• Thu. Oct 24th, 2024

PLACE YOUR AD HERE AT LOWEST PRICE

ಕಂದಾಯ ಸುಧಾರಣೆಗಳ ಅಧ್ಯಯನಕ್ಕೆ ಮಿಜೋರಾಂ ಸಚಿವ ಬಿ.ಲಾಲ್‌ಚಿಂಸೋವ ಉತ್ಸುಕತೆ
ಕೋಲಾರ, ಅಕ್ಟೋಬರ್ 24 : ಕರ್ನಾಟಕ ರಾಜ್ಯದ ಕಂದಾಯ ಸುಧಾರಣೆಗಳನ್ನು ಅಭ್ಯಸಿಸಲು ಇಂದು ಕೋಲಾರ ಜಿಲ್ಲೆಗೆ ಆಗಮಿಸಿದ ಮಿಜೋರಾಂ ರಾಜ್ಯದ ಭೂ ಕಂದಾಯ ಹಾಗೂ ವಸಾಹತು ಇಲಾಖೆಯ ಸಚಿವರಾದ ಶ್ರೀ ಬಿ.ಲಾಲ್‌ಚಿಂಸೋವ ಹಾಗೂ ಮಿಜೋರಾಂ ಸರ್ಕಾರದ ಕಾರ್ಯದರ್ಶಿ ವನ್‌ಲಾಲ್‌ಮಾವಿಯಾ ರವರುಗಳನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ಸ್ವಾಗತಿಸಿ ಕಂದಾಯ ಇಲಾಖೆಯ ವಿವಿಧ ವಿವರಗಳನ್ನು ಅವರಿಗೆ ನೀಡಿದರು.
 ಉತ್ಸುಕತೆಯಿಂದ ಪ್ರತಿಯೊಂದು ವಿವರಗಳನ್ನು ಮಾನ್ಯ ಜಿಲ್ಲಾಧಿಕಾರಿಗಳಿಂದ ಕೇಳಿದ ಅಧ್ಯಯನ ತಂಡ ಕೋಲಾರ ಜಿಲ್ಲೆಯ ಆಡಳಿತ ವೈಖರಿಯನ್ನು ಶ್ಲಾಘಿಸಿತು. ಸಾರ್ವಜನಿಕರಿಗೆ ವಿವಿಧ ಕಂದಾಯ ಸೇವೆಗಳನ್ನು ತ್ವರಿತಗತಿಯಲ್ಲಿ ವಿತರಿಸುತ್ತಿರುವ ಜಿಲ್ಲಾಡಳಿತವನ್ನು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳ ವೃತ್ತಿಪರ ಕಾಳಜಿಯನ್ನು ಹೊಗಳಿದರು.
ಮಾನ್ಯ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ವಿತರಿಸಲಾಗುವ ವಿವಿಧ ಪ್ರಮಾಣ ಪತ್ರಗಳನ್ನು ಯಾವುದೇ ವಿಳಂಭವಿಲ್ಲದೆ, ಶೇ.100 ರಷ್ಟು ವಿತರಿಸಿ ರಾಜ್ಯದಲ್ಲೇ ಪ್ರಥಮ ರ‍್ಯಾಂಕಿoಗ್ ಪಡೆಯುವ ಸಾಧನೆ ಮಾಡಿದೆ. ಈ ಸೇವೆಯಲ್ಲಿ ನಾಗರಿಕರಿಗೆ ವಿವಿಧ ಸೇವೆಗಳನ್ನು ನಾಡಕಛೇರಿ ಮೂಲಕ ಸುಲಭವಾಗಿ ತಲುಪಿಸುವ ಗುರಿಯನ್ನು ಹೊಂದಿದೆ. ಜಾತಿ ಮತ್ತು ಆದಾಯ, ಭೂಮಿ ಮತ್ತು ಕೃಷಿಕರಿಗೆ ಸಂಬoಧಿಸಿದ ಮತ್ತು ಸಮಾಜಿಕ ಭದ್ರತಾ ಪಿಂಚಣಿಗಳು, ಜಾತಿ ಆದಾಯ ಪ್ರಮಾಣ ಪತ್ರ, ಪಡಿತರ ತಿದ್ದುಪಡಿ, ಪಹಣಿ, ಮ್ಯುಟೇಶನ್, ಆಧಾರ್ ಅರ್ಜಿ, ತಿದ್ದುಪಡಿ ಸೇರಿದಂತೆ 25ಕ್ಕೂ ಹೆಚ್ಚಿನ ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ ಒದಗಿಸಲಾಗುತ್ತಿದೆ. ಈ ವಿತರಣೆಗಳಲ್ಲಿ ಹಿಂದೆ 31 ಜಿಲ್ಲೆಗಳ ಪೈಕಿ 28ನೇ ಸ್ಥಾನದಲ್ಲಿದ್ದ, ಕೋಲಾರ ಜಿಲ್ಲೆಯು ಪ್ರಸ್ತುತ ಶೇ.100ರಷ್ಟು ವಿಳಂಬ ರಹಿತ ಸೇವೆಯನ್ನು ನೀಡುವ ಖಾತರಿ ಪಡಿಸಿಕೊಳ್ಳಲಾಗುತ್ತಿದೆ. ಕಳೆದ ಏಳು ತಿಂಗಳುಗಳಿoದ ಸದರಿ ಸೇವೆಯನ್ನು ಒದಗಿಸುವಲ್ಲಿ ರಾಜ್ಯಕ್ಕೆ ಕೋಲಾರ ಜಿಲ್ಲೆಯು ಮಾದರಿಯಾಗಿದೆ ಎಂದು ತಿಳಿಸಿದರು.
ಪ್ರತಿ ಮಾಹೆ ಸಕಾಲ ಯೋಜನೆಯಡಿ ಸುಮಾರು 31 ಇಲಾಖೆಗಳ ವಿವಿಧ 75000 ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ಕ್ರಮಬದ್ಧವಾಗಿ ವಿಲೆಮಾಡಲಾಗುತ್ತಿದೆ. ಸದರಿ ಯೋಜನೆಯಡಿ ವಿಳಂಬ ಮಾಡುವ ನೌಕರರಿಗೆ ದಂಡ ವಿಧಿಸುವ ಪ್ರಕ್ರಿಯೆ ಇರುವುದರಿಂದ 21 ದಿನಗಳಲ್ಲಿ ವಿಲೆಮಾಡಲು ನಿಗಧಿಪಡಿಸಿರುವ ಅರ್ಜಿಗಳನ್ನು ಕೇವಲ 7 ದಿನಗಳೊಳಗೆ ವಿಲೆಮಾಡಲಾಗುತ್ತಿದೆ. ಈ ಹಿಂದೆ ಅರ್ಜಿ ವಿಲೆವಾರಿಯಲ್ಲಿ 31 ಜಿಲ್ಲೆಗಳ ಪೈಕಿ 29 ಸ್ಥಾನದಲ್ಲಿದ್ದ, ಕೋಲಾರ ಜಿಲ್ಲೆಯು ಪ್ರಸ್ತುತ ಪ್ರಥಮ ಸ್ಥಾನಕ್ಕೇರಿದೆ ಎಂದರು.
ಕoದಾಯ ದಾಖಲೆಗಳಿಗೆ ಆಧಾರ್ ಸೀಡಿಂಗ್ ಕಾರ್ಯಪ್ರಗತಿಯಲ್ಲಿದ್ದು, ಕಂದಾಯ ದಾಖಲೆಗಳನ್ನು ತಿರುಚುವ ಪ್ರಕ್ರಿಯೆಗೆ ಕಡಿವಾಣ ಹಾಕಲಾಗಿದೆ. ಜಿಲ್ಲೆಯ ಶೇ.90ರಷ್ಟು ಖಾಸಗಿ ಸ್ವತ್ತುಗಳ ಕಂದಾಯ ದಾಖಲೆಗಳನ್ನು ಆಧಾರ್ ಸೀಡಿಂಗ್ ಮಾಡಲಾಗಿದೆ. ಅಂತಯೇ ಸರ್ಕಾರಿ ಆಸ್ತಿಗಳ ಕಾವಲಿಗಾಗಿ ಲ್ಯಾಂಡ್‌ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿಗೆ ಅವಕಾಶ ಇಲ್ಲದಂತೆ ಈ ತಂತ್ರಾoಶದಲ್ಲಿ ಸರ್ಕಾರಿ ಜಮೀನುಗಳ ದಾಖಲೆಗಳನ್ನು ರಕ್ಷಿಸುವ ಜೊತೆಗೆ ಜಿಯೋಫೆನ್ಸ್ ಮೂಲಕ ನಿಗಾವಹಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಕೋಲಾರ ಜಿಲ್ಲೆಯು ರಾಜ್ಯಕ್ಕೆ ಆದರ್ಶಪ್ರಾಯವಾಗಿ ಪ್ರಥಮ ಸ್ಥಾನ ಪಡೆದಿದೆ ಎಂದು ವಿವರಿಸಿದರು.
ಭೂ ಸುರಕ್ಷ ಯೋಜನೆಯಡಿ ಜಿಲ್ಲೆಯ ಎಲ್ಲಾ ರೆಕಾರ್ಡ್ ರೂಂಗಳಲ್ಲಿರುವ ಎಲ್ಲಾ ದಾಖಲೆಗಳನ್ನು ಡಿಜಿಟಲಿ ಕರಣಗೊಳಿಸಿ ಗಣಕೀಕರಣಗೊಳಿಸಲಾಗಿದೆ. ಇದರಿಂದಾಗಿ ಕಡತಗಳು ಕಳದು ಹೋಗುವ ಸಂಭವ ಕಡಿಮೆಯಿದ್ದು, ತಕ್ಷಣಕ್ಕೆ ದಾಖಲೆಗಳು ಲಭ್ಯವಾಗುವ ಸಾಧ್ಯತೆ ಇರುತ್ತದೆ ಎಂದರು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನಿಯತವಾಗಿ ನಡೆಸಲಾಗುವ ಕಂದಾಯ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಕನಿಷ್ಠ 3 ತಿಂಗಳೊಳಗಾಗಿ ವಿಲೆಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತ್ವರಿತ ನ್ಯಾಯ ಒದಗಿಸಲು ಸಾಧ್ಯವಾಗುತ್ತಿದೆ ಎಂದರು.
ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ತೀವ್ರ ಸಿಬ್ಬಂದಿ ಕೊರತೆಯಿದ್ದು, ಆದಾಗ್ಯೂ ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ಷಮತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 1000 ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಇದರಿಂದಾಗಿ ಸಿಬ್ಬಂದಿ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿಕೊಳ್ಳಬಹುದಾಗಿದೆ ಎಂದರು. ಕಂದಾಯ ಇಲಾಖೆಯ ಎಲ್ಲ ಕಡತಗಳನ್ನು ಇ-ಆಫೀಸ್ ತಂತ್ರಾoಶದ ಮುಖಾಂತರ ವಿಲೆಮಾಡುತ್ತಿರುವುದರಿಂದ ವಿಳಂಬಕ್ಕೆ ಆಸ್ಪದವಿಲ್ಲದೆ, ತ್ವರಿತಗತಿಯಲ್ಲಿ ಕಡತಗಳ ವಿಲೆಯನ್ನು ನಿರೀಕ್ಷಸಬಹುದಾಗಿದೆ ಎಂದು ವಿವರಿಸಿದರು.
ಇವೆಲ್ಲವುಗಳಿಂದ ಉತ್ಪಾದಕತೆ ಹೆಚ್ಚಿದ್ದು, ಕರ್ನಾಟಕ ರಾಜ್ಯ ಸರ್ಕಾರವು ಕೋಲಾರ ಜಿಲ್ಲೆಯ ಆಡಳಿತ ಕಾರ್ಯ ವೈಖರಿಯನ್ನು ಮೆಚ್ಚಿ ಶ್ಲಾಘಿಸಿದೆ ಎಂದು ಅವರು ತಿಳಿಸಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿಗಳಾದ ಮಂಗಳ, ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು, ಎಲ್ಲಾ ತಹಶೀಲ್ದಾರ್‌ಗಳು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Related Post

ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಿ- ಅಪರ ಜಿಲ್ಲಾಧಿಕಾರಿ ಮಂಗಳ
ಭೋವಿ ನಿಗಮದ ಅಧ್ಯಕ್ಷ ರವಿ ಕುಮಾರ್ ಅವರನ್ನು ನಿಂದಿಸಿರುವ ಶಾಸಕ ಕೊತ್ತೂರು ಮಂಜುನಾಥ್ ಬಹಿರಂಗವಾಗಿ ಕ್ಷಮೆ ಕೇಳಬೇಕು : ಭೋವಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಲ್ ಜಿ ಮುನಿರಾಜು ಆಗ್ರಹ

Leave a Reply

Your email address will not be published. Required fields are marked *

You missed

error: Content is protected !!