PLACE YOUR AD HERE AT LOWEST PRICE
ಬಂಗಾರಪೇಟೆ:ತಾಪಂ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಹಾಗೂ ಕೃಷಿ ಇಲಾಖೆಯ ಅಧಿಕಾರಿ ಮುನಿರಾಜು ಹಲವು ವರ್ಷಗಳಿಂದ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ನ್ಯಾಯಸಮ್ಮತ ಚುನಾವಣೆಗಾಗಿ ಈ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಇಲ್ಲದೇ ಹೋದಲ್ಲಿ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿರಾಜು ತಿಳಿಸಿದರು.
ಪಟ್ಟಣದ ಕೋಲಾರ ಮುಖ್ಯರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯ ಶಾಸಕರು ಈ ಇಬ್ಬರು ಅಧಿಕಾರಿಗಳನ್ನು ತಮ್ಮ ಸ್ವಾರ್ಥಕ್ಕಾಗಿ ದುರ್ಬಲಕೆ ಮಾಡಿಕೊಂಡು ಚುನಾವಣೆಯಲ್ಲಿ ಪಕ್ಷಪಾತ ಧೋರಣೆ ಅನುಸರಿಸುವ ಸಂಭವ ಇದೆ ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಒಂದು ದಶಕದ ಕಾಲ ಕ್ಷೇತ್ರದಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ಎಲ್ಲಾ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಪ್ರಸ್ತುತ ಚುನಾವಣಾ ನೋಡಲ್ ಅಧಿಕಾರಿಯಾಗಿ ನಿಯೋಜಿತರಾದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶಪ್ಪ ಹತ್ತು ವರ್ಷಗಳಿಂದ ಇಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ವೆಂಕಟೇಶಪ್ಪ ಹಾಗೂ ಕೃಷಿ ಇಲಾಖೆ ಅಧಿಕಾರಿ ಮುನಿರಾಜುರವರನ್ನು ವರ್ಗಾವಣೆ ಮಾಡುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ದಿನಾಂಕ 08/02 /2023 ರಂದು ಮನವಿ ಮಾಡಲಾಗಿತ್ತು ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಆರೋಪ ಮಾಡಿದರು.
ನಿಕಟಪೂರ್ವ ತಹಸಿಲ್ದಾರ್ ಎಂ ದಯಾನಂದ್ ರನ್ನು ವರ್ಗಾವಣೆ ಮಾಡುವ ಆದೇಶ ಪ್ರತಿಯಲ್ಲಿ ತಹಸಿಲ್ದಾರ್ ಸ್ಥಳೀಯರು ಎಂದು ನಮೂದಿಸಲಾಗಿದೆ. ಆದರೆ ವಾಸ್ತವಿಕವಾಗಿ ಅವರು ಸ್ಥಳೀಯರಲ್ಲ, ಈ ಕ್ಷೇತ್ರದಲ್ಲಿ ಎರಡು ವರ್ಷಗಳ ಕಾಲ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಈ ಹಿಂದೆ ದಿನಾಂಕ 1/4/2023 ರಂದು ರಿಟರ್ನಿಂಗ್ ಆಫೀಸರ್ ರವರಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಮನವಿ ನೀಡಲಾಗಿದ್ದು, ಅದಕ್ಕೆ ಸ್ಪಂದಿಸಿದ್ದ ಅಧಿಕಾರಿಗಳು ಮೌಖಿಕವಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದರು.
ಆದರೆ ಇದುವರೆಗೂ ಮೃದು ಧೋರಣೆ ಅನುಸರಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮತ್ತೊಂದು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಗುವುದು ಆಗಲೂ ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲೇಶ್ ಬಾಬು, ಮುಖಂಡರಾದ ಶ್ರೀರಾಮ್, ಸಾಧಿಕ್, ಅಸ್ಲಂ. ಸುನಿಲ್, ಹನುಮಂತು, ಮುನಿಯಪ್ಪ, ಅಕಾಶ್ ಗೌಡ, ಇತರರು ಉಪಸ್ಥಿತರಿದ್ದರು.