PLACE YOUR AD HERE AT LOWEST PRICE
ಬಂಗಾರಪೇಟೆ,ಡಿ.೨೧:ಸರ್ಕಾರ ಬಡವರ ಮಕ್ಕಳು ಆರೋಗ್ಯವಂತ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲೆಂಬ ಸದುದ್ದೇಶದಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಅದರೆ, ಅದರ ಪ್ರಯೋಜನ ಪಡೆಯಲು ಮಕ್ಕಳಿಗೆ ಮರೀಚಿಕೆಯಾಗಿತ್ತಿರುವುದು ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತಾಗಿದೆ.
ಹೌದು, ಕೆಜಿಎಫ್ ನಗರದ ಸ್ಕೂಲ್ ಆಫ್ ಮೈನ್ಸ್ ಸಮೀಪದ ಸ್ವಾಮಿನಾಥಪುರಂನಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಮೊದಲಿಗೆ ವಿದ್ಯಾರ್ಥಿ ನಿಲಯದ ಆರಂಭದಲ್ಲೇ ಎರಡೂ ಇಕ್ಕಲುಗಳಲ್ಲಿ ದೊಡ್ಡ ಮಟ್ಟದಲ್ಲಿ ಗಿಡಗಳು ಬೆಳೆದುನಿಂತ ಪಾಳು ಕಟ್ಟಡಳಿಂದ ಸುತ್ತುವರೆದಿರುವ ಈ ವಿದ್ಯಾರ್ಥಿ ನಿಲಯಕ್ಕೆ ರಕ್ಷಣೆಯ ಕೊರತೆಯಿದೆ. ಇದರ ಪಕ್ಕದಲ್ಲಿರುವ ಈ ಹಿಂದಿನ ತಾಲ್ಲೂಕು ಪಂಚಾಯ್ತಿ ಕಟ್ಟಡ ಇದೀಗ ಪಾಳು ಬಿದ್ದಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.
ಇನ್ನು ವಿದ್ಯಾರ್ಥಿ ನಿಲಯದೊಳಗೆ ಪ್ರವೇಶ ಮಾಡುತ್ತಿದ್ದಂತೆ ಏನೋ ಒಂದು ರೀತಿಯ ಕಮಟು ವಾಸನೆ ಮೂಗಿಗೆ ಬಡಿಯುತ್ತದೆ. ಎತ್ತ ತಿರುಗಿದರೂ ಹೊಟ್ಟೆಯಲ್ಲಿ ತಿರುಗಿಸುವಂತ ವಾಸನೆ ಆರೋಗ್ಯವಂತರೂ ಒಮ್ಮೆ ಒಳ ಪ್ರವೇಶ ಮಾಡಲು ಹೆದರುವಷ್ಟು ಗಬ್ಬು ನಾರುತ್ತಿರುತ್ತದೆ. ಇಲ್ಲಿನ ಶೌಚಾಲಯಗಳ ಪರಿಸ್ಥಿತಿ ನೋಡಿದರೆ ನೆಲದ ಟೈಲ್ಸ್ಗಳು ಪುಡಿ ಪುಡಿಯಾಗಿದೆ. ಶೌಚಾಲಯದ ಒಳಗೆ ಒಂದು ಸಣ್ಣ ಬಕೆಟ್ ಆಗಲೀ ಅಥವಾ ಜೆಗ್ ಸಹ ಇಲ್ಲ. ಇದನ್ನು ಉಪಯೋಗಿಸಲು ಸಾಹಸಮಾಡಬೇಕು.
