ಮುಳಬಾಗಿಲು: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ದಂಧೆ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡಿ ರಾಜ್ಯ ಸರ್ಕಾರ ಕಡಿತಗೊಳಿಸಿರುವ ಪಡಿತರ ಅಕ್ಕಿ ವಿತರಣೆ ಮಾಡಬೇಕೆಂದು ರೈತಸಂಘದಿಂದ ಆಹಾರ ಇಲಾಖೆಗೆ ಮನವಿ ನೀಡಿ ಆಗ್ರಹಿಸಿಸಲಾಯಿತು.
ಈ ವೇಳೆ ಮುಖಂಡರು ಮಾತನಾಡಿ, ಪಡಿತರ ಅಕ್ಕಿ ಯೋಜನೆ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರದ ಯೋಜನೆಯಾಗಿ ಮಾರ್ಪಟ್ಟಿದೆ. ಬಂಗಾರಪೇಟೆಯಿಂದ ತಾಲೂಕುಗಳಿಗೆ ಸಾಗಾಣಿಕೆ ಮಾಡುವ ಲಾರಿ ಗುತ್ತಿಗೆದಾರರು ಕಿಲೋ ಮೀಟರ್‍ಗಳಲ್ಲಿ ವಂಚನೆ ಮಾಡುವ ಜೊತೆಗೆ ದಾರಿ ಮಧ್ಯದಲ್ಲಿಯೆ ಪಡಿತರ ಅಕ್ಕಿಯನ್ನು ಲಾರಿಗಳ ಸಮೇತ ಅಕ್ಕಿ ದಂಧೆಕೋರರಿಗೆ ಮಾರಾಟ ಮಾಡಲಾಗುತ್ತಿದೆ.
ನ್ಯಾಯಬೆಲೆ ಅಂಗಡಿಗಳಿಗೆ ವಿತರಣೆ ಮಾಡುವ ಅಕ್ಕಿಯಲ್ಲಿ ತಾರತಮ್ಯ ಮಾಡುವ ಬೃಹತ್ ಮಟ್ಟದ ದಂಧೆಯು ಅಧಿಕಾರಿಗಳು, ಗುತ್ತಿಗೆದಾರರ ಒಳಒಪ್ಪಂದದಿಂದ ನಡೆಯುತ್ತಿದೆ ಎಂದು ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‍ಪಾಷ ಇಲಾಖೆಯ ವಿರುದ್ಧ ಗಂಭೀರ ಆರೋಪ ಮಾಡಿದರು.
ಸರ್ಕಾರದಿಂದ ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಪಾಲಿಷ್ ಮಾಡಿ ವಿವಿಧ ಬ್ರಾಂಡ್‍ಗಳ ಹೆಸರಿನಲ್ಲಿ ಮಾರಾಟ ಮಾಡುವ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿಗಳು ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳದೇ ಇರುವುದು ಕೆಲಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕಟ್ಟಕಡೆಯ ಪ್ರಜೆಯೂ ಹಸಿವಿನಿಂದ ನರಳಬಾರದೆಂಬ ಉದ್ದೇಶದಿಂದ ಸಾವಿರಾರು ಕೋಟಿ ಖರ್ಚು ಮಾಡಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಪ್ರತಿ ಕುಟುಂಬಕ್ಕೂ 10 ರಿಂದ 15 ಕೆಜಿ ಉಚಿತವಾಗಿ ಪಡಿತರ ಚೀಟಿಗಳ ಮುಖಾಂತರ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಡಲಾಗುತ್ತಿದೆ.
ಸರ್ಕಾರದಿಂದ ನೀಡುವ ಅಕ್ಕಿಯನ್ನು ಕಾನೂನುಬಾಹಿರವಾಗಿ ಆಂಧ್ರ, ತಮಿಳುನಾಡು ಬೆಂಗಳೂರು ಚಿಕ್ಕಬಳ್ಳಾಪುರ ಕಡೆಗಳಲ್ಲಿ ಅಕ್ರಮವಾಗಿ ಯಾವುದೇ ಬಿಲ್ ಇಲ್ಲದೆ ನಕಲಿ ಬಿಲ್‍ಗಳನ್ನು ಸೃಷ್ಠಿ ಮಾಡಿ ಕೆಲವು ಮಿಲ್‍ಗಳಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಡಿತರ ಅಕ್ಕಿಯನ್ನು ಪಾಲೀಶ್ ಮಾಡಿ ಮಿಲ್ ಮಾಲೀಕರು ವಿವಿಧ ಬ್ರಾಂಡ್‍ಗಳನ್ನು ಸೃಷ್ಠಿ ಮಾಡಿ 25 ರಿಂದ 60 ರೂಪಾಯಿವರೆಗೆ ಗುಣಮಟ್ಟದ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ ಎಂದು ಆರೋಪ ಮಾಡಿದರು.
ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು ಮಾತನಾಡಿ, ಬಡವರ ಅಕ್ಕಿ ಧನಿಕರ ಪಾಲಾಗುತ್ತಿರುವ ಮಾಹಿತಿ ಇದ್ದರೂ ಕಡಿವಾಣಕ್ಕೆ ಮುಂದಾಗದ ಅಧಿಕಾರಿಗಳು ಯಾವುದೇ ಕ್ರಮವನ್ನೂ ಕೈಗೊಳ್ಳದೆ ದೂರು ನೀಡಿದವರ ಮಾಹಿತಿಯನ್ನು ದಂಧೆಕೋರರಿಗೆ ಮುಟ್ಟಿಸುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆ ಎಂದು ಆರೋಪಿಸಿದರು.
6 ತಾಲೂಕುಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪನೆ ಮಾಡಿ ಬಡವರ ಅಕ್ಕಿಯನ್ನು ಕದಿಯುವ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ಕಾನೂನು ರಚನೆ ಮಾಡಬೇಕು. ಭಾಗಿಯಾಗಿರುವುದನ್ನು ಆಹಾರ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಯೋಜನೆಯಲ್ಲಿ 5 ಕೆಜಿ ಅಕ್ಕಿ ವಿತರಣೆ ಮಾಡಿ ರಾಜ್ಯ ಸರ್ಕಾರ ವಿತರಣೆ ಮಾಡುತ್ತಿದ್ದ ಅಕ್ಕಿಯನ್ನು ಸ್ಥಗಿತಗೊಳಿಸುವ ಮುಖಾಂತರ ಬಡವರ ಅನ್ನವನ್ನು ಕಸಿಯುವಂತಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಸ್ಥಗಿತಗೊಳಿಸಿರುವ ಅಕ್ಕಿ ವಿತರಣೆಯ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಆಹಾರ ನಿರೀಕ್ಷಕ ಮಂಜುನಾಥ ಮನವಿ ಸದ್ವೀಕರಿಸಿದರು.ಮನವಿ ನೀಡುವಾಗ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈ ಕಂಬಳ್ಳಿ ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿ ಬಾಬು, ಜಿಲ್ಲಾ ಪ್ರ.ಕಾ. ವಿಜಯ್‍ಪಾಲ್, ಸುನೀಲ್‍ಕುಮಾರ್, ಭಾಸ್ಕರ್, ಜುಬೇರ್‍ಪಾಷ, ಆದಿಲ್‍ಪಾಷ, ವಿಶ್ವ, ಗುರುಮೂರ್ತಿ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಹೆಬ್ಬಣಿ ಆನಂದರೆಡ್ಡಿ, ಯಾರಂಘಟ್ಟ ಗಿರೀಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ವೇಣು, ಕಿರಣ್, ಸುರೇಶ್‍ಬಾಬು ಮುಂತಾದವರಿದ್ದರು.