PLACE YOUR AD HERE AT LOWEST PRICE
-ಹರ್ಷಕುಮಾರ್ ಕುಗ್ವೆ ಲೇಖಕ, ಪತ್ರಕರ್ತ.
ಬ್ರಿಟೀಷರು ಬಂದು ಭಾರತವನ್ನು ಲೂಟಿ ಹೊಡೆದರು, ಎಲ್ಲಾ ಭಾರತೀಯರೂ ಬ್ರಿಟೀಷರ ವಿರುದ್ಧ ದಂಗೆಯೆದ್ದು ಹೋರಾಡಿದರು- ಇದು ನಾವೆಲ್ಲರೂ ಬಿಡದೇ ಕೇಳಿಕೊಂಡು ಬಂದ ಒಂದು ನರೇಟಿವ್. ಮತ್ತೊಂದು ಕಡೆ, ‘ಯೂರೋಪಿನ ವಸಾಹತುಶಾಹಿ ಭಾರತಕ್ಕೆ ಬಂದಿದ್ದೇ ಇಲ್ಲಿನ ಶೂದ್ರರಿಗೆ ದಲಿತರಿಗೆ ವಿಮೋಚನೆ ಒದಗಿಸಲು’ ಎಂಬ ಮತ್ತೊಂದು ನರೇಟಿವ್. ಈ ಎರಡು ನರೇಟಿವ್‌ಗಳ ನಡುವೆ ಈ ದೇಶದ ಜನರ ನಿಜವಾದ ಚರಿತ್ರೆ ಎಲ್ಲಿದೆ?
ಈ ಪ್ರಶ್ನೆಗೆ ನಿಮಗೆ ಪಕ್ಕಾ ಉತ್ತರ ಬೇಕೆನಿಸಿದರೆ ಒಮ್ಮೆ ನೆನ್ನೆ ಬಿಡುಗಡೆಯಾಗಿರುವ ಪಾ. ರಂಜಿತ್ ನಿರ್ದೇಶನದ ‘ತಂಗಲಾನ್’ ಸಿನೆಮಾ ನೋಡಿ.
ಬ್ರಿಟೀಷರು ಬರುವ ಮೊದಲು ಇಲ್ಲಿ ಬೇರಬಿಟ್ಟಿದ್ದ ಬ್ರಾಹ್ಮಿನಿಕಲ್ ಊಳಿಗಮಾನ್ಯ ವ್ಯವಸ್ಥೆ ತಳಸಮುದಾಯಗಳಿಗೆ, ದಲಿತರಿಗೆ ನರಕವನ್ನೇ ಸೃಷ್ಟಿಸಿತ್ತು. ಆ ಸಮಯದಲ್ಲಿ ಬಹುತೇಕ ರಾಜರು ಶೂದ್ರರೇ ಆಗಿದ್ದರೂ ಅವರ ಜುಟ್ಟುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು ಜನಿವಾರದವರೇ ಆಗಿದ್ದರು. ರಾಜರ ಆಳ್ವಿಕೆ ಸಡಿಲಗೊಂಡು ಬ್ರಿಟೀಷರು ನಮ್ಮ ನೆಲದ ಮೇಲೆ ಹಿಡಿತ ಸಾಧಿಸುವ ಹೊತ್ತಿನಲ್ಲೂ ಇಲ್ಲಿನ ಬ್ರಾಹ್ಮಣರು ತಮ್ಮ ಪ್ರಿವಿಲೇಜ್ ಉಳಿಸಿಕೊಂಡೇ ಬ್ರಿಟೀಷರೊಂದಿಗೆ ಲೂಟಿ ಸುಲಿಗೆಯಲ್ಲಿ ಶಾಮೀಲಾಗಿದ್ದರು.
