• Tue. Oct 22nd, 2024

PLACE YOUR AD HERE AT LOWEST PRICE

ಕೋಲಾರ,ಅ.೧೮: ನಾವು ಆಸೆಗಳಿಗೆ ಮಿತಿಯಿಲ್ಲದೆ ಬದುಕುತ್ತೇವೆ. ನಾವು ಬದುಕುವುದನ್ನು ಪಕ್ಷಿಗಳ ನೋಡಿ ಕಲಿಯಬೇಕು, ಸಮಾಜಕ್ಕೆ ಒಂದಷ್ಟು ಕೊಡುಗೆಯಾಗಿ ನೀಡಿದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಶಿಕ್ಷಕ ಕೆ.ಹೆಚ್.ಸಂಪತ್ ಕುಮಾರ್ ಅಭಿಪ್ರಾಯಪಟ್ಟರು .

ಸಮೀಪದ ತೇರಹಳ್ಳಿ ಬೆಟ್ಟದ ಮೇಲಿರುವ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ೨೧೦ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಅದರ ನಡುವೆ ಸಮಾಜಕ್ಕೆ ಒಂದಷ್ಟು ಕೊಡುಗೆಯಾಗಿ ನೀಡಿದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ. ನಾವು ಬದುಕುವುದನ್ನು ಪಕ್ಷಿಗಳ ನೋಡಿ ಕಲಿಯಬೇಕು. ಗೂಡು ಕಟ್ಟುತ್ತವೆ, ಮರಿಗಳನ್ನು ಮಾಡುತ್ತವೆ, ಅವುಗಳಿಗೆ ರೆಕ್ಕೆ ಪುಕ್ಕ ಬಂದ ನಂತರ ಸ್ವತಂತ್ರವಾಗಿ ಬದುಕಲು ಬಿಟ್ಟುಬಿಡುತ್ತವೆ. ಅದೇ ನಾವು ಆಸೆಗಳಿಗೆ ಮಿತಿಯಿಲ್ಲದೆ ಬದುಕುತ್ತೇವೆ ಎಂದ ಅವರು ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಹಾಗೂ ಕಗ್ಗದ ಸಾರವನ್ನು ಉದಾಹರಣೆಯಾಗಿ ಹೇಳಿ, ಆದಿಮ ಇನ್ನೂ ಎತ್ತರಕ್ಕೆ ಬೆಳೆಯಬೇಕು.ಅದಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ ಇರಬೇಕು ಎಂದರು.

ಜೀನ್ ಪಾಲ್ ಸಾತ್ರೆ ಅವರ ಲೆ ಮೂರ್ ಗೋಡೆ ನಾಟಕ ಪ್ರದರ್ಶನ ಹಾಗೂ ಗದ್ದುಗೆ ಗೌರವ ನಡೆಯಿತು. ಹಿರಿಯ ಜಾನಪದ ಕಲಾವಿದ  ಡಿ.ಆರ್. ಕಲಾವಿದ ರಾಜಪ್ಪ ಕೋಲಾರ ಅವರಿಗೆ ಗದ್ದುಗೆ ಗೌರವ ನೀಡಲಾಯಿತು. ಕೆ.ವಿ.ನಾಯಕ್ ರಾಜಪ್ಪನವರ ಸಾಂಸ್ಕೃತಿಕವಾಗಿ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಪರಿಚಯ ಮಾಡಿಕೊಟ್ಟರು. ಗದ್ದುಗೆ ಗೌರವ ಸ್ವೀಕರಿಸಿದ ರಾಜಪ್ಪ ಮಾತನಾಡುತ್ತಾ, ಆದಿಮದೊಂದಿಗೆ ನಾನೂ ಒಬ್ಬ ಪಯಣಿಗನಾಗಿ ಪಯಣಿಸುತ್ತಿದ್ದೇನೆ. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಗಿ ನಿಂತಿದ್ದೇನೆ. ಸಂಗೀತ ದಿಗ್ಗಜ ಇಸ್ಮಾಯಿಲ್ ಗೋನಾಳರ ಪರಿಚಯ ಹಾಗೂ ಅವರೊಂದಿಗಿನ ಒಡನಾಟ ಸಾಂಸ್ಕೃತಿಕವಾಗಿ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಆದಿಮ ಇಲ್ಲದಿದ್ದರೆ ಗೋನಾಳರಂತಹ ಪರಿಚಯ ನನಗಾಗುತ್ತಿರಲಿಲ್ಲ. ನಮ್ಮದು ಕಲಾವಂತ ಕುಂಟು0ಬವಾದರೂ ನಾನು ಕಲೆಯಲ್ಲಿ ಮುಂದುವರೆಯುವುದು ನನ್ನ ಹೆತ್ತವರಿಗೆ ಇಷ್ಟವಿರಲಿಲ್ಲ. ಮಾಲೂರು ಹಾಸ್ಟಲ್‌ನಲ್ಲಿದ್ದಾಗ ದಲಿತ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಒದಗಿತು. ಅಲ್ಲಿ ಹೋರಾಟ ಗೀತೆಗಳ ಹಾಡುವುದು ಅನಿವಾರ್ಯವಾಗಿ ಗಾಯಕನಾದೆ. ಶಿಕ್ಷಕ ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಹಾಡುಗಾರಿಕೆ, ರಂಗಭೂಮಿ ಹೀಗೇ ಸಾಗಿ ಬಂದಿದ್ದೇನೆ. ನನ್ನ ಜೊತೆ ಅನುಕಾಲ ಪಕ್ಕವಾದ್ಯ ನುಡಿಸುತ್ತಾ ಜೊತೆಗಿರುವ ತುರಂಡಹಳ್ಳಿ ಶ್ರೀನಿವಾಸ್‌ರನ್ನು ಆತ್ಮೀಯವಾಗಿ ಅಭಿನಂದಿಸುತ್ತೇನೆ. ನನಗೆ ಆದಿಮ ಈ ಗೌರವ ಕೊಟ್ಟಿರುವುದನ್ನು ಜೀವಮಾನ ಮರೆಯುದಿಲ್ಲ. ಅಷ್ಟು ಸಂತಸವಾಗಿದೆ ಎಂದು ಆದಿಮದೊಂದಿಗೆ ಅವರಿಗಿರುವ ಸಂಬoಧವನ್ನು ಬಿಡಿಸಿ ಹೇಳಿದರು. ಹಾಡಿನೊಂದಿಗೆ ಅವರು ಮಾತು ಮುಕ್ತಾಯವಾಯಿತು.

ಆರಂಭದಿoದಲೂ ಆದಿಮ ಜೊತೆಗಿರುವ ಪ್ರಗತಿಪರ ರೈತ ತುರಂಡಹಳ್ಳಿ ರವಿ ಮಾತನಾಡುತ್ತಾ, ಆದಿಮ ಸಣ್ಣ ಕುಟೀರ ಆಗಿದ್ದಾಗಿನಿಂದಲೂ ಕೆ.ರಾಮಯ್ಯ ನವರೊಂದಿಗೆ ನನ್ನ ನಂಟು ಬೆಳೆಯಿತು. ಅನೇಕ ರೀತಿ ನನ್ನ ಕೈಲಾದಷ್ಟು ನೆರವನ್ನು ಸದಾ ನೀಡುತ್ತಲೇ ಬಂದಿದ್ದೇನೆ. ಆದಿಮಕ್ಕೆ ಯಾರ್ಯಾರು ಬರುತ್ತಾರೋ ಅವರೆಲ್ಲರದೂ ಆದಿಮ ಎನ್ನುವ ಅವರ ಮನದಾಳದ ಮಾತನ್ನು ಹಂಚಿಕೊoಡರು. ಆದಿಮಕ್ಕೆ ಅನೇಕರನ್ನು ಕರೆತಂದು ಅವರಿಂದ ಸಾಕಷ್ಟು ನೆರವು ನೀಡಿದ್ದನ್ನು, ನೀಡಿದ ದಾನಿಗಳನ್ನು ಸ್ಮರಿಸಿಕೊಂಡರು. ಎಂ ನಾರಾಯಣಗೌಡರ ಜ್ಞಾಪಕಾರ್ಥವಾಗಿ ೨೧೦ನೇ ಹುಣ್ಣಿಮೆ ಹಾಡಿಗೆ ಉಣಬಡಿಸಿದವರು ಟಿ.ಎನ್.ರವಿ ತುರಾಂಡಹಳ್ಳಿ.

ಕೋಚಿಮೂಲ್ ನಿರ್ದೇಶಕ ಯೂನಸ್ ಷರೀಫ್ ಮಾತನಾಡಿ, ಆದಿಮ ಒಂದು ಪ್ರಶಾಂತ ವಾತಾವರಣ. ಇದನ್ನು ಆರಂಭಿಸಿ ಸ್ಥಳೀಯ ಕಲಾವಿದರ ಬೆಳವಣಿಗೆಗೆ ಅನುಕೂಲವಾಗಿದೆ. ಇಂತಹ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ಧಾರಿ ಆಗಿದೆ. ನಾವು ಆಗಾಗ ಕುಟುಂಬ ಸಮೇತ ಬಂದು ಇಲ್ಲಿನ ವಾತಾವರಣ ಸವಿದು ಹೋಗುತ್ತೇವೆ. ಈಗಾಗಲೇ ಎಂ.ಎಲ್.ಸಿ ಅನುದಾನದಲ್ಲಿ ಒಂದು ಕಟ್ಟಡ ನಿರ್ಮಾಣ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಇನ್ನೂ ಕೈಲಾದಷ್ಟು ನೆರವು ನೀಡುವ ಭರವಸೆಯನ್ನು ಕೊಟ್ಟರು.

ಕಾರ್ಯಕ್ರಮ ಕಾಳಿದಾಸ್ ನಿರ್ವಹಿಸಿದರು, ಸ್ವಾಗತ ತುರಾಂಡಹಳ್ಳಿ ಶ್ರೀನಿವಾಸ್, ವಂದನಾರ್ಪಣೆ ಸಿ.ಜಿ.ಶ್ರೀನಿವಾಸ್ ಬಾಲಾಜಿ ಪ್ರಿಂಟರ್ಸ್ ನೆರವೇರಿಸಿಕೊಟ್ಟರು. ನಾಟಕ ತಂಡದವರಿಗೆ ರಂಗಕರ್ಮಿ ನಾವೆಂಕಿ ಕೋಲಾರ ಆದಿಮ ಕೇಂದ್ರದ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.

ಗೋಡೆ ನಾಟಕ ಪ್ರದರ್ಶನ;-
ಗೋಡೆ ಒಂದು ಪ್ರಾಯೋಗಿಕ ನಾಟಕವಾಗಿದೆ. ಹಾಡು, ಕುಣಿತ, ಹಾಸ್ಯ ಪ್ರಸಂಗಗಳು ಇರಲಿಲ್ಲ. ಅತ್ಯಂತ ಗಂಭೀರವಾದ ವಿಷಯದ ಸುತ್ತಾ ಹೆಣೆದಿರುವ ಸಂಭಾಷಣೆ ಪ್ರೇಕ್ಷಕರನ್ನು ತುಂಬಾ ಚಿಂತಗೀಡು ಮಾಡುತ್ತದೆ. ಎರಡನೇ ಮಹಾಯುದ್ಧದ ಸ್ಪೇನ್ ಸಿವಿಲ್ ವಾರ್‌ನಲ್ಲಿ ಬಂಧಿಸಲ್ಪಟ್ಟ ಮೂವರು ಹುಡುಗರಿಗೆ ಗುಂಡೇಟಿನ (ಮರಣ ದಂಡನೆ) ಶಿಕ್ಷೆಗೆ ಗುರಿಪಡಿಸಿರುತ್ತಾರೆ. ಆ ಹಿಂದಿನ ರಾತ್ರಿ ಅವರಲ್ಲಿ ಮೂಡುವ ಆತಂಕ, ತಲ್ಲಣಗಳು ವಿವಿಧ ರೀತಿಯ ಚಿಂತನೆಗಳು ಆವರಿಸಿ ಪಾತ್ರಗಳು ಬಾವುಕವಾಗಿ, ಸಾವನ್ನು ನಿರ್ಲಕ್ಷಿಸುವ ನಿರ್ಧಾರಗಳು. ತನ್ನ ದೇಶಕ್ಕೆ ಸ್ವಾತಂತ್ರ‍್ಯ ಬಂದರೆ ಅಷ್ಟೇ ಸಾಕು ಸಾಯುವುದಕ್ಕೆ ಸಿದ್ಧ ಎನ್ನುವ ದೇಶಪ್ರೇಮಿ ವಾದ, ಮೂವರಲ್ಲಿ ಮೂಡಿದಷ್ಟೂ ಅಲ್ಲಿನ ಜೈಲರ್ ಪದೇಪದೇ ಬಂದು ಛೇಡಿಸಿ, ಕಿಚಾಯಿಸಿ ಹೋಗುವುದು. ಕೆಲವೇ ಗಂಟೆಗಳಲ್ಲಿ ಸಾಯಲಿರುವ ಅವರಿಗೆ ಇಲ್ಲಸಲ್ಲದ ಆಶೆಗಳನ್ನು ಬಿತ್ತುವುದು. ಒಬ್ಬನನ್ನು ಬಿಟ್ಟುಬಿಡುವುದಾಗಿ ಹೇಳಿ ಮತ್ತೊಬ್ಬ ಕ್ರಾಂತಿಕಾರಿ ಹೋರಾಟಗಾರನ ಬಗ್ಗೆ ತಿಳಿಯುವ ಪ್ರಯತ್ನ, ನಾಯಕನ ಹೆಸರನ್ನು ಹೇಳಬೇಕಾಗಿ ಬಂದಾಗ ಸಾವಿಗಂಜದೇ ನಾನು ಸತ್ತರೂ ಒಂದೇ ಅವನು ಸತ್ತರೂ ಒಂದೇ ಎನ್ನುವ ತತ್ವದ ಮೇಲೆ ನಾಯಕನಿರುವ ವಿಳಾಸ ಹೇಳದಿರುವುದು ನಾಟಕದ ತಿರುವು. ಅದರ ಸುತ್ತಾ ಅನೇಕ ಆಮಿಶೆಗಳನ್ನು ಅವರ ಮುಂದಿಡುವ ಜೈಲರ್ ಹಾಗೂ ಡಾಕ್ಟರ್ ಪಾತ್ರಗಳು ನೈಜವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದವು. ಈ ನಾಟಕ ಜೀನ್ ಪಾಲ್ ಸಾತ್ರೆ ಅವರ ಲೆ ಮೂರ್ ಕನ್ನಡಕ್ಕೆ ಅನುವಾದ; ಎಸ್. ದಿವಾಕರ್. ರಂಗರೂಪ, ನಿರ್ದೇಶನ; ರಂಗನಾಥ್ ಶಿವಮೊಗ್ಗ. ವಿನ್ಯಾಸ; ರಾಜೇಶ್ ನೃತ್ಯ. ಪ್ರಸ್ತುತಿ ಪಡಿಸಿದ ತಂಡ ಇನ್ ಫಾರ್ಮ್ ಥಿಯೇಟರ್.
ನಾಟಕ ನಿರ್ದೇಶಕ ರಂಗನಾಥ್ ನಾಟಕ ಕುರಿತು ಮಾತನಾಡಿದರು. ನಾರಮಾಕಲಪಲ್ಲಿ ಚಲಪತಿ ಹಾಗೂ ತಂಡ ಕೆಲವು ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಹ.ಮಾ. ರಾಮಚಂದ್ರ, ನೀಲಕಂಠೇಗೌಡ, ಗುಂಡಪ್ಪ ದೇವಿಕೇರಿ, ಜೆ.ಜಿ.ನಾಗರಾಜ್, ಡಾ. ನೇತ್ರಾವತಿ, ಭರತ್, ಶಂಕರೇಗೌಡ, ಭೂಪತಿಗೌಡ, ರಮೇಶ್, ಶಶಿಧರ್, ಬೈಚೇಗೌಡ, ನಾಗೇಂದ್ರ ಶೆಟ್ಟಿ ಹಾಗೂ ತುರಾಂಡಹಳ್ಳಿ ಗ್ರಾಮಸ್ಥರು, ಕಲಾವಿದರು, ವಿದ್ಯಾರ್ಥಿಗಳು ನೆರೆದಿದ್ದರು.

 

Related Post

ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ನೀಡಿದ್ದಾರೆ. ಆದರೆ,‌ ರಾಜೀನಾಮೆ ನೀಡಲು ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ : ಮಾಜಿ ಸಂಸದ ಎಸ್.ಮುನಿಸ್ವಾಮಿ
ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ: ನರಸಿಂಹಯ್ಯ 
ಒಂದು ವರ್ಗಕ್ಕೆ ಸೀಮಿತವಲ್ಲದ ವಾಲ್ಮೀಕಿ, ಎಲ್ಲಾ ಸಮುದಾಯಗಳಿಗೆ ಆದರ್ಶ: ಬೈರತಿ ಸುರೇಶ್

Leave a Reply

Your email address will not be published. Required fields are marked *

You missed

error: Content is protected !!