ಸ್ನಾನದ ರೂಂಗಳಲ್ಲೂ ಅಷ್ಟೇ ಟೈಲ್ಸ್ ಕಿತ್ತುಬಂದಿದ್ದು ನೆಲದಲ್ಲಿ ಕಾಲಿಡಲೂ ಭಯವಾಗುವಷ್ಟು ಪಾಚಿ ಕಟ್ಟಿದ್ದರೂ ಅದರ ಸೂಕ್ತ ನಿರ್ವಹಣೆ ಇಲ್ಲದೆ ಕೆಟ್ಟ ವಾಸನೆಯಿಂದ ತುಂಬಿದೆ. ಅಲ್ಲಿಯೂ ಸಹ ಸ್ನಾನದ ಬಕೆಟ್ಗಳಾಗಲೀ ಜೆಗ್ ಮುಂತಾದ ಯಾವುದೇ ನೀರನ್ನು ಬಳಸುವ ವಸ್ತುಗಳಿಲ್ಲ. ಇನ್ನ ಬಳಕೆಗೆ ನೀರು ಸಹ ಅಸಮರ್ಪಕವಾಗಿದ್ದು. ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ಎಂಬುದು ಗಗನಕುಸುಮವಾಗಿದೆ. ಎಲ್ಲರೂ ಪ್ರತಿದಿನ ತಣ್ಣೀರಿನಲ್ಲೇ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದ್ದು, ವಿದ್ಯಾರ್ಥಿಗಳು ವಿಧಿ ಇಲ್ಲದೆ ಚಳಿಗಾಲದಲ್ಲೂ ತಣ್ಣೀರಿಗೇ ಒಗ್ಗಿಕೊಂಡಿದ್ದಾರೆ.
ಹಾಸ್ಟೆಲ್ ನಲ್ಲಿರುವ ಬಹುತೇಕ ವಿದ್ಯಾರ್ಥಿಗಳು ೧೭ ವರ್ಷದಿಂದ ೨೧ ವರ್ಷಗಳ ವಯೋಮಿತಿಯವರೇ ಆಗಿದ್ದು, ಚೆನ್ನಾಗಿ ಪೌಷ್ಠಿಕ ಆಹಾರವನ್ನು ಸೇವಿಸಬೇಕಾದ ವಯಸ್ಸಿನವರಾಗಿದ್ದಾರೆ. ಇವರಿಗೆ ಮೆನು ಚಾರ್ಟ್ ಪ್ರಕಾರ ಆಹಾರ ಪೂರೈಕೆ ಮಾಡುತ್ತಾರಾ ಎಂದು ನೋಡಿದರೆ ಅದರಲ್ಲೂ ಒಂದಿದ್ದರೆ ಒಂದಿಲ್ಲ. ಮೂರು ಹೊತ್ತೂ ಮುಗ್ಗಲು ಹಿಡಿದ ಅರೆಕೆಂಪುಬಣ್ಣದ ಪಡಿತರ ಅಕ್ಕಿಯ ಅನ್ನವನ್ನೇ ಬೇಯಿಸಿ ಹಾಕುತ್ತಿದ್ದಾರೆ. ಅನ್ನ ಮುದ್ದೆಕಟ್ಟಿರುತ್ತದೆ. ಸಾಂಬಾರು ರುಚಿಕರವಾಗಿಲ್ಲ. ಅದೂ ತರಕಾರಿಗಳಿಲ್ಲದ ಸಾಂಬಾರು. ನಾಮಕಾವಸ್ತೆಗೆ ಒಂದೋ ಎರಡೂ ಆಲೂಗಡ್ಡೆ ಅಥವಾ ಬದನೇಕಾಯಿಯನ್ನು ಹಾಕಿರುತ್ತಾರೆ.
