PLACE YOUR AD HERE AT LOWEST PRICE
-ಕೆ.ಎಸ್.ಗಣೇಶ್
ಕೋಲಾರ: ಹಲ್ಲು ಮೂಳೆಗಳ ಸವೆತ, ಕೀಲು ಮೊಣಕಾಲು ನೋವು, ಸವೆತ, ಹೃದಯ ಕಾಯಿಲೆಗಳಿಂದ ಹಠಾತ್ ಮರಣ, ಮೂತ್ರಪಿಂಡ ವೈಫಲ್ಯ, ಚರ್ಮ ವ್ಯಾದಿಗಳು, ನಿಯಂತ್ರಣಕ್ಕೆ ಸಿಗದ ಮಧುಮೇಹ, ಹಾರ್ಮೋನುಗಳಲ್ಲಿ ಏರುಪೇರು, ಥೈರಾಯ್ಡ್, ಸಂತಾನೋತ್ಪತ್ತಿ ಸಮಸ್ಯೆಗಳು, ಕಣ್ಣಿನ ಪೊರೆ, ಜೀರ್ಣಾಂಗ ಸಮಸ್ಯೆ ಹೀಗೆ ಜಿಲ್ಲೆಯ ಜನರು ಅನುಭವಿಸುತ್ತಿರುವ ನಾನಾ ಕಾಯಿಲೆಗಳಿಗೆ ಕುಡಿಯುವ ನೀರೂ ಕಾರಣ ಎಂಬ ಅಚ್ಚರಿಯ ಅಂಶ ಸಂಶೋಧನೆಯಿಂದ ಹೊರ ಬಿದ್ದಿದೆ.
ಪ್ಲೋರೈಡ್ ಮಿಶ್ರಿತ ನೀರನ್ನು ನಿರಂತರವಾಗಿ ಸೇವಿಸುತ್ತಿರುವುರಿಂದ ಕೋಲಾರ ಜಿಲ್ಲೆಯ ಜನರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳ ಕುರಿತು ಶ್ರೀದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯ ಜೀವ ರಸಾಯನ ಶಾಸ್ತ್ರ ವಿಭಾಗದ ಫ್ಲೋರೋಸಿಸ್ ರೀಸರ್ಚ್ ಅಂಡ್ ರೆಫೆರಲ್ ಲ್ಯಾಬ್ ವೈದ್ಯರು ಮತ್ತು ವಿಜ್ಞಾನಿಗಳನ್ನು ಒಳಗೊಂಡ ತಂಡ ಆಳವಾದ ಸಂಶೋಧನೆ ನಡೆಸುತ್ತಿದೆ.
ಫ್ಲೋರೋಸಿಸ್ ಇತಿಹಾಸ:
ಅಮೇರಿಕ ರಾಷ್ಟ್ರದ ಕೊಲೊರಾಡೋದಲ್ಲಿ, 1901 ರಲ್ಲಿ ವೈದ್ಯ ಕೆ.ಮೆಕ್ಕೆ ಮಕ್ಕಳ ಹಲ್ಲುಗಳ ಮೇಲೆ ಹಳದಿ ಕಲೆಗಳನ್ನು ಪರೀಕ್ಷಿಸಿ ಇದು ನೀರಿನ ಸರಬರಾಜಿನಲ್ಲಿ ಫ್ಲೋರೈಡ್ ಹೆಚ್ಚಿನ ಸಾಂದ್ರತೆಯೊಂದಿಗೆ ಸಂಬಂಧಿಸಿದೆ ಎಂದು ದೃಡೀಕರಿಸುತ್ತಾರೆ. ಹಲವು ಸಂಶೋಧನೆಗಳು ಮತ್ತು ಪ್ರಯೋಗಗಳಿಂದ ಹಲ್ಲುಗಳು ಹಳದಿಯಾಗಲು ಕಾರಣ ಫ್ಲೋರೈಡ್‌ನ ಅಕ ಸೇವನೆ ಎಂದು ಅರಿವಾಗುತ್ತದೆ.
