PLACE YOUR AD HERE AT LOWEST PRICE
ಬೆಂಗಳೂರು, ಆ 8, 2024: ಬೆಂಗಳೂರಿನಲ್ಲಿ ವಾಹನಗಳಿಂದ ಹೊರಹೊಮ್ಮುವ ಇಂಗಾಲದಿಂದ ಉಂಟಾಗುವ ದುಷ್ಪರಿಣಾಮ ತಗ್ಗಿ ಸಲು ಬಿದಿರು ನೆಡುವ ‘ಬಂಬೂ ಬೆಂಗಳೂರು’ ಅಭಿಯಾನಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಚಾಲನೆ ನೀಡಿದರು.
ದಿ ಗ್ರೀನ್ ಸ್ಕೂಲ್ ಬೆಂಗಳೂರು, ಭಾರತೀಯ ಬಿದಿರು ಸಂಸ್ಥೆ ಮತ್ತು ಅರಣ್ಯ ಇಲಾಖೆ ಸಹ ಯೋಗದಲ್ಲಿ ಬೆಂಗಳೂರಿನಲ್ಲಿ 30 ಸಾವಿರ ಬಿದಿರಿನ ಸಸಿ ನೆಡುವ ‘ಬಂಬೂಬೆಂಗಳೂರು’ ಅಭಿಯಾನ ಆರಂಭಿಸಲಾಗಿದೆ. ಅಭಿಯಾನಕ್ಕೆ ಸಂಬಂಧಿಸಿದ ವೆಬ್‌ಸೈಟ್ ಅನ್ನು ಈಶ್ವರ್ ಖಂಡ್ರೆ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಲೋಕಾರ್ಪಣೆ ಮಾಡಿದರು.
ನೂತನವಾಗಿ ಲೋಕಾರ್ಪಣೆ ಮಾಡಲಾಗಿರುವ ಬಂಬೂ ಬೆಂಗಳೂರು ವೆಬ್‌ಸೈಟ್‌ನಲ್ಲಿ ಬಿದಿರಿನ ಮಹತ್ವ ಸೇರಿದಂತೆ ಇನ್ನಿತರ ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ, ಬಿದಿರಿನ ಸಸಿ ನೆಟ್ಟ ಬಳಿಕ ಅದನ್ನು ಆನ್ ಲೈನ್ ಮೂಲಕ ದಾಖಲಿಸಲು ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಿಂದ ಸಾರ್ವಜನಿಕರೂ ಬಿದಿರಿನ ಸಸಿ ನೆಟ್ಟು, ಅದರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿ, ಸಮಾಜದ ಬಗ್ಗೆ ತಮಗಿರುವ ಕಾಳಜಿಯನ್ನು ಪ್ರದರ್ಶಿಸಬಹುದು ಎಂದು ಈಶ್ವರ್ ಖಂಡ್ರೆ ಹೇಳಿದರು.
ಈ ವೇಳೆ ಭಾರತೀಯ ಬಿದಿರು ಸಂಸ್ಥೆಯ ಮುಖ್ಯಸ್ಥ ಪುನಾತಿ ಶ್ರೀಧರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ಕುಮಾರ್ ದೀಕ್ಷಿತ್, ದಿ ಗ್ರೀನ್ ಸ್ಕೂಲ್ ಬೆಂಗಳೂರು ನಿರ್ದೇಶಕಿ ಉಷಾ ಅಯ್ಯರ್ ಇದ್ದರು.
ಹೆಚ್ಚಿನ ಮಾಹಿತಿಗಾಗಿ, www.bamboo4bangalore.org ನಲ್ಲಿ Bamboo 4 ಬೆಂಗಳೂರು ವೆಬ್ ಸೈಟ್ ಗೆ ಭೇಟಿ ನೀಡಬಹುದು.