ಆದರೆ, ಈ ದೇಶದ ಶೋಷಿತರಿಗೆ, ಅಸ್ಪೃಶ್ಯತೆಯಲ್ಲಿ ಬೆಂದು ಹೋಗಿದ್ದವರಿಗೆ ಬ್ರಿಟೀಷರು ನೀಡಿದ್ದ ಬಿಡುಗಡೆ ಸಣ್ಣ ಮಟ್ಟದ್ದಾಗಿರಲಿಲ್ಲ. ಅವರು ತಮ್ಮ ಬೇರುಗಳನ್ನು ಅರಿತುಕೊಳ್ಳಲು, ತಮ್ಮ ಮೇಲಿನ ದಬ್ಬಾಳಿಕೆಯನ್ನು ತಿಳಿದುಕೊಳ್ಳಲು ರಹದಾರಿ ತೆರೆದಿದ್ದು ಸಹ ವಸಾಹತುಶಾಹಿ ಜಾರಿಗೊಳಿಸಿದ್ದ ಸುಧಾರಣೆಗಳು. ಇದರ ಪರಿಣಾಮವಾಗಿಯೇ ಬ್ರಿಟೀಷ್ ಭಾರತದಲ್ಲಿ ಸ್ವಾಭಿಮಾನಿ ಚಳವಳಿಗಳು ಸ್ವಾತಂತ್ರ್ಯ ಚಳವಳಿಗೆ ಸಮಾನಾಂತರವಾಗಿ ನಡೆದು ಬಂದಿದ್ದು.
ಇಂತಹ ಒಂದು ಸಂಕೀರ್ಣ ಇತಿಹಾಸವನ್ನು ಒಂದು ಸಿನಿಮಾದಲ್ಲಿ ಕಟ್ಟಿಕೊಡುವ ಸವಾಲು ಸಾಮಾನ್ಯವಾದುದಲ್ಲ. ಸುಲಭವೂ ಅಲ್ಲ. ಆದರೆ ಈ ಸವಾಲನ್ನು ಸ್ವೀಕರಿಸಿ ಅಷ್ಟೇ ಅಸಾಧಾರಣವೆನಿಸುವ ರೀತಿಯಲ್ಲಿ ಸಿನೆಮಾ ಮಾಡಿರುವ ಪಾ. ರಂಜಿತ್ ಎಂತಹ ದೈತ್ಯ ಪ್ರತಿಭೆ ಎಂದು ತೋರಿಸಿದ ಸಿನೆಮಾ ತಂಗಲಾನ್.
ತಂಗಲಾನ್ ಸಿನೆಮಾವನ್ನು ಈ ದೇಶದ ದಮನಿತ ಸಮುದಾಯಗಳ ಪರಂಪರೆಯೊಂದಿಗೆ ಕಟ್ಟಿಕೊಟ್ಟಿರುವ ಪಾ.ರಂಜಿತ್ ಅತ್ಯಂತ ಮುಖ್ಯವಾಗುವುದು ಈ ದೇಶದ ಇತಿಹಾಸದ ಕುರಿತ ತನ್ನ ಕರಾರುವಾಕ್ ವ್ಯಾಖ್ಯಾನಕ್ಕೆ. ಹಿಂದಿ ನಟ ಅಮೀರ್ ಖಾನ್ ನಟಿಸಿದ್ದ ‘ಲಗಾನ್’ ಸಿನೆಮಾ ನೆನಪಿಸಿಕೊಳ್ಳಿ. ಕ್ರಿಕೆಟ್ ಆಟವನ್ನೂ ವಸಾಹತು ದಬ್ಬಾಳಿಕೆಗೆ ಬಳಸಿಕೊಂಡಿದ್ದ ಕಲೋನಿಯಲ್ ಕ್ರೌರ್ಯದ ಒಂದು ಮಜಲನ್ನು ತೋರಿಸುವ ಜೊತೆಗೆ ಬ್ರಿಟೀಷ್ ಅದಿಕಾರಿಯ ತಂಗಿಯ ಪಾತ್ರದ ಮೂಲಕ ರೈತರಿಗೆ ತೆರಿಗೆಯಿಂದ ಬಿಡುಗಡೆಯನ್ನೂ ನೀಡುವ ಒಂದು ರಮ್ಯಕಲ್ಪನೆಯ ಸುತ್ತ ಹೆಣೆದಿದ್ದ ಸಿನೆಮಾ ಅದಾಗಿತ್ತು.
