• Thu. Oct 31st, 2024

PLACE YOUR AD HERE AT LOWEST PRICE

– ಜನಾರ್ಧನ ಸಿಹಿಮೊಗೆ.

1975ರ ತುರ್ತುಪರಿಸ್ಥಿತಿಯ ಚಾರಿತ್ರಿಕ ಸಂದರ್ಭದಲ್ಲಿ ಜನಪರ ಆಶಯಗಳನ್ನು ಇಟ್ಟುಕೊಂಡು ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಪ್ರಗತಿಪರ ಚಿಂತಕರು ಸೇರಿಕೊಂಡು ಹುಟ್ಟು ಹಾಕಿದ ಸಂಘಟನೆ.   ರಾಜ್ಯ ಸಮುದಾಯ ಕ್ಕೆ ಈಗ ಐವತ್ತರ ಹರೆಯ.   ಪ್ರೊ.ಕಿ.ರಂ.ನಾಗರಾಜ್ ರವರು “ಸಮುದಾಯ” ಎಂದು ಹೆಸರು ಸೂಚಿಸಿದ್ದು ಈಗ ಇತಿಹಾಸ.   ಭಾರತದ ಸಂವಿಧಾನದ ಮೂಲ ಆಶಯಗಳಾದ ಸೌಹಾರ್ದತೆ, ಸಾಮರಸ್ಯ, ಭ್ರಾತೃತ್ವ, ವೈಜ್ಞಾನಿಕ ಮನೋಭಾವ ಇವುಗಳನ್ನೇ ತನ್ನ ಧ್ಯೇಯೋದ್ದೇಶಗಳನ್ನಾಗಿ  ಇಟ್ಟುಕೊಂಡು ಅಂದಿನಿಂದ ಇಂದಿನವರೆಗೂ ಸಹ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಸಮುದಾಯ  “ಸಾಂಸ್ಕೃತಿಕ ವಲಯದಲ್ಲಿ” ತನ್ನನ್ನು  ಗುರುತಿಸಿಕೊಂಡಿದೆ. 

1979 ರ ಹೊಸಮೌಲ್ಯಗಳತ್ತ ಸಮುದಾಯ ಜಾಥಾ, 1981ರ ರೈತನತ್ತ ಜಾಥಾ, 1986 ರ ಭೀಕರ ಬರದೆದುರು ಜಾಥಾ, 1986 ರ ಅಣು ಸಮರದ ವಿರುದ್ಧದ  108 ಅಡಿಗಳ ಬಣ್ಣದ ಜಾಥಾ, 1988 ರ ಸ್ವಾತಂತ್ರ್ಯ ನಲವತ್ತು-ನಾಲ್ಕು ಪ್ರಶ್ನೆಗಳು ಜಾಥಾ, 2010 ರ ಹಸಿವು ಮುಕ್ತ ಕರ್ನಾಟಕ ಜಾಥಾ, ಸಂವಿಧಾನದ ನಡೆ ವಿದ್ಯಾರ್ಥಿ ಗಳ ಕಡೆ , ಇವು ಪ್ರಮುಖ ಜಾಥಾಗಳು.

ರಾಷ್ಟ್ರಕವಿ ಕುವೆಂಪುರವರ “ಸರ್ವಜನಾಂಗದ ಶಾಂತಿಯ ತೋಟ” ಪರಿಕಲ್ಪನೆಗೆ ಪೂರಕವಾಗಿ ಹಾಗೂ ಜನಪರ-ಜೀವಪರ ನಿಲುವುಗಳನ್ನು ಹೊಂದಿರುವ, ಇದರ ಭಾಗವಾಗಿಯೇ ಬೆಮೆಲ್ ನಗರ ಕೆಜಿಎಫ್ ಘಟಕ 1980ರ ದಶಕದಲ್ಲಿ (27/7/1980) ಆರಂಭಗೊಂಡು ಸಕ್ರಿಯವಾಗಿ ತನ್ನ ಇತಿ-ಮಿತಿಗಳ ವ್ಯಾಪ್ತಿಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಇಂದಿಗೂ ಜೀವಂತವಾಗಿದೆ.  ಕೆಜಿಎಫ್  ಪ್ರದೇಶದಲ್ಲಿ “ಕರ್ನಾಟಕ ಕಲೈ ಇಲಕ್ಕಿಯ ಮನ್ರಂ” ನ ಧ್ಯೇಯಧೋರಣೆಗಳು ಸಹ ಸಮುದಾಯದ ಜೀವಪರ ಧೋರಣೆಗಳಿಗೆ ಹೊಂದುತ್ತಿದ್ದರಿಂದ ಅದನ್ನೇ ” ಸಮುದಾಯ ” ಘಟಕವಾಗಿ ಪರಿವರ್ತಿಸಲು ಆಗಿದ್ದಂತಹ ಅದರ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದರು.    

