• Fri. Mar 1st, 2024

PLACE YOUR AD HERE AT LOWEST PRICE

ಸಾಹಿತ್ಯ ಎನ್ನುವುದು ಕಠಿಣ ಶಬ್ದಗಳಲ್ಲಿ ಕಳೆದುಹೋಗದೆ, ಜನರ ಹೃದಯಕ್ಕೆ ತಲುಪುವಂತಾಗಬೇಕು, ಬತ್ತಿದೆದೆಗಳಲ್ಲಿ ಜೀವಸೆಲೆ ಮೂಡಿಸಿ, ನೊಂದವರ ಕೈಹಿಡಿದು ಎತ್ತಬೇಕು. ತಮ್ಮೆಲ್ಲ ಶ್ರಮವನ್ನು ಧಾರೆಯೆರೆದ ದಲಿತರು ಇಂದು ಸಂಕಟಗಳ ಸರಮಾಲೆಯಲ್ಲಿ ಬದುಕುತ್ತಿದ್ದಾರೆ. ಇದನ್ನು ನಾವೆಲ್ಲ ಸೂಕ್ಷ್ಮವಾಗಿ ಗಮನಿಸಬೇಕೆಂದು ಅಭಿಪ್ರಾಯಪಡುವ ಕಾದಂಬರಿಯನ್ನು ಓದುವುದು ಕನ್ನಡಿಗರ ಹೊತ್ತಿನ ಅಗತ್ಯ

ಕಥನ ಮತ್ತು ಸಂವಾದ ಮಾದರಿಯ ಈ ಬರವಣಿಗೆ ಕನ್ನಡದಲ್ಲಿ ಅಪರೂಪ ಹಾಗೂ ಅನನ್ಯವಾದದ್ದು.  ಫ್ರಾನ್ಸ್‌ನ ಬಂಡಾಯ ಕವಿ ಬೋದಿಲೇರ್ ಹೇಳುವ ‘ಜಡಗೊಂಡ ಓದುಗನನ್ನು ತನ್ನ ಅನುಭವದಿಂದ ಬೆಚ್ಚಿ ಬೀಳಿಸದೇ ಇರುವ ಲೇಖಕ ಎಂಥದನ್ನು ಮಾಡಲಾರ’ ಎಂಬ ಮಾತಿನಂತೆ ನನ್ನನ್ನು ಬೆಚ್ಚಿಬೀಳಿಸಿದೆ.

‘ನಿಷೇಧ’ ಕಾದಂಬರಿಯನ್ನು ಓದುತ್ತಾಹೋದಂತೆ ನನ್ನ ಕಣ್ಣೆದುರಿಗೆ ತಕ್ಷಣ ಬಂದು ನಿಂತದ್ದು ಅವಿಭಜಿತ ಕೋಲಾರ ಜಿಲ್ಲೆಯ ಆಂಧ್ರದ ಗಡಿಭಾಗದ ಇಂತಹುದೇ ಶೋಷಕ ಮನಃಸ್ಥಿತಿಯ ರೆಡ್ಡಿಗಳು ಮತ್ತು ಶೋಷಿತ ಅಸ್ಪೃಶ್ಯರಿರುವ ಕಂಬಾಲಪಲ್ಲಿ. ಇಲ್ಲಿ ಏಳು ಮಂದಿ ದಲಿತರನ್ನು ಮನೆಯೊಳಗೆ ಕೂಡಿಹಾಕಿ, ಚಿಲಕ ಹಾಕಿ, ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಟ್ಟು ಹಾಕಿದ ದಲಿತರ ಹತ್ಯಾಕಾಂಡದ ಕರಕಲಾದ ಕಥನವಿದೆ.

ಕುರಿತ ಜನಕವಿ ಗೊಲ್ಲಹಳ್ಳಿ ಶಿವಪ್ರಸಾದ್‌ಕರುಳಿನ ಕವನ…

ಕಾಶಿಕಂಚಿ ಕಾಳಹಸ್ತಿ ಕಾಣುವಂತ ಕಣ್ಣಿಗೆ

ಬೆಲ್ಚಿ ಪಿಪ್ರ ಕೆಸ್ತಾರ ಕಾಣಲಿಲ್ಲ ಯಾಕೆ

ಮಧುರೆ ಮಥುರ ಮೇಲುಕೋಟೆ ಕಾಣುವಂತ ಕಣ್ಣಿಗೆ

ಜಜ್ಜಾರ್ ಖೈರ್ಲಾಂಜಿಗಳು ಕಾಣಲಿಲ್ಲ ಯಾಕೆ

ಇದು ದಮನಿತರ ಎದೆಯೊಳಗಿನ ಹೇಳದ ವ್ಯಥೆಯೋ

ಕೋಟಿ ಕೋಟಿ ಗುಂಡಿಗೆಗಳ ಗುಡಿಯಲಿರುವ ಕಥೆಯೋ ||ಕಾ||

ಹಲ್ಲುಗಳಲಿ ಇಲ್ಲ ವಿಷ, ಮೆದುಳಲಿ ಬುಸುಗುಟ್ಟುತಿದೆ

ಮತದ ಮತ್ತು, ಕೆರಳಿ ನೆತ್ತಿ ಮ್ಯಾಲೆ ಕತ್ತಿಯಾಗಿದೆ

ದೇವರ ಹೆಸರಲ್ಲಿ ದ್ವೇಷ ದೇಶವೆಲ್ಲ ಹರಡುತಿದೆ

ಸಾಧು ಸಂತ ಸೂಫಿಗಳ ಮಾತೇ ಮರೆಯಾಗಿದೆ

ಎಲ್ಲಿ ಹೋದವೊ ತಮಟೆ ತಂಬೂರಿ ಮದ್ದಲೆ

ಮದ್ದು ಗುಂಡು ಬಂದೂಕಿನ ಸದ್ದುಗಳಿಗೆ ಬೆದರಿ ||ಕಾ||

ಅದೋ ಅದೋ ಹಳ್ಳಿ ಆಂಧ್ರದ ಗಡಿಯಲ್ಲಿ

ಮಮಕಾರಗಳನು ಮರೆತ ಮುಳ್ಳಿನ ಬೇಲೀ

ಆಗತಾನೆ ಅಕ್ಷರಗಳು ಅಲ್ಲಲ್ಲಿ ಓಡಾಡಿ

ಗುಡಿಸಲು ಗೂಡುಗಳಲಿ ಮಸುಕು ಬೆಳಕ ಚೆಲ್ಲಿ

ಪೂರ್ವದ ಸೂರ್ಯಕಿರಣ ನೋಡುವಷ್ಟರಲ್ಲಿ

ಕನಸುಗಳೇ ಕರಗಿ ಕೊರಗಿ ಕಾಣದಾದವಲ್ಲಿ ||ಕಾ||

ಅನ್ನ ಕೇಳಿದ ತಪ್ಪಿಗೆ ಅಣ್ಣನನ್ನೆ ಕೊಂದರು

ತುಂಡು ಭೂಮಿಗಾಗಿ ತಲೆಯ ಮೇಲೆ ಬಂಡೆ ಎಳೆದರು

ಎದುರು ತಿರುಗಿದಾ ತಪ್ಪಿಗೆ ಎಲ್ಲರನೂ ಕೊಂದರು

ಬೆಂಕಿ ಹಚ್ಚಿ ಬೂದಿ ಮಾಡಿ ಉಸಿರು ಕಿತ್ತುಕೊಂಡರು

ಇದು ಕಂಬಾಲಪಲ್ಲಿಯ ಕರುಳಿನ ಕವನಾ

ಕರಕಲಾದ ದಲಿತರ ಕಣ್ಣೀರಿನ ಕಥನಾ ||ಕಾ||

ಕಂಬಾಲಪಲ್ಲಿಯಲ್ಲಿ 2000ದ ಮಾರ್ಚ್ 11ರಂದು ದಲಿತರ ನರಮೇಧ ನಡೆಯಿತು; ಜಾತ್ಯಂಧ ಹಿಂದೂ ಮನಸ್ಸುಗಳ ತಾರತಮ್ಯ ಮನಸ್ಥಿತಿಯನ್ನು ನೇರವಾಗಿ ಪ್ರಶ್ನಿಸುವ ಮೂಲಕ ಕವಿ ತನ್ನ ವೇದನೆಯನ್ನು ಈ ಕವನದಲ್ಲಿ ಪ್ರತಿಭಟನೆಯಾಗಿ ವ್ಯಕ್ತಪಡಿಸುತ್ತಾರೆ.

ಸರ್ಕಾರ, ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ತನ್ನ ಎಂದಿನ ಮೇಲ್ಜಾತಿ ಒಲವನ್ನು ಬಹಿರಂಗವಾಗಿ ತೋರ್ಪಡಿಸದೆ, ತನಿಖೆಯಲ್ಲಿನ ಮತ್ತು ವಿಚಾರಣೆಯಲ್ಲಿನ ಲೋಪದೋಷಗಳನ್ನು ಈ ಕೇಸು ಬಳಸಿಕೊಂಡಿದ್ದು, ಪರೋಕ್ಷವಾಗಿ ಅಪರಾಧಿಗಳಿಗೆ ನೆರವಾಗಿದೆ. ವಿಪರ್ಯಾಸವೆಂದರೆ ಈ ಘಟನಾ ಸ್ಥಳಕ್ಕೆ ರಾಷ್ಟ್ರೀಯ ನಾಯಕರು ಬಂದುಹೋದರು.

ಈ ಸಂದರ್ಭದಲ್ಲಿ ಗೃಹಮಂತ್ರಿ ದಲಿತರಾಗಿದ್ದರು; ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ಎಲ್ಲರೂ ದಲಿತರೇ! ಆದರೆ ಇವರಿಗೆ ಆದೇಶ ನೀಡುವವರು ಮಾತ್ರ ಬಹುತೇಕ ಮೇಲ್ಜಾತಿಯ ರಾಜಕಾರಣಿಗಳಾಗಿದ್ದು, ದಲಿತರಿಗೆ ನ್ಯಾಯ ಮರೀಚಿಕೆಯೇ ಆಯಿತು.

ಕಂಬಾಲಪಲ್ಲಿಯ ಕರಕಲಾದ ಕರುಳಿನ ಕಣ್ಣೀರಿನ ಕಥೆಗೆ 22 ವರ್ಷವಾದರೂ, ಸಾಕ್ಷಿಗಳ ಪ್ರತಿಕೂಲ ಹೇಳಿಕೆಯಿಂದಾಗಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ 9 ವರ್ಷಗಳಾದರೂ ವಿಚಾರಣೆಯನ್ನೇ ಕೈಗೊಂಡಿಲ್ಲ.

ತನ್ನ ಕುಟುಂಬದ ಐದು ಜನ ಸದಸ್ಯರನ್ನು ಕಳೆದುಕೊಂಡಿದ್ದ ವೆಂಕಟರಾಯಪ್ಪ 2019ರಲ್ಲಿ ನಿಧನರಾಗಿದ್ದು, ಕೊನೆಕೊನೆಗೆ ಹೇಳುತ್ತಿದ್ದ ಮಾತು “ಏನು ಹೇಳಲಿ ಸ್ವಾಮಿ? ಮಿನಿಸ್ಟರ್, ಪೊಲೀಸರು, ಡಿಸಿ, ತಹಸೀಲ್ದಾರ್ ಎಲ್ಲಾ ಬಂದ್ರು. ಏನು ಮಾಡಿದ್ರು? ಏನೂ ಮಾಡ್ಲಿಲ್ಲ… ನನ್ನ ಕಣ್ಣ ಮುಂದೆಯೇ ಬಾಗಿಲು ಹಾಕಿ, ಬೆಂಕಿ ಇಟ್ರಪ್ಪ.. ಪೊಲೀಸ್ ಅಲ್ಲೇ ಇದ್ರೂ, ಏನೂ ಮಾಡಲಿಲ್ಲ…….”

ಕವಿ ತನ್ನ ಕವನದಲ್ಲಿ ಪ್ರಸ್ತಾಪ ಮಾಡಿರುವ ದಲಿತ ಹತ್ಯಾಕಾಂಡ ಘಟನೆಗಳಲ್ಲಿನ ಕೆಲವರಾದರೂ ಶಿಕ್ಷೆಗೆ ಗುರಿಯಾಗಿದ್ದರೆ, ಕಂಬಾಲಪಲ್ಲಿಯಂತಹ ಘಟನೆಗೆ ತಪ್ಪಿಸಿಕೊಳ್ಳುವುದಕ್ಕೆ ಆಸ್ಪದವೇ ಇಲ್ಲದಾಗುತ್ತಿತ್ತು.

ಟಿಷರ ಆಗಮನದಿಂದಾಗಿ ಅಸ್ಪೃಶ್ಯರ ಬದುಕು ಅಕ್ಷರಲೋಕಕ್ಕೆ ತೆರೆದುಕೊಂಡಿದ್ದು, ಪರಿಣಾಮವಾಗಿ ಆ ಸಮುದಾಯಗಳ ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಪರಿಸ್ಥಿತಿ ಬಾರದಿರಲೆಂಬ ಹೆಬ್ಬಯಕೆಯಿಂದ, ಜೀತದ ಪಾಲಾಗಬೇಕಿದ್ದ ಮಕ್ಕಳನ್ನು ಶಾಲೆಗೆ ದೂಡಿದ್ದು – ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿದ ಅಕ್ಷರದ ಅರಿವಿನ ಅಣುಬೀಜ, ಅಲ್ಲಿಯವರೆಗೆ ಅಕ್ಷರಗಳನ್ನು ಬಚ್ಚಿಟ್ಟಿದ್ದ ಮೇಲ್ಜಾತಿಯ ಮನಸ್ಥಿತಿಗಳಿಗೆ ಬಾಂಬಾಗಿ ನಾಟಿದೆ. ಹತ್ತೊಂಬತ್ತನೇ ಶತಮಾನದ ಭಾರತೀಯ ಸಮಾಜ, ಜಾತಿವ್ಯವಸ್ಥೆಯ ಮೂಲಗಳನ್ನು ಪ್ರಶ್ನಿಸುವ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿಗಳನ್ನು ಸೃಷ್ಟಿಸಿತು.

ಈ ವ್ಯವಸ್ಥೆಯಲ್ಲಿ ತಮ್ಮ ಹಿತವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಅರ್ಥಮಾಡಿಕೊಂಡಿದ್ದರೂ ಸಹ ಅಸ್ಪೃಶ್ಯರು, ಒಂದು ಹಂತದಲ್ಲಿ ನ್ಯಾಯಕ್ಕಾಗಿ, ರಕ್ಷಣೆಗಾಗಿ ಪೊಲೀಸ್ ಠಾಣೆಯನ್ನು ಪ್ರವೇಶಿಸುತ್ತಾರೆ. ಇದನ್ನೇ ದುರಹಂಕಾರದ ಪರಮಾಧಿಯೆಂದು ಊಳಿಗಮಾನ್ಯ ವ್ಯವಸ್ಥೆ ಭಾವಿಸುತ್ತದೆ. ದಲಿತರ ಬದುಕಿನಲ್ಲಿ ಸ್ಥಳೀಯ ಪಂಚಾಯತಿ ವ್ಯವಸ್ಥೆ ನಿರ್ವಹಿಸಿದಷ್ಟು ನಿರ್ಣಾಯಕ ಪಾತ್ರವನ್ನು ಇನ್ನಾವ ವ್ಯವಸ್ಥೆಯೂ ನಿರ್ವಹಿಸಿಲ್ಲ. ಈ ವ್ಯವಸ್ಥೆ ಮನುಧರ್ಮಶಾಸ್ತ್ರದಲ್ಲಿದ್ದಂತೆ ತನ್ನಷ್ಟಕ್ಕೆ ತಾನೇ ಪೊಲೀಸ್ ಸ್ಟೇಷನ್ ಆಗಬಲ್ಲದು, ನ್ಯಾಯಾಲಯವೂ ಆಗಬಲ್ಲದು.

ವಾಸ್ತವದಲ್ಲಿ ಚುಂಡೂರಾದ, ಈ ಕಾದಂಬರಿಯ ಅಲ್ಲೂರಿನಲ್ಲಿ 1991ರ ಆಗಸ್ಟ್ 6ರಂದು 8ಜನ ಅಸ್ಪೃಶ್ಯರು ಬರ್ಬರವಾಗಿ ಕೊಲೆಯಾಗುತ್ತಾರೆ. ಅವರ ಶವಗಳನ್ನು ಸಂಸ್ಕಾರಕ್ಕಾಗಿ, ಪೊಲೀಸರ ಬೆಂಗಾವಲಿನಲ್ಲಿ ಅತ್ಯಂತ ಉದ್ವಿಗ್ನ ಪರಿಸ್ಥಿತಿಯಲ್ಲಿ ಸಿದ್ಧಗೊಳಿಸಲಾಗುತ್ತದೆ. ತಮ್ಮವರನ್ನು ಕಳೆದುಕೊಂಡ ಹೆಪ್ಪುಗಟ್ಟಿದ ನೋವಿನ ನಡುವೆಯೇ ಹಿರಿಯರಾದ ಕಮಲಾಕರ್‌ರಾವ್, ಯುವ ಮುಖಂಡರಾದ ಶೇಖರ್‌ಬಾಬು ಮತ್ತು ಉದಯಕುಮಾರ್ ನೇತೃತ್ವದಲ್ಲಿ ಹಟ್ಟಿಯ ಮಧ್ಯೆ ಶವಗಳ ಸಮಾಧಿ ಮಾಡಲಾಗುತ್ತದೆ.

ಈ ವಾಸ್ತವ ಘಟನೆ ಆಧರಿಸಿ ನಲ್ಲೂರಿ ರುಕ್ಮಿಣಿಯವರು ತೆಲುಗಿನಲ್ಲಿ ರಚಿಸಿರುವ ತೆಲುಗು ‘ನಿಷಿಧ’ವನ್ನು ನಗರಗೆರೆ ರಮೇಶ್ ಅವರು ‘ನಿಷೇಧ’ವನ್ನಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಹಟ್ಟಿಯ ಹೊಲೆಮಾದಿಗರು ಮೇಲ್ಜಾತಿಗಳಿಂದ ನಿರಂತರವಾಗಿ ಆಗುತ್ತಿರುವ ನೋವು, ಅವಮಾನ, ಹಲ್ಲೆ, ದೌರ್ಜನ್ಯಗಳನ್ನು ಸಹಿಸಲಾರದೆ ನಲುಗಿಹೋಗುವುದರಿಂದ, ಅವುಗಳಿಂದ ಬಿಡುಗಡೆ ಪಡೆಯಲು ಕ್ರೈಸ್ತ ಮತಕ್ಕೆ ಮತಾಂತರವಾಗಿ, ಅಕ್ಷರದ ಅರಿವಿನ ಜೊತೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದರೂ ಸಹ ರೆಡ್ಡಿಗಳ ಮನಸ್ಸಿನಲ್ಲಿ ಬೇರೂರಿರುವ ಅಸಹನೆಯಿಂದ ಅವರು ಹೊಲೆಮಾದಿಗರಾಗಿಯೇ ಉಳಿದು ಇಂತಹ ನರಮೇಧಕ್ಕೆ ಗುರಿಯಾಗುತ್ತಾರೆ ಎನ್ನುವುದು ಸುಡು ವಾಸ್ತವ.

ಅಸ್ಪೃಶ್ಯರು ತಲೆತಲಾಂತರಗಳಿಂದ ಜಾತಿ, ಧರ್ಮ, ದೇವರ ಹೆಸರಿನಲ್ಲಿ ಅನುಭವಿಸುತ್ತಿರುವ ಅಮಾನವೀಯ ಯಾತನೆ ಹಾಗೂ ಅವಮಾನಗಳ ವಿವರಗಳನ್ನು ಮತ್ತು ಅವುಗಳಿಂದ ಬಿಡುಗಡೆ ಹೊಂದಲು ನಡೆಸಿದ ವೀರೋಚಿತ ಹೋರಾಟವನ್ನು ಹತ್ತಿರದಿಂದ ಕಂಡ ಲೇಖಕರು ಹೃದಯ ಕಲಕುವ ಅನುಭವಗಳನ್ನು ಅತ್ಯಂತ ಸೂಕ್ಷ್ಮವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಯಾವ ಕೆಳಜಾತಿಗಳ ದುಡಿಮೆ, ಬೆವರುಗಳಿಂದ ತಮ್ಮೆಲ್ಲ ವೈಭವ, ಸಂಪತ್ತುಗಳನ್ನು ಮೇಲ್ಜಾತಿಗಳು ಅನುಭವಿಸಲು ಸಾಧ್ಯವಾಯಿತೋ, ಅಂತಹ ಕೆಳಜಾತಿಗಳ ವ್ಯಕ್ತಿಗಳನ್ನು ಸಾಮಾನ್ಯ ಮನುಷ್ಯ ಜೀವಿಗಳಾಗಿ ಕೂಡ ಕಾಣದ ವೈದಿಕ ಮನಸ್ಥಿತಿಯನ್ನು ಮತ್ತು ಅತ್ಯಂತ ಕ್ರೂರ ವರ್ತನೆಯನ್ನು ಮೈಗೂಡಿಸಿಕೊಂಡು ಇವರು ನೂರಾರು ವರ್ಷಗಳಿಂದ ತಮ್ಮನ್ನೇ ತಾವು ಶ್ರೇಷ್ಠರೆಂದು ಕರೆದುಕೊಂಡಿದ್ದಾರೆ.

ಒಬ್ಬ ದಲಿತನ ಅಪರಾಧಕ್ಕಾಗಿ ಇಡೀ ದಲಿತ ಸಮುದಾಯವೇ ಸಾಮಾಜಿಕ ಬಹಿಷ್ಕಾರದಂತಹ ಶಿಕ್ಷೆಗೆ ಒಳಗಾಗುತ್ತದೆ. ಭಾರತದ ಸಾಂಪ್ರದಾಯಿಕ ಸಮಾಜ ವ್ಯಕ್ತಿಯೊಬ್ಬನ ಸಲುವಾಗಿ ಇಡೀ ಜಾತಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಅಸಂಖ್ಯಾತ ಸಂದರ್ಭಗಳಲ್ಲಿ ಅದು ಹೇಗೆ ಕುರುಡಾಗಬಹುದೆನ್ನುವುದನ್ನು ಎಂದಿಗೂ ಪ್ರಶ್ನಿಸಿಕೊಂಡಿಲ್ಲ! ಯಾಕೆ? ಇದೇ ರೀತಿಯ ಅಪರಾಧವನ್ನು ಮೇಲ್ಜಾತಿಯವರು ಮಾಡಿದಾಗ, ಶಿಕ್ಷೆ ವ್ಯಕ್ತಿಗೇ ಹೊರತು ಇಡೀ ಸಮಾಜಕ್ಕಲ್ಲ!!?? ಏನಿದರ ಮರ್ಮ?

ಅಲ್ಲೂರಿನ ರೆಡ್ಡಿಗಳು ಹತ್ಯಾಕಾಂಡದ ಪೂರ್ವದಲ್ಲಿ ರಾಜ್ಯದ ಗೃಹಮಂತ್ರಿಗಳನ್ನು ಕಂಡು ಪರವಾನಗಿ ಪಡೆದವರಂತೆ, ಪೊಲೀಸರನ್ನು ಲೆಕ್ಕಕ್ಕೇ ಇಡದೆ ದಲಿತರ ಮೇಲೆರಗುತ್ತಾರೆ. ದೇವಲಯ್ಯ ತೆನಾಲಿಯ ಎಸ್‌ಪಿ. ಈ ವಿಷಯ ಆತನ ಗಮನಕ್ಕೆ ಬಂದಿದ್ದರೂ, ಎಂದಿನಂತೆ ಮೇಲಧಿಕಾರಿಗಳು ದೇವಲಯ್ಯನನ್ನು ನಿರ್ಲಕ್ಷಿಸಿದ್ದರು. ತಮ್ಮ ಮೇಲೆ ಹಳ್ಳಿಯ ರೆಡ್ಡಿಗಳು ನಡೆಸಿರುವ ದೌರ್ಜನ್ಯವನ್ನು ವಿವರಿಸಲು ಬಂದ ಹಟ್ಟಿಯ ಹುಡುಗರ ಮೇಲೆಯೇ ದೇವಲಯ್ಯ ತಮ್ಮ ದರ್ಪವನ್ನು ತೋರಿಸಿ, ಅವರ ಮುಂದೆ ಚೀರಾಡತೊಡಗಿ… “ನಾಳೆ ಅವರು ನಿಮ್ಮನ್ನೆಲ್ಲಾ ಕೊಚ್ಚಿಹಾಕ್ತಾರೆ.

ನಾವೇನು ಮಾಡ್ತೀವಿ? ನೀವೆಲ್ಲಾ ಸತ್ತ ಮೇಲೆ ನಿಮ್ಮೂರಿಗೆ ಬರ್ತೀವಿ, ಪಂಚನಾಮೆ ಮಾಡ್ತೀವಿ, ಯಾರೋ ಇಬ್ಬರ ಮೇಲೆ ಕೇಸು ಹಾಕ್ತೀವಿ, ನಿಮ್ಮಲ್ಲಿ ಯಾರಾದರೂ ಬದುಕಿದ್ರೆ, ಅವನನ್ನಾದ್ರೂ ಕಾಪಾಡೋಕೆ, ಅವನನ್ನೇ ಒಳಗಾಕ್ತೀವಿ”… ತಾನಿರುವ ಸ್ಥಳದ ಪರಿಜ್ಞಾನವಿಲ್ಲದೆ ಮಾತಾಡುತ್ತಿದ್ದ, ಅಳುತ್ತಿದ್ದ, ಅಸಹಾಯಕತೆ ತಂದಿಟ್ಟ ರೋಷವನ್ನು, ರಕ್ಷಣೆ ಕೇಳಿಬಂದ ಹುಡುಗರಲ್ಲಿ ತೋಡಿಕೊಂಡ; ಮನಸ್ಸಿನಲ್ಲಿ ಏನೋ ತಾಳಲಾರದ, ಹೇಳಲಾರದ ಹಿಂಸೆ, ಆತಂಕ, ಶಂಕೆ, ಕಸಿವಿಸಿ; ಹಟ್ಟಿಯಲ್ಲಿ ಮುಂದೆ ನಡೆಯಲಿರುವ ಬೀಭತ್ಸ ದೃಶ್ಯ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿತ್ತು.

ಕಾರಣ: ಅಂಥ ದೃಶ್ಯಗಳು ಹಿಂದೆ ಕಾರಂಚೇಡುವಿನಲ್ಲಿ ಪ್ರದರ್ಶನವಾಗಿದ್ದವು.

ರಾತ್ರಿ ಮನೆಗೆ ಹೋಗಿ ಟೇಬಲ್ ಮೇಲೆ ಬಾಟ್ಲಿಗಳನ್ನು ಹರಡಿಕೊಂಡು, ಗಂಟೆಗಟ್ಟಲೆ ಕುಡಿಯುತ್ತಾನೆ. ಊಟ ಮುಗಿಸಿ ಮತ್ತೆ ಕುಡಿಯತೊಡಗುತ್ತಾನೆ. ಗಂಡನ ಈ ವರ್ತನೆ ಕಂಡ ಹೆಂಡತಿಯು ಗಾಬರಿಯಿಂದ ಪರಿಪರಿಯಾಗಿ ಬೇಡಿಕೊಂಡು, ಯಾಕೆ ಏನಾಯಿತು? ಡಿಸ್ಮಿಸ್ ಮಾಡಿದ್ರೇನು? ಅಂಥ ಪ್ರಶ್ನಿಸತೊಡಗುತ್ತಾಳೆ.

ಅದಕ್ಕೆ ದೇವಲಯ್ಯ, “ನನ್ನ ಕೆಲಸ ಹೋದ್ರೆ ಅಷ್ಟೇ ಹೋಯ್ತು, ಅದಕ್ಕಲ್ಲ. ಆ ಅಲ್ಲೂರಿನಲ್ಲಿ ಮುಂದೆ ಜರುಗಲಿರೋ ರಕ್ತಪಾತ ನೆನಸಿಕೊಂಡ್ರೆ ಮೈ ಬೆವರುತ್ತೆ. ಈಗ್ಲೆ ಕಾಣಿಸ್ತಿದೆ, ನಮ್ಮ ಜನರ ತಲೆಗಳು ಉರುಳಿ ಬೀಳುತ್ವೆ, ಕೈಕಾಲು ಚೂರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ವೆ, ಹೆಣಗಳ ರಾಶಿ ನನಗೆ ಕಾಣಿಸ್ತಿದೆ. ಕೂಗಾಟ, ಚೀರಾಟ, ಆ ಭಯಂಕರ ಶಬ್ದಗಳು ಎಲ್ಲಾ ಕೇಳಿಸ್ತಿವೆ. ಇದನ್ನ ನೆನಸಿಕೊಂಡರೆ ನನಗೆ ಈ ದೇಶದಲ್ಲಿ ನಡೆದಿರುವ ದಲಿತ ನರಮೇಧಗಳನ್ನು ನಿರ್ವಹಿಸುವಲ್ಲಿ ಪೊಲೀಸ್ ವ್ಯವಸ್ಥೆ ವಹಿಸಿರುವ ಪಾತ್ರದ ಕೈಗನ್ನಡಿ ಇದೆ ಎನಿಸಿಬಿಡುತ್ತದೆ”.

ಇದು ದಲಿತರಲ್ಲಿ ಬೆಳೆಯುತ್ತಿರುವ ವೈಚಾರಿಕ ಜಾಗೃತಿಯ ಖಚಿತ ಸೂಚನೆಯಾಗಿದ್ದು, ತಮ್ಮ ಪೂರ್ವಜರು ಅನುಭವಿಸದಿದ್ದ ಹಾಗೂ ಹಿಂದಿನ ಸಮಾಜ ಅಧಿಕೃತವೆಂದು ಒಪ್ಪಿಕೊಳ್ಳದಿದ್ದ, ಶ್ರಮಕ್ಕೆ ತಕ್ಕ ಕೂಲಿ, ಶಿಕ್ಷಣ, ವೇಷಭೂಷಣ, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ, ರಂಜನೆ, ಸ್ಪರ್ಧೆ, ಪ್ರೀತಿ, ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳಿಗಾಗಿ ಪ್ರಯತ್ನಿಸಿದಾಗ ಅವರ ಮೇಲೆ ನಿರಂತರವಾಗಿ ನಡೆಯುತ್ತಿರುವ ಮೋಸ, ವಂಚನೆ, ಅನ್ಯಾಯ, ಅತ್ಯಾಚಾರ, ಆಡಳಿತ ವ್ಯವಸ್ಥೆಯ ಅಸಡ್ಡೆ, ದಿವ್ಯ ನಿರ್ಲಕ್ಷ್ಯ, ದೌರ್ಜನ್ಯ, ಹಲ್ಲೆ ಇವುಗಳೆಲ್ಲದರ ಮೇಲಿನ ತಮ್ಮ ಹೆಪ್ಪುಗಟ್ಟಿದ ಆಕ್ರೋಶ, ಪ್ರತಿಭಟನೆ, ಹೋರಾಟಗಳು ಕೂಡ ಘರ್ಷಣೆಯ ವಾತಾವರಣವನ್ನು ಸೃಷ್ಟಿಸುತ್ತವೆ.

‘ಜಾತಿ’ ಗ್ರಾಮೀಣ ಬದುಕಿನ ಕೇಂದ್ರ. ಯಾವುದೂ ಇದರಿಂದ ಸ್ವತಂತ್ರವಾಗಿರಲು ಸಾಧ್ಯವಿಲ್ಲದಂತಾಗಿದೆ. ಅತ್ಯಂತ ಕ್ಷುಲ್ಲಕ ಕಾರಣಗಳನ್ನೆ ನೆಪಮಾಡಿಕೊಂಡು ಅಲ್ಲೂರಿನಂಥ ಅಮಾನವೀಯ ಹತ್ಯಾಕಾಂಡಗಳಿಗೆ ಜಾತಿ ಕಾರಣವಾಗುತ್ತದೆ. ದಾರುಣಹತ್ಯೆಯ ವಿವರಗಳನ್ನು ಕೇಳಿದರೆ ಮನಕಲಕಿ ಕಣ್ಣಾಲಿಗಳು ತೇವಗೊಳ್ಳುತ್ತವೆ.

ದೊಣ್ಣೆ, ಮಚ್ಚು, ಲಾಂಗು, ಕತ್ತಿಗಳ ಸಮೇತ ಅಟ್ಟಾಡಿಸಿಕೊಂಡು ಬಂದು ಬೇಟೆಯನ್ನು ಬೆನ್ನಟ್ಟಿಹೋಗುವ ಕಾಡುಮೃಗಗಳಂತೆ ಕೊಂದು “ಹೆಣಗಳನ್ನೆಲ್ಲಾ ಚೀಲಗಳಲ್ಲಿ ತುರುಕಿ, ಮೂಟೆ ಕಟ್ಟಿ, ಕಾಲ್ವೆಗಾಕಿದ್ರಲ್ಲಾ, ಎಂಥಾ ರಾಕ್ಷಸರಿವರು ಮಾರಾಯರೇ! ಯಾರಾದ್ರೂ ಸತ್ರೆ, ಆ ಹೆಣ ಮುಟ್ಟೋಕೂ ಆ ಕಡೆ, ಈ ಕಡೆ ನೋಡ್ತೀವಿ, ಅವರು ನಮ್ಮವರೆ ಆದ್ರೂನೂ.  ಅಂಥಾದ್ದು ಈ ಜನ ನಮ್ಮವರನ್ನು ಸಾಯಿಸಿ ಹೆಣಗಳನ್ನು ಗೋಣಿಚೀಲಗಳಲ್ಲಿ ತುರುಕಿದಾರಲ್ಲಾ ಕೈಯ್ಯಾರೆ! ಎಂಥ ಕಟುಕರಿರಬೇಕು” ಎನ್ನುತ್ತಾಳೆ ಸಾಕ್ಷಿಯಾದ ವನಮ್ಮ.

ಇದೇ ರೀತಿ 1968ರಲ್ಲಿ ತಮಿಳುನಾಡಿನ ಕೀಳ್ವೇನ್ಮಣಿಯ 42 ಜನರನ್ನು ಬೆಂಕಿಗೆ ಆಹುತಿ ಮಾಡಿದರು. ಅದು ‘ದಹನ’ ಅಂತ ಹೇಳಿದರೆ ಸರಿಯಾದ ಮಾತಲ್ಲ, ಎಂಥಾ ‘ದಾರುಣ’! ತನ್ನ ತಾಯಿಗಾಗಿ ಅಳುತ್ತಿದ್ದ ಮಗುವನ್ನು ನಿಮ್ಮಮ್ಮನ ಜೊತೇನೇ ಇರುನಡಿ ಅಂತ ಹೇಳ್ತಾ, ಬೆಂಕಿಯೊಳಕ್ಕೆ ಎಸೆದರಲ್ಲಾ! ಇದಕ್ಕಿಂತ ಕ್ರೌರ್ಯ ಎಲ್ಲಾದರೂ ಕಾಣಬಹುದಾ? ಪಿಶಾಚಿಗಳ ಕೆಲಸ ಅಂದರೆ ಇದೇನಾ!

ಅಲ್ಲೂರಿನ ಘಟನೆ 1991ರಲ್ಲಿ ನಡೆದು “ನ್ಯಾಯದ ನಿಧಾನಗತಿಯು, ನ್ಯಾಯದ ನಿರಾಕರಣೆ” ಎಂಬಂತೆ ತೀರ್ಪು 2007ರಲ್ಲಿ ಪ್ರಕಟಿಸಲಾಗುತ್ತದೆ. ರಾಜರು, ರಾಜ್ಯಗಳು ಪ್ರಜಾಪ್ರಭುತ್ವದ ರೀತಿಗೆ ಪರಿವರ್ತನೆಯಾದರೂ ವ್ಯವಸ್ಥೆ, ಪರಿಸ್ಥಿತಿ, ಮನಸ್ಥಿತಿ ಮಾತ್ರ ಬದಲಾಗಿಲ್ಲ. ಆಳುವವರು ಆಳುವ ವರ್ಗದಿಂದಲೇ ಬರುತ್ತಾರೆ. ಆಳಿಸಿಕೊಳ್ಳುವವರು ಆಳುಗಳಾಗಿಯೇ ಉಳಿದಿರುತ್ತಾರೆ. ಸಂವಿಧಾನಾಧಾರಿತ ಕಾನೂನುಗಳಿದ್ದರೂ, ಮನುಧರ್ಮಾಧಾರಿತ ಬೇರುಬಿಟ್ಟ ಶಾಸನಗಳು ಜಾರಿಯಲ್ಲಿರುತ್ತವೆ.

ಅಸ್ಪೃಶ್ಯರ ಪರ ವಾದಿಸಿದ ಸುದೇವನಂತಹ ವಕೀಲನ ಬದ್ಧತೆ, ಆತ್ಮಸ್ಥೈರ್ಯ, ದೃಢತೆ, ಛಲ, ತೀಕ್ಷ್ಣದೃಷ್ಟಿ ವಿಚಾರಣೆಯನ್ನು ನಿರ್ವಹಿಸಿದ ರೀತಿ ಪರೋಕ್ಷವಾಗಿ ಅಪರಾಧಿಗಳ ಪರ ವಹಿಸಿದ್ದ ನ್ಯಾಯಾಧೀಶರಾದ ಸಮರಸಿಂಹರೆಡ್ಡಿಯನ್ನೇ ದಂಗುಬಡಿಸಿತ್ತು.

ಅಲ್ಲೂರಿನ ರೀತಿಯ ಕೇಸುಗಳು ನಮ್ಮ ದೇಶದಲ್ಲಿ ಹೆಚ್ಚಿನ ಕೋರ್ಟುಗಳಲ್ಲಿ ಗೆಲುವನ್ನು ನೋಡಿಲ್ಲ.  ನ್ಯಾಯವ್ಯವಸ್ಥೆ, ಅಲ್ಲಿನ ಒಳಒಪ್ಪಂದಗಳು, ಒಳ ಮರ್ಮಗಳು, ಮನುಷ್ಯರ ಉಸಿರನ್ನೆ ಹೀರಿಬಿಡುತ್ತವೆ. ಸಾಕ್ಷಿಗಳನ್ನು ತಿರುಚಿ, ಅವರ ದೌರ್ಬಲ್ಯಗಳನ್ನು ಬಂಡವಾಳ ಮಾಡಿಕೊಂಡು, ನಿಧಾನಗತಿಯ ನ್ಯಾಯವು ಅಪರಾಧಿಗಳನ್ನು ಶಿಕ್ಷಿಸುವಲ್ಲಿ ವಿಫಲವಾಗಿದೆ.

ಕೋರ್ಟುಗಳಲ್ಲಿರುವರಿಗೆ ಕಾಗದಗಳು ಮಾತ್ರ ಕಾಣುತ್ತವಷ್ಟೆ. ಅವುಗಳ ಹಿಂದಿನ ಮನುಷ್ಯರ ನೊಂದ-ಬೆಂದ ಮುಖಗಳು, ಅವರ ಬದುಕು ಕಾಣಿಸುವುದಿಲ್ಲ, ನೋವಿನ ಕೂಗು ಕೇಳಿಸೋದೇ ಇಲ್ಲ. ನ್ಯಾಯಸ್ಥಾನದಲ್ಲಿ ಕುಳಿತವನಿಗೆ ಯಾವುದೇ ಕಾಳಜಿ, ಕರುಣೆ, ಬದ್ಧತೆ ಇಲ್ಲ. ಕಾನೂನಿನ ವಿಷಯ ಬಿಡಿ, ಸ್ವತಂತ್ರ ಭಾರತದಲ್ಲಿ ಇದೊಂದೇ ಹತ್ಯಾಕಾಂಡವಲ್ಲ, ಅದೆಷ್ಟೋ ದಲಿತ ದಮನಿತರ ನರಮೇಧಗಳು ನ್ಯಾಯವೇ ಸಿಗದೆ, ಈ ದೇಶದ ಕಟುವಾಸ್ತವಕ್ಕೆ ಸಾಕ್ಷಿಯಾಗಿವೆ.

‘ನಿಷೇಧ’ ಕಾದಂಬರಿಯ ಬುರ್ರಿ ಬೋಡಯ್ಯ ಬೆಂಜಮಿನ್‌ನ ಸೋದರಮಾವ ಬೆಂಜಮಿನ್‌ನ ಕೊಲೆಗೆ ಪ್ರತ್ಯಕ್ಷ ಸಾಕ್ಷಿ. ಬೋಡಯ್ಯನ ಸಾಕ್ಷಿ ಎರಡೂ ಕಡೆಯವರಿಗೂ ಬೇಕು. ಅದರಲ್ಲಿಯೂ ದಾಳಿಕೋರರಿಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆತ ಬಹಳ ಮುಖ್ಯ. ತನ್ನ ಸೋದರಳಿಯ ಕೊಲೆಯಾಗುತ್ತಿದ್ದದ್ದನ್ನು ನೋಡಿದವನಾತ. ಆದರೆ ಒಬ್ಬ ರೆಡ್ಡಿಯ ಮನೆಯಲ್ಲಿ ಕೆಲಸಕ್ಕಿದ್ದಾನೆ.  ಹಳ್ಳಿಯವರು ಅವನ ಮೇಲೆ ಒತ್ತಡ ತಂದು “ನಾನು ಬೆಂಜಮಿನ್‌ನ ಕೊಲೆಯಾಗಿದ್ದನ್ನು ನೋಡಲೇ ಇಲ್ಲ” ಅಂತ ಹೇಳಲು ಬಲವಂತ ಮಾಡುತ್ತಿದ್ದರು. ಯಾರನ್ನೂ ಗುರುತಿಸಬಾರದೆಂದು “ಆ ದಿನ ನಾನು ಅಲ್ಲಿ ಇರಲೇ ಇಲ್ಲ” ಎಂದು ಹೇಳುವಂತೆ ಒತ್ತಾಯಿಸುತ್ತಿದ್ದರು.

ಅಂಥ ಬುರ್ರಿ ಬೋಡಯ್ಯ ಕಟಕಟೆ ಹತ್ತಿದ. ಮಾತನಾಡಲಾರಂಭಿಸಿದ. ಅವನ ಎದುರು ಈಗ ಬೆಂಜಮಿನ್ ಇದ್ದ.  ಓಡುತ್ತಿದ್ದ… ಕೆಳಗೆ ಬಿದ್ದ… ಮಾಮಾ… ಮಾಮಾ… ನನ್ನ ಎತ್ತಿಕೋ ಎಂದು ಗೋಗರೆಯುತ್ತಿದ್ದ. ಅವರು ಅವನ ಮೇಲೆ ಬಿದ್ದರು, ಹೊಡೆದರು, ಕೊಂದರು. ಅವನನ್ನು ಎತ್ತಿಕೊಳ್ಳಲಾಗಲಿಲ್ಲ. ಅವನು ಸಾಯುತ್ತಿದ್ದದ್ದನ್ನು ನೋಡುತ್ತಾ ನಿಲ್ಲಬೇಕಾಯಿತು. “ಮಗು ಸ್ವಾಮಿ! ಓದಿಕೊಳ್ತಾ ಇದ್ದ, ಯಾವುದೇ ಗಲಾಟೆಗಳಿಗೂ ಹೋಗುತ್ತಿರಲಿಲ್ಲ. ಅಷ್ಟು ವಯಸ್ಸೂ ಆಗಿರಲಿಲ್ಲ. ಅಂಥವನನ್ನೂ ಬಿಡದೆ ಕೊಂದರು ಸ್ವಾಮಿ! ಅವರು ಹತ್ತು ಜನ, ಅವನು ಒಬ್ಬ. ಅವನ ಸುತ್ತಲೂ ನಿಂತರು, ಮೊದಲೇ ಬಡಕಲು ಮೈ. ಅವರು ಹೊಡೆದರು, ಹೊಡೆದರು, ಹೊಡೆದು ಕೊಂದೇಬಿಟ್ಟರು. ಅವನು ಮಾಡಿದ್ದೆಲ್ಲಾ ಒಂದೇ ತಪ್ಪು ಸ್ವಾಮಿ, ಹೊಲೆಯನಾಗಿ ಹುಟ್ಟಿದ್ದು, ಒಗೆದು ಇಸ್ತ್ರಿ ಮಾಡಿದ ಬಟ್ಟೆ ತೊಟ್ಟಿದ್ದು, ಸ್ಕೂಲಿಗೆ ಹೋಗಿದ್ದು. ಇಷ್ಟೇ ಸ್ವಾಮಿ ಅವನ ತಪ್ಪು. ಅದಕ್ಕೆ ಅವನಿಗೆ ಅಂಥ ಶಿಕ್ಷೆ… ಸತ್ತ – ಇಡೀ ಆವರಣವೇ ಸ್ತಬ್ಧವಾಯಿತು”.

ಪ್ರಮುಖ ಸಾಕ್ಷಿ ಪರಿಮಳಮ್ಮ; ಗಂಡ ಕಾಗಡಾಲ ರಾಮಯ್ಯ ದಾಳಿಯಲ್ಲಿ ಹತರಾಗಿದ್ದಾರೆ. ಆಕೆ ಅಂದು ನಡೆದಿದ್ದನ್ನು ನ್ಯಾಯಾಧೀಶರೆದುರು ಹೇಳೋದು ಹೀಗೆ: “ಆಗಸ್ಟ್ 6ರ ಬೆಳಿಗ್ಗೆ ಟ್ರ್ಯಾಕ್ಟರ್ ಟಿಲ್ಲರ್‌ಗಳಲ್ಲಿ ಐವತ್ತು ಅರವತ್ತು ಜನ ಹಳ್ಳಿಕಡೆಯಿಂದ ಬಂದ್ರು. ಅವರೆಲ್ಲರ ಕೈಯ್ಯಲ್ಲಿ ದೊಣ್ಣೆ, ಭರ್ಜಿ, ರಾಡು ಇವೆಲ್ಲಾ ಇದ್ವು. ನಮಗಾವಾಗ್ಲೇ ಹೆದರಿಕೆ ಆಯಿತು. ನಮ್ಮ ಗಂಡಸರು ಅವರ ಕೈಗೆ ಸಿಕ್ಕಿದರೆ ಸಾಯಿಸಿಬಿಡ್ತಾರೆ ಅಂತ. ಅವರು ಆ ಕಣಗಿಲ ಗಿಡದ ಹತ್ತಿರ ಇಳಿದರು.  ಅವರನ್ನ ನೋಡಿ ನಮ್ಮವರು ಅಲ್ಲಿಂದ ಓಡಿದರು, ನಮಗಾವಾಗ ಅರ್ಥವಾಯಿತು. ನಮ್ಮವರೆಲ್ಲಾ ಸಾಯಲಿ ಅಂತಲೇ ಪೊಲೀಸ್ನೋರು ನಮ್ಮವರನ್ನ ಹಟ್ಟಿಯಿಂದ ಆಚೆಗೆ ಓಡೋಗೋ ಥರ ಮಾಡಿದ್ದು ಅಂತ”.

“ನಮ್ಮವರು ಜೀವಂತ ಇದಾರೋ ಇಲ್ವೋ ಗೊತ್ತಾಗಲಿಲ್ಲ, ಆ ರಾತ್ರಿಯೆಲ್ಲ ನಿದ್ದೆ ಹೋಗಲಿಲ್ಲ, ಯಾರಾದ್ರೂ ಸರಿ ಹೊತ್ತಲ್ಲಿ ಬಂದು ಏನಾದರೂ ಸಮಾಚಾರ ಹೇಳ್ತಾರೇನೋ ಅಂತ ಕಾಯೋದೇ ಆಯ್ತು. ನಾವು ಬೇಡಿಕೊಳ್ದೇ ಇರೋ ದೇವರೇ ಇಲ್ಲ. ಅವತ್ತು ಗೊತ್ತಿಲ್ದೇ ಇರೋ ದೇವರುಗಳಿಗೆಲ್ಲಾ ಪ್ರಾರ್ಥನೆ ಮಾಡಿಕೊಂಡೆ! ಆ ರಾತ್ರಿ ಕಳಿದ್ವಿ. ನಮ್ಮ ಚಿರ್ಚಿನ ಮುಂದೆ ನಿಂತು ಪರಿಪರಿಯಾಗಿ ಬೇಡಿಕೊಂಡ್ವಿ. ಆದ್ರೆ, ಆ ರಾತ್ರೀನೂ ಯಾರೂ ಬರಲಿಲ್ಲ, ಏನೂ ವಿಷಯ ಗೊತ್ತಾಗ್ಲೇ ಇಲ್ಲಾ.”

“ಆಗಸ್ಟ್ 8ನೇ ತಾರೀಖು ನನ್ನ ಗಂಡನ ಶವ ಕಾಲ್ವೆಯಲ್ಲಿ ತೇಲಿತ್ತು. ದೇಹ ಉಬ್ಬಿಹೋಗಿತ್ತು. ಅದನ್ನ ಕೊಯ್ಯೋಕೆ ಆಸ್ಪತ್ರೆಗೆ ತಕೊಂಡು ಹೋದ್ರೆ ಅಲ್ಲಿದ್ದ ಡಾಕ್ಟರ್‌ಗೂ ಅದನ್ನ ನೋಡೋಕೆ ಆಗ್ಲಿಲ್ಲ. ಕುಯ್ಯೋದೆಲ್ಲಾ ಮುಗಿದಾದ ಮೇಲೆ, ಅವರಿಗೆ ಏನನ್ನಿಸ್ತೋ ಏನೋ, ಅವತ್ತು ರಾತ್ರಿ ನೇಣಾಕ್ಕೊಂಡು ಸತ್ತೋದ್ರು. ಡಾಕ್ಟರ್‌ಗೇ ಹೆಣಗಳನ್ನು ನೋಡೋಕೆ ಆಗ್ಲಿಲ್ಲ ಅಂದ ಮೇಲೆ! ನಾವು ನೋಡಿ, ಅಂಥ ಹೆಣಗಳನ್ನು ನೋಡಿ ಇನ್ನೂ ಉಸಿರಾಡ್ತಾ ಇದೀವಿ!”

ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವು ತಲೆಮಾರುಗಳಿಂದ ಜಾತಿ ಪದ್ಧತಿಯ ಕ್ರೌರ್ಯದಲ್ಲಿ ನಲುಗಿಹೋಗಿರುವವರ ಬದುಕಿನ ಬವಣೆ ಮತ್ತು ಅಸ್ಮಿತೆಗಳ ಕತೆಗಳಾಗಿದ್ದು, ಪ್ರಭುತ್ವ ಪ್ರಾಯೋಜಿತ ನರಮೇಧಗಳೆನಿಸುತ್ತವೆ.

ಅಸ್ಪೃಶ್ಯ ಕುಟುಂಬದಲ್ಲಿ ಹುಟ್ಟಿದ ನಾನು ಬಾಲ್ಯದಿಂದ ಅನುಭವಿಸಿದ ಪ್ರತ್ಯಕ್ಷ ಮತ್ತು ಪರೋಕ್ಷವಾದ ಅಸ್ಪೃಶ್ಯತೆಯ ನೋವುಗಳು ಇವು. ಅಕ್ಷರದ ಅರಿವು, ದಲಿತ ಚಳವಳಿಯ ಸಂಪರ್ಕದಿಂದ ಕಾರ್ಯಕರ್ತನಾಗಿ, ಸಂಘಟಕನಾಗಿ, ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದೇನೆ. ಕಾದಂಬರಿಯ ಅನುವಾದಕರ ಜೊತೆ 1991ರಲ್ಲಿ ಚುಂಡೂರಿನಲ್ಲಿ ನಡೆದ ಈ ಘಟನೆಯ ಕುರಿತು ಮಾಹಿತಿ ಸಂಗ್ರಹಿಸಲು ಭೇಟಿ ನೀಡಿದ್ದೆ.

ಈ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳ ನೋವುಗಳನ್ನು, ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಹೆಚ್.ನಾಗಸಂದ್ರದ ಜಮೀನುದಾರರ ಮನೆಯಲ್ಲಿ ಅತ್ಯಂತ ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದ ನೂರಾರು ಜೀತದಾಳುಗಳ ಬಿಡುಗಡೆ ಹಾಗೂ ‘ಜೀತ ಬೇಡ – ಶಾಲೆ ಬೇಕು’, ‘ಹೆಂಡ ಬೇಡ – ಭೂಮಿ ಬೇಕು’ ಎಂಬ ಘೋಷವಾಕ್ಯದಡಿಯಲ್ಲಿ ನಡೆದ ಭೂಹೋರಾಟದಲ್ಲಿ ಸ್ವತಃ ಅನುಭವಿಸಿದ್ದೇನೆ.

ಕಾದಂಬರಿಯಲ್ಲಿ ಅಕ್ಷರಸ್ಥ ‘ಯುವಕರ ಸಂಘ’ ಅತ್ಯಂತ ಜಾಗರೂಕತೆಯಿಂದ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿರುವುದು ಎದ್ದು ಕಾಣುತ್ತದೆ. ಹಟ್ಟಿಯಲ್ಲಿ ಅರಿವು ತುಂಬಲು ಅವರು ಪಟ್ಟಪಾಡು, ಅವರ ಗಟ್ಟಿತನ, ಬೆದರಿಕೆಗಳಿಗೆ ಜಗ್ಗದೆ ಎದುರಿಸಿದ ಸವಾಲುಗಳು, ಪೊಲೀಸ್ ಅಧಿಕಾರಿಗಳು, ವಕೀಲರು, ನ್ಯಾಯಾಲಯಗಳಿಗೆ ಸಂಪರ್ಕ ಸೇತುವೆಯಾದ ರೀತಿ, ಪ್ರತಿ ಹಂತದಲ್ಲೂ ಸಾಕ್ಷಿಗಳಲ್ಲಿ ಆತ್ಮಸ್ಥೈರ್ಯ, ಜಾಗೃತಿ ಮೂಡಿಸುತ್ತಾ ಅವರನ್ನು ಕಣ್‌ರೆಪ್ಪೆಯಂತೆ ಪ್ರಾಣದ ಹಂಗು ತೊರೆದು ಕಾಪಾಡಿದ ರೀತಿ ಓದುಗನನ್ನು ದಂಗುಬಡಿಸುತ್ತದೆ. ಇದರಲ್ಲಿ ಕಾರ್ಯಕರ್ತರಿಗೆ, ಸಂಘಟಕರಿಗೆ, ಚಳವಳಿಕಾರರಿಗೆ ನೂರಾರು ಕಲಿಕೆಯ ಪಾಠಗಳಿವೆ.

ಸಾಹಿತ್ಯ ಎನ್ನುವುದು ಕಠಿಣ ಶಬ್ದಗಳಲ್ಲಿ ಕಳೆದುಹೋಗದೆ, ಜನರ ಹೃದಯಕ್ಕೆ ತಲುಪುವಂತಾಗಬೇಕು, ಬತ್ತಿದೆದೆಗಳಲ್ಲಿ ಜೀವಸೆಲೆ ಮೂಡಿಸಿ, ನೊಂದವರ ಕೈಹಿಡಿದು ಎತ್ತಬೇಕು. ತಮ್ಮೆಲ್ಲ ಶ್ರಮವನ್ನು ಧಾರೆಯೆರೆದ ದಲಿತರು ಇಂದು ಸಂಕಟಗಳ ಸರಮಾಲೆಯಲ್ಲಿ ಬದುಕುತ್ತಿದ್ದಾರೆ. ಇದನ್ನು ನಾವೆಲ್ಲ ಸೂಕ್ಷ್ಮವಾಗಿ ಗಮನಿಸಬೇಕೆಂದು ಅಭಿಪ್ರಾಯಪಡುವ ಈ ಕಾದಂಬರಿಯ ಮೂಲ ಲೇಖಕಿಯಾದ ನಲ್ಲೂರಿ ರುಕ್ಮಿಣಿಯವರು ಆಂಧ್ರಪ್ರದೇಶದ ವಿರಸಂ ಸದಸ್ಯೆಯಾಗಿ ಹಲವಾರು ಜನಪರ ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ.

1980ರ ದಶಕದಿಂದ ಕೋಲಾರ ಜಿಲ್ಲಾ ದಲಿತ ಚಳವಳಿಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬಂದು, ಇಂಗ್ಲಿಷ್ ಸಾಹಿತ್ಯದ ಹಲವು ಕಿರುಹೊತ್ತಿಗೆಗಳನ್ನು ಕನ್ನಡಕ್ಕೂ, ಕನ್ನಡದ ಕೃತಿಗಳನ್ನು ಇಂಗ್ಲಿಷ್‌ಗೂ ಅನುವಾದಿಸಿರುವ ನಗರಗೆರೆ ರಮೇಶ್ ಅವರು ಎಲ್ಲಾ ಜನಪರ ಚಳವಳಿಗಳ ಜೊತೆ ಸಕ್ರಿಯವಾಗಿದ್ದುಕೊಂಡು ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ದಲಿತ ದಮನಿತರ ಹೋರಾಟಗಳಲ್ಲಿ ಭಾಗವಹಿಸುತ್ತಾ ಅವುಗಳು ಗುರಿ ತಲುಪಲು ಸಹಕರಿಸಿದ್ದಾರೆ.

ಮೌರ್ಯರ ಕಾಲದ ಭಾರತ, ಬಂಡವಾಳಯುಗ, ಅಸ್ಪೃಶ್ಯ ವಸಂತ ಮುಂತಾದ ಅತ್ಯುತ್ತಮ ಅನುವಾದ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿರುವ ನಗರಗೆರೆ ರಮೇಶ್ ಅವರು, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಸಾಮಾಜಿಕ, ಸಾಂಸ್ಕೃತಿಕ ದಾಳಿಯನ್ನೂ, ಸಾಮಾನ್ಯ ಜನಜೀವನದ ಕಷ್ಟಕಾರ್ಪಣ್ಯಗಳನ್ನೂ ತಮ್ಮ ಕೃತಿಗಳಲ್ಲಿ ವಿವರಿಸುವ ನಲ್ಲೂರಿ ರುಕ್ಮಿಣಿಯವರು ಬರೆದ ತೆಲುಗಿನ ‘ನಿಷಿಧ’ ಕಾದಂಬರಿಯನ್ನು, ‘ನಿಷೇಧ’ ಹೆಸರಿನಲ್ಲಿ ಅತ್ಯಂತ ಸರಳವಾಗಿ, ಎಲ್ಲಾ ಕನ್ನಡ ಓದುಗರಿಗೂ ಸುಲಭವಾಗಿ ಅರ್ಥವಾಗುವಂತೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತಾಪೂರ್ವಕ ಅಭಿನಂದನೆಗಳು.

ಮುನ್ನುಡಿಗಳನ್ನಾಗಲೀ ಬೆನ್ನುಡಿಗಳನ್ನಾಗಲೀ ಇಲ್ಲಿಯತನಕ ನಾನು ಬರೆದವನಲ್ಲ; ಬರವಣಿಗೆಯ ಸಾಹಸಕ್ಕೂ ಕೈಹಾಕಿದವನಲ್ಲ. ಕೇವಲ ಓದುಗನಾಗಿದ್ದ ನನ್ನನ್ನು, ತಮ್ಮ ಪ್ರೀತಿಯ ಒತ್ತಾಯಕ್ಕೆ ಮಣಿಯುವಂತೆ ಮಾಡಿ, ಅನುವಾದಕರಾದ ನಗರಗೆರೆ ರಮೇಶ್ ಅವರು ನನ್ನಿಂದ ಈ ಮುನ್ನುಡಿ ಬರೆಯಿಸಿದ್ದಾರೆ. ಇದನ್ನು ಮುನ್ನುಡಿ ಎನ್ನುವುದಕ್ಕಿಂತಲೂ ನನ್ನ ‘ನಿಜದ ನುಡಿ’ ಎಂದು ನಾನು ಭಾವಿಸುತ್ತೇನೆ.

ಹ.ಮಾ.ರಾಮಚಂದ್ರ, ಕೋಲಾರ.

ನಿಷೇಧ (ಚೂಂಡೂರಿನ ನೆತ್ತರ ಕಥೆ) ತೆಲುಗು ಮೂಲ: ನಿಷಿಧ, ತೆಲುಗು ಲೇಖಕಿ: ನಲ್ಲೂರಿ ರುಕ್ಮಿಣಿ, ಕನ್ನಡಕ್ಕೆ: ನಗರಗೆರೆ ರಮೇಶ್, ಪ್ರಕಟಣೆ: ಆಕೃತಿ ಪುಸ್ತಕ, ಸಂಪರ್ಕ– 9886694580.

Leave a Reply

Your email address will not be published. Required fields are marked *

You missed

error: Content is protected !!