ಇದರೊಂದಿಗೆ ಒಂದಿಷ್ಟು ಉಪ್ಪಿನಕಾಯಿ ಮಾತ್ರ ಕಡ್ಡಾಯವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಈ ವಿದ್ಯಾರ್ಥಿಗಳು ಕೇಳುವುದಿಲ್ಲ ಯಾಕೆ ಎಂಬ ಪ್ರಶ್ನೆ ಬರುತ್ತೆ. ಕಾರಣ, ಸುಮಾರು ೭೦ ಜನ ಇರುವ ಈ ವಿದ್ಯಾರ್ಥಿ ನಿಲಯದಲ್ಲಿ ಶೇ. ೮೦ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ಮೂಲದವರೇ ಆಗಿದ್ದಾರೆ. ಅವರೆಲ್ಲಿ ಹೆಚ್ಚಿನವರು ಸ್ಕೂಲ್ ಆಫ್ ಮೈನ್ಸ್ ಕಾಲೇಜಿನಲ್ಲಿ ಮೈನಿಂಗ್ ಡಿಪ್ಲೋಮಾ ಓದುವ ವಿದ್ಯಾರ್ಥಿಗಳೇ ಆಗಿದ್ದಾರೆ. ಅವರು ಸ್ಥಳೀಯರಲ್ಲದ ಕಾರಣ ಅವರನ್ನು ಹೆದರಿಸಿ ಇಡಲಾಗಿದೆ.
ಇಷ್ಟೆಲ್ಲಾ ಸಮಸ್ಯೆಗಳಿರುವ ಇಲ್ಲಿ ಕನಿಷ್ಠ ಇದ್ದುದ್ದನ್ನು ನೆಮ್ಮದಿಯಿಂದ ಕುಂತು ಉಣ್ಣಲು ಡೈನಿಂಗ್ ಹಾಲ್ ಇಲ್ಲವೇ ಇಲ್ಲ, ಟೇಬಲ್ ಇಲ್ಲ, ಕುರ್ಚಿಗಳೂ ಇಲ್ಲ. ಅದೇನಿದ್ದರೂ ನಿಲಯ ಪಾಲಕರ ಕಚೇರಿಗಷ್ಟೇ ಸೀಮಿತವಾಗಿದೆ. ಈ ಎಲ್ಲಾ ವ್ಯವಸ್ಥೆಗಳ ಬಗ್ಗೆ ಜವಾಬ್ದಾರಿ ಹೊತ್ತ ನಿಲಯ ಪಾಲಕ ಸುಬ್ರಮಣಿಯವರನ್ನು ಕೇಳಿದರೆ ನಿರುತ್ತರವಾಗಿ ನಿಲ್ಲುತ್ತಾರೆ. ಇಲ್ಲಿನ ಆಹಾರ ಧಾನ್ಯಗಳ ಉಗ್ರಾಣವನ್ನು ಪ್ರವೇಶಿಸಿದರೆ ಎಲ್ಲಾ ಡಬ್ಬಗಳಲ್ಲಿ ಎರಡು ಕೆಜಿ ಬೇಳೆ, ಕಡಲೆ, ಉರುಳಿ, ಕಡಲೆಬೇಳೆ ಒಂದಿಷ್ಟು ೨೦ ಕೆಜಿ ಅಕ್ಕಿ ಮಾತ್ರ ಇದೆ. ಆಹಾರ ಪದಾರ್ಥಗಳ ಸ್ಟಾಕ್ ಸಹ ಇಲ್ಲವಾಗಿದೆ. ಇವರಿಗೆ ಆಹಾರ ಪೂರೈಸುವ ಗುತ್ತಿಗೆದಾರರು ಆಹಾರ ನೀಡುತ್ತಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಮಕ್ಕಳಿಗೆ ಮೊಟ್ಟೆ ಕೊಡುವ ದಿನವೇ ಮೊಟ್ಟೆಗಳನ್ನು ನಿಲಯ ಪಾಲಕರು ಖರೀದಿ ಮಾಡುತ್ತಾರಂತೆ. ಹಾಗಾದರೆ ಗುತ್ತಿಗೆದಾರರು ಮೊಟ್ಟೆ ಸಪ್ಲೆ ಮಾಡುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇನ್ನು ಆವರಣದೊಳಗೆ ಒಂದು ಪ್ಲಾಸ್ಟಿಕ್ ಡ್ರಮ್ನಲ್ಲಿ ವಿದ್ಯಾರ್ಥಿಗಳು ಅನ್ನ ತಿನ್ನಲಾಗದೆ ಸುರಿದಿರುವ ದೃಶ್ಯ ಮನಕಲಕುತ್ತದೆ. ಈ ಬಗ್ಗೆ ಕೇಳಿದರೆ, ವಿದ್ಯಾರ್ಥಿಗಳು ನಾವುಗಳೆಲ್ಲಾ ಉತ್ತರ ಕರ್ನಾಟಕ ಮೂಲದವರು ನಾವು ಜೋಳದ ರೊಟ್ಟಿ ಮತ್ತು ಕಾರದ ಪುಡಿ ಹಾಗೂ ತರಕಾರಿ ಪಲ್ಯಗಳನ್ನು ನಿತ್ಯ ಆಹಾರವಾಗಿ ತಿನ್ನುತ್ತೇವೆ. ಆದರೂ ಹಾಸ್ಟೆಲ್ ನಲ್ಲಿ ನೀಡುವ ಊಟಕ್ಕೆ ಒಗ್ಗಿಕೊಂಡಿದ್ದೇವೆ. ಆದರೆ ಇಲ್ಲಿ ಯಾವುದೇ ಅಡುಗೆ ರುಚಿಕರವಾಗಿರುವುದಿಲ್ಲ. ಅನ್ನ ಸಾಂಬಾರು ಊಟ ರುಚಿಯಾಗಿದ್ದರೆ ತಿನ್ನುತ್ತೇವೆ ಎಂದು ಹೇಳುತ್ತಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದು ಇದರ ಬಗ್ಗೆ ಗಮನ ಹರಿಸಲು ತಾಲ್ಲೂಕು ಸಮಾಜ ಕಲ್ಯಾಣಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೆ ಅವರು ಎಲ್ಲಾ ಸಮಸ್ಯೆಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ.
ಒಟ್ಟಾರೆ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಹಾಸ್ಟಲ್ಗಳ ಪರಿಸ್ಥಿತಿ ಹೀಗಿದ್ದಾಗ, ಇನ್ನೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲರುವ ಮಕ್ಕಳ ಗತಿ ಏನು? ಎಂಬ ಪ್ರಶ್ನೆ ಮೂಡುತ್ತದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸುವ ಮೂಲಕ ಸರ್ಕಾರದ ಮೂಲ ಉದ್ದೇಶಗಳಿಗೆ ಚ್ಯುತಿಬಾರದಂತೆ ವಿದ್ಯಾರ್ಥಿ ನಿಲಯಗಳನ್ನು ಪರಿವರ್ತನೆಗೊಳಿಸುತ್ತದೆಯೇ ಎಂದು ಕಾದುನೋಡಬೇಕಿದೆ.
…………………………………
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸ್ವಾಮಿನಾಥಪುರದ ವಿದ್ಯಾರ್ಥಿ ನಿಲಯದ ನಿರ್ವಹಣೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಮೋಸ ಅತೀ ಕಳಪೆ ಗುಣಮಟ್ಟದಿಂದ ಕೂಡಿದ್ದು ಸ್ವಚ್ಚತೆ ಇಲ್ಲದೆ ಮಕ್ಕಳು ಹೇಳಿಕೊಳ್ಳದ ಸ್ಥಿತಿಗೆ ತಲುಪಿದೆ. ಮುದ್ದೆ ಕಟ್ಟಿದ ಮುಗ್ಗಲು ಅಕ್ಕಿ ಅನ್ನ, ತರಕಾರಿ ಇಲ್ಲದ ರುಚಿಕರವಿಲ್ಲದ ಸಾಂಬಾರು, ದುರಸ್ಥಿ ಇಲ್ಲದೆ ಶೌಚಾಲಯ, ಮತ್ತು ಸ್ನಾನದ ಗೃಹಗಳು ಇಂತಹ ಶೋಚನೀಯ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾರಕವಾಗಿದೆ. ಜಿಲ್ಲಾಧಿಕಾರಿಗಳು