ಹಲ್ಲಿನ ಕೊಳೆತವನ್ನು ರಕ್ಷಿಸುವಲ್ಲಿ ಫ್ಲೋರೈಡ್ ಪ್ರಮುಖ ಪಾತ್ರವಹಿಸುತ್ತದೆ ಇಂಗ್ಲೆಂಡ್ ಸರ್ಕಾರವು 1970 ರ ದಶಕದಲ್ಲಿ ನೀರಿನ ಡೀಫ್ಲೋರೈಡೀಕರಣ ತಂತ್ರವನ್ನು ಪ್ರಾರಂಭಿಸಿತು, ಅಲ್ಲಿ ಫ್ಲೋರೈಡ್ ಅಲ್ಲದ ಪ್ರದೇಶಗಳಿಗೆ ಸರಬರಾಜು ಮಾಡುವ ಕುಡಿಯುವ ನೀರಿಗೆ ಕಡಿಮೆ ಪ್ರಮಾಣದಲ್ಲಿ ಫ್ಲೋರೈಡ್ ಅನ್ನು ಬೆರಸಲಾಗುತ್ತಿತ್ತು. ನಂತರ ದಂತ ವೈದ್ಯರು ಸಾಮಾನ್ಯ ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್ ಅನ್ನು ಸೂಕ್ತ ಪ್ರಮಾಣದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು.
ಭಾರತದಲ್ಲಿ, 20 ನೇ ಶತಮಾನದವರೆಗೆ ಜನರು ಕುಡಿಯುವ, ಅಡುಗೆ ಮತ್ತು ಇತರ ಉಪಯುಕ್ತತೆಗಳಿಗಾಗಿ ಬಾವಿ ನೀರನ್ನು ಹೆಚ್ಚಾಗಿ ಬಳಸುತ್ತಿದ್ದರು. ಕ್ರಮೇಣ ಕೊಳವೆ ಬಾವಿಗಳಿಗೆ ಅವಲಂಬಿತರಾದರು. ಪ್ರಾರಂಭದಲ್ಲಿ ಇದರಿಂದ ಕಾಲರದಂತ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುವುದು ಎಂದು ವಿಶ್ಲೇಷಿಸಿದರು. ಆದರೆ ಕೊಳವೆ ಬಾವಿಗಳಿಂದ ನೀರಿನ ಮಟ್ಟ ಕೆಳಗೆ ಹೋದಷ್ಟು ಇತರೆ ತೊಂದರೆಗಳು ಪ್ರಾರಂಭವಾದವು. ಅದರಲ್ಲಿ ಫ್ಲೋರೋಸಿಸ್ ಸಹ ಒಂದು. ಫ್ಲೋರೈಡೀಕರಣವು ಸ್ವಾಭಾವಿಕವಾಗಿ ಭೂಮಿಯ ಒಳಪದರದಲ್ಲಿ ಸಂಭವಿಸಿರುವುದರಿಂದ, ಈ ನೀರಿನಲ್ಲಿನ ಫ್ಲೋರೈಡಿನ ನಿರ್ಮೂಲನೆ ಅಸಾಧ್ಯವಾಯಿತು.
ಅಪಾಯಕಾರಿ ಮಟ್ಟ
ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದ ಹಾಗೆ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ನ ಮಿತಿ 1.5 ಪಿಪಿಎಂ ವರೆಗೂ ಇರಬಹುದು. ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ, ಗರಿಷ್ಠ ದಾಖಲಾದ ನೀರಿನ ಫ್ಲೋರೈಡ್ ಮಟ್ಟವು 3.38 ಪಿಪಿಎಂಗೂ ಅಧಿಕವಾಗಿದೆ, ಇದನ್ನು ಹೆಚ್ಚುವರಿ ಫ್ಲೋರೈಡ್ ಎಂದು ಪರಿಗಣಿಸಲಾಗುತ್ತದೆ. ಹೀಗೆ ಫ್ಲೋರೈಡ್‌ಗೆ ತುತ್ತಾದ ಜನರು ಫ್ಲೋರೋಸಿಸ್ ಎಂಬ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಬಹು ವಿವಿಧ ಆನಾರೋಗ್ಯ ಸಮಸ್ಯೆಗಳಿಂದ ನರಳುತ್ತಿರುವುದು ಸಂಶೋಧನೆಯಿಂದ ಬಹಿರಂಗವಾಗಿದೆ.
