PLACE YOUR AD HERE AT LOWEST PRICE
ತಮಿಳು ನಟ ವಿಜಯ್ ‘ತಮಿಳಗ ವೆಟ್ರಿ ಕಳಗಂ ’ ಎಂಬ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಮೂಲಕ ತಮಿಳುನಾಡಿನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಚೆನ್ನೈನಲ್ಲಿ ಗುರುವಾರ ನಟ ವಿಜಯ್ ಅವರು ಪಕ್ಷದ ಹೊಸ ಧ್ವಜ ಬಿಡುಗಡೆ ಮಾಡಿದರು. ಈ ಮೂಲಕ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಸಿದ್ಧತೆ ಆರಂಭಿಸಿದ್ದಾರೆ.
ಟಿವಿಕೆ ಪಕ್ಷದ ಕಚೇರಿಯಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅವರು ಪಕ್ಷದ ಧ್ವಜವನ್ನು ಬಿಡುಗಡೆ ಮಾಡಿದರು. ಈ ವೇಳೆ ಬೇರೆ ಬೇರೆ ಪಕ್ಷಗಳಿಂದಲೂ ಕೆಲ ನಾಯಕರು ಆಗಮಿಸಿದ್ದರು ಎಂದು ವರದಿಯಾಗಿದೆ.
‘ತಮಿಳಗ ವೆಟ್ರಿ ಕಳಗಂ ’ ಎಂದರೆ ‘ತಮಿಳುನಾಡು ವಿಜಯ ಪಕ್ಷ’ ಎಂದರ್ಥ. ಧ್ವಜ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ, ತಮಿಳುನಾಡಿನ ಮಣ್ಣಿನಿಂದ ನಮ್ಮ ಜನರ ಹಕ್ಕುಗಳಿಗಾಗಿ ಶೌರ್ಯದಿಂದ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಸಂಖ್ಯಾತ ಸೈನಿಕರ ತ್ಯಾಗವನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ. ತಮಿಳು ಭಾಷೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಣೆ ಮಾಡುತ್ತ ಅವರ ದಾರಿಯಲ್ಲಿ ನಡೆಯುತ್ತೇನೆ. ಭಾರತದ ಸಂ ವಿಧಾನ ಮತ್ತು ಭಾರತದ ಸಾರ್ವಭೌಮತ್ವದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಹೇಳಿದರು.
ಸಹೋದರತ್ವ, ಸಮಾನತೆ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆಯುತ್ತ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ವಿಜಯ್ ಹೇಳಿದರು.