PLACE YOUR AD HERE AT LOWEST PRICE
ಕೆಜಿಎಫ್:ಕಾಮಸಮುದ್ರಂ ವೃತ್ತದ ಪೊಲೀಸರು ವಿವಿಧ ಠಾಣೆಗಳ ೬ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ರೂ. ೩.೫೫ ಲಕ್ಷ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಮಸಮುದ್ರಂ ಠಾಣೆ ಸರಹದ್ದು ರಾಮಸಂದ್ರ (ತೂಲಂಪಲ್ಲಿ) ಗ್ರಾಮದ ವಿಜಯಲಕ್ಷೀ ರವರ ಮನೆಯಲ್ಲಿ ಮತ್ತು ಕನುಮನಹಳ್ಳಿ ಗ್ರಾಮದ ಬಸಪ್ಪ ರವರ ಮನೆಯಲ್ಲಿ ಚಿನ್ನದ ಆಭರಣಗಳು ಕಳುವಾಗಿದ್ದು, ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಮಾಡುವ ಸಲುವಾಗಿ ಡಿವೈಎಸ್ಪಿ ಪಾಂಡುರಂಗರ ಮಾರ್ಗದರ್ಶನದಲ್ಲಿ ಕಾಮಸಮುದ್ರಂ ಸಿಪಿಐ ಜಿ.ಸಿ ನಾರಾಯಣಸ್ವಾಮಿ ಹಾಗೂ ಪಿಎಸ್ಐ ಕಿರಣ್ಕುಮಾರ್ರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.
ಕಾರ್ಯಾಚರಣೆ ನಡೆಸಿದ ಪೊಲೀಸರು ಆಂದ್ರಪ್ರದೇಶದ ವಿ.ಕೋಟ ನಿವಾಸಿ ದೇವೇಂದ್ರ @ ಸುರೇಶ್ (೨೭ ವರ್ಷ), ಭುವನೇಶ್ (೩೩ ವರ್ಷ) ಮತ್ತು ರಾಜಮಂಡ್ರಿ ನಿವಾಸಿ ಕಂದಿ ಶ್ರೀಗಣೇಶ್ಕುಮಾರ್ (೩೫ ವರ್ಷ) ಎಂಬ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ರಾಮಸಂದ್ರ ಮತ್ತು ಕನಮನಹಳ್ಳಿ ಕಳವು ಪ್ರಕರಣಗಳಿಗೆ ಸಂಬಂಧಿಸಿದ ರೂ. ೧.೬೦ ಲಕ್ಷ ಮೌಲ್ಯದ ೨೩.೩೯ ಗ್ರಾಂ ತೂಕದ ಚಿನ್ನಾಭರಣಗಳನ್ನು ಮತ್ತು ಕ್ಯಾಸಂಬಳ್ಳಿ, ಬೇತಮಂಗಲ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಕಳವು ಪ್ರಕರಣಗಳಿಗೆ ಸಂಬಂಧಿಸಿದ ರೂ. ೧.೯೫ ಲಕ್ಷ ಮೌಲ್ಯದ ೨೦೦ ಗ್ರಾಂ ತೂಕದ ೪ ಬೆಳ್ಳಿ ನಾಣ್ಯಗಳು, ವಿವಿಧ ಕಂಪನಿಯ ಸಿಗರೇಟ್ ಬಂಡಲ್ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಆರೋಪಿಗಳನ್ನು ಬಂಧಿಸಿ ಒಟ್ಟು ರೂ. ೩.೫೫ ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಭಾಗವಹಿಸಿದ ಕಾಮಸಮುದ್ರಂ ಸಿಪಿಐ ಜಿ.ಸಿ. ನಾರಾಯಣಸ್ವಾಮಿ, ಪಿಎಸ್ಐ ಕಿರಣ್ಕುಮಾರ್, ಸಿಬ್ಬಂದಿಗಳಾದ ಕೃಷ್ಣ, ಮಂಜುನಾಥ್, ಗಜೇಂದ್ರ, ಶ್ರೀನಿವಾಸ್, ಮಾರ್ಕೊಂಡ, ಲಕ್ಷ್ಮತೇಲಿ, ಅಭಿಶೇಕ್, ಶಿವಾನಂದ, ಸುಜಾತ, ಸುಗುಣಮ್ಮ, ಗುರುಮೂರ್ತಿ, ಧನಂಜಯ ರವರುಗಳ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.