ನೀರು – ಆಹಾರ
ಫ್ಲೋರೈಡ್ ನೈಸರ್ಗಿಕವಾಗಿ ಫ್ಲೋರಿನ್ ಅನಿಲವಾಗಿ ಪ್ರಕಟವಾಗುತ್ತದೆ.ಇದು ಭೂಮಿಯ ಹೊರಪದರದಲ್ಲಿ 13 ನೇಅಂಶವಾಗಿ ಅತ್ಯಂತ ಹೇರಳವಾಗಿರುತ್ತದೆ. ಇದು ನೀರು, ಆಹಾರ ಮತ್ತು ಪಾನೀಯಗಳಲ್ಲಿ ಕಂಡುಬರುತ್ತದೆ. ಜನರು ಸೇವಿಸುವ ಹೆಚ್ಚಿನ ಫ್ಲೋರೈಡ್ ನೀರು, ಫ್ಲೋರೈಡ್ ಯುಕ್ತನೀರಿನಿಂದ ತಯಾರಿಸಿದ ಆಹಾರ, ರಸಗೊಬ್ಬರ, ಕೀಟನಾಶಕಗಳು, ಸೌಂದರ್ಯವರ್ಧಕಗಳು, ಟೂತ್ ಪೇಸ್ಟ್ ಫ್ಲೋರೈಡ್ ಹೊಂದಿರುವ ಇತರ ದಂತ ಉತ್ಪನ್ನಗಳಿಂದ ಫ್ಲೋರೈಡ್ ದೇಹದ ಒಳಸೇರುತ್ತದೆ. ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವ ದನ-ಕರುಗಳು,ಗೋವುಗಳು,ಬೆಳೆಯುವ ತರಕಾರಿ, ಹೂವು, ಹಣ್ಣುಗಳು, ಕುರಿ ಮತ್ತು ಕುಕ್ಕುಟಗಳ ಮೇಲೆಯೂ ಸಹ ಪ್ರಭಾವ ಬೀರುತ್ತದೆ. ಇದನ್ನು ಸೇವಿಸುವ ಮಾನವರಲ್ಲಿಯೂ ಸಹ ಅಡ್ಡಪರಿಣಾಮಗಳನ್ನು ಬೀರುತ್ತದೆ.
ಕೋಲಾರದಲ್ಲಿ
ಕೋಲಾರದಂತ ಶಾಶ್ವತ ನದಿ ನಾಲೆಗಳು ಇಲ್ಲದ ಜಿಲ್ಲೆಯಲ್ಲಿ ಜನರು ಇಂದಿಗೂ ಕುಡಿಯುವ ಹಾಗೂ ಬಳಸುವ ನೀರಿನ ಪ್ರಮುಖ ಮೂಲ ಕೊಳವೆ ಬಾವಿಗಳೇ ಆಗಿವೆ. ಪ್ರಾರಂಭದಲ್ಲಿ ತಿಳುವಳಿಕೆ ಕೊರತೆಯಿಂದ ಜನರು ನೇರವಾಗಿ ಕೊಳವೆಬಾವಿ ನೀರು ಸೇವಿಸಲಾರಂಭಿಸಿದರು. ಇದು ಭಾರತ ಹಲವೆಡೆ ಮತ್ತು ಕೋಲಾರ ಜಿಲ್ಲೆಯಲ್ಲಿ ಫ್ಲೋರೈಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
ಮೂರು ರೂಪಗಳಲ್ಲಿ ಪ್ರಪಂಚಾದ್ಯಂತ ಅಂತರ್ಜಲ–ಫ್ಲೋರೈಡ್ ಮಾಲಿನ್ಯವು ಗಂಭೀರ ಸಮಸ್ಯೆಯಾಗಿ ಗುರುತಿಸಲ್ಪಟ್ಟಿದೆ. ಫ್ಲೋರೋಸಿಸ್ ಮೂರು ರೂಪಗಳಲ್ಲಿ ಮಾನವರಲ್ಲಿ ಕಂಡುಬರುತ್ತದೆ. ದಂತ, ಮೂಳೆ ಮತ್ತು ಮೂಳೆಯೇತರ ಫ್ಲೋರೋಸಿಸ್. ಕೋಲಾರ ಜಿಲ್ಲೆಯ ಗ್ರಾಮೀಣ ಸಮುದಾಯಗಳು ಫ್ಲೋರೈಡ್ ಮಿಶ್ರಿತ ಕುಡಿಯುವ ನೀರಿನ ಬಗ್ಗೆ ಇನ್ನೂ ತಿಳಿಯಬೇಕಾದ್ದು ಬಹಳಷ್ಟಿದೆ.
ದಂತ ಫ್ಲೋರೋಸಿಸ್
ಬಾಲ್ಯದ ದಿನಗಳಲ್ಲಿ ಸೇವಿಸುವ ಫ್ಲೋರೈಡ್ ಮಿಶ್ರಿತ ನೀರಿನಿಂದ ಹಲ್ಲುಗಳ ಮೇಲೆ ಫ್ಲೋರೈಡ್ ಸಂಗ್ರಹವಾಗುತ್ತದೆ ಮತ್ತು ಡೆಂಟಲ್ ಪ್ಲೋರೋಸಿಸ್‌ಗೆ ಕಾರಣವಾಗುತ್ತದೆ. ಮಧ್ಯಮ ಮತ್ತು ತೀವ್ರವಾದ ರೂಪಗಳು ಹಲ್ಲುಗಳ ಹಳದಿ, ದಂತ ದದ್ದುಗಳು ಮತ್ತು ಹಲ್ಲುಗಳ ಮಚ್ಚೆಗೆ ಕಾರಣವಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ದಂತ ಕವಚವು ಕಂದುಬಣ್ಣದ ಚುಕ್ಕೆಗಳಿಂದ ಕೂಡಿದ್ದಾಗುತ್ತದೆ. ಫ್ಲೋರೋಸಿಸ್ ನಿಂದ ಆಗುವ ಕಲೆಗಳು ಶಾಶ್ವತವಾಗಿರುತ್ತವೆ ಮತ್ತು ಉತ್ತರೋತ್ತರ ಹಲ್ಲುಗಳನ್ನು ಕಪ್ಪಾಗಿಸಬಹುದು.
ಅಸ್ಥಿ ಪಂಜರದ ಫ್ಲೋರೋಸಿಸ್:
ಅಸ್ಥಿ ಪಂಜರದ ಫ್ಲೋರೋಸಿಸ್ ದೀರ್ಘ ಕಾಲದ ಚಯಾ ಪಚಯ ಮತು ಮೂಳೆ ರೋಗವಾಗಿದ್ದು, ಫ್ಲೋರೈಡ್ ಮಿಶ್ರಿತ ಆಹಾರ ಮತ್ತು ನೀರಿನ ಮೂಲಕ ದೀರ್ಘಾ ಕಾಲದವರೆಗೆ ಸೇವಿಸುವುದರಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಹೆಚ್ಚುವರಿ ಫ್ಲೋರೈಡ್ ಕೀಲುಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ವಿರೂಪಗಳಿಗೆ ಕಾರಣವಾಗುತ್ತದೆ. ಒಮ್ಮೆ ಪ್ರಕಟವಾದರೆ ಇದು ಬದಲಾಯಿಸಲಾಗದ ಸ್ಥಿತಿ ತಲುಪುತ್ತದೆ.
ಟ್ರಿಪಲ್ ಪರೀಕ್ಷೆ
ಅಸ್ಥಿಪಂಜರದ ಫ್ಲೋರೋಸಿಸ್ ಅನ್ನು ಟ್ರಿಪಲ್ ಪರೀಕ್ಷೆಯಿಂದ ನಿರ್ಣಯಿಸಲಾಗುತ್ತದೆ, ಇದು ಗಲ್ಲದಿಂದ ಎದೆಯನ್ನು ಮುಟ್ಟುವ ಪರೀಕ್ಷೆ, ಬಗ್ಗಿ ನಾಣ್ಯವನ್ನು ನೆಲದಿಂದ ಮೊಣಕಾಲನ್ನೂರದೆ ಎತ್ತಿಕೊಳ್ಳವುದು ಮತ್ತು ತಲೆಯ ಹಿಂದೆ ಅಂಗೈಯಬೆರಳುಗಳನ್ನು ಸೇರಿಸಿ ಮುಂದಕ್ಕೆ ತಲೆಯನ್ನು ಒತ್ತುವುದು ಮತ್ತು ತಲೆಯನ್ನು ಹಿಂದಕ್ಕೆ ಒತ್ತುವುದು. ಇದನ್ನು ಮಾಡುವಾಗ ಯಾವುದೇ ತರಹದ ಕತ್ತಿನಲ್ಲಾಗಲಿ, ಬೆನ್ನಿನ್ನಾಗಲಿ ನೋವು ಕಂಡುಬಂದರೆ, ತಕ್ಷಣ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.
ಅಸ್ಥಿಪಂಜರೇತರ ಫ್ಲೋರೋಸಿಸ್:
ದೀರ್ಘಕಾಲದ ಫ್ಲೋರೈಡ್ ಯುಕ್ತ ನೀರು ಅಥವಾ ಆಹಾರ ಸೇವಿಸುವುದರಿಂದ ಮೃದು ಅಂಗಾಂಶಗಳ ಮೇಲೆಯೂ ಪ್ರಭಾವ ಬೀರುತ್ತದೆ ಹಾಗೂ ಹೊಟ್ಟೆ ಮತ್ತು ಇತರ ಅಂಗಾಗಳಲ್ಲಿ ಪ್ರತಿಬಿಂಬಿಸುತ್ತದೆ. ಹೆಚ್ಚಿನ ಫ್ಲೂರೈಡ್ ಸೇವೆಯಿಂದ ಬುದ್ದಿಶಕ್ತಿ ಹಾಗೂ ಜ್ಙಾಪಕಶಕ್ತಿಯ ಮೇಲೆಯೂ ಪ್ರಭಾವ ಬೀರಿ ಮಕ್ಕಳಲ್ಲಿನ ಜಾಣ್ಮೆಯನ್ನು, ಮತ್ತು ಏಕಾಗ್ರತೆಯನ್ನು ಕುಗ್ಗಿಸುತ್ತದೆ. ಇದು ನರಗಳ ಮೇಲೆ ಸಿನಾಪ್ಟಿಕಾ ಕಾರ್ಯನಿರ್ವಹಣೆ, ರಕ್ತ-ಮಿದುಳಿನ ಸಂಬಂತ ಸಮಗ್ರತೆ ಮತ್ತು ಆಕ್ಸಿಡೇಟಿವ್ ಒತ್ತಡ ಮತ್ತು ನ್ಯೂರಾನ್ ಗಳು ಮತ್ತು ಮೈಕ್ರೋಗ್ಲಿಯಾ ಕೋಶಗಳಲ್ಲಿ ಉರಿಯೂತಕ್ಕೆ ಕಾರಣವಾಗಬಹುದು.
ಫ್ಲೋರೈಡ್ ಅಣುವು ಕಣ್ಣಿನೊಳಗೆ ಹೈಡ್ರಾಕ್ಸಿಅಪಟೈಟ್ ಆಗಿ ಕ್ರೂಢಿಕರಿಸಿ ಕಣ್ಣಿನ ಪೊರೆಗೆ ಕಾರಣವಾಗುತ್ತದೆ ಮತ್ತು ಮ್ಯಾಕ್ಯುಲರ್ಡಿಜೆನರೇಶನ್ ಸೇರಿದಂತೆ ಇತರ ಕಣ್ಣಿನ ಕಾಯಿಲೆಗಳಿಗೆ ಪೂರಕವಾಗುತ್ತದೆ.
ವಿವಿಧ ಕಾಯಿಲೆಗಳಿಗೆ ಕಾರಣ
ಫ್ಲೋರೈಡ್ ಛಿದ್ರಗೊಂಡ ಮಹಾಪಧಮನಿಯಿಂದ ಹೃದಯ ಸ್ಥಂಭನಗೊಂಡು ಹಠಾತ್ ಸಾವಿಗೆ ಕಾರಣವಾಗುತ್ತದೆ. ಫ್ಲೋರೈಡ್ ನಿಂದ ಉಂಟಾಗುವ ಅಥವಾ ಉಲ್ಬಣ ಗೊಂಡ ಮಧುಮೇಹವು ಹೃದಯ ರಕ್ತನಾಳದ ಅವನತಿಯನ್ನು ಮತ್ತು ಅಂಗವಿಕಲತೆಯನ್ನು ಮಾಡುತ್ತದೆ. ಗ್ಯಾಸ್ಟ್ರೋ ಕರುಳಿನ ಸೋಂಕಿಗೆ ಕಾರಣವಾಗುತ್ತದೆ. ಈ ಸೋಂಕಿನ ಲಕ್ಷಣಗಳೆಂದರೆ ಹೊಟ್ಟೆನೋವು, ವಾಕರಿಕೆ ಮತ್ತು ವಾಂತಿ. ಫ್ಲೋರೈಡ್‌ನ ಹೆಚ್ಚಿನ ಅಂಶವು ಮೂತ್ರ ಪಿಂಡದ ಹಾನಿಗೆ ಕಾರಣವಾಗಬಹುದು. ಸೋಡಿಯಂ ಫ್ಲೋರೈಡ್ ಕೂದಲಿನ ಬೆಳವಣಿಗೆ ಆರಂಭಿಕ ದಿನಗಳಲ್ಲಿ ಉದುರುವಿಕೆಗೆ ಕಾರಣವಾಗುತ್ತದೆ. ವೀರ್ಯದ ಗುಣಮಟ್ಟ ಮತ್ತು ಹಾರ್ಮೋನ್ ವ್ಯತ್ಯಯದಿಂದ ಸಂತಾನೋತ್ಪತ್ತಿ ಫಲಿತಾಂಶಗಳ ಮೇಲೆ ಪ್ರತಿ ಕೂಲ ಪರಿಣಾಮಗಳನ್ನು ಬೀರುತ್ತದೆ. ಗರ್ಭಿಣಿಯರಲ್ಲಿ ಕುಡಿಯುವ ನೀರಿನ ಮೂಲಕ ಫ್ಲೋರೈಡ್ ಸೇವನೆಯು, ಪ್ರಿ-ಎಕ್ಲಾಂಪ್ಸಿಯಾ ಅಥವಾ ತರುವಾಯ ನವಜಾತ ಶಿಶುವಿನ ಮಾನಸಿಕ ಆರೋಗ್ಯ ಮತ್ತು ಬುದ್ದಿಶಕ್ತಿಯ ಮೇಲೆ ಸಹ ಪರಿಣಾಮ ಬೀರುತ್ತದೆ. ಮೇದೋಜ್ಜೀರಕ ಗ್ರಂಥಿಯಕಾರ್ಯವನ್ನು ನಿರ್ಬಂಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುವ ಇನ್ಸುಲಿನ್ ಮಟ್ಟದ ಮೇಲೆಯೂ ಪರಿಣಾಮಬೀರಬಹುದು.
ಪರಿಹಾರ
ಕೊಳವೆ ಬಾವಿಗಳಲ್ಲಿ ಸಿಗುವ ನೀರನ್ನು ನೇರವಾಗಿ ಬಳಸದೆ ಡಿ ಫ್ಲೋರೈಡ್ ಪ್ರಕ್ರಿಯೆಗೊಳಪಡಿಸಿದ ನಂತರವಷ್ಟೇ ಸೇವನೆ ಮಾಡುವುದರಿಂದ ಫ್ಲೋರೈಡ್ ಮತ್ತು ಫ್ಲೋರೋಸಿಸ್‌ನಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎನ್ನುತ್ತಾರೆ ತಜ್ಞ ವೈದ್ಯರು. ಫ್ಲೋರೈಡ್ ಮತ್ತು ಫ್ಲೋರೋಸಿಸ್ ಸಮಸ್ಯೆಗಳ ಕುರಿತು ಸಂಶೋಸಿ ವಿಶ್ಲೇಷಿಸಿರುವ ವಾಸ್ತವಾಂಶಗಳ ಬಗ್ಗೆ nammasuddi.net ಮೂಲಕ ಅರಿವು ಮೂಡಿಸಲು ವೈದ್ಯರು ಮತ್ತು ವಿಜ್ಞಾನಿಗಳನ್ನು ಒಳಗೊಂಡ ತಂಡದ ಸದಸ್ಯರಾದ ಡಾ.ಶಶಿಧರ್ .ಕೆ.ಎನ್ (9845248742), ಡಾ.ಮುನಿಲಕ್ಷ್ಮಿ (8748815373), ಡಾ. ಸಾಯಿದೀಪಿಕಾ (9036413299), ಮೇಘನಾ ಜಿ.ಎಚ್. (9063742741), ಕುಮಾರಿ ಶರಣ ರೋಜ್ (9182512374), ಶ್ರೀರಾಮ ಗಿರಿ ಸತೀಶ್(9676871510) ಹಗಲಿರುಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ.