PLACE YOUR AD HERE AT LOWEST PRICE
-ಡಾ.ನಾಗೇಶ್ ಹೆಗ್ಡೆ
ಬೆಂಗಳೂರಿನ ಕಸವನ್ನು ಕೆಜಿಎಫ್ ಗೆ ಒಯ್ದು ಗುಡ್ಡೆ ಹಾಕುತ್ತಾರಂತೆ. ಐಷಾರಾಮಿ ಬಂಗ್ಲೆಯಲ್ಲಿರುವ ವ್ಯಕ್ತಿ ತನ್ನ ಮನೆಯ ಕಕ್ಕಸನ್ನು ಪಕ್ಕದ ಮನೆಯ ಗರೀಬನ ಅಂಗಳಕ್ಕೆ ಸುರಿದ ಹಾಗೆ.
ಯಾಕೆ ಇಂಥ ದುರ್ಬುದ್ಧಿ ಬಂತು ಈ ಮಹಾನಗರದ ಮೇಧಾವಿಗಳಿಗೆ?
ಮೊದಲನೆಯದಾಗಿ ಇದು ಅತ್ಯಂತ ಅನೈತಿಕ ಕೆಲಸ. ಎರಡನೆಯದಾಗಿ ಅವೈಜ್ಞಾನಿಕ ಕೆಲಸ. ಮೂರನೆಯದಾಗಿ ಇದು ಅತ್ಯಂತ ಬೇಜವಾಬ್ದಾರಿ ಕೆಲಸ. ನಾಲ್ಕನೆಯದಾಗಿ ಇದು ಪ್ರಜಾತಂತ್ರವಿರೋಧಿ ಕೆಲಸ.
ಅನೈತಿಕ ಏಕೆಂದರೆ, ನಿಮ್ಮ ರಾಡಿಯನ್ನು ನೀವೇ ಶುದ್ಧ ಮಾಡಿಕೊಳ್ಳಬೇಕೇ ವಿನಾ ಪರರ ಅಂಗಳಕ್ಕೆ ಎಸೆಯಬಾರದು. ಅದು ನಮಗೆ ಗಾಂಧೀಜಿ ಕಲಿಸಿದ ಪಾಠ. ಆ ರಾಷ್ಟ್ರಪಿತನನ್ನು ನಾವು ನೋಟಿನ ಮುದ್ರಿಸಿ ಕಿಸೆಯಲ್ಲಿ ಇಟ್ಟುಕೊಂಡಿರುತ್ತೇವೆ.
ಅದರಲ್ಲೂ ನೀವು ಬೆಂಗಳೂರಿನವರು ಪ್ರತಿಷ್ಠಿತ ಜನ. ಪವರ್‌ಫುಲ್ ಜನ. ಚಂದ್ರಲೋಕ, ಮಂಗಳಲೋಕಕ್ಕೂ ನೌಕೆಯನ್ನು ಕಳಿಸಬಲ್ಲ ತಾಂತ್ರಿಕ ತಾಕತ್ತಿರುವ ಪ್ರಬುದ್ಧ ಜನ. ವಿವೇಚನೆಯ ನಿರ್ಧಾರ ಕೈಗೊಳ್ಳುವ ಬದಲು ಯಾವುದೋ ಲಾಭಕೋರ ಗುತ್ತಿಗೆದಾರರ ಮಾತುಗಳನ್ನು ಕೇಳಿ ಕೆಜಿಎಫ್‌ಗೆ ನಿಮ್ಮ ತ್ಯಾಜ್ಯಗಳನ್ನು ಬಿಸಾಕಲು ಹೊರಟಿದ್ದೀರಿ.
