಗಿ ಸದರಿ ೧ ಮತ್ತು ೬ ನೇ ಷರತ್ತನ್ನು ರದ್ದು ಪಡಿಸಲು ಸಾಮಾಜಿಕ ನ್ಯಾಯಕ್ಕೆ ಬದ್ಧತೆ ಹೊಂದಿರುವ ತಮ್ಮ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ದಸಂಸ ಆಗ್ರಹಿಸುತ್ತದೆ.
ಹುದ್ದೆಗಳ ಸಂಖ್ಯೆ ಎಷ್ಟೇ ಇರಲಿ ಮತ್ತು ಎಷ್ಟೇ ಅದಧಿಯದ್ದಾಗಿರಲಿ ಅಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ‘ರೋಸ್ಟರ್ ನಿಯಮಗಳ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇರಲೇಬೇಕು ಎಂದು ಸರ್ಕಾರ ಸದರಿ ಆದೇಶವನ್ನು ಮಾರ್ಪಾಡು ಮಾಡಿ, ಮರು ಸುತ್ತೋಲೆ ಹೊರಡಿಸಲು ಜರೂರು ಕ್ರಮಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
ಒಂದು ವೇಳೆ ಸರ್ಕಾರ ಈ ಸಂಬoಧವಾಗಿ ಯಾವುದೇ ತುರ್ತು ಕ್ರಮ ಕೈಗೊಳ್ಳದೇ ಇದ್ದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕ ಸರ್ಕಾರವನ್ನು ದಸಂಸ ಎಚ್ಚರಿಸುತ್ತದೆ.
ನಿಯೋಗದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರುಗಳಾದ ಹಾರೋಹಳ್ಳಿ ರವಿ, ಸಿ.ಜೆ.ನಾಗರಾಜ್, ಮಾಲೂರು ತಾಲೂಕು ಸಂಚಾಲಕ ಶೇಷಪ್ಪ, ಬಂಗಾರಪೇಟೆ ತಾಲೂಕು ಸಂಚಾಲಕ ಎಸ್.ವಿ.ರಮೇಶ್, ಕೋಲಾರ ತಾಲೂಕು ಸಂಚಾಲಕ ಬೀರಮಾನಹಳ್ಳಿ ಆಂಜನಪ್ಪ, ಕಲಾಮಂಡಳಿ ಸೂಲಿಕುಂಟೆ ಮುನಿರಾಜು, ಲಕ್ಕೂರು ಹೋಬಳಿ ಸಂಚಾಲಕ ನವೀನ್‌ಕುಮಾರ್, ಮಾಸ್ತಿ ಹೋಬಳಿ ಸಂಚಾಲಕ ಬಸವರಾಜ್, ಬಂಗಾರಪೇಟೆ ಸಂಘಟನಾ ಸಂಚಾಲಕ ಎನ್.ರಮೇಶ್, ಪಿಚ್ಚಗುಂಟ್ರಹಳ್ಳಿ ಪಿ.ವಿ.ಚಲಪತಿ, ಶ್ಯಾಗತ್ತೂರು ಜಗದೀಶ್ ಇದ್ದರು.