ಆದರೆ, ತಂಗಲಾನ್ ಅಂತಹ ಯಾವ ಭ್ರಮೆಯನ್ನೂ ಬಿತ್ತದೇ, ಈ ದೇಶದ ತಳಸಮುದಾಯಗಳ ವಿಷಯದಲ್ಲಿ ವಸಾಹತುಶಾಹಿ ನಡವಳಿಕೆ ಹೇಗಿತ್ತೋ ಹಾಗೇ ತೋರಿಸುತ್ತದೆ. ಬ್ರಿಟೀಷರು ದಲಿತರಿಗೆ ನೀಡಿದ ‘ಸೋಷಿಯಲ್ ಸ್ಪೇಸ್’ ಯಾವುದು ಮತ್ತು ಅದು ಆಪರೇಟ್ ಆಗಿದ್ದು ಹೇಗೆ ಎಂಬ ಬಗ್ಗೆ ತಂಗಲಾನ್ ನೀಡುವ ಸ್ಪಷ್ಟತೆಯನ್ನು ಇದುವರೆಗಿನ ಯಾವುದೇ ಬಾಲಿವುಡ್, ಹಾಲಿವುಡ್, ಕಾಲಿವುಡ್, ಮಾಲಿವುಡ್ ಅಥವಾ ಇನ್ನಾವುದೇ ಸಿನೆಮಾವೂ ನೀಡಿಲ್ಲ. ಇದು ತಂಗಲಾನ್ ಹೆಗ್ಗಳಿಕೆ.
ತಂಗಲಾನ್ ಸಿನೆಮಾ ನಿಮ್ಮನ್ನು ಬೇರೆಬೇರೆ ಕಾಲದೇಶಗಳಲ್ಲಿ ಹರಿದಾಡುವಂತೆ ಮಾಡುತ್ತದೆ. ಈ ದೇಶದ ಸಾಮಾಜಿಕ ವಾಸ್ತವಗಳನ್ನು ಮತ್ತು ಅವುಗಳಿಗೆ ಹೊಂದಿಕೊಂಡ ದಾರ್ಮಿಕ ನಡೆಗಳನ್ನು ಮಾಂತ್ರಿಕವಾಗಿ ಹೇಳುತ್ತದೆ. ‘ಆರತಿ’ ಇಲ್ಲಿ ಅನಾದಿ ಕಾಲದಿಂದಲೂ ಈ ನೆಲದ ಅಮೂಲ್ಯ ಸಂಪತ್ತನ್ನು ಕಾಪಿಟ್ಟುಕೊಂಡು ಬಂದ ‘ನಾಗ’ ಪರಂಪರೆಯ ಆದಿವಾಸಿ ಬುಡಕಟ್ಟುಗಳು ಪೊರೆದುಕೊಂಡು ಬಂದ ‘ಬುದ್ಧ’ನ ಮೂಲಕ ಪ್ರತಿನಿಧಿಸಿದರೆ; ಈ ದೇಶದ ಮೊದಲ ಕೃಷಿಕ ಸಮುದಾಯಗಳಾದ ಪರೈಯ್ಯಾದಂತಹ ದಲಿತ ಸಮುದಾಯಗಳು ಅನಾದಿ ಕಾಲದಿಂದಲೂ ಕೃಷಿ ಮಾಡಿಕೊಂಡು ಬಂದಿದ್ದರೂ, ಬ್ರಾಹ್ಮಣಿಕೆಯ ಸಂಚಿನಲ್ಲಿ ಕೃಷಿ ಭೂಮಿಯ ಮೇಲಿನ ಹಿಡಿತ ತಪ್ಪಿ ‘ಅಸ್ಪೃಶ್ಯ’ರಾಗಿ ಅಂಚಿಗೆ ನೂಕಲ್ಪಟ್ಟ ಸಮುದಾಯದ ಪ್ರತಿನಿದಿಯೇ ತಂಗಲಾನ್. ಪ್ರಬಲ ಶೂದ್ರ ಜಾತಿಯ ‘ಸೆಂಗೋಲ್’ಗಳು ಇಲ್ಲಿ ಜಾತಿ ಶೋಷಣೆಗೆ ವಾಹಕರಾಗುತ್ತಾರೆ.
