• Fri. Oct 11th, 2024

ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕಾಗಿ ಸಂವಿಧಾನ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಸಮಾಜ ಮತ್ತು ಸರಕಾರದಲ್ಲಿ ಸಂವಿಧಾನದ ಆಶಯಗಳು ಪ್ರತಿಫಲನಗೊಳ್ಳಬೇಕು-ಸುದರ್ಶನ್

PLACE YOUR AD HERE AT LOWEST PRICE

ಭಾರತದ ಸಂವಿಧಾನವನ್ನು ಪ್ರತಿಯೊಬ್ಬರೂ ಅರಿತುಕೊಂಡು ಅಳವಡಿಸಿಕೊಂಡು ಅನುಸರಿಸುವ ಮೂಲಕ ಗಟ್ಟಿಗೊಳಿಸಬೇಕೆಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.

ಕೋಲಾರ ನಗರದ ಸ್ಕೌಟ್ಸ್ ಗೈಡ್ಸ್ ಭವನದಲ್ಲಿ ಗುರುವಾರ ಕರ್ನಾಟಕ ದಲಿತ ಪ್ರಜಾ ಸೇನೆ ೭೩ ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಸಂವಿಧಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕಾಗಿ ಸಂವಿಧಾನ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತದ ಸಂವಿಧಾನಕ್ಕೆ ಬಹುದೊಡ್ಡ ಇತಿಹಾಸವಿದೆ, ಸಂವಿಧಾನದ ಆಶಯಗಳು ಶೋಷಿತ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದೆಯೇ ಎಂಬ ಕುರಿತು ವಿಶ್ಲೇಷಣೆ ಅಗತ್ಯ ಎಂದು ಪ್ರತಿಪಾದಿಸಿದ ಅವರು, ಸಂವಿಧಾನ ಗಟ್ಟಿಗೊಳ್ಳಬೇಕು, ಅದರ ಆಶಯಗಳಿಗೆ ಅರ್ಥ ಬರಬೇಕಾದರೆ ಪ್ರತಿಯೊಬ್ಬರಲ್ಲಿಯೂ ಸಂವಿಧಾನ ಕುರಿತು ಜಾಗೃತಿ ಅರಿವು ಬೇಕಾಗುತ್ತದೆಯೆಂದರು.

ಸಮಾಜ ಮತ್ತು ಸರಕಾರದಲ್ಲಿ ಸಂವಿಧಾನದ ಆಶಯಗಳು ಪ್ರತಿಫಲನಗೊಳ್ಳಬೇಕು, ಆಗಲೇ ಅದು ಜನಪರ, ಮಾನವೀಯತೆ ಪರ ಮತ್ತು ಮಹಿಳೆಯರ ದುರ್ಬಲರ ಪರವಾದ ಸಂವಿಧಾನ ಆಗುತ್ತದೆ ಎಂದರು.
ಸಂವಿಧಾನದ ಆಶಯದಂತೆ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಈಗಲೂ ಕೇಳುತ್ತಿಲ್ಲ ಎಂದರೆ ಸಮಾನತೆಯ ಸಮಾಜ ಹೇಗೆ ನಿರ್ಮಾಣ ವಾಗಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಈಗಲೂ ಅಸ್ಪೃಶ್ಯತೆ ಮನಸ್ಸುಗಳಲ್ಲಿದೆ, ಇವುಗಳಿಂದ ಸಂವಿಧಾನದ ಆಡಳಿತದಲ್ಲೂ ನಾಗರೀಕ ಸಮಾಜ ಅಸ್ತವ್ಯಸ್ತ್ಯವಾಗುತ್ತದೆ ಎಂದರು.

ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸಂವಿಧಾನದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಆಶಯಗಳು, ನಾಲ್ಕು ಅಂಗಗಳಾದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಮಾಧ್ಯಮ ಅಂಗಗಳಲ್ಲಿ ಈಗಾಗಲೇ ತಾರತಮ್ಯ ಧೋರಣೆ, ಉಳ್ಳವರ ಪರವಾದ ನಿಲುವುಗಳು ವ್ಯಕ್ತವಾಗುತ್ತಿದ್ದು, ಇದು ಸಂವಿಧಾನವನ್ನು ಬದಲಾವಣೆ ಮಾಡಿದಂತೆಯೇ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ವಕೀಲ ಕೆ.ಆರ್.ಧನರಾಜ್ ಮಾತನಾಡಿ, ಸಂವಿಧಾನ ಉಳಿಯದಿದ್ದರೆ ಮುಂದಿನ ಪೀಳಿಗೆಗೆ ಸಂಕಷ್ಟ ತಪ್ಪಿದಲ್ಲ, ಭವಿಷ್ಯದಲ್ಲಿ ಉಳಿಗಾಲವಿಲ್ಲ ಎಂದು ಎಚ್ಚರಿಸಿದ ಅವರು, ಸಂವಿಧಾನದಡಿ ಕೆಲಸ ಮಾಡುತ್ತಿರುವ ಸ್ವಾಯತ್ತ ಸಂಸ್ಥೆಗಳಲ್ಲಿ ಆಡಳಿತಾರೂಢ ಪಕ್ಷಗಳ ಹಸ್ತಕ್ಷೇಪ ಮತ್ತು ಅವರ ಅಣತಿಗೆ ತಕ್ಕಂತೆ ನಡೆಯುವುದು ಪ್ರಜಾಪ್ರಭುತ್ವ ಕ್ಷೀಣಿಸುತ್ತಿರುವುದರ ಸಂಕೇತವಾಗಿದೆಯೆಂದರು.

ದಲಿತ ಪ್ರಜಾ ಸೇನೆಯ ರಾಜ್ಯಾಧ್ಯಕ್ಷ ರಾಜ್‌ಕುಮಾರ್ ಮಾತನಾಡಿ, ಸಂವಿಧಾನದ ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಬೇಕು, ಅದಕ್ಕಾಗಿ ರಾಜ್ಯವ್ಯಾಪಿ ಸಂವಿಧಾನ ಉಳಿಸಿ ಜಾಥಾ ನಡೆಯುತ್ತಿದೆಯೆಂದರು.

ಅಧ್ಯಕ್ಷತೆವಹಿಸಿದ್ದ ದಲಿತ ಪ್ರಜಾ ಸೇನೆಯ ಸಂಸ್ಥಾಪಕ ಅಧ್ಯಕ್ಷ ಡಿಪಿಎಸ್ ಮುನಿರಾಜು ಮಾತನಾಡಿ, ಸಂವಿಧಾನ ಉಳಿವಿಗಾಗಿ ತಮ್ಮ ಸಂಘಟನೆ ಎಂತದ್ದೇ ಹೋರಾಟಕ್ಕೂ ಸಿದ್ಧ ಎಂದರು.

ಮುಖಂಡರಾದ ನರಸಾಪುರ ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನ ಉಳಿಸಿ ರಕ್ಷಿಸಿ ವಿಚಾರಸಂಕಿರಣದ ಅಗತ್ಯತೆಯನ್ನು ವಿವರಿಸಿದರು.

ವೇದಿಕೆಯಲ್ಲಿ ಮುಖಂಡರಾದ ಕೆ.ಜಯದೇವ್, ವಿ.ಕೆ.ರಾಜೇಶ್, ಕೆ.ವಿ.ನಾರಾಯಣಸ್ವಾಮಿ, ಗಿರಿಜ, ಅಶ್ವಿನಿ ರಾಜನ್, ರತ್ನಮ್ಮ, ಕಿಶೋರ್, ಎಸ್.ಆರ್.ನಾರಾಯಣಸ್ವಾಮಿ, ಪದ್ಮಾವತಮ್ಮ, ಯುವ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಮೂರ್ತಿ ಸ್ವಾಗತಿಸಿದರು. ಗಾಯಕರಾದ ಜನ್ನಘಟ್ಟ ಕೃಷ್ಣಮೂರ್ತಿ, ಮತ್ತಿಕುಂಟೆ ಕೃಷ್ಣ ಮತ್ತು ನಾರಾಯಣಸ್ವಾಮಿ ಅಂಬೇಡ್ಕರ್ ಕುರಿತ ಕ್ರಾಂತಿ ಗೀತೆಗಳನ್ನು ಹಾಡಿದರು.

 

Related Post

ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹತ್ತು ಲಕ್ಷ ಸಸಿ ನೆಡುವ ಯೋಜನೆ : ಸಿದ್ದಗಂಗಯ್ಯ
ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿವಿಧ  ನ್ಯಾಯಯುತ ಬೇಡಿಕೆಗಳನ್ನು  ಈಡೇರಿಸುವಂತೆ  ಒತ್ತಾಯಿಸಿ, ನಗರದ ಜಿಲ್ಲಾ ಪಂಚಾಯತಿ ಕಚೇರಿ ಮುಂದೆ ಜಿಲ್ಲಾ ಪಿಡಿಒ ಹಾಗೂ ಸಿಬ್ಬಂದಿಗಳ  ವೃಂದ ಸಂಘಟನೆಗಳ ವತಿಯಿಂದ ಅನಿರ್ದಿಷ್ಟವಾಧಿ ಪ್ರತಿಭಟನೆ

Leave a Reply

Your email address will not be published. Required fields are marked *

You missed

error: Content is protected !!