PLACE YOUR AD HERE AT LOWEST PRICE
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಸೈಟ್ ಹಂಚಿಕೆ ವಿಚಾರವಾಗಿ ನಡೆದಿದೆ ಎನ್ನಲಾದ ಹಗರಣ ವಿರೋಧಿಸಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ನಡೆಸಲು ಸಿದ್ಧವಾಗಿರುವ ಬಿಜೆಪಿ ನಡೆಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, “ಪಾದಯಾತ್ರೆ ಬಗ್ಗೆ ಬಿಜೆಪಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ. ಇದಕ್ಕೆ ಜೆಡಿಎಸ್‌ನಿಂದ ಯಾವುದೇ ನೈತಿಕ ಬೆಂಬಲ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡುತ್ತಿಲ್ಲ. ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜತೆಗೆ ಪಾದಯಾತ್ರೆಯಲ್ಲಿ ನಾವು ಭಾಗಿಯಾಗಬೇಕಾ?” ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರವಾಗಿ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಹರಿಹಾಯ್ದಿರುವ ಅವರು, “ಪ್ರೀತಮ್ ಗೌಡ ಯಾರು. ಹಾಸನದಲ್ಲಿ ಬೀದಿ ಬೀದಿಗಳಲ್ಲಿ ಪೆನ್‌ಡ್ರೈವ್ ಸಿಗಲು ಕಾರಣನಾದ ವ್ಯಕ್ತಿ. ಆತನ ಜತೆಗೆ ನಾನು ವೇದಿಕೆ ಹಂಚಿಕೊಳ್ಳಬೇಕಾ? ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜತೆಗೆ ಪಾದಯಾತ್ರೆಯಲ್ಲಿ ಭಾಗಿಯಾಗಬೇಕಾ? ಎಂದಿದ್ದಾರೆ.
ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಬೆಂಬಲ ಇಲ್ಲ
“ಪಾದಯಾತ್ರೆ ಬಗ್ಗೆ ಬಿಜೆಪಿಯರೇ ತೀರ್ಮಾನ ತೆಗೆದುಕೊಂಡಿದ್ದಾರೆ. ನಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ನಾವು ಬೆಂಬಲ ನೀಡುತ್ತಿಲ್ಲ. ಈ ವಿಚಾರದಿಂದ ನನ್ನ ಮನಸ್ಸಿಗೂ ನೋವಾಗಿದೆ” ಎಂದು ತಿಳಿಸಿದ್ದಾರೆ.
“ಕೇರಳದಲ್ಲಿ ನೂರಾರು ಜನರ ಜೀವ ಹಾನಿಯಾಗಿದೆ. ಕರ್ನಾಟಕದಿಂದ ಹೋದವರು ವಾಪಸ್ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲೂ ಯೆಲ್ಲೋ ಮತ್ತು ರೆಡ್ ಅಲರ್ಟ್ ಘೋಷಣೆ ಆಗಿದೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವ ಈ ಸಮಯದಲ್ಲಿ ಪಾದಯಾತ್ರೆಯ ಅವಶ್ಯಕತೆಯೇ ಇಲ್ಲ” ಎಂದು ಹೇಳಿದ್ದಾರೆ.