PLACE YOUR AD HERE AT LOWEST PRICE
“ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದವರಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿತ್ತು” ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿಯಲ್ಲಿ ಕ್ಷಮೆಯಾಚಿಸಿದರೆ, ಅವರ ವಿರುದ್ಧದ ಪ್ರಕರಣ ಕೈಬಿಡಲಾಗುವುದು ಎಂದು ತಮಿಳುನಾಡು ಸರ್ಕಾರ ಬುಧವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.
ತನ್ನ ವಿರುದ್ದದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಶೋಭಾ ಕರಂದ್ಲಾಜೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಅಡ್ವೊಕೇಟ್ ಜನರಲ್ ಪಿ.ಎಸ್ ರಾಮನ್ ಅವರು ಮೇಲಿನಂತೆ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರ ನಿರೀಕ್ಷಿಸುತ್ತಿರುವ ಕ್ಷಮಾಪಣೆಯ ಕರಡು ಸ್ವರೂಪವನ್ನು ಕೂಡ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಶೋಭಾ ಕರಂದ್ಲಾಜೆ ಪರ ವಕೀಲರು, “ಅವರು ಈಗಾಗಲೇ ಕ್ಷಮೆ ಕೋರಿದ್ದು, ತಮ್ಮ ಎಕ್ಸ್ ಸಾಮಾಜಿಕ ಖಾತೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ. ಆದರೆ, ಕ್ಷಮೆಯಾಚನೆ ಸಮರ್ಪಕವಾಗಿದೆ ಎಂದು ನ್ಯಾಯಾಲಯ ಒಪ್ಪಿಲ್ಲ ಎಂದು ತಿಳಿದು ಬಂದಿದೆ.
ಎಕ್ಸ್‌ನಲ್ಲಿ ಹೆಚ್ಚಿನ ಜನರು ಖಾತೆ ಹೊಂದಿಲ್ಲದ ಕಾರಣ, ಅವರು ಅಲ್ಲಿ ಕ್ಷಮೆಯಾಚಿಸುವುದು ಸಾಕಾಗುವುದಿಲ್ಲ. ನಾನೂ ಕೂಡ ಎಕ್ಸ್ ಖಾತೆ ಹೊಂದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿರುವುದಾಗಿ ವರದಿಯಾಗಿದೆ.
ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿ ನಡೆಸಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆಯೇ ಅಥವಾ ಇಲ್ಲವೇ? ಎಂಬುವುದರ ಕುರಿತು ಸೂಚನೆಗಳನ್ನು ಪಡೆಯಲು ಅವರ ಪರ ವಕೀಲರಿಗೆ ಹೈಕೋರ್ಟ್ ಹತ್ತು ದಿನಗಳ ಕಾಲಾವಕಾಶ ನೀಡಿದೆ.