PLACE YOUR AD HERE AT LOWEST PRICE
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿರುವ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಟ ದರ್ಶನ್, ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ 17 ಮಂದಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ 3,991 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಪವಿತ್ರಾ ಗೌಡ ಎ1 ಮತ್ತು ನಟ ದರ್ಶನ್ ಎ2 ಎಂದು ಉಲ್ಲೇಖಿಸಿರುವುದಾಗಿ ವರದಿಗಳು ಹೇಳಿವೆ.
10 ಕಡತ 7 ಸಂಪುಟಗಳನ್ನು ಒಳಗೊಂಡಿರುವ ದೋಷಾರೋಪ ಪಟ್ಟಿಯಲ್ಲಿ 231 ಜನರಿಂದ ಸಂಗ್ರಹಿಸಲಾದ ಸಾಕ್ಷ್ಯಗಳು, ಸಿಸಿ ಟಿವಿ ಫೂಟೇಜ್, ಎಫ್‌ಎಸ್‌ಎಲ್ ವರದಿ ಹಾಗೂ 27 ಜನರಿಂದ ಪಡೆದ 164 ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮೂರು ತಿಂಗಳುಗಳಿಂದ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಜೈಲಿನಲ್ಲಿದ್ದಾರೆ. ಪ್ರಕರಣದ ತನಿಖೆ ನಡೆಸಿರುವ ಎಸಿಪಿ ಚಂದನ್ ನೇತೃತ್ವದ ತಂಡವು ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿ, ಹೇಳಿಕೆ ಪಡೆದು ಪ್ರಾಥಮಿಕ ದೋಷರೋಪ ಪಟ್ಟಿ ಸಲ್ಲಿಸಿದ್ದಾರೆ. ತನಿಖೆ ಇನ್ನೂ ಬಾಕಿಯಿದ್ದು, ಪೂರ್ಣಗೊಂಡ ಬಳಿಕ ಮತ್ತೊಂದು ದೋಷಾರೋಪ ಪಟ್ಟಿ ಸಲ್ಲಿಸಲ್ಲಿದ್ದಾರೆ ಎಂದು ವರದಿಯಾಗಿದೆ.