ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಡಗೊಳಿಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಪ್ರಧಾನವಾಗಿದ್ದು, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಅಡಿಪಾಯವಾದ ಆರೋಗ್ಯವಂತ ಯುವಜನರನ್ನು ಬೆಳೆಸುವ ಕೆಲಸವನ್ನು ದೈಹಿಕ ಶಿಕ್ಷಕರು ಮಾಡಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಶಾಖೆವತಿಯಿಂದ ಆಯೋಜಿಸಿದ್ದ
ಕೋಲಾರ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ೧೦ನೇ ಶೈಕ್ಷಣಿಕ ಕಾರ್ಯಗಾರ ೨೦೨೨-೨೩ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ /ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ತಂದೆ ತಾಯಿ ಗಿಂತ ಹೆಚ್ಚಿನ ಸಮಯವನ್ನು ಗುರುಗಳ ಜೊತೆ ಕಳೆಯುತ್ತಾರೆ. ಹಾಗಾಗಿ ಶಿಕ್ಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಮಾತ್ರ ಮಕ್ಕಳು ಒಳ್ಳೆಯ ಪ್ರಜೆಗಳಾಗುತ್ತಾರೆ ಎಂದರು.
ಈ ಹಿಂದೆ ಮಕ್ಕಳಿಗೆ ಕ್ರೀಡೆಯಲ್ಲಿ ಬೆಳೆಯಲು ಅವಕಾಶಗಳು ಬಹಳ ಕಡಿಮೆ ಇತ್ತು, ಅದರಲ್ಲೂ ಬಡವರ ಮಕ್ಕಳು ಕ್ರೀಡೆಯಲ್ಲಿ ಬೆಳೆಯುವುದು ಗಗನ ಕುಸುಮವೇ ಆಗಿತ್ತು, ಆದರೆ, ಇಂದಿನ ಆಧುನಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಮಕ್ಕಳು ದೈಹಿಕ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡುವಂತೆ ಮಕ್ಕಳನ್ನು ಕ್ರೀಡೆಯಲ್ಲಿ ಬೆಳೆಯಲು ಶಿಕ್ಷಕರು ಶಾಲಾ ಹಂತದಲ್ಲೇ ಪ್ರೋತ್ಸಾಹಿಸಬೇಕಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದರೂ ದೇಶಕ್ಕೆ ಒಳ್ಳೆಯ ಕೀರ್ತಿ ತರಬಹುದು ಎನ್ನುವುದನ್ನು ಕ್ರೀಡೆಯಲ್ಲೂ ಸಾಧನೆ ಮಾಡಬಹುದು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಶಿಕ್ಷಕರದ್ದಾಗಬೇಕಿದೆ ಎಂದರು.
ಇನ್ನೂ ಕೋಲಾರದ ಶಿಕ್ಷಕರು ರಾಜಕೀಯ ಮಾಡುವುದರಲ್ಲೂ ಗಟ್ಟಿಗರು, ಈ ಮಣ್ಣಿನ ಗುಣ ಇಲ್ಲಿನ ಪ್ರತಿಯೊಬ್ಬರೂ ದೈರ್ಯವಂತರು, ಇಲ್ಲಿನ ಶಿಕ್ಷಕರು ಯಾರನ್ನು ಬೇಕಾದರೂ ಗೆಲ್ಲಿಸುತ್ತಾರೆ, ಯಾರನ್ನು ಬೇಕಾದರೂ ಸೋಲಿಸುತ್ತಾರೆ ,ಇವರಿಗೆ ರಾಜಕೀಯ ಮಾಡುವುದನ್ನು ಯಾರೂ ಹೇಳಿ ಕೊಡಬೇಕಿಲ್ಲ, ನೀವು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಿ , ನೀವು ಇರುವ ಕ್ಷೇತ್ರದಲ್ಲೇ ಅವಕಾಶ ಸಿಕ್ಕಾಗ ಈ ನೆಲಕ್ಕೆ ಏನಾದರೂ ಕೊಡುಗೆ ನೀಡಿ ಎಂದು ಕಿವಿಮಾತು ಹೇಳಿದರು.
ಶೀಘ್ರದಲ್ಲೇ ನರಸಾಪುರದಲ್ಲಿ ರಾಷ್ಟ್ರಮಟ್ಟದ ಜಲಕ್ರೀಡೆ ಹಾಗೂ ಎಲ್ಲಾ ತಾಲ್ಲೂಕಿನಲ್ಲಿ ಸಂಸದ್ ಕಪ್:
ಇನ್ನೂ ಕೋಲಾರ ಜಿಲ್ಲೆಯಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಕೋಲಾರ ಲೋಕಸಭಾ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಂಸದ್ ಕಪ್ ಹೆಸರಿನಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲು ತಯಾರಿ ನಡೆಸಲಾಗುತ್ತಿದೆ.ಅತಿ ಶೀಘ್ರದಲ್ಲೇ ಕೋಲಾರದ ನರಸಾಪುರ ಕೆರೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜಲ ಕ್ರೀಡೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ, ದೈಹಿಕ ಶಿಕ್ಷಕರು ಮಕ್ಕಳಲ್ಲಿ ಸದೃಡತೆಯನ್ನು ತರಲು ಶ್ರಮಿಸುವ ದೊಡ್ಡ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಸಮಾಜದಲ್ಲಿ ದೈಹಿಕ ಶಿಕ್ಷಕರು ಎಷ್ಟು ಶಿಸ್ತಿನಿಂದ ಇರುತ್ತಾರೋ ಆ ಶಾಲೆಯ ವಾತಾವರಣವೂ ಅಷ್ಟೇ ಸುಸಜ್ಜಿತವಾಗಿರುತ್ತದೆ. ವಿದ್ಯಾರ್ಥಿಗಳು ದೈಹಿಕ ಶಿಕ್ಷಕರನ್ನೇ ಅನುಸರಿಸುತ್ತಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ದೈಹಿಕ ಶಿಕ್ಷಣ ಇರುವುದೇ ಮಕ್ಕಳನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡಗೊಳಿಸುವ ಉದ್ದೇಶದಿಂದ ಎಂದರು..
ದೈಹಿಕ ಶಿಕ್ಷಣ ಸರಿಯಾಗಿ ಮಕ್ಕಳನ್ನು ತಲುಪಿದರೆ ಆ ಸಮಾಜ ಮಾದರಿ ಸಮಾಜವಾಗುತ್ತದೆ. ಅಲ್ಲಿ ಪೊಲೀಸ್ ಇಲಾಖೆಗೂ ಕಡಿಮೆ ಕೆಲಸ ಇರುತ್ತದೆ ಎಂದರು. ಮಕ್ಕಳಿಗೆ ಬಾಲ್ಯದಲ್ಲೇ ಶಿಸ್ತು ಮತ್ತು ಆರೋಗ್ಯ ಶಿಕ್ಷಣ ನೀಡುವುದರಿಂದ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳು ಮಾತ್ರವಲ್ಲದೆ ಮಾದರಿ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ, ಸಹ್ಯಾದ್ರಿ ಕಾಲೇಜಿನ ಉದಯಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎಸ್. ವೆಂಕಟೇಶ್, ಪಲ್ಲವಿಮಣಿ, ಚೌಡಪ್ಪ, ಡಿಡಿಪಿಐ ಕೃಷ್ಣಮೂರ್ತಿ, ಎಂ.ನಾಗರಾಜ್,ಜಿ.ಶ್ರೀನಿವಾಸ್,ವಿ ಮುರಳಿ ಮೋಹನ್, ಅಪ್ಪಯ್ಯಗೌಡ, ವಿಜಯ್‌ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ, ಚಂದ್ರಶೇಖರ, ಜಿ ಶ್ರೀನಿವಾಸ್, ಸೇರಿದಂತೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮುಖಂಡರು ಇತರರು ಇದ್ದರು.