PLACE YOUR AD HERE AT LOWEST PRICE
ಪ್ರಧಾನ ಮಂತ್ರಿಗಳ ಕುರ್ಚಿ ಉಳಿಸಿಕೊಳ್ಳಲು ಆಂಧ್ರ ಮತ್ತು ಬಿಹಾರಕ್ಕೆ ವಿಶೇಷ ಅನುದಾನ ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಲು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಕರ್ನಾಟಕದಿಂದ ಆರಿಸಿ ಹೋಗಿರುವ ನಿರ್ಮಲಾ ಸೀತರಾಮನ್ ರಾಜ್ಯದ ನಿರೀಕ್ಷೆ ಸುಳ್ಳು ಮಾಡಿ ಅನ್ಯಾಯ ಎಸಗಿದ್ದಾರೆ. ರಾಜ್ಯದಿಂದ ನಾವು ಇಟ್ಟ ಬೇಡಿಕೆಗಳು, ಅವರೇ ಕೊಟ್ಟ ಭರವಸೆಗಳು ಎರಡನ್ನೂ ಈಡೇರಿಸಿಲ್ಲ” ಎಂದರು.
“ಕಲ್ಯಾಣ ಕರ್ನಾಟಕಕ್ಕೆ ನಾವು 5000 ಕೋಟಿ ಕೊಟ್ಡಿದ್ದೇವೆ. ಇದಕ್ಕೆ ಹೊಂದಾಣಿಕೆ ಅನುದಾನ ಕೇಳಿದ್ದೆವು. ಇದನ್ನೂ ಕೊಡಲಿಲ್ಲ. ಈ ಬಜೆಟ್ ನಲ್ಲಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರು 5 ವರ್ಷಗಳಿಂದ ಎಂಎಸ್‌ಪಿಗೆ ಕಾಯ್ದೆ ಮಾಡಬೇಕು ಎನ್ನುವ ಡಿಮ್ಯಾಂಡ್ ಇಟ್ಟಿದ್ದರು. ಈ ಬಗ್ಗೆ ಬಜೆಟ್‌ನಲ್ಲಿ ಚಕಾರವನ್ನೇ ಎತ್ತಿಲ್ಲ” ಎಂದು ಹೇಳಿದರು.
“ಶಿಕ್ಷಣಕ್ಕೆ ಫೆಬ್ರವರಿ ಬಜೆಟ್‌ನಲ್ಲಿ 1.21 ಲಕ್ಷ ಕೋಟಿ ಕೊಟ್ಡು ಈಗ ಇದನ್ನು 1.25 ಮಾಡಿದ್ದಾರೆ ಅಷ್ಟೇ. ಐಟಿ ಮತ್ತು ಸಂವಹನ ಕ್ಷೇತ್ರಕ್ಕೆ ಫೆಬ್ರವರಿಯಲ್ಲಿ 1.37 ಲಕ್ಷ ಕೋಟಿ ಇತ್ತು. ಈಗ ಇದನ್ನು 1.16 ಲಕ್ಷ ಕೋಟಿಗೆ ಇಳಿಸಿದ್ದಾರೆ. ಐದು ಜನ ಕೇಂದ್ರ ಸಚಿವರು ರಾಜ್ಯದವರು. ಈ ಐದೂ ಮಂದಿ ರಾಜ್ಯಕ್ಕೆ ಅನುಕೂಲ ಮಾಡಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಟೀಕಿಸಿದರು.
“ಫೆರಿಫೆರಲ್ ರಿಂಗ್ ರಸ್ತೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತರಾಮನ್ ಅವರು ತಾವೇ ಈ ಹಿಂದೆ ಘೋಷಿಸಿದ್ದ ಅನುದಾನವನ್ನೂ ನೀಡಿಲ್ಲ. ಎಸ್‌ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನದಲ್ಲೂ ಗಣನೀಯವಾಗಿ ಕಡಿತಗೊಳಿಸಿರುವುದು ಈ ಸಮುದಾಯಗಳಿಗೆ ಎಸಗಿರುವ ದ್ರೋಹ” ಎಂದರು.
“ಮೋದಿ ಸರ್ಕಾರ ಮತ್ತು ಈ ಸರ್ಕಾರದ ಬಜೆಟ್ ಮೇಲೆ ಯಾವ ಭರವಸೆಗಳೂ ಇಲ್ಲ. ಹಿಂದನ ಬಜೆಟ್‌ನಲ್ಲಿ ಅವರೇ ಘೋಷಿಸಿದ್ದನ್ನೇ ಇವತ್ತಿನವರೆಗೂ ಜಾರಿ ಮಾಡಿಯೇ ಇಲ್ಲ. ಹೀಗಾಗಿ ಈ ಬಾರಿ ಕೈಗಾರಿಕಾ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿರುವುದು ಕೇವಲ ಘೋಷಣೆಯಾಗಿ ಮಾತ್ರ ಉಳಿಯಲಿದೆ” ಎಂದು ಹೇಳಿದರು.
“ಬಜೆಟ್ ಪೂರ್ವ ಸಭೆಗೆ ನಿರ್ಮಲಾ ಸೀತರಾಮನ್ ಅವರು ನಮಗೂ ಆಹ್ವಾನಿಸಿದ್ದರು. ಈಗ ನೋಡಿದ್ರೆ ಯಾವ ಸಾರ್ಥಕತೆಗೆ ಕರೆದದ್ದು ಅನ್ನಿಸುತ್ತಿದೆ. ದಕ್ಷಿಣ ಭಾರತದಲ್ಲಿ ಆಂಧ್ರ ಹೊರತುಪಡಿಸಿ ಉಳಿದ ಯಾವ ರಾಜ್ಯಗಳಿಗೂ ಏನೂ ಸಿಕ್ಕಿಲ್ಲ” ಎಂದರು.