ಇದು ಅವೈಜ್ಞಾನಿಕ ಕೆಲಸ ಏಕೆಂದರೆ, ಇಂದು ಕಸ ಸಂಸ್ಕರಣೆಯ ವಿಜ್ಞಾನ, ತಂತ್ರಜ್ಞಾನ ತುಂಬ ಸುಧಾರಿಸಿದೆ. ಬೆಂಗಳೂರಿಗಿಂತ ಚಿಕ್ಕದಾದ, ಆದರೆ ಬೆಂಗಳೂರಿಗಿಂತ ಜಾಸ್ತಿ ತ್ಯಾಜ್ಯಗಳನ್ನು ಉತ್ಪಾದಿಸುವ ಸಿಂಗಪುರವನ್ನು ನೋಡಿದ್ದೀರಿ. ಕಳೆದ 20 ವರ್ಷಗಳಲ್ಲಿ ಬೆಂಗಳೂರಿನ ಎಷ್ಟು ಜನರು ಸರ್ಕಾರಿ ಖರ್ಚಿನಲ್ಲಿ ಅಲ್ಲಿಗೆ ಹೋಗಿ ಬಂದಿಲ್ಲ? ಸಿಂಗಪುರದ ಜನರು ತಮ್ಮ ತ್ಯಾಜ್ಯದ ಬಹುಪಾಲನ್ನು ವಿಂಗಡಿಸಿ ಮರುಬಳಕೆಗೆ ತರುತ್ತಾರೆ. ಇನ್ನುಳಿದ ಹಸಿ ತ್ಯಾಜ್ಯವನ್ನು ದುರ್ನಾತ ಬಾರದಂತೆ ಒಣಗಿಸಿ, ಅದರಿಂದ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಕೊನೆಗೆ ಉಳಿಯುವ ಶೇಕಡಾ 10ರಷ್ಟು ಭಸ್ಮವನ್ನು ಇಟ್ಟಿಗೆಗಳನ್ನಾಗಿ ಮಾಡಿ, ಅಕ್ಕಪಕ್ಕದ ದ್ವೀಪಗಳಿಗೆ ನೀರು ನುಗ್ಗದಂತೆ ಭದ್ರ ಗೋಡೆ ಕಟ್ಟಲು ಬಳಸುತ್ತಾರೆ.
ಅವರಿಗೆ ಗೊತ್ತಿದ್ದ ತಂತ್ರಜ್ಞಾನವನ್ನು ನಮ್ಮಲ್ಲಿ ರೂಢಿಸಿಕೊಳ್ಳಲು ಯಾಕೆ ಆಗುತ್ತಿಲ್ಲ? ಹಾಗೆ ವಿದ್ಯುತ್ ಉತ್ಪಾದನೆಗೆಂದು ನಮ್ಮಲ್ಲಿ ಬಿಡದಿಯ ಬಳಿ ಒಂದು ಅಂಥ ಚಿಕ್ಕ ಘಟಕವನ್ನು ಸ್ಥಾಪಿಸಿದ್ದಾರೆ. ಅದು ಕಳೆದ ಏಳು ವರ್ಷಗಳಿಂದ ಕುಂಟುತ್ತ, ಕೆಮ್ಮುತ್ತ ನಿಂತಿದೆ. ಏನಂತೆ ಅದರ ಕತೆ? ಅದು ವಿಫಲವಾಯಿತೆಂದೇ ಈಗ ಕೆಜಿಎಫ್ ಕಡೆ ಹೊರಟರೊ ಏನು ಕತೆಯೊ?
