• Thu. Apr 25th, 2024

ಚೆನ್ನೈ ಕಾರಿಡಾರ್- ಕೃಷಿ ಜಮೀನಿನ ಮರಗಿಡಗಳಿಗೆ ಪರಿಹಾರ ಬಿಡಗಡೆ ಆಗ್ರಹಿಸಿ ಮನವಿ

PLACE YOUR AD HERE AT LOWEST PRICE

ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಗಡಿಭಾಗದ ರೈತರ ಕೃಷಿ ಜಮೀನಿನ ಮರಗಿಡಗಳಿಗೆ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರೈತಸಂಘದಿಂದ ಮುಳಬಾಗಿಲು ಶಾಸಕರ ಕಚೇರಿ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಶಾಸಕರ ಆಪ್ತ ಸಹಾಯಕರಾದ ನಾಗೇಶ್ ಮುಖಾಂತರ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಒಂದು ವಾರದೊಳಗೆ ಗಡಿಭಾಗದ ಏತರನಹಳ್ಳಿ, ಚುಕ್ಕನಹಳ್ಳಿ ರೈತರ ಮರಗಿಡಗಳಿಗೆ ಪರಿಹಾರ ನೀಡದೇ ಇದ್ದರೆ ಜ.೨೬ರ ಗಣರಾಜ್ಯೋತ್ಸವದಂದು ಕಪ್ಪು ಬಟ್ಟೆ ಧರಿಸಿ ಪರಿಹಾರಕ್ಕಾಗಿ ಹೋರಾಟ ಮಾಡುವ ಎಚ್ಚರಿಕೆಯನ್ನು ತಾಲೂಕು ಆಡಳಿತಕ್ಕೆ ರೈತಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ನೀಡಿದರು.

ರೈತರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಂಬಳ ಹಾಗೂ ಆಸ್ತಿಯನ್ನು ಕೇಳಲಿಲ್ಲ. ಪೂರ್ವಜರು ಬೆವರು ಸುರಿಸಿ ಬೆಳೆಸಿದ ಮರಗಳ ಪರಿಹಾರವನ್ನು ಕೇಳಿದರೆ ಮೀನಾಮೇಷ ಎಣಿಸುವ ಜೊತೆಗೆ ರೈತರ ಮೇಲೆಯೇ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುವ ಅಧಿಕಾರಿಗಳಿಗೆ ರೈತರ ಕಷ್ಟದ ನೋವು ತಿಳಿಯುತ್ತಿಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ನೂರಾರು ವರ್ಷಗಳಿಂದ ನಮ್ಮ ಪೂರ್ವಜರು ಕೃಷಿಯನ್ನೇ ನಂಬಿ ಜೀವನ ಮಾಡುತ್ತಿದ್ದ ಕೃಷಿ ಭೂಮಿಯನ್ನು ಸರ್ಕಾರ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಂಡು ವರ್ಷಗಳೇ ಕಳೆದಿದೆ. ಭೂಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರದ ಗೌರವಾನ್ವಿತ ರಾಷ್ಟ್ರಪತಿಯವರ ಹೆಸರಿನಲ್ಲಿ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಿದ್ದೇವೆ.

ನಿಮ್ಮ ಭೂಮಿಗೆ ಬಂಗಾರದ ಬೆಲೆ ನೀಡುತ್ತೇವೆ ಎಂದು ರೈತರನ್ನು ಮರಳು ಮಾಡಿ ಭೂಸ್ವಾಧೀನದ ನಂತರ ನೋಂದಣಿ ಆಧಾರದ ಮೇಲೆ ಕೇವಲ ಪ್ರತಿ ಎಕರೆಗೆ ೩ ಲಕ್ಷ ೮೦ ಸಾವಿರ ಪರಿಹಾರ ನೀಡುವ ಮೂಲಕ ರೈತರನ್ನು ಭಿಕ್ಷುಕರಂತೆ ಕಾಣುತ್ತಿರುವುದು ಅಧಿಕಾರಿಗಳು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಪಾಷ ಮಾತನಾಡಿ, ಗಡಿ ಭಾಗದ ರೈತರ ಅಮಾಯಕತನವನ್ನು ಬಂಡವಾಳವಾಗಿಸಿಕೊಂಡಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳು ಭೂಸ್ವಾಧೀನಾ ಮಾಡಿಕೊಳ್ಳುವಾಗ ಪರಿಹಾರದ ಜೊತೆಗೆ ಮರಗಿಡಗಳಿಗೂ ಪರಿಹಾರ ನೀಡುತ್ತೇವೆ ಎಂದು ಸಂಬಂಧಪಟ್ಟ ತೋಟಗಾರಿಕೆ, ಕೃಷಿ, ರೇಷ್ಮೆ ಅಧಿಕಾರಿಗಳ ವರದಿಯಂತೆ ೧೧,೫೦೦ ಕೋಟಿ ಪರಿಹಾರವನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳ ಖಾತೆಯಲ್ಲಿಟ್ಟು ಪರಿಹಾರ ಕೇಳಿದರೆ ಪಿ ನಂಬರ್ ಜಮೀನು ಸರ್ಕಾರದ್ದು, ನಿಮ್ಮ ಭೂಮಿಗೆ ಪರಿಹಾರ ನೀಡಿರುವುದೇ ಹೆಚ್ಚು ನೀವು ಮರಗಳಿಗೆ ಪರಿಹಾರ ಕೇಳಿದರೆ ಕೇಸು ದಾಖಲಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆಂದು ಬೆದರಿಕೆ ಹಾಕುತ್ತಿರುವುದು ರೈತರ ಅನ್ನ ತಿಂದು ರೈತರಿಗೆ ಮೋಸ ಮಾಡಿದಂತೆ ಅಲ್ಲವೇ ಎಂದು ಪ್ರಶ್ನಿಸಿದರು.

ಸರ್ಕಾರಿ ಗೋಮಾಳ ಜಮೀನು ನ್ಯಾಯಯುತವಾಗಿ ದರಖಾಸ್ತು ಕಮಿಟಿ ಮುಖಾಂತರ ೧೯೫೦ ರಲ್ಲಿ ಮಂಜೂರಾಗಿ ವರ್ಷಗಳೇ ಕಳೆದಿವೆ. ಆದರೆ, ತಾಲೂಕು ಕಚೇರಿಯಲ್ಲಿ ಸಂಬಂಧಪಟ್ಟ ದಾಖಲೆಗಳೂ ಇಲ್ಲ, ಕೇಳಿದರೆ ದಾಖಲೆ ವಿಭಾಗದಲ್ಲಿ ಕಡತಗಳೇ ಮಾಯವಾಗಿವೆ ಎಂದು ಕಂದಾಯ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ.

ಪಿ ನಂಬರ್ ದುರಸ್ಥಿ ಮಾಡಬೇಕಾದ ಜವಾಬ್ದಾರಿ ಕಂದಾಯ ಅಧಿಕಾರಿಗಳದ್ದು. ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ೧ ಎಕರೆ ಪಿ ನಂಬರ್ ದುರಸ್ಥಿ ಮಾಡಬೇಕಾದರೆ ೫ ಲಕ್ಷ ಲಂಚದ ಜೊತೆಗೆ ದಲ್ಲಾಳಿಗಳ ನೆರವಿಲ್ಲದೆ ತಾಲೂಕು ಕಚೇರಿಯ ಆವರಣಕ್ಕೂ ಬಡವರ ನೆರಳು ಬೀಳುವಂತಿಲ್ಲ. ಅದೇ ಭೂಗಳ್ಳರ ಪಿ ನಂಬರ್ ದುರಸ್ಥಿ ೨೪ ಗಂಟೆಯಲ್ಲಿ ತೆಗೆದು ಮನೆ ಬಾಗಿಲಿಗೆ ತಲುಪಿಸುವ ಮಟ್ಟಕ್ಕೆ ತಾಲೂಕು ಆಡಳಿತ ಹದಗೆಟ್ಟಿದೆ ಎಂದು ಆರೋಪಿಸಿದರು.

೧ ವಾರದೊಳಗೆ ಮಾನ್ಯ ಶಾಸಕರು ಸಂಬಂಧಪಟ್ಟ ಅಧಿಕಾರಿಗಳು, ನೊಂದ ರೈತರ ಸಭೆ ಕರೆದು ಪಿ ನಂಬರ್ ದುರಸ್ಥಿ ಮಾಡಿ ಇಲ್ಲವೇ ಪಿ ನಂಬರ್ ನಲ್ಲಿರುವ ಮರಗಿಡಗಳಿಗೆ ಪರಿಹಾರವನ್ನು ಬಿಡುಗಡೆ ಮಾಡುವ ಮುಖಾಂತರ ನೊಂದ ರೈತರ ನಿಲ್ಲಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರ ಆಪ್ತ ಸಹಾಯಕ ನಾಗೇಶ್‌ರವರು ಮನವಿಯನ್ನು ಶಾಸಕರಿಗೆ ಕಳುಹಿಸಿಕೊಡುವ ಭರವಸೆಯನ್ನು ನೀಡಿದರು.

ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ತಾಲೂಕು ಪ್ರಧಾನ ಕಾರ್ಯದರ್ಶಿ ಬಾಬು, ವಿಶ್ವ ಭಾಸ್ಕರ್, ಗುರುಮೂರ್ತಿ ವಿಜಯ್‌ಪಾಲ್, ಹೆಬ್ಬಣಿ ಆನಂದರೆಡ್ಡಿ, ಜುಬೇರ್ ಪಾಷ, ಆದಿಲ್ ಪಾಷ, ರಾಮೇಗೌಡ, ರಂಗೇಗೌಡ, ರಾಜಣ್ಣ, ಕುಮಾರ್, ವೆಂಕಟರವಣಪ್ಪ, ವಿಶ್ವನಾಥ್, ವೆಂಕಟೇಶ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್ ಮುಂತಾದವರಿದ್ದರು.

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ

ಇದನ್ನೂ ಓದಿ: ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲು ಮುಂದಾಗಿ ಕನ್ನಡಿಗರ ತಾಳ್ಮೆ ಕೆಣಕದಿರಿ : ರೈತ ಸಂಘ

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!