ಈ ನೆಲದ ಪರಂಪರೆಯ ದೈವಗಳನ್ನು, ನಂಬಿಕೆಗಳನ್ನು ಡೆಮನ್- ಸೈತಾನ್ ಎಂದು ಕರೆದು ಜೀಸಸ್ ಮೊರೆ ಹೋಗುವ ವಸಾಹತುಶಾಹಿ ತನ್ನ ಅಸ್ತಿತ್ವಕ್ಕಾಗಿ, ಲಾಭಕ್ಕಾಗಿ ಒಂದು ಹಂತಕ್ಕೆ ರಾಜಿ ಮಾಡಿಕೊಳ್ಳುತ್ತದೆ. ಚಿನ್ನ ದೋಚಲು ಕೋಲಾರಕ್ಕೆ ಬಂದ ಲಾರ್ಡ್ ಕ್ಲೆಮೆಂಟ್ ಶಾನುಭೋಗನನ್ನೇ ಬದಿಗೆ ಸರಿಸಿ ‘ತಂಗಲಾನ್’ನನ್ನೇ ನಾಯಕ ಎಂದು ಮಾನ್ಯ ಮಾಡಿದ್ದರಲ್ಲಿ ಆ ಕಲೋನಿಯಲ್ ಬುದ್ಧಿವಂತಿಕೆ ಸ್ಪಷ್ಟವಾಗುತ್ತದೆ. ಮತ್ತೊಂದು ಕಡೆ ತಳಸಮುದಾಯಗಳು ಮತ್ತೆ ಬೌದ್ಧ ಪರಂಪರೆಗೆ ಹೋಗುವುದನ್ನು ತಪ್ಪಿಸಲು ರಾಮಾನುಜ ಪರಂಪರೆಯವರು ನೀಡುವ ಜನಿವಾರ ದೀಕ್ಷೆ, ದಲಿತ ಶೂದ್ರರನ್ನು ‘ನಾಮದಾರಿ’ಗಳಾಗಿಸುವ ವೈದಿಕರ ನಡೆಗೂ ಇರುವ ಮಹತ್ವ ಮತ್ತು ಮಿತಿಯನ್ನೂ ‘ತಂಗಲಾನ್’ ಅದ್ಭುತವಾಗಿ ಬಿಂಬಿಸಿದೆ.
ಪಾ. ರಂಜಿತ್ ಅವರ ಎಲ್ಲಾ ಸಿನೆಮಾಗಳ ವಿಶೇಷತೆಯೆಂದರೆ ತಳಸಮುದಾಯಗಳ ಸ್ತ್ರೀ ಎಂದಿಗೂ ‘ಅಬಲೆ’ಯಲ್ಲ ಎಂದು ತೋರಿಸುವುದು. ಪುರುಷನೊಂದಿಗೆ ಸರಿಸಾಟಿಯಾಗಿ ನಿಲ್ಲುತ್ತಾಳೆ. ತಂಗಲಾನ್ ಸಿನೆಮಾದಲ್ಲಿ ಮಾತೃಪ್ರಧಾನ ಬುಡಕಟ್ಟಿನ ಯಕ್ಷಿಣಿ/ ಮಾಟಗಾತಿಯಾಗಿ ಕಂಗೊಳಿಸುವ ಆರತಿಯ ಪಾತ್ರವನ್ನು ಅಷ್ಟು ಸುಲಭವಾಗಿ ಮರೆಯಲು ಸಾದ್ಯವಿಲ್ಲ.
ಅಂತಿಮವಾಗಿ ಬುದ್ಧನನ್ನು ಮರುಸ್ಥಾಪಿಸಿಕೊಳ್ಳುತ್ತಲೇ, ವೈದಿಕಶಾಹಿಯನ್ನೂ, ವಸಾಹತುಶಾಹಿಯನ್ನೂ ಎದುರಿಸಿ ಒಂದಾಗಿ ನಿಲ್ಲುವ ದಲಿತ – ಬುಡಕಟ್ಟು ಒಗ್ಗಟ್ಟನ್ನು ತಂಗಲಾನ್ ಹೇಳುವ ಪರಿಯಂತೂ ಅನನ್ಯವಾಗಿದೆ.