ಮೂರನೆಯದಾಗಿ, ಕೆಜಿಎಫ್‌ಗೆ ಕಸ ಎಸೆಯುವುದು ಬೇಜವಾಬ್ದಾರಿಯ ಕೆಲಸ. ಹಿಂದೆ ಶಾಸಕ/ಸಚಿವ ರಮೇಶ್ ಕುಮಾರ್ ʻನಮ್ಮ ಕೋಲಾರಕ್ಕೆ ನಿಮ್ಮ ಕಕ್ಕಸಿನ ನೀರನ್ನಾದರೂ ಕೊಡಿ, ಬದುಕಿಕೊಳ್ಳುತ್ತೇವೆʼ ಎಂದು ವಿಧಾನ ಸಭೆಯಲ್ಲಿ ಗೋಗರೆದಿದ್ದರು. ಅದಕ್ಕೇ ಜಲಮಂಡಳಿಯ ನಿಪುಣರು ಅಲ್ಲಿಗೆ ಕೆ.ಸಿ.ವ್ಯಾಲಿಯಲ್ಲಿ ಹರಿಯುವ ಚರಂಡಿ ನೀರನ್ನೇ ಕಳಿಸುತ್ತಿದ್ದಾರೆ. ಅದೇ ನೀರನ್ನು ಮೂರು ಬಾರಿ ಸಂಸ್ಕರಿಸಿ, ಕುಡಿಯಲು ಯೋಗ್ಯವಾಗುವಂತೆ ಮಾಡಿ ಕೊಡಬೇಕಿತ್ತಲ್ಲವೆ?
ಮತ್ತೆ ಸಿಂಗಪುರದ ಉದಾಹರಣೆಯನ್ನೇ ನೋಡೋಣ. ಅವರು ಚರಂಡಿ ನೀರನ್ನು ಭೂಗತ ಸ್ಥಾವರಗಳಲ್ಲಿ ಸಂಸ್ಕರಿಸಿ, ʻನ್ಯೂವಾಟರ್ʼ ಹೆಸರಿನಲ್ಲಿ ಬಾಟಲಿಯಲ್ಲಿ ತುಂಬಿಸಿ ಕೊಡುತ್ತಾರೆ. ಶಾಸಕರು ಕುಡಿದು ತೋರಿಸುತ್ತಾರೆ. ಸೆನೆಗಾಲ್ ದೇಶದ ರಾಜಧಾನಿ ಡಕಾರ್‌ನಲ್ಲಿ ಬಿಲ್ ಗೇಟ್ಸ್ ಎಂಥಾ ಒಂದು ಸಂಸ್ಕರಣಾ ಯಂತ್ರವನ್ನು ಹೂಡಿದ್ದಾರೆ ಎಂದರೆ ಅಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಚರಂಡಿ ನೀರೇ ಕುಡಿಯುವ ನೀರಾಗಿ ಪರಿವರ್ತನೆ ಆಗುತ್ತದೆ. ಅದಕ್ಕೆ ಬೇಕಾದ ವಿದ್ಯುತ್ ಶಕ್ತಿಯೂ ಅಲ್ಲೇ ಉತ್ಪಾದನೆ ಆಗುತ್ತದೆ. ಸ್ವತಃ ಬಿಲ್ ಗೇಟ್ಸ್ ಅದನ್ನು ಕುಡಿದು ತೋರಿಸುವ ವಿಡಿಯೊ ಇಲ್ಲಿದೆ. (ಶರಾವತಿಯಿಂದ ನೀರನ್ನು ಬೆಂಗಳೂರಿಗೆ ತರುವ ಉತ್ಸಾಹಿಗಳೂ ಇದನ್ನು ನೋಡಬೇಕು). https://rb.gy/9wqmje
ಬೆಂಗಳೂರಿನ ಜಲಮಂಡಲಿಯವರು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕಾಲುವೆ ಮೂಲಕ ಹರಿಸುವ ಕೊಳಚೆ ನೀರಿನಿಂದಾಗಿ ದುರ್ವಾಸನೆ, ಸೊಳ್ಳೆಕಾಟ, ಅಂತರ್ಜಲಕ್ಕೆ ನಂಜು ಸೇರ್ಪಡೆ, ಮೂತ್ರಪಿಂಡ ಕಾಯಿಲೆ ಏನೆಲ್ಲ ಎದುರಾಗುತ್ತಿದೆ. ರಾಜಧಾನಿಯ ಜಲತಜ್ಞರಿಗೆ ಪಾಪಪ್ರಜ್ಞೆ ಇದೆಯೆ? ಚಂದ್ರನಲ್ಲಿ ನೀರುಶೋಧ ಮಾಡಬಲ್ಲ ತಜ್ಞರು ಇಲ್ಲಿ ಇದ್ದಾರೆ!