ಇದರ ಕಡೆ ಗಮನಹರಿಸಬೇಕು ಮತ್ತು ರಿಯಾಲಿಟಿ ಚೆಕ್ ಮಾಡಬೇಕು ಹಾಗೂ ಈಗಿನ ಆಹಾರ ಪದಾರ್ಥಗಳ ಸರಬರಾಜು ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಕೂಡಲೇ ಹೊಸ ಟೆಂಡರ್ ಮಾಡಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ನಿಲಯದ ನಿರ್ವಹಣೆ ವಿಷಯದಲ್ಲಿ ಪಾರದರ್ಶಕತೆ ಇರಬೇಕು ಎಂದು ಇಲಾಖೆಗೆ ನಿರ್ದೇಶನ ಮಾಡಬೇಕು ಎಂದು ಒತ್ತಾಯಿಸುತ್ತದೆ. ಇನ್ನು ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸತ್ಯ ಶೋಧನಾ ಸಮಿತಿ ವಾರಕ್ಕೆ ಒಂದು ನಿಲಯಕ್ಕೆ ಬೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮತ್ತು ಗುಣಮಟ್ಟ ಆಹಾರ ಕಲ್ಪಿಸುವ ಬಗ್ಗೆ ಹೋರಾಟ ಮಾಡುತ್ತದೆಂದು ಈ ಮೂಲಕ ತಿಳಿಸುತ್ತದೆ.
-ಸೂಲಿಕುಂಟೆ ರಮೇಶ್. ರಾಜ್ಯ ಸಂಘಟನಾ ಸಂಚಾಲಕರು,
ಕರ್ನಾಟಕ ದಲಿತ ಸಂಘರ್ಷ ಸಮಿತಿ.
…………………………..
ಶೌಚಾಲಯಗಳು ಮತ್ತು ವಾಶ್ ರೂಮ್ಗಳಿಗೆ ಸರಿಯಾದ ನಿರ್ವಹಣೆ ಮತ್ತು ನೈರ್ಮಲ್ಯವಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ವಾಸಿಸುವ ಮತ್ತು ಅವರ ಅಧ್ಯಯನವನ್ನು ಮುಂದುವರೆಸುವ ವಾತಾವರಣ ತುಂಬಾ ಕಳಪೆಯಾಗಿದೆ. ಆಹಾರದ ಗುಣಮಟ್ಟ ಉತ್ತಮವಾಗಿಲ್ಲ. ಊಟ ರುಚಿ ಇಲ್ಲದ ಕಾರಣ ಕಸದ ಬುಟ್ಟಿಗೆ ಎಸಯಲಾಗುತ್ತಿದೆ. ರುಚಿಯಾದ ಉತ್ತಮ ಪೌಷ್ಟಿಕ ಆಹಾರವನ್ನು ಪೂರೈಸುವ ಮೂಲಕ ಆರೋಗ್ಯ ಕಾಪಾಡಬೇಕಾದ ಕರ್ತವ್ಯ ಇಲಾಖೆ ಮಾಡಬೇಕು.
— ಸುಧಾಕರ್. ಜಿಲ್ಲಾಧ್ಯಕ್ಷ. ಕರ್ನಾಟಕ ಸಮತಾ ಸೈನಿಕ ದಳ.
…………………………………………
ಶೌಚಾಲಯಗಳ ಪರಿಸ್ಥಿತಿಗೆ ಅಲ್ಲಿನ ಅನೈರ್ಮಲ್ಯದ ಬಗ್ಗೆ ಪರಿಶೀಲಿಸಿದ್ದೇವೆ. ಬಿಸಿ ನೀರಿನ ಸೋಲಾರ್ ವ್ಯವಸ್ಥೆ ರಿಪೇರಿಗೆ ಬಂದಿದ್ದು, ಸಿಮೆಂಟ್ ಕೆಲಸ ಮತ್ತು ಸೋಲಾರ್ ರಿಪೇರಿ ಮಾಡಲು ಇಂಡೆಂಟ್ ಕಳಿಸಲಾಗಿದೆ.
– ಶಿವಾರೆಡ್ಡಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ. ಕೆ.ಜಿ.ಎಫ್.