ಸಕತ್ ಕಚಗುಳಿ ಇಟ್ಟ ದೃಶ್ಯವೊಂದಿದೆ: ಚಿನ್ನದ ಗಣಿ ತೋಡುವಾಗ ನಿತ್ರಾಣವಾಗಿ ಬಸವಳಿದು ಕೂತಿದ್ದ ತಂಗಲಾನ್ ಜೊತೆಗಾರರಿಗೆ ಒಂದು ಕಾಡುಕೋಣ ಕಾಣಿಸಿಬಿಡುತ್ತದೆ. ಅದೆಲ್ಲಿತ್ತೋ ಕಸುವು… ಅದನ್ನು ಓಡಿಸಿಕೊಂಡು ಹೋಗುತ್ತಾರೆ. ಆದರೆ ಆ ಕೋಣ ಘಾಟಿ. ಎದುರು ಸಿಕ್ಕವರನ್ನೆಲ್ಲಾ ಹಾಯ್ದುಕೊಂಡು ಭಯ ಹುಟ್ಟಿಸುತ್ತಾ ಬರುವಾಗ ‘ತಂಗಲಾನ್’ ಕೊಡುವ ಒಂದೇ ಒಂದು ಏಟು ಇದೆಯಲ್ಲಾ- ಆ ದೃಶ್ಯವನ್ನು ನೀವು ನೋಡಿಯೇ ತೀರಬೇಕು. ದಲಿತ ಹೆಣ್ಣುಮಕ್ಕಳಿಗೆ ರವಿಕೆ ತಂದು ಹಾಕಿಸಿದಾಗ ಅವರ ಸಂಭ್ರಮ ರೋಮಾಂಚನಗೊಳಿಸುತ್ತದೆ.
ತಂಗಲಾನ್, ಆತನ ಮುತ್ತಜ್ಜ ಕಾಡಯ್ಯನ್, ಆರನ್, ಆದಿ ಮುನಿ, ನಾಗ ಮುನಿ ಹೀಗೆ ಐದು ಪಾತ್ರಗಳಲ್ಲಿ ಕಾಡುವ ವಿಕ್ರಮ್‌ಗೆ ಸಾಟಿಯಿಲ್ಲ. ‘ಅನ್ನಿಯನ್’ ಸಿನಿಮಾ ನಂತರದಲ್ಲಿ ಬಹುಶಃ ಅವನ ನಟನೆಯ ಕಸುವಿಗೆ ದೊಡ್ಡ ನೆಗೆತ ನೀಡಿರುವ ಸಿನೆಮಾ ತಂಗಲಾನ್. ಇನ್ನು ಆರತಿಯಾಗಿ ಮಾಳವಿಕಾ ಮೋಹನನ್, ತಂಗಲಾನ್ ಹೆಂಡತಿಯಾಗಿ ಪಾರ್ವತಿ ತಿರುವೋತು, ಲಾರ್ಡ್ ಕ್ಲೆಮೆಂಟ್ ಆಗಿ ಡೇನಿಯಲ್ ಕ್ಯಾಲ್ಟಗಿರೋನ್ ಎಲ್ಲರೂ ಪರಕಾಯಪ್ರವೇಶ ಮಾಡಿದ್ದಾರೆ. ಕತ್ತಲೆ ಬೆಳಕುಗಳ ನಡುವೆ, ಹಲವು ಕಾಲ ದೇಶಗಳಿಗೆ ನಮ್ಮನ್ನು ಕೊಂಡೊಯ್ದು, ಕಣ್ ರೆಪ್ಪೆಗಳನ್ನು ಮುಚ್ಚಲೂ ಬಿಡದಂತೆ ನೋಡಲು ಹುರಿದುಂಬಿಸುವ ತಂಗಲಾನ್ ಸಿನೆಮಾಟೊಗ್ರಫಿಯನ್ನು ದುಡಿಸಿಕೊಂಡಿರುವ ರೀತಿ ಕೂಡ ಪಾ. ರಂಜಿತ್ ಅವರೊಬ್ಬ ನೆಕ್ಷ್ಟ್ ಲೆವೆಲ್ ನಿರ್ದೇಶಕ ಎನ್ನುವುದನ್ನು ಸಾಬೀತು ಮಾಡಿದೆ.
ಸಿನೆಮಾದಲ್ಲಿ ಕೊರತೆಗಳು ಇಲ್ಲವೆಂದಲ್ಲ. ಕೆಲವು ಕಡೆ ಗ್ರಾಫಿಕ್ಸ್(vfx) ಸಹಜತೆಯನ್ನು ಹಾಳು ಮಾಡಿದೆ. ಹೇಳಬೇಕಾದ ಎಲ್ಲವನ್ನೂ ತಂಗಲಾನ್ ಅಚ್ಚುಕಟ್ಟಾಗಿ ಹೇಳಿದ್ದರೂ ಇನ್ನಷ್ಟು ಭಾವನಾತ್ಮಕವಾಗಿ ತಟ್ಟುವಂತೆ ಮಾಡುವ ಸಾಮರ್ಥ್ಯ ಪಾ. ರಂಜಿತ್‌ಗೆ ಇತ್ತೆನಿಸುತ್ತದೆ.