ದೇಶದ ತಾಂತ್ರಿಕ ಸಾಧನೆಯಗಳ ಕೀರ್ತಿಪತಾಕೆಯನ್ನು ಚಂದ್ರಲೋಕದಲ್ಲಿ ಹಾರಿಸಿದರೆ ಸಾಕೆ? ಬೆಂಗಳೂರಿನಲ್ಲಿ ದುರ್ನಾತದ ವೃಷಭಾವತಿ ಹರಿಯುತ್ತಿರಬೇಕೆ? ಅದು ಸಾಲದೆಂಬಂತೆ ಈಗ ಕೋಲಾರದ ನಾಗರಿಕರತ್ತ ಕಸ ಎಸೆಯಬೇಕೆ? ಅಲ್ಲಿನ ಜೀವಿಗಳು ಅದೇನು ತಪ್ಪು ಮಾಡಿದ್ದಾರೆ? ಹದ್ದು, ಕಾಗೆ, ನಾಯಿನರಿಗಳ ಜೊತೆ ಕೃಷ್ಣಮೃಗಗಳೂ ಕಚಡಾ ಪ್ಲಾಸ್ಟಿಕ್ ತಿನ್ನಲು ಅಲ್ಲಿ ಪೈಪೋಟಿ ಮಾಡಬೇಕೆ? ಆ ಕಚಡಾ ರಾಶಿಯ ಕೊಳಕು ದ್ರವಗಳು ತಳಕ್ಕಿಳಿದು ಅಂತರ್ಜಲವನ್ನು ಸೇರಿ, ದೂರದ ಕೊಳವೆ ಬಾವಿಗಳ ಮೂಲಕ ಜನರ ಕರುಳಿಗೂ ಸೇರುವಂತೆ ಮಾಡಬೇಕೆ?
ಸುಧಾರಿತ ಸಮಾಜದ ನಾಗರಿಕರು ಜಗತ್ತಿನ ಅನೇಕ ಕಡೆ `ನಿಂಬಿʼ ಚಳವಳಿಯನ್ನು NIMBY (Not In My Back Yard) ಅಂದರೆ “ನನ್ನ ಹಿತ್ತಲಿಗೆ ನಿಮ್ಮ ಕಸ ಬೇಡ” ಹೆಸರಿನ ಸತ್ಯಾಗ್ರಹವನ್ನು ನಡೆಸುತ್ತಾರೆ. ನಿಮಗೆ ಬೇಡವಾದುದನ್ನು ನಮ್ಮತ್ತ ಏಕೆ ಎಸೆಯುತ್ತೀರಿ? ನ್ಯಾಯವಾಗಿ ಕೇಳಬೇಕಾದ ಪ್ರಶ್ನೆ ಇದು. ಅಲ್‌ಖೈದಾ ದಾಳಿಯಲ್ಲಿ ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡ ಕುಸಿದಾಗ ಅದರೊಂದಿಗೆ ಕರಗಿ ಬಿದ್ದ ಲೆಡ್, ಝಿಂಕ್, ಮರ್ಕ್ಯುರಿ, ಅಸ್ಬೆಸ್ಟಾಸ್‌ನಂಥ ವಿಷದ್ರವ್ಯಗಳನ್ನು ಅಮೆರಿಕದ ಎಲ್ಲೂ ರಾಶಿ ಹಾಕಲು ಅಲ್ಲಿನವರು ಬಿಡಲಿಲ್ಲ.
ಕೊನೆಗೆ ಅದು ಗುಜರಿಯಾಗಿ ನಮ್ಮ ರಾಷ್ಟ್ರಕ್ಕೆ ಬಂದು ಇಲ್ಲಿ ವಿತರಣೆಯಾಯಿತು. ನಾವು ವಿಶ್ವಗುರು!