ಬೆಲ್ಚಿ ನಾಟಕದ ಮೂಲಕ ಕೆಜಿಎಫ್ ನ ಕಿಂಗ್ ಜಾರ್ಜ್ ಹಾಲ್ ನಲ್ಲಿ ಉದ್ಘಾಟನೆಗೊಂಡಿತು.   ಬಿಇಎಂಎಲ್ ನಗರದ ಬಳಿ ಇರುವ ವಿಜಯ ನಗರದ  “ನಂ.95, ಶ್ರೀನಿವಾಸ ನಿಲಯ” ದಲ್ಲಿ ಸಮುದಾಯ ಆರಂಭಗೊಂಡ ಮೇಲೆ  ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ “ಜನವಾದಿ ಮಹಿಳಾ ಸಂಘಟನೆ” ಮತ್ತು “ಪ್ರಜಾಸತ್ತಾತ್ಮಕ ಯುವಜನ ಸಂಘಟನೆ” ಗಳ ಹುಟ್ಟಿಗೆ ಕಾರಣವಾದ ಸ್ಥಳವಾಗಿದೆ.

 ದೂರದರ್ಶನ ಒಂದೇ ಮನರಂಜನಾ ಮಾಧ್ಯಮ ಆಗಿದ್ದ ಅಂದಿನ ಕಾಲದಲ್ಲಿ ರಂಗಭೂಮಿಗೆ ವಿಶೇಷ ಮನ್ನಣೆಯಿತ್ತು ಜೊತೆಗೆ ಎಲ್ಲಾ ಕಾರ್ಯಕ್ರಮಗಳಿಗೆ ಇಂದಿನ “ಬೆಮೆಲ್ ಕಲಾಕ್ಷೇತ್ರ” ಪ್ರೇಕ್ಷಕರಿಂದ ಸದಾ ಗಿಜಿಗುಡುತ್ತಿತ್ತು, ಅದಕ್ಕೆ ಮುಖ್ಯ ಕಾರಣ 15-18 ಕಲಾತಂಡಗಳು ಸಕ್ರೀಯವಾಗಿದ್ದವು.

ಜಿಲ್ಲೆಯ ಹವ್ಯಾಸಿ ರಂಗಭೂಮಿಗೆ ಮುಖ್ಯವಾಗಿ ಬಿಇಎಂಎಲ್ ನಗರ ಮತ್ತು ಕೆಜಿಎಫ್ ನ ರಂಗಭೂಮಿಯ ಮೇಲೆ  “ಸಮುದಾಯ” ಆಧುನಿಕ ನಾಟಕಗಳ ಯಶಸ್ವೀ ಪ್ರಯೋಗಗಳನ್ನು ಮಾಡುವುದರ ಮೂಲಕ ಪ್ರಭಾವ ಬೀರಿತು.  ಇವುಗಳಲ್ಲಿ ಪ್ರಮುಖ ನಾಟಕಗಳಾದ ಕತ್ತಲೆ ದಾರಿ ದೂರ, ಹುತ್ತವ ಬಡಿದರೆ, ತಾಮ್ರ ಪತ್ರ, ತದ್ರೂಪಿ, ತಾಯಿ, ಕತ್ತಲೆ ರಾಜ್ಯ, ಚಾರ್ವಾಕ, ಅರಗಿನ ಬೆಟ್ಟ, ಕೊಂದು ಕೂಗಿತ್ತು ನೋಡಾ, ಅಶೋಕವನ, ಹಾನೂಶ್, ರಾವಿ ನದಿ ದಂಡೆಯಲ್ಲಿ, ಪರಿಹಾರ, ಗಂಗವ್ವ ಇಳಿದು ಬರುತಾಳ, ಜತೆಗಿರುವನು ಚಂದಿರ, ಪಿನಾಕಿನಿ ತೀರದಲ್ಲಿ, ಮಾದಾರಿ ಮಾದಯ್ಯ, ಪ್ರಮುಖವಾದವು.

ಬೆಮೆಲ್ ಕೆಜಿಎಫ್ ಕಾರ್ಖಾನೆಯಲ್ಲಿ ನಡೆವ ವಿಜಿಲೆನ್ಸ್ ಅವೇರ್ ನೇಸ್ ವೀಕ್ ಅಂಗವಾಗಿ ನಡೆವ ಕಿರುನಾಟಕಗಳಲ್ಲಿ ಸಮುದಾಯದ ಕಲಾವಿದರು ಪ್ರಮುಖವಾಗಿ ಭಾಗವಹಿಸಿದ್ದಾರೆ. ಆ ನಂತರ ಇತರ ಹಲವು ನಾಟಕ ತಂಡಗಳೂ ಸಹ ಜನಪರ ವಸ್ತುವುಳ್ಳ ನಾಟಕಗಳನ್ನು ಪ್ರದರ್ಶಿಸುವಂತಾಯಿತು.

ಸಾವಿರ ಕ್ಕೂ ಹೆಚ್ಚು ಹಿರಿ-ಕಿರಿಯ ಕಲಾವಿದರು ಈ ಪಯಣದಲ್ಲಿ ಸಾಗಿರುವುದ ಜೊತೆಗೆ ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಅತ್ಯಂತ ಯಶಸ್ವಿ ರಂಗ ಪ್ರಯೋಗಗಳನ್ನು ಮಾಡಿ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದು ಸಮುದಾಯದ ಹಿರಿಮೆಯ ಗರಿಗಳಿಗೆ ಪಾತ್ರರಾಗಿದ್ದಾರೆ. ಗಣಿಪ್ರದೇಶದಲ್ಲಿ ಕನ್ನಡದ ನಾಟಕಗಳ ಪ್ರದರ್ಶನ ಜೊತೆಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡಿದ್ದು ಈಗ ಇತಿಹಾಸದ ಭಾಗವಾಗಿದೆ.

 ಪ್ರಸ್ತುತ ಸಮುದಾಯ ಬೆಮೆಲ್ ನಗರ, ಕೆಜಿಎಫ್ ಘಟಕ ಘಟಕ “ಸಮುದಾಯ-45” ಭಾಗವಾಗಿ ಸಂವಿಧಾನದ ಮೂಲ ಆಶಯಗಳನ್ನು ಸಾರುವ ಶ್ರೀ ಜೆ.ಜಿ.ನಾಗರಾಜ್ ವಿರಚಿತ “ಇದು ತಮಾಷೆಯಲ್ಲವೋ ಅಣ್ಣಾ” ಬೀದಿನಾಟಕವನ್ನು ಹಿರಿಯ ರಂಗಕರ್ಮಿ ಶ್ರೀ ಅಚ್ಯುತರವರ ನಿರ್ದೇಶನದಲ್ಲಿ ಪ್ರದರ್ಶಿಸಲು ಸಜ್ಜಾಗುತ್ತಿದೆ.

ಈ 45 ವಸಂತಗಳ ಸುಧೀರ್ಘ ರಂಗಭೂಮಿ ಪಯಣದಲ್ಲಿ ಸಾಗಿರುವ ಮತ್ತು ಸಾಗುತ್ತಿರುವ ಎಲ್ಲಾ ಪಯಣಿಗಳಿಗೆ ಅನಂತ ವಂದನೆಗಳು. ಪ್ರಸ್ತುತ ಸಮಿತಿಯಲ್ಲಿ ಅಧ್ಯಕ್ಷರು: 0ಶ್ರೀ ಜಗದೀಶ ನಾಯಕ ಉಪಾಧ್ಯಕ್ಷರು: ಡಾ||ವಿನೋದ್ ಕುಮಾರ್  ಶ್ರೀ ಆರ್.ಡಿ. ಅಲಿಕ್ ಡಾ||ರೇವತಿ ಕಾರ್ಯದರ್ಶಿ: ಶ್ರೀ ರವೀಂದ್ರ.ಕೆ. ಜಂಟಿ ಕಾರ್ಯದರ್ಶಿಗಳು:  ಶ್ರೀ ಬಸವರಾಜು ಬಿ.ಹೆಚ್. ಶ್ರೀಮತಿ ಸುಮಾ  ಶ್ರೀಮತಿ ಅನಿತ ಖಜಾಂಚಿ:  ಶ್ರೀ ಜನಾರ್ಧನ ಕಾರ್ಯಕಾರಿ ಸಮಿತಿ ಸದಸ್ಯರು ಶ್ರೀ ಅಚ್ಯುತ್ ಶ್ರೀಮತಿ ಫ್ಲೋರಾ ಶ್ರೀ ಹನುಮಂತರಾಯ,  ಶ್ರೀ ಶೇಖರಪ್ಪ ಶ್ರೀ ರವೀಂದ್ರಚಾರಿ ಶ್ರೀ ಸೋಮಪ್ಪ ಶ್ರೀ ಶಿವಶರಣಪ್ಪ ಶರಣಪ್ಪ  ಕಲ್ಯಾಣಕರ್ ಶ್ರೀ ಕಾ.ಹು.ಚಾನ್ ಪಾಷ ಶ್ರೀ ರಾಮು.ಎ. ಶ್ರೀಮತಿ ವಿಶಾಲ ಶ್ರೀ ಧರಣಿಕಾಂತ್ ಶ್ರೀಮತಿ ಚಿತ್ರಲೇಖ. ಶ್ರೀಮತಿ ಲಾವಣ್ಯ ಶ್ರೀ ಸತೀಶ್ ಶ್ರೀಮತಿ ಯಮುನಾ ಶ್ರೀ ಉಮಾಶಂಕರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Post

ದೇವನಹಳ್ಳಿಯಿಂದ ಹೊಸೂರು ವರಗೆ 3190 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಅನುಮೋದನೆ: ಕೊತ್ತೂರು ಮಂಜುನಾಥ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಸಮತಾ ಸಂಘರ್ಷ ಸಮಿತಿ  ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್

Leave a Reply

Your email address will not be published. Required fields are marked *

You missed

error: Content is protected !!