PLACE YOUR AD HERE AT LOWEST PRICE
ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹೋರಾಟ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಅಲ್ಲಿನ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರು ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ರಾಜಕೀಯ ಪ್ರಕ್ಷುಬ್ದತೆ ಉಂಟಾಗಿದೆ. ಇದು ಭಾರತ-ಬಾಂಗ್ಲಾ ನಡುವಿನ ವಹಿವಾಟುಗಳ ಮೇಲೂ ಪರಿಣಾಮ ಬೀರಿದ್ದು, ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಕೂಡ ಕುಸಿತ ಕಂಡಿದೆ.
ಭಾರತದ ಪೂರ್ವ ರಾಜ್ಯ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ಕೋಲಾರದಿಂದಲೇ ಅತೀ ಹೆಚ್ಚು ಟೊಮೆಟೊ ಪೂರೈಕೆಯಾಗುತ್ತದೆ. ಆದರೆ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಬಂಗಾಳದ ವ್ಯಾಪಾರಿಗಳು ಬಾಂಗ್ಲಾಗೆ ಟೊಮೆಟೊ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪೂರೈಕೆ ಕಡಿಮೆಯಾಗಿದ್ದು, ಬೆಲೆಯೂ ಕುಸಿದಿದೆ.
ಕಳೆದ ತಿಂಗಳು, ಕೋಲಾರದ ಮಾರುಕಟ್ಟೆಯಲ್ಲಿ ಬಾಕ್ಸ್ ಟೊಮೆಟೊ ಬೆಲೆ ಸುಮಾರು 1,100 ಇತ್ತು. ಇದೀಗ, 350 ರಿಂದ 500 ರೂ.ಗೆ ಕುಸಿದಿದೆ. ಕೆ.ಜಿ ಟೊಮೆಟೊ ಬೆಲೆ 40 ರೂ.ನಿಂದ 12 ರೂ. ಇಳಿಕೆಯಾಗಿದೆ. ಬೆಲೆ ಕುಸಿತವು ಟೊಮೆಟೊ ಬೆಳೆದಿದ್ದ ರೈತರನ್ನು ಕಂಗಾಲಾಗಿಸಿದೆ.
ಬಾಂಗ್ಲಾದೇಶಕ್ಕೆ ಟೊಮೆಟೊ ರಫ್ತು ಮಾಡುವ ಪಶ್ಚಿಮ ಬಂಗಾಳದ ವ್ಯಾಪಾರಿಗಳು ಟೊಮೆಟೊ ಖರೀದಿಯಲ್ಲಿ ಶೇ.50ರಷ್ಟನ್ನು ಕಡಿತಗೊಳಿಸಿದ್ದಾರೆ. ದಿನನಿತ್ಯ ಕೋಲಾರದಿಂದ ಬಂಗಾಳಕ್ಕೆ 40 ರಿಂದ 50 ಟ್ರಕ್ ಟೊಮೆಟೊ ಸಾಗಣೆಯಾಗುತ್ತಿತ್ತು. ಪ್ರಸ್ತುತ, ಕೇವಲ 20 ಟ್ರಕ್‌ಗಳು ಮಾತ್ರವೇ ಟೊಮೆಟೊ ಸಾಗಾಟವಾಗುತ್ತಿದೆ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 4,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳಯಲಾಗುತ್ತಿದೆ. ಪಶ್ಚಿಮ ಬಂಗಾಳ ಮಾತ್ರವಲ್ಲದೆ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಕ್ಕೂ ಕೋಲಾರದಿಂದ ಟೊಮೆಟೊ ಪೂರೈಕೆಯಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಈ ವರ್ಷ ಸಾಧಾರಣ ಮಳೆಯಾಗಿದ್ದು, ಟೊಮೆಟೊ ಇಳುವರಿ ಉತ್ತಮವಾಗಿತ್ತು. ಆದರೆ, ಪೂರೈಕೆ ಕೊರತೆಯಿಂದಾಗಿ ಬೆಲೆ ಕುಸಿತವಾಗಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ, ನಷ್ಟದ ಸುಳಿಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಲಾಗಿರುವ ಮೀಸಲಾತಿಯ ವಿರುದ್ಧ ಕಳೆದೊಂದು ತಿಂಗಳಿನಿಂದ ವಿದ್ಯಾರ್ಥಿ-ಯುವಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟವು ಹಿಂಸಾಚಾರಕ್ಕೆ ತಿರುಗಿದ್ದು, ಕನಿಷ್ಠ 400 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಸರ್ಕಾರಿ ಕಟ್ಟಡಗಳಿಗೆ ನುಗ್ಗಿ ರಾಷ್ಟ್ರೀಯ ಸ್ಮಾರಕಗಳನ್ನು ಧ್ವಂಸಗೊಳಿಸಿದ್ದಾರೆ.
ಬ್ಲಾಂಗ್ಲಾ ತೊರೆದಿರುವ ಅಲ್ಲಿನ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರಿಗೆ ಭಾರತದಲ್ಲಿ ಆಶ್ರಯ ನೀಡಲಾಗಿದೆ. ತಮಗೆ ಆಶ್ರಯ ನೀಡುವಂತೆ ಅವರು ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಮನವಿ ಮಾಡಿದ್ದರು. ಅವರ ಮನವಿಯನ್ನು ಎರಡೂ ದೇಶಗಳು ತಿರಸ್ಕರಿಸಿವೆ. ಬಾಂಗ್ಲಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಮತ್ತು ಮೇಲ್ಮನವಿ ವಿಭಾಗದ ನ್ಯಾಯಾಧೀಶರು ಕೂಡ ರಾಜೀನಾಮೆ ನೀಡಿದ್ದಾರೆ.
ಬಾಂಗ್ಲಾ ಸೇನೆಯು ಮಧ್ಯಂತರ ಸರ್ಕಾರ ರಚಿಸಿದ್ದು, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಡಾ. ಮುಹಮ್ಮದ್ ಯೂನಸ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ. ಬಾಂಗ್ಲಾದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ತಹಬದಿಗೆ ತರುವುದಾಗಿ ಹೇಳಿಕೊಂಡಿದೆ.