ಗುಜರಾತಿನ ಅಲಂಗ್ ಬಂದರಿನಲ್ಲಿ ಹಡಗು ಒಡೆದು ಗುಜರಿಗೆ ಹಾಕುವ ಅತ್ಯಂತ ಕರಾಳ, ಕಚಡಾ ಘಟಕವಿದೆ. ಅದಕ್ಕೆ ʻಹಡಗುಗಳ ಕಸಾಯಿಖಾನೆʼ ಎಂತಲೇ ಹೇಳುತ್ತಾರೆ. ಯುರೋಪ್, ಅಮೆರಿಕದ ಹಳೇ ಮುದಿ ಹಡಗುಗಳನ್ನು ಇಲ್ಲಿ ಎಳೆದು ತಂದು, ಅದರೊಳಗಿನ ಕಲ್ನಾರು, ಪಾದರಸ, ಕೊಳಕು ತೈಲಗಳಂಥ ವಿಷಕಾರಿ ದ್ರವ್ಯಗಳನ್ನು ಸಮುದ್ರಕ್ಕೆ ಹರಿಬಿಟ್ಟು, ಗುಜರಿ ಸ್ಟೀಲ್, ಕಂಬಿ, ತಂತಿ, ಲ್ಯಾಟ್ರಿನ್ ಪಿಂಗಾಣಿಯನ್ನು ಮತ್ತು ಫರ್ನಿಚರ್, ಅಷ್ಟೇಕೆ ಹಾಸಿಗೆ ವಸ್ತ್ರಗಳನ್ನೂ ಕಳಚಿ ಮಾರುವ ವ್ಯವಸ್ಥೆ ಇದೆ. ಯಾವ ಸುಧಾರಿತ ದೇಶಗಳಿಗೂ ಬೇಡವಾದದ್ದನ್ನು ನಾವು ಜೀರ್ಣಿಸಿಕೊಳ್ಳುತ್ತೇವೆ. ಕೆನಡಾದ ಕಲಾವಿದರು ಈ ಇಡೀ ವ್ಯಥಾನಕವನ್ನು ಚಿತ್ರೀಕರಿಸಿ ಅನೇಕ ಪ್ರಶಸ್ತಿ ಪಡೆದ ವಿಡಿಯೊ ಲಿಂಕ್ ಇಲ್ಲಿದೆ: https://www.youtube.com/watch?v=5jdEG_ACXLw
ʻನಿಂಬಿʼ ಚಳವಳಿಗೆ ನಮ್ಮಲ್ಲಿ ಮತ್ತೆ ಚಾಲನೆ ಸಿಗಬೇಕು. ಹತ್ತು ವರ್ಷಗಳ ಹಿಂದೆ 90 ಹರಯದ ಎಚ್‌ಎಸ್ ದೊರೆಸ್ವಾಮಿ ಇಂಥದ್ದೊಂದು ಚಳವಳಿಯನ್ನು ಬೆಂಗಳೂರಿನ ಆಚಿನ ಮಂಡೂರಿನಲ್ಲಿ ಆರಂಭಿಸಿದ್ದರು. ಅದರ ನಾನೇ ಬರೆದಿದ್ದ ವಿವರಗಳು ಇಲ್ಲಿವೆ: https://rb.gy/wcxlrw
ಅದಕ್ಕೂ ಹಿಂದೆ, ಕೈಗಾ ಮತ್ತು ರಟ್ನಹಳ್ಳಿಯ ಅಪಾಯಕಾರಿ ನ್ಯೂಕ್ಲಿಯರ್ ಕಚಡಾಗಳನ್ನು ಇದೇ ಕೆಜಿಎಫ್‌ನ ಹಳೇ ಚಿನ್ನದ ಗಣಿಗಳಲ್ಲಿ ಸುರಿಯಬೇಕೆಂಬ ಪ್ರಸ್ತಾಪ ಬಂದಾಗ ಪ್ರತಿಭಟನೆ ಎದ್ದಿತ್ತು. ಕೆಲವು ವಿಜ್ಞಾನಿಗಳೇ ಬೇಡವೆಂದು ಹೇಳಿದ್ದರು.
ಈಗಿನ ಈ ದುಷ್ಟ ಯೋಜನೆಯ ವಿರುದ್ಧವೂ ವಿಜ್ಞಾನಿಗಳು ಎದ್ದು ನಿಲ್ಲುವಂತೆ ನಾವು ಒತ್ತಾಯ ಹೇರಬೇಕು. ʻಸ್ಟೀಲ್‌ಬ್ರಿಜ್ ಬೇಡʼವೆಂದು ಹೇಳಿದವರು ಈಗ ಮತ್ತೊಮ್ಮೆ ಎದ್ದುನಿಲ್ಲಬೇಕು. ಆ ಹೈಸೊಸೈಟಿ ಚಳವಳಿಯಲ್ಲಿ ಪಾಲ್ಗೊಂಡಿದ್ದವರನ್ನು ನಾವು ಕೇಳಬೇಕು: ʻಮಾನ್ಯರೆ, ನೀವು ಒಂದಿಷ್ಟು ಮರಗಳನ್ನು ಉಳಿಸಿ, ನಿಮ್ಮ ಪಾಲಿನ ಆಮ್ಲಜನಕವನ್ನು ನೀವು ಉಳಿಸಿಕೊಂಡಿರಿ. ಈಗ ಕೆಜಿಎಫ್‌ನಲ್ಲಿ ದುರ್ನಾತ ಸೂಸಲೆಂದು ನಿಮ್ಮದೇ ಕಚಡಾಗಳನ್ನು ರಾಶಿ ಹಾಕುವುದು ಸರಿಯೆ?ʼ ಎಂದು ನಾವು ಕೇಳಬೇಕು.
ಬೆಂಗಳೂರಿನ ಗಡಿಯೊಳಗೇ ಇಲ್ಲಿನ ಕೊಳೆನೀರು, ಕಚಡಾದ್ರವ್ಯಗಳು ವಿಘಟನೆ ಆಗಬೇಕು. ಅಲ್ಲಿ ಕೊಳಕು ವಾಸನೆ ಹೊಮ್ಮದಂಥ ಸುಧಾರಿತ ತಂತ್ರಜ್ಞಾನದ ಅಳವಡಿಕೆ ಆಗಬೇಕು.
ದುರ್ನಾತ ಸೂಸುವ ವೃಷಭಾವತಿಯ ಪಕ್ಕದ ಹೆಮ್ಮಿಗೆಪುರದಲ್ಲಿ ಪ್ರವಾಸಿಗಳಿಗೆ ಎತ್ತರದ ʻಸ್ಕೈಡೆಕ್ʼ ನಿರ್ಮಿಸಿ ಬೆಂಗಳೂರಿನ ಚಂದವನ್ನು ತೋರಿಸುವ ಮೊದಲು, ಇಲ್ಲಿ ನೆಲಮಟ್ಟದಲ್ಲಿ ಶುದ್ಧಗಾಳಿ, ನೆಲದಾಳದಲ್ಲಿ ಶುದ್ಧನೀರು ಓಡಾಡುವಂತೆ ವ್ಯವಸ್ಥೆ ಮಾಡುತ್ತೀರಾ ಕೇಳಬೇಕು.
ಅಧಿಕಾರಿಗಳು, ಶಾಸಕರು ಏನೇನೋ ಆಶ್ವಾಸನೆಗಳ ಸುಗಂಧವನ್ನು ಬೀರುತ್ತಾರೆ. ಕೆಜಿಎಫ್ ಬಳಿಯ ಬಿಜಿಎಮ್‌ಎಲ್ ಭೂಮಿಯಲ್ಲಿ ಕಚಡಾ ತಿಪ್ಪೆರಾಶಿಯ ಸುತ್ತ ಗಿಡಮರಗಳನ್ನು ನೆಡುತ್ತಾರಂತೆ. ಗಾಳಿ ಶುದ್ಧ ಇರುತ್ತದಂತೆ, ಮಳೆ ಬಂದಾಗ ಅದರ ಕೊಳಕು ದ್ರವವೆಲ್ಲ ಅಂತರ್ಜಲಕ್ಕೆ ಇಂಗದಂತೆ ವ್ಯವಸ್ಥೆ ಮಾಡುತ್ತಾರಂತೆ, ಅದಂತೆ ಇದಂತೆ. ಕೋಲಾರಕ್ಕೆ ಚರಂಡಿ ನೀರಿನ ಕಾಲುವೆಯನ್ನು ಹರಿಸುವಾಗಲೂ ನೀವು ಹೀಗೇ ಆಶ್-ವಾಸನೆ ಕೊಟ್ಟಿದ್ದಿರಿ ನೆನಪಿದೆಯೆ? ಅಲ್ಲಿನ ಕಾಲುವೆಯಲ್ಲಿ ಒಮ್ಮೆ ಈಜಾಡಿ ಬರಬಲ್ಲಿರಾ?
ಕೆಜಿಎಫ್ ತಿಪ್ಪೆರಾಶಿಯನ್ನು ಅಷ್ಟೊಂದು ಚೊಕ್ಕಟ ಇಡಲು ನಿಜಕ್ಕೂ ಸಾಧ್ಯ ಎಂದರೆ, ಅದೇ ರಾಶಿಯನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದ ಆಚಿನ ಬಯಲಿಗೆ ಏಕೆ ಸುರಿಯಬಾರದು? ಅದಕ್ಕಿಂತ ಉತ್ತಮ ಎಂದರೆ ವಿಧಾನ ಸೌಧದ ಪಕ್ಕದ ಕಬ್ಬನ್ ಪಾರ್ಕಿನಲ್ಲೇ ಏಕೆ ಬೆಂಗಳೂರಿನ ಒಂದು ದಿನದ ತಿಪ್ಪೆಯನ್ನು ಚಂದಕ್ಕೆ ಪರಿಮಳ ಸೂಸುವ ಗುಡ್ಡೆಯನ್ನಾಗಿ ಮಾಡಿ ತೋರಿಸಬಾರದು?
ಕೆಜಿಎಫ್‌ನಲ್ಲಿ ಕಸ ಸುರಿಯುವ ಈ ದುರುಳ ಯೋಜನೆಗೆ ಸಹಿ ಹಾಕಿದ ತಜ್ಞರ ಮನೆಯ ಎದುರು ಒಂದೊಂದು ಲಾರಿ ತಿಪ್ಪೆಯನ್ನು ಸುರಿದು ಬರೋಣ ಎಂಬ ಸಲಹೆಯನ್ನು ನಾನಿಲ್ಲಿ ಕೊಡುತ್ತಿಲ್ಲ. ಜಗತ್ತಿನ ಅನೇಕ ಕಡೆ ಅಂಥ ಮತ್ತು ಅದಕ್ಕಿಂತ ಕರಾಳ ಪ್ರತಿಭಟನೆಗಳು ನಡೆದಿವೆ. ಉಕ್ರೇನ್‌ನಲ್ಲಿ ಒಬ್ಬ ಸಂಸದನನ್ನೇ ಕಸದ ತಿಪ್ಪೆಗೆ ಎಸೆದ ವಿಡಿಯೊ ನನ್ನ ಬಳಿ ಇದೆ.
ಹಾಗೆ ಮಾಡುವ ಬದಲು, ರಾಜಧಾನಿಯ ಪ್ರತಿಷ್ಠಿತ ಬುದ್ಧಿಜೀವಿಗಳನ್ನು, ಸಾಹಿತಿ-ಕಲಾವಿದರನ್ನು ಸಂಪರ್ಕಿಸಬೇಕು. ʻನಿಮ್ಮ ನಿಮ್ಮ ಮನೆಯ ಈಚೆ ಬಂದು ಧ್ವನಿ ಎತ್ತಿʼ ಎಂದು ಹೇಳಬೇಕು. ಧ್ವನಿ ಎತ್ತುವಷ್ಟು ಧೈರ್ಯ ಇಲ್ಲದಿದ್ದರೆ, ಮನೆಯ ಮುಂದೆ ʻಕೆಜಿಎಫ್‌ಗೆ ನಮ್ಮ ಕಸ ಹಾಕಬೇಡಿʼ ಎಂಬ ಮೆಲುದನಿಯ ಭಿತ್ರಿ ಬರಹವನ್ನಾದರೂ ಬರೆದಿಡಿ ಎಂದು ಹೇಳಬೇಕು.
ʻಕೆಜಿಎಫ್ʼ ಹೆಸರನ್ನು ದೇಶಾದ್ಯಂತ ಪರಿಚಿತಗೊಳಿಸಿದ ಸಿನೆಮಾ ಮಂದಿಯ ಅಭಿಪ್ರಾಯವನ್ನು ಕೇಳಬೇಕು.
NIMBY ಚಳವಳಿಗೆ ಇಳಿದ ರೈತರು ತಮ್ಮ ಜಮೀನಿನಲ್ಲಿ ನಂಜು ತ್ಯಾಜ್ಯಗಳನ್ನು ಸುರಿಯದಂತೆ ಪ್ರತಿಭಟನೆ ಮಾಡಿದ ಉದಾಹರಣೆಗಳು ಅಮೆರಿಕದ ಉತ್ತರ ಕ್ಯಾರೊಲಿನಾದ ವಾರ್ರೆನ್ ಕೌಂಟಿಯಲ್ಲಿ (1982), ಕ್ಯಾಲಿಫೋರ್ನಿಯಾದ ಕೆಟ್‌ಲ್‌ಮನ್ ಸಿಟಿಯ ಸರಹದ್ದಿನಲ್ಲಿ, ಟೆಕ್ಸಾಸ್‌ನಲ್ಲಿ, ಇಟಲಿಯ ನೇಪಲ್ಸ್ ನಗರದ ಹೊರವಲಯದಲ್ಲಿ… ಹೀಗೆ ಪ್ರಪಂಚದ ಅನೇಕ ಕಡೆ ಸಿಗುತ್ತವೆ. ಅಂಥ ಪ್ರತಿಭಟನೆಯಿಂದಾಗಿಯೇ ತ್ಯಾಜ್ಯಗಳ ಸುರಕ್ಷಿತ ವಿಲೆವಾರಿಗೆ ಸುಧಾರಿತ ತಂತ್ರಜ್ಞಾನಗಳು, ಕಟ್ಟುನಿಟ್ಟಿನ ನಿಯಮಗಳು ಅಲ್ಲೆಲ್ಲ ಜಾರಿಗೆ ಬಂದಿವೆ.
ಬೆಂಗಳೂರಿನ ತ್ಯಾಜ್ಯವನ್ನು ಕೆಜಿಎಫ್ ಗೆ ಸುರಿಯುವುದನ್ನು ನಾವು ನೋಡಿಯೂ ಸುಮ್ಮನಿದ್ದರೆ, ನಮ್ಮವರ ಕಚಡಾ ಬುದ್ಧಿಯು ಮುಂದಿನ ಜನಾಂಗಕ್ಕೂ ಬಳುವಳಿಯಾಗಿ ದಾಟುತ್ತಿರುತ್ತದೆ..
-ಡಾ.ನಾಗೇಶ್ ಹೆಗ್ಡೆ. ಪರಿಸರ ಪತ್ರಕರ್ತ, ವಿಜ್ಞಾನ ವೀಕ್ಷಕರು ರವರ ವಾಲ